Karnataka Assembly Election: ಇಂದು ಚಾಮರಾಜನಗರ ಜಿಲ್ಲೆಯಲ್ಲಿ ನಾಮಿನೇಷನ್ ಜಾತ್ರೆಯೇ ನಡೆದಿದ್ದು ಶುಭ ಮುಹೂರ್ತದಲ್ಲಿ ಕಾಂಗ್ರೆಸ್, ಬಿಜೆಪಿ ಅಭ್ಯರ್ಥಿಗಳು ಉಮೇದುವಾರಿಕೆ ಸಲ್ಲಿಸಿದ್ದಾರೆ. ಅಫಿಡವಿಟ್ ನಲ್ಲಿ ತಮ್ಮ ಆಸ್ತಿ ವಿವರವನ್ನು ಘೋಷಣೆ ಮಾಡಿಕೊಂಡಿದ್ದು ಪ್ರಮುಖ ಅಭ್ಯರ್ಥಿಗಳ ಆಸ್ತಿ, ಸಾಲ ಅಚ್ಚರಿ ತರಿಸಿದೆ.
ಶತ ಕೋಟ್ಯಾಧಿಪತಿ ಮಂಜುನಾಥ್: ಹನೂರು ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಮಂಜುನಾಥ್ ಅವರಿಂದು ನಾಮಪತ್ರ ಸಲ್ಲಿಸಿದ್ದು ಒಟ್ಟು ಚರಾಸ್ಥಿ ತಮ್ಮ ಬಳಿ 53,09,15,860 ರೂ. ಇದ್ದು ಪತ್ನಿ ಬಳಿ 6,43,13,235, ಮಗಳ ಬಳಿ 16,51,151 ರೂ. ಹಾಗೂ ಮಗನ ಹತ್ತಿರ 61,132 ರೂ. ಮೌಲ್ಯದ ಚರಾಸ್ಥಿ ಇದೆ ಎಂದು ಘೋಷಿಸಿಕೊಂಡಿದ್ದಾರೆ.
ಸ್ವಯಾರ್ಜಿತವಾಗಿ 123,32,45,833 ಆಸ್ತಿ ಇದ್ದು ಪಿತ್ರಾರ್ಜಿತವಾಗಿ 62 ಕೋಟಿ ಮೌಲ್ಯದ ಆಸ್ತಿ ಬಂದಿದೆ. ಪತ್ನಿಗೂ ಕೂಡ ಪಿತ್ರಾರ್ಜಿತವಾಗಿ 71.5 ಕೋಟಿ ಮೌಲ್ಯದ ಆಸ್ತಿ ಇದೆ. ಅಭ್ಯರ್ಥಿ ಮಂಜುನಾಥ್ ಅವರಿಗೆ 59 ಕೋಟಿ ಸಾಲವಿದ್ದು ಪತ್ನಿಗೆ 1 ಕೋಟಿ ರೂ. ನಷ್ಟು ಸಾಲ ಇದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ- ಕರೆಂಟಿಲ್ಲ, ರಸ್ತೆಯಿಲ್ಲ, ಆಸ್ಪತ್ರೆಯಿಲ್ಲ... ಅದಕ್ಕೇ ನಮ್ಮ ವೋಟು ಇಲ್ಲಾ ಅಂತಿದ್ದಾರೆ ಈ ಗ್ರಾಮಸ್ಥರು!!
ಇನ್ನು, ಚರಾಸ್ತಿ ವಿಚಾರಕ್ಕೆ ಬಂದರೆ ಶತ ಕೋಟ್ಯಾಧಿಪತಿ ಮಂಜುನಾಥ್ ಹೆಸರಿನಲ್ಲಿ ಯಾವುದೇ ಕಾರು ಮತ್ತಿತರ ವಾಹನಗಳಿಲ್ಲ, ಅವರ ಮಗಳ ಬಳಿ ಒಂದು ಕಾರಿದೆ. ತಮ್ಮ ಬಳಿ 500 ಗ್ರಾಂ ಚಿನ್ನ, 3 ಕೆಜಿಯಷ್ಟು ಬೆಳ್ಳಿ ಇದ್ದು ಪತ್ನಿ ಹೆಸರಿನಲ್ಲಿ 600 ಗ್ರಾಂ ಚಿನ್ನ, 3 ಕೆಜಿ ಬೆಳ್ಳಿ, ಮಗಳ ಬಳಿ 100 ಗ್ರಾಂ ಚಿನ್ನ, 1 ಕೆಜಿ ಬೆಳ್ಳಿ ಇದೆ ಎಂದು ಉಮೇದುವಾರಿಕೆ ವೇಳೆ ಘೋಷಣೆ ಮಾಡಿಕೊಂಡಿದ್ದಾರೆ.
ಪ್ರೀತನ್ ನಾಗಪ್ಪ: ಹನೂರು ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿರುವ ಪ್ರೀತನ್ ನಾಗಪ್ಪ 1.45 ಕೋಟಿ ಸ್ವಯಾರ್ಜಿತ 1.67 ಕೋಟಿ ಪಿತ್ರಾರ್ಜಿತ ಆಸ್ತಿ ಘೋಷಣೆ ಮಾಡಿಕೊಂಡಿದ್ದು ಪತ್ನಿ ಬಳಿ 35 ಲಕ್ಷ ಸ್ವಯಾರ್ಜಿತ ಆಸ್ತಿ ಹಾಗೂ 40 ಲಕ್ಷ ಪಿತ್ರಾರ್ಜಿತ ಆಸ್ತಿ ಇರುವುದಾಗಿ ತಿಳಿಸಿದ್ದಾರೆ. ಇನ್ನು, ತಮಗೆ 42 ಲಕ್ಷ ರೂ. ಸಾಲವಿದ್ದು ಪತ್ನಿ 49 ಸಾಲ ಮಾಡಿದ್ದಾರೆ ಎಂದಿದ್ದಾರೆ.
ಪ್ರಸ್ತುತ ಮಾರುಕಟ್ಟೆ ಮೌಲ್ಯದ ಇರುವ ಸ್ಥಿರಾಸ್ಥಿ 3,12,52,000 ರೂ. ಇದ್ದು ಪತ್ನಿ ಬಳಿ 75 ಲಕ್ಷ ಮೌಲ್ಯದ ಆಸ್ತಿ ಇದೆ. ತಮ್ಮ ಬಳಿ ಟ್ರಾಕ್ಟರ್ ಹಾಗೂ ಕಾರು, ಪತ್ನಿ ಬಳಿ ಕಾರಿದ್ದು ಇಬ್ಬರ ಹತ್ತಿರವೂ ಸೇರಿದಂತೆ 2.5 ಕೆಜಿ ಬೆಳ್ಳಿ, 900 ಗ್ರಾಂ ನಷ್ಟು ಚಿನ್ನ ಹೊಂದಿದ್ದಾರೆ. ಇದರ ಜೊತೆ ಕೈಯಲ್ಲಿ 2 ಲಕ್ಷ ನಗದು ಇದ್ದು ಪತ್ನಿ ಬಳಿ 1 ಲಕ್ಷ ರೂ. ಇದೆ ಎಂದು ಉಮೇದುವಾರಿಕೆಯಲ್ಲಿ ಘೋಷಣೆ ಮಾಡಿಕೊಂಡಿದ್ದಾರೆ.
ಇದನ್ನೂ ಓದಿ- ʼರಾಜ್ಯದಲ್ಲಿ ಬಿಜೆಪಿ ಕೆಲವೇ ಕೆಲವು ವ್ಯಕ್ತಿಗಳ ನಿಯಂತ್ರಣದಲ್ಲಿದೆʼ : ಶೆಟ್ಟರ್ ಶಾಕಿಂಗ್ ಹೇಳಿಕೆ
ಸಿ.ಪುಟ್ಟರಂಗಶೆಟ್ಟಿ: ಸತತ ಮೂರು ಬಾರಿ ಜಯಗಳಿಸಿ ನಾಲ್ಕನೇ ಬಾರಿ ಅದೃಷ್ಟ ಪರೀಕ್ಷೆಗೆ ಇಳಿದಿರುವ ಚಾಮರಾಜನಗರದ ಹಾಲಿ ಶಾಸಕ ಸಿ.ಪುಟ್ಟರಂಗಶೆಟ್ಟಿ ಇಂದು ಉಮೇದುವಾರಿಕೆ ಸಲ್ಲಿಸಿದ್ದಾರೆ. ತಮ್ಮ ಕೈಯಲ್ಲಿ ಒಟ್ಟು 10 ಲಕ್ಷ ರೂ. ನಗದು ಇದ್ದು ಪತ್ನಿ ಮತ್ತು ಇಬ್ಬರ ಮಕ್ಕಳ ಕೈಯಲ್ಲಿ ಒಂದೂವರೆ ಲಕ್ಷ ಹಣ ಇದೆ ಎಂದು ತಿಳಿಸಿದ್ದಾರೆ. ತಮ್ಮ ಹೆಸರಿನಲ್ಲಿ 1 ಟ್ರಾಕ್ಟರ್, 1 ಬೈಕ್, 2 ಕಾರಿದ್ದು ಇಬ್ಬರ ಮಕ್ಕಳು ಒಂದೊಂದು ಕಾರನ್ನು ಹೊಂದಿದ್ದಾರೆ. ತಮ್ಮಲ್ಲಿ 58 ಗ್ರಾಂ ಚಿನ್ನ, 1.7 ಲಕ್ಷ ಮೌಲ್ಯದ ವಾಚ್ ಇದೆ, ಪತ್ನಿ ಬಳಿ 127 ಗ್ರಾಂ ಚಿನ್ನ, 1 ಕೆಜಿ ಬೆಳ್ಳಿ, ಹಿರಿಯ ಪುತ್ರನ ಬಳಿ 125 ಗ್ರಾಂ ಚಿನ್ನ, ಕಿರಿಯ ಪುತ್ರನ ಬಳಿ 45 ಗ್ರಾಂ ಚಿನ್ನ ಇದೆ. ಚರಾಸ್ಥಿಗಳ ಒಟ್ಟು ಮೌಲ್ಯ ತಮ್ಮ ಬಳಿ 79.55 ಲಕ್ಷ, ಪತ್ನಿ ಬಳಿ 8.96 ಸಾವಿರ ಮೌಲ್ಯದ ವಸ್ತುಗಳಿವೆ ಎಂದು ಘೋಷಣೆ ಮಾಡಿಕೊಂಡಿದ್ದಾರೆ.
ಸ್ಥಿರಾಸ್ತಿಗಳು ತಮ್ಮ ಹೆಸರಿನಲ್ಲಿ 8.74 ಕೋಟಿ ರೂ. ಮೌಲ್ಯದಷ್ಟಿದ್ದು ಪತ್ನಿ ಹೆಸರಿನಲ್ಲಿ 3 ಕೋಟಿ, ಹಿರಿಯ ಮಗನ ಬಳಿ 92 ಲಕ್ಷ, ಕಿರಿಯ ಮಗನ ಬಳಿ 25 ಲಕ್ಷ ಮೌಲ್ಯದ ಸ್ಥಿರಾಸ್ಥಿ ಇದೆ. ಜೊತೆಗೆ, ಜಂಟಿ ಖಾತೆಯಲ್ಲಿ 4.52 ಕೋಟಿ ಸಾಲ ಇದ್ದು ತಮ್ಮ ಹೆಸರಿನಲ್ಲಿ 3.57 ಕೋಟಿ ಸಾಲ ಇದೆ, ತಮಗೆ ಒಟ್ಟು 8.9 ಕೋಟಿ ರೂ. ನಷ್ಟು ಸಾಲ ಇದೆ ಎಂದು ಎಂದು ತಿಳಿಸಿದ್ದಾರೆ.
ಹ.ರಾ.ಮಹೇಶ್: ಚಾಮರಾಜನಗರ ಕ್ಷೇತ್ರದಿಂದ ಬಿಎಸ್'ಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಹ.ರಾ.ಮಹೇಶ್ ಇಂದು ಉಮೇದುವಾರಿಕೆ ಸಲ್ಲಿಸಿದ್ದು ತಮ್ಮ ಕೈಯಲ್ಲಿ 1 ಲಕ್ಷ ನಗದು, 2 ಕಾರು ಒಂದು ಬೈಕ್, 18 ಗ್ರಾಂ ಚಿನ್ನ ಸೇರಿದಂತೆ ಒಟ್ಟು ಚರಾಸ್ಥಿ 17.25 ಲಕ್ಷದ್ದಾಗಿದೆ ಎಂದು ಘೋಷಣೆ ಮಾಡಿಕೊಂಡಿದ್ದಾರೆ. ವಿವಿಧ ಬ್ಯಾಂಕುಗಳಲ್ಲಿ 31 ಲಕ್ಷ ಸಾಲ ಇದೆ ಎಂತಲೂ ತಿಳಿಸಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.