ಪಣಜಿ: ಗೋವಾ ಮುಖ್ಯಮಂತ್ರಿ ಮನೋಹರ್ ಪರ್ರಿಕರ್ ನಿಧನದ ಬೆನ್ನಲ್ಲೇ ತಲೆದೂರಿರುವ ಮುಖ್ಯಮಂತ್ರಿ ಗಾದಿ ರೇಸ್ ನಲ್ಲಿ ಗೋವಾ ವಿಧಾನಸಭಾ ಸ್ಪೀಕರ್ ಪ್ರಮೋದ್ ಸಂವಾತ್ ನೂತನ ಮುಖ್ಯಮಂತ್ರಿಯಾಗಿ ಹೊರಹೊಮ್ಮುವ ಸಾಧ್ಯತೆ ಇದೇ ಎಂದು ಮೂಲಗಳು ತಿಳಿಸಿವೆ.
ಮೂಲಗಳ ಪ್ರಕಾರ, ಬಿಜೆಪಿ ಮತ್ತು ಮಿತ್ರ ಪಕ್ಷಗಳ ನಡುವೆ ನಿನ್ನೆ ರಾತ್ರಿಯಿಂದ ನಡೆಯುತ್ತಿರುವ ಸಮಾಲೋಚನೆಯಲ್ಲಿ ಪ್ರಮೋದ್ ಸಾವಂತ್ ಪ್ರಭಾವಿ ನಾಯಕರಾಗಿ ಕಾಣಿಸಿಕೊಂಡಿದ್ದು, ಅವರನ್ನು ಗೋವಾದ ನೂತನ ಮುಖ್ಯಮಂತ್ರಿಯಾಗಿ ಆಯ್ಕೆ ಮಾಡುವ ಸಾಧ್ಯತೆ ಇದೇ ಎನ್ನಲಾಗಿದೆ.
ಏತನ್ಮಧ್ಯೆ, ಮಿತ್ರಪಕ್ಷವಾದ ಮಹಾರಾಷ್ಟ್ರವಾದಿ ಗೋಮಾಂತಕ ಪಾರ್ಟಿ (ಎಂಜಿಪಿ) ಮುಖಂಡ ರಾಮಕೃಷ್ಣ ಧವ್ಳೀಕರ್ ಕೂಡಾ ಮುಖ್ಯಮಂತ್ರಿ ಹುದ್ದೆಗೆ ಪಟ್ಟು ಹಿಡಿದಿರುವುದಾಗಿ, ಉಪ ಸ್ಪೀಕರ್ ಮೈಕೆಲ್ ಲೋಬೊ ತಿಳಿಸಿದ್ದಾರೆ.
ಬಿಜೆಪಿ ಶಾಸಕರು ಹಾಗೂ ಮಿತ್ರ ಪಕ್ಷದೊಂದಿಗೆ ನಿತಿನ್ ಗಡ್ಕರಿ ರಾತ್ರಿಯಿಡೀ ಸಮಾಲೋಚನೆ ನಡೆಸಿದ್ದು, ಪ್ರತಿ ಶಾಸಕರೂ ಗಡ್ಕರಿ ಮತ್ತು ಪಕ್ಷದ ಮುಖಂಡ ಬಿ.ಎಲ್. ಸಂತೋಷ್ ಅವರ ಸಮ್ಮುಖದಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು. ಈ ವೇಳೆ ಯಾವುದೇ ಒಮ್ಮತಕ್ಕೆ ಬರಲು ಸಾಧ್ಯವಾಗಿಲ್ಲ ಎಂದು ಹೇಳಲಾಗುತ್ತಿತ್ತು.