ಕೇಂದ್ರ ಸಚಿವ ಪಿಯುಷ್ ಗೋಯಲ್ ಭೇಟಿ ಮಾಡಿದ ಸಿಎಂ; ಶೀಘ್ರವೇ ಕಲ್ಲಿದ್ದಲು ಹಂಚಿಕೆಗೆ ಮನವಿ

ರಾಜ್ಯದ ಆರ್‍ಟಿಪಿಎಸ್, ಬಳ್ಳಾರಿ ಉಷ್ಣವಿದ್ಯುತ್ ಸ್ಥಾವರ ಹಾಗೂ ಯರಮರಸ್ ವಿದ್ಯುತ್ ಸ್ಥಾವರಗಳಿಗೆ ಕಲ್ಲಿದ್ದಲು ಘಟಕಗಳನ್ನು ಶೀಘ್ರವೇ ಹಂಚಿಕೆ ಮಾಡುವಂತೆ ಮನವಿ ಮಾಡಿದರು.

Last Updated : Dec 27, 2018, 03:42 PM IST
ಕೇಂದ್ರ ಸಚಿವ ಪಿಯುಷ್ ಗೋಯಲ್ ಭೇಟಿ ಮಾಡಿದ ಸಿಎಂ; ಶೀಘ್ರವೇ ಕಲ್ಲಿದ್ದಲು ಹಂಚಿಕೆಗೆ ಮನವಿ title=

ನವದೆಹಲಿ: ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ದೆಹಲಿಯಲ್ಲಿಂದು ಕೇಂದ್ರ ಕಲ್ಲಿದ್ದಲು ಮತ್ತು ರೈಲ್ವೆ ಸಚಿವ ಪಿಯುಷ್ ಗೋಯಲ್ ಅವರನ್ನು ಭೇಟಿ ಮಾಡಿ ವಿವಿಧ ವಿಷಯಗಳ ಕುರಿತು ಚರ್ಚಿಸಿದರು.

ಈ ಸಂದರ್ಭದಲ್ಲಿ ಅವರು ರಾಜ್ಯದ ಆರ್‍ಟಿಪಿಎಸ್, ಬಳ್ಳಾರಿ ಉಷ್ಣವಿದ್ಯುತ್ ಸ್ಥಾವರ ಹಾಗೂ ಯರಮರಸ್ ವಿದ್ಯುತ್ ಸ್ಥಾವರಗಳಿಗೆ ಕಲ್ಲಿದ್ದಲು ಘಟಕಗಳನ್ನು ಶೀಘ್ರವೇ ಹಂಚಿಕೆ ಮಾಡುವಂತೆ ಮನವಿ ಮಾಡಿದರು. ಅಲ್ಲದೆ, ರಾಯಚೂರಿನ ಆರ್‍ಟಿಪಿಎಸ್‍ನಲ್ಲಿ ಕಲ್ಲಿದ್ದಲ್ಲು ಸಂಗ್ರಹ ಕಡಿಮೆ ಇರುವ ಹಿನ್ನಲೆಯಲ್ಲಿ ಕೂಡಲೇ ಕಲ್ಲಿದ್ದಲು ಒದಗಿಸುವಂತೆ ವೆಸ್ಟರ್ನ್ ಕೋಲ್‍ಫೀಲ್ಡ್ಸ್ ಲಿಮಿಟೆಡ್ ಹಾಗೂ ಕೋಲ್ ಇಂಡಿಯಾ ಲಿ. ಗಳಿಗೆ ಸೂಚನೆ ನೀಡುವಂತೆ ಮನವಿ ಮಾಡಿದರು.

ಈ ಸಂದರ್ಭದಲ್ಲಿ ಹೈದರಾಬಾದ್ ಕರ್ನಾಟಕ ಭಾಗದ ಅತ್ಯಂತ ಹಿಂದುಳಿದ ಬೀದರ್‍ನಿಂದ ನಾಂದೇಡ್‍ಗೆ ರೈಲ್ವೆ ಸಂಪರ್ಕ ಕಲ್ಪಿಸುವಂತೆಯೂ ಮನವಿ ಮಾಡಿದರು. ನಾಂದೇಡ್ ಯಾತ್ರಾರ್ಥಿ ಮಾರ್ಗದ ವ್ಯಾಪ್ತಿಯಲ್ಲಿರುವ ಬೀದರ್ ಸಿಖ್ಖರ ಯಾತ್ರಾ ಸ್ಥಳವೂ ಹೌದು. ಬೀದರ್ –ಔರಾದ್- ದೀಗುಲ-ನಾಂದೇಡ್ 154 ಕಿ.ಮೀ. ಉದ್ದದ ಹೊಸ ರೈಲು ಮಾರ್ಗ ಕುರಿತ ಸಮೀಕ್ಷಾ ವರದಿಯನ್ನು ರೈಲ್ವೆ ಮಂಡಳಿಗೆ ಸಲ್ಲಿಸಲಾಗಿದೆ. ಈ ಯೋಜನೆಯನ್ನು ಶೀಘ್ರವೇ ಜಾರಿಗೊಳಿಸುವಂತೆಯೂ ಮುಖ್ಯಮಂತ್ರಿಗಳು ಸಚಿವ ಪಿಯುಷ್ ಗೋಯಲ್ ಅವರಿಗೆ ಮನವಿ ಮಾಡಿದರು.

ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡ ಅವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Trending News