Karnataka assembly Election 2023: ಸಿದ್ದರಾಮಯ್ಯ ದಲಿತ ವಿರೋಧಿ ನಾಯಕ ಎಂದು ಎಂಎಲ್ಸಿ ಚಲವಾದಿ ನಾರಾಯಣಸ್ವಾಮಿ ವಾಗ್ದಾಳಿ ನಡೆಸಿದರು. ಚಾಮರಾಜನಗರದಲ್ಲಿ ಸೋಮಣ್ಣ ನಾಮಪತ್ರ ಸಲ್ಲಿಕೆ ವೇಳೆ ಆಯೋಜಿಸಿದ್ದ ಬಹಿರಂಗ ಸಮಾವೇಶದಲ್ಲಿ ಮಾತನಾಡಿದ ಎಂಎಲ್ಸಿ ಚಲವಾದಿ ನಾರಾಯಣಸ್ವಾಮಿ, ಸಿದ್ದರಾಮಯ್ಯ ಓರ್ವ ದಲಿತ ವಿರೋಧಿ ನಾಯಕ, ಮೇಲೆ ಬಸಪ್ಪ- ಒಳಗೆ ಬರೀ ವಿಷಪ್ಪ ಎಂಬ ರೀತಿ ನಾಯಕ, ಎಲ್ಲಾ ದಲಿತರನ್ನು ತುಳಿದು ಆಡಳಿತ ನಡೆಸಿದ್ದಾರೆ ಎಂದು ಕಿಡಿಕಾರಿದರು.
ಅವರದೇ ಹಾಲಿ ದಲಿತ ಶಾಸಕನಿಗೆ ಟಿಕೆಟ್ ಕೊಡದೇ ತುಳಿದರು. ಶಾಸಕನ ಮನೆಗೆ ಬೆಂಕಿ ಇಟ್ಟರು, ತುಮಕೂರಿನಲ್ಲಿ ಪರಮೇಶ್ವರ್ ಅವರನ್ನು ಸೋಲಿಸಿದರು, ಖರ್ಗೆ ಅವರನ್ನು ಕೇಂದ್ರಕ್ಕೆ ಕಳುಹಿಸಿ ಈಗ ದಲಿತ ನಾಯಕ, ಹಿಂದುಳಿದ ನಾಯಕರ ರೀತಿ ಬಿಂಬಿಸಿಕೊಳ್ಳುತ್ತಿದ್ದಾರೆ ಎಂದು ಲೇವಡಿ ಮಾಡಿದರು.
ಇದನ್ನೂ ಓದಿ- ಸೋಮಣ್ಣ ವರುಣಾಗೆ ಏಕೆ ಬಂದಿದ್ದು: ಸಿದ್ದು ಹೇಳಿಕೆಗೆ ಪ್ರತಾಪ್ ಸಿಂಹ-ಸೋಮಣ್ಣ ತೀವ್ರ ವಾಗ್ಧಾಳಿ
ತಮ್ಮನ್ನು ಹುಲಿ, ರಾಜಾಹುಲಿ ಎಂದುಕೊಳ್ಳುವ ಸಿದ್ದರಾಮಯ್ಯ ಕ್ಷೇತ್ರಕ್ಕಾಗಿ ಪರದಾಟ ಅನುಭವಿಸಿದರು. ಕೋಲಾರದಲ್ಲಿ ವ್ಯತಿರಿಕ್ತ ಸರ್ವೇ ಬಂದಿದ್ದರಿಂದ ಹಳೇ ಗಂಡನ ಪಾದ ಗತಿ ಎಂಬಂತೆ ವರುಣಾಗೆ ಬಂದಿದ್ದಾರೆ. ಮೀಸೆ ತಿರುಗಿಕೊಂಡು ದೊಡ್ಡ ಲೀಡರ್ ಅಂತಾ ಅಲೆಯುತ್ತಿದ್ದ ಸಿದ್ದರಾಮಯ್ಯ ಅವರ ಬಟ್ಟೆ ಈಗ ಒದ್ದೆಯಾಗಿದೆ. ಐದು ವರ್ಷ ಸಿಎಂ ಆದರೂ ತಮ್ಮ ಕ್ಷೇತ್ರಕ್ಕೆ, ಮೈಸೂರಿಗೆ ಏನೂ ಮಾಡಿಲ್ಲ. ಅಲ್ಲಿನ ಜನರು ಚಾಮುಂಡೇಶ್ವರಿಯಲ್ಲಿ ಮಕಾಡೆ ಮಲಗಿಸಿದ್ದರು.ನಂತರ ಬಾದಾಮಿಗೆ ಹೋಗಿ ಒಂದು ಸಾವಿರ ಲೀಡ್ ನಲ್ಲಿ ಗೆದ್ದರು.
ಕೋಲಾರಗೆ ಬಂದರೂ ನಾನು ಹೋಗಿ ಒಂದು ಗಸ್ತ್ ಕೊಟ್ಟೆ. ಮತ್ತೇ ಹಳೆಯ ಗಂಡನ ಪಾದವೇ ಗತಿ ಅಂತಾ ವರುಣಾಗೆ ಬಂದಿದ್ದಾರೆ. ಸಿದ್ದರಾಮಯ್ಯ ದಲಿತ ವಿರೋಧಿ. ಪರಮೇಶ್ವರ್ ಅವರನ್ನೂ ಕತ್ತು ಹಿಚುಕಿ ರಾಜಕೀಯವಾಗಿ ಮುಗಿಸಿದರು. ಖರ್ಗೆ, ಮುನಿಯಪ್ಪ ಅವರನ್ನೂ ಸೋಲಿಸಿದರು. ಅದಕ್ಕೆ ಅವರನ್ನು ದಲಿತ ವಿರೋಧಿ ಎನ್ನುತ್ತೇವೆ. ಸಿದ್ದರಾಮಯ್ಯ ಮೇಲೆ ಅಷ್ಟೇ ಬಸಪ್ಪ, ಹೃದಯದ ಒಳಗೆ ವಿಷಪ್ಪ ಎಂದು ಆಕ್ರೋಶ ಹೊರಹಾಕಿದರು.
ನಮ್ಮ ಪಕ್ಷದಿಂದ ಒಬ್ಬರು, ಇಬ್ಬರು ಹೋಗಿದ್ದಾರೆ. ಹೊಸ ರಕ್ತವನ್ನು ರಾಜಕೀಯಕ್ಕೆ ತರುವ ಕೆಲಸ ಹೈಕಮಾಂಡ್ ಮಾಡಿದೆ. ಟಿಕೆಟ್ ಕೊಟ್ಟಿಲ್ಲ ಅಂತಾ ಲಕ್ಷ್ಮಣ ಸವದಿ ಪಕ್ಷ ಬಿಟ್ಟಿದ್ದಾರೆ. ಮಹೇಶ್ ಕುಮಟಳ್ಳಿ, ರಮೇಶ್ ಜಾರಕಿಹೊಳಿ ಬಂದಿದ್ರಿಂದ ನಾವೂ ಸರ್ಕಾರ ನಡೆಸಿದ್ದು ಅವರು ಪಕ್ಷ ಬಿಟ್ಟಿದ್ದರಿಂದ ನಮಗೆ ಏನು ತೊಂದರೆ ಆಗಲ್ಲ ಎಂದರು.
ಇದನ್ನೂ ಓದಿ- ಇಂದು ಸೋಮಣ್ಣ ನಾಮಿನೇಷನ್: ಟೆಂಪಲ್ ರನ್, ಬೃಹತ್ ಸಮಾವೇಶ
ಈಗ ಕಾಂಗ್ರೆಸ್ ನವರು ನಮ್ಮನ್ನು ಲಿಂಗಾಯತ ವಿರೋಧಿ ಎನ್ನುತ್ತಿದ್ದಾರೆ. ಆದರೆ ಬಿಜೆಪಿ ಈ ಬಾರಿ 63 ಜನ ಲಿಂಗಾಯತರಿಗೆ ಟಿಕೆಟ್ ಕೊಟ್ಟಿದ್ದೇವೆ. ಯಾರೂ ಹಾಗಾದ್ರೆ ನಿಜವಾದ ಲಿಂಗಾಯತ ವಿರೋಧಿ. ಲಿಂಗಾಯತ ಜಾತಿ ಹೊಡೆಯಲು ಹೋಗಿ ಕಳೆದ ಬಾರಿ ಚುನಾವಣೆಯಲ್ಲಿ 80 ಕ್ಕೆ ಬಂದರು.ಈ ಬಾರಿ ಅಷ್ಟು ಕೂಡ ಗೆಲ್ಲಲ್ಲ ಎಂದು ಕಾಂಗ್ರೆಸ್ ವಿರುದ್ಧ ಲೇವಡಿ ಮಾಡಿದರು.
ಸಿಎಂ ಆಗುವ ಯೋಗ್ಯತೆ ಇರೋದ್ರಲ್ಲಿ ಸೋಮಣ್ಣ ಕೂಡ ಒಬ್ಬರು. ವರುಣಾ ಹಾಗೂ ಚಾಮರಾಜನಗರ ಎರಡು ಕಡೆಯೂ ಸೋಮಣ್ಣ ಗೆಲ್ಲಬೇಕು. ಮೋದಿ ಹೆಸರು ಕೇಳಿದ್ರೆ ಕಾಂಗ್ರೆಸ್ ಗಢಗಢ ಅನ್ನುತ್ತೆ. ಮೋದಿ ಸೋಮಣ್ಣರನ್ನು ಎರಡು ಕ್ಷೇತ್ರಕ್ಕೆ ಕಳಿಸಿದ್ದಾರೆ.
ಆದ್ರಿಂದ ಅವರನ್ನೂ ಗೆಲ್ಲಿಸಬೇಕು, ಮೋದಿ ನೋಡ್ತಿದ್ದಾರೆ ಎಂದು ಮನವಿ ಮಾಡಿದರು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.