ಬೆಂಗಳೂರು: ಮಾಜಿ ಸಚಿವ, ಹಿರಿಯ ನಟ ರೆಬೆಲ್ ಸ್ಟಾರ್ ಅಂಬರೀಶ್ ಪಾರ್ಥಿವ ಶರೀರದ ಅಂತ್ಯಕ್ರಿಯೆ ಸಕಾಲ ಸರ್ಕಾರಿ ಗೌರವಗಳೊಂದಿಗೆ ಒಕ್ಕಲಿಗ ಸಂಪ್ರದಾಯದಂತೆ ಸೋಮವಾರ ಸಂಜೆ ಕಂಠೀರವ ಸ್ಟುಡಿಯೋದಲ್ಲಿ ನೆರವೇರಿಸಲಾಯಿತು.
ಗಂಧದ ತುಂಡುಗಳು, ಕರ್ಪೂರ, ಒಂದು ಚೀಲ ಬೆರಣಿ, ಬೆಣ್ಣೆ, 30 ಕೆ.ಜಿ. ತುಪ್ಪಗಳಿಂದ ಸಿದ್ಧ ಮಾಡಿದ್ದ ಚಿತೆಯ ಮೇಲೆ ಅಂಬಿ ಪಾರ್ಥಿವ ಶರೀರವನ್ನು ಮಲಗಿಸಿ, ಪತ್ನಿ ಸುಮಲತಾ ಮತ್ತು ಸಾಂಪ್ರದಾಯಿಕವಾಗಿ ಕುಟುಂಬಸ್ಥರು ಶಾಸ್ತ್ರ ನೆರವೇರಿಸಿದ ಬಳಿಕ ಪುತ್ರ ಅಭಿಷೇಕ್ ಚಿತೆಗೆ ಅಗ್ನಿಸ್ಪರ್ಶ ಮಾಡಿದರು. ಅಗ್ನಿಸ್ಪರ್ಶ ಮಾಡುತ್ತಿದ್ದಂತೆ ಅಲ್ಲಿ ನೆರದಿದ್ದ ಅಂಬಿಯ ಸಾವಿರಾರು ಅಭಿಮಾನಿಗಳು ಅಣ್ಣಾ, ಮತ್ತೊಮ್ಮೆ ಹುಟ್ಟಿ ಬಾ ಎಂದು ಕೂಗಿ ಕಂಬನಿ ಮಿಡಿದರು. ಆ ಕ್ಷಣ ಅಲ್ಲಿದ್ದ ಹಿರಿಯ ನಾಯಕರು, ಚಿತ್ರರಂಗದ ನಟರು, ನಟಿಯರು ಮತ್ತು ಅಭಿಮಾನಿಗಳನ್ನು ಶೋಕ ಸಾಗರದಲ್ಲಿ ಮುಳುಗಿಸಿತು.
ಇದಕ್ಕೂ ಮುನ್ನ ಭಾನುವಾರ ಸಂಜೆ 4 ಗಂಟೆಯಿಂದ ಬೆಳಿಗ್ಗೆವರೆಗೆ ಅಭಿಮಾನಿಗಳ ಒತ್ತಾಯದ ಮೇರೆಗೆ ಮಂಡ್ಯದ ವಿಶ್ವೇಶ್ವರಯ್ಯ ಕ್ರೀಡಾಂಗಣದಲ್ಲಿ ಸಾರ್ವಜನಿಕ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಬಳಿಕ ಸೋಮವಾರ ಮಂಡ್ಯದಿಂದ ಬೆಂಗಳೂರಿಗೆ ಹೆಲಿಕಾಪ್ಟರ್ ಮೂಲಕ ಕಂಠೀರವ ಸ್ಟೇಡಿಯಂ ತಲುಪಿದ ಬಳಿಕ ಕ್ರೀಡಾಂಗಣದಿಂದ ಕಂಠೀರವ ಸ್ಟುಡಿಯೋಗೆ 13 ಕಿ.ಮೀ ಗಳ ಅಂತಿಮ ಯಾತ್ರೆ ನಡೆಸಲಾಯಿತು.
ರಾಜಕೀಯ ನಾಯಕರ ಉಪಸ್ಥಿತಿ
ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ, ಉಪಮುಖ್ಯಮಂತ್ರಿ ಜಿ.ಪರಮೇಶ್ವರ್, ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಸಚಿವರಾದ ಡಿ.ಕೆ.ಶಿವಕುಮಾರ್, ಹಿರಿಯ ನಾಯಕರಾದ ಗುಲಾಂ ನಬಿ ಅಜಾದ್, ಸಿ.ಎಸ್.ಪುಟ್ಟರಾಜು, ಹೆಚ್.ಡಿ.ರೇವಣ್ಣ, ಕೇಂದ್ರ ಸಚಿವ ಸುಶೀಲ್ ಕುಮಾರ್ ಶಿಂಧೆ, ಮಾಜಿ ಮುಖ್ಯಮಂತ್ರಿ ಎಸ್.ಎಂ.ಕೃಷ್ಣ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಸೇರಿದಂತೆ ಅನೇಕ ನಾಯಕರು ಪಾಲ್ಗೊಂಡಿದ್ದರು.
ಅಂತ್ಯಕ್ರಿಯೆಯಲ್ಲಿ ಭಾಗಿಯಾದ ಇಡೀ ಕನ್ನಡ ಚಿತ್ರರಂಗ
ನಟ ಅಂಬರೀಶ್ ಅಂತ್ಯಕ್ರಿಯೆಯಲ್ಲಿ ಇಡೀ ಸ್ಯಾಂಡಲ್ವುಡ್ ಭಾಗಿಯಾಗಿತ್ತು. ಸ್ಯಾಂಡಲ್ವುಡ್ ನಟರಾದ ಯಶ್, ದರ್ಶನ್, ಸುದೀಪ್, ಶಿವರಾಜ್ ಕುಮಾರ್, ಪುನೀತ್ ರಾಜ್ ಕುಮಾರ್, ಉಪೇಂದ್ರ, ಅರ್ಜುನ್ ಸರ್ಜಾ, ನಿರ್ಮಾಪಕ ರಾಕ್ಲೈನ್ ವೆಂಕಟೇಶ್, ಜಗ್ಗೇಶ್, ಶ್ರೀನಾಥ್, ದುನಿಯಾ ವಿಜಿ, ಜೈ ಜಗದೀಶ್, ಅಜಯ್ ರಾವ್, ಗುರುಕಿರಣ್, ರಂಗಾಯಣ ರಘು, ಆದಿತ್ಯ, ಪ್ರೇಮ್, ಜೋಗಿ ಪ್ರೇಮ್, ದಿನಕರ್ ತೂಗುದೀಪ್, ಅನಿರುದ್ಧ್, ನಟಿ ಜಯಮಾಲಾ, ಜಯಪ್ರದಾ, ಐಶ್ವರ್ಯಾ ಅರ್ಜುನ್, ಎಸ್.ನಾರಾಯಣ್, ಮುನಿರತ್ನಂ, ರಾಜೇಂದ್ರ ಸಿಂಗ್ ಬಾಬು, ತೆಲುಗು ನಟ ಮೋಹನ್ ಬಾಬು, ಬಾಬು ಪುತ್ರ ಮಂಚು ಮನೋಜ್, ಪುತ್ರಿ ಲಕ್ಷ್ಮಿ ಮಂಚು ಪತ್ನಿ ಸಮೇತ ಅನೇಕರು ಅಂಬಿ ಅಂತ್ಯಸಂಸ್ಕಾರದಲ್ಲಿ ಪಾಲ್ಗೊಂಡಿದ್ದರು.