ಗ್ವಾಲಿಯರ್: ಮಧ್ಯಪ್ರದೇಶದ ಸರ್ಕಾರಿ ಕಚೇರಿಗಳಲ್ಲಿ ನೈರ್ಮಲ್ಯ ಕಾಪಾಡಲು ಕೆಲವು ನಿರ್ಧಾರಗಳನ್ನು ಕೈಗೊಳ್ಳಲಾಗುತ್ತಿದೆ. ಸರ್ಕಾರಿ ಕಛೇರಿಗಳ ಪ್ರತಿ ಕೊಠಡಿಯಲ್ಲೂ ಎರಡು ಡಸ್ಟ್ ಬಿನ್ ಇಡಲಾಗುವುದು ಮತ್ತು ಧೂಮಪಾನ ಮಾಡುವವರಿಗೆ 200 ರೂ. ದಂಡ ವಿಧಿಸಲಾಗುವುದು ಎಂದು ತಿಳಿದುಬಂದಿದೆ.
ಡಿವಿಶನಲ್ ಕಮೀಷನರ್ ಬಿ.ಎಂ. ಶರ್ಮಾ ನೀಡಿದ ಅಧಿಕೃತ ಮಾಹಿತಿಯ ಪ್ರಕಾರ, ಇಂಟರ್-ಡಿಪಾರ್ಟ್ಮೆಂಟಲ್ ಕೋಆರ್ಡಿನೇಶನ್ ಕಮಿಟಿಯ ಸಭೆಯಲ್ಲಿ ಸ್ವಚ್ಚತೆ ಸಂಬಂಧಿಸಿದಂತೆ ನಡೆಸಿದ ಸಮೀಕ್ಷೆಯಲ್ಲಿ ವಿಭಾಗೀಯ ಮಟ್ಟದ ಅಧಿಕಾರಿಗಳಿಗೆ ಈ ಬಗ್ಗೆ ನಿರ್ದೇಶನ ನೀಡಲಾಗಿದೆ. ಯಾವುದೇ ಕಚೇರಿಯಲ್ಲಿ ಸಿಕ್ಕಲ್ಲಿ ಕಸ ಹಾಕದಂತೆ ಹಾಗೂ ಧೂಮಪಾನ ಮಾಡದಂತೆ ನಿರ್ದೇಶಿಸಲಾಗಿದೆ.
ಸರ್ಕಾರಿ ಕಚೇರಿಯಲ್ಲಿ ಧೂಮಪಾನ ಮಾಡುವುದು ಕಂಡು ಬಂದರೆ 200 ರೂ. ದಂಡ ವಿಧಿಸಲಾಗುವುದು ಎಂಬ ಫಲಕಗಳನ್ನು ಅಳವಡಿಸಬೇಕು. ದಂಡ ಪಾವತಿಸಿದ ಬಳಿಕ ರಶೀದಿಯನ್ನು ನೀಡಲು ರಶೀದಿಯನ್ನು ಮುದ್ರಿಸಲಾಗುತ್ತದೆ ಎಂದು ಅವರು ಮಾಹಿತಿ ನೀಡಿದ್ದಾರೆ.
ಗ್ವಾಲಿಯರ್ ಟ್ರೇಡ್ ಫೇರ್ನಲ್ಲಿ ಧೂಮಪಾನವನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಟ್ರೇಡ್ ಫೇರ್ನಲ್ಲಿ ಪ್ಯಾನ್ ಅಂಗಡಿಗಳನ್ನು ತೆರೆಯಬಹುದು, ಆದರೆ ಆ ಅಂಗಡಿಗಳಲ್ಲಿ ಬೀಡಿ, ಸಿಗರೇಟ್ ನಂತಹ ಯಾವುದೇ ಧೂಮಪಾನ ಸಾಮಾಗ್ರಿಗಳನ್ನು ಮಾರಾಟ ಮಾಡಬಾರದು ಎಂದು ವಿಭಾಗೀಯ ಕಮೀಷನರ್ ಶರ್ಮಾ ಕಾರ್ಯದರ್ಶಿಗೆ ನಿರ್ದೇಶನ ನೀಡಿದರು.
ಸಭೆಯಲ್ಲಿ, ನಗರಾಯುಕ್ತ ವಿನೋದ್ ಶರ್ಮಾ, ಕಚೇರಿಗಳಲ್ಲಿ ಪಾಲಿಥಿನ್ ಕಟ್ಟುನಿಟ್ಟಾಗಿ ನಿಷೇಧಿಸಬೇಕು. ಕಚೇರಿಗಳ ಶೌಚಾಲಯಗಳು ಸ್ವಚ್ಛವಾಗಿರಬೇಕು ಮತ್ತು ಜನಸಾಮಾನ್ಯರೂ ಬಳಸುವಂತಿರಬೇಕು ಎಂದು ವಿಭಾಗೀಯ ಮಟ್ಟದ ಅಧಿಕಾರಿಗಳಿಗೆ ನಿರ್ದೇಶಿಸಿದರು.