ಬೆಂಗಳೂರು: ಆಹಾರ ಪದಾರ್ಥಗಳ ಬೆಲೆ ನಿರಂತರವಾಗಿ ಏರಿಕೆ ಆಗುತ್ತಿದ್ದರೂ ನಿಯಂತ್ರಣಕ್ಕೆ ಕ್ರಮ ಕೈಗೊಳ್ಳದ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ‘ಈ ಸರ್ಕಾರ ಬರಗೆಟ್ಟ ಈ ಹೊತ್ತಿನಲ್ಲಿ ಅಂಬರದ ಮೇಲೆ ಕೂತು ಸ್ವಯಂವರ ಮಾಡಿಕೊಳ್ಳುತ್ತಿರುವ ಮತಿಗೆಟ್ಟ ವರನಂತೆ ವರ್ತಿಸುತ್ತಿದೆ’ ಎಂದು ಅವರು ಕಿಡಿಕಾರಿದ್ದಾರೆ.
ಈ ಬಗ್ಗೆ ಮಾಧ್ಯಮಗಳ ವರದಿ ಉಲ್ಲೇಖಸಿ ಎಚ್ಡಿಕೆ ಸೋಮವಾರ ಸರಣಿ ಟ್ವೀಟ್ ಮಾಡಿದ್ದಾರೆ. ‘5 ಗ್ಯಾರಂಟಿಗಳಿಂದ ಜನೋದ್ಧಾರ ಗ್ಯಾರಂಟಿ ಎಂದು ಹಸಿಸುಳ್ಳು ಹೇಳಿದ್ದ ರಾಜ್ಯ ಕಾಂಗ್ರೆಸ್ ಸರ್ಕಾರ ಬರಗೆಟ್ಟ ಈ ಹೊತ್ತಿನಲ್ಲಿ ಅಂಬರದ ಮೇಲೆ ಕೂತು ಸ್ವಯಂವರ ಮಾಡಿಕೊಳ್ಳುತ್ತಿರುವ ಮತಗೆಟ್ಟ ವರನಂತೆ ವರ್ತಿಸುತ್ತಿದೆ. ಬೆಲೆ ಏರಿಕೆ ಹೊಡೆತಕ್ಕೆ ಜನ ತತ್ತರಿಸುತ್ತಿರುವುದು ಅದರ ಕಣ್ಣಿಗೆ ಕಾಣುತ್ತಿಲ್ಲ ಎಂದಿರುವ ಅವರು, 'ಜನರಿಗೆ ಬೆಲೆ ಏರಿಕೆ ಗ್ಯಾರಂಟಿ' ಎಂದು ಹ್ಯಾಶ್ಟ್ಯಾಗ್ ಬಳಸಿ ಟ್ವೀಟ್ ಮಾಡಿದ್ದಾರೆ.
‘ನನಗೂ ಫ್ರೀ, ನಿನಗೂ ಫ್ರೀ ಎಂದು ಗ್ಯಾರಂಟಿ ಜಾಗಟೆ ಹೊಡೆದ ಈ ಸರ್ಕಾರಕ್ಕೆ ಮಾರುಕಟ್ಟೆಯಲ್ಲಿ ಗಗನಮುಖಿಯಾದ ಆಹಾರ ಪದಾರ್ಥಗಳ ಬೆಲೆ ಮೇಲೆ ನಿಯಂತ್ರಣವೇ ಇಲ್ಲ. ಆಹಾರ ಮತ್ತು ನಾಗರಿಕ ಪೂರೈಕೆ, ಕೃಷಿ ಉತ್ಪನ್ನ ಮಾರುಕಟ್ಟೆ ಇಲಾಖೆಗಳು ಜನರ ಕಣ್ಣೀರಿನಲ್ಲಿ ಗೆಣಸು ಬೇಯಿಸಿಕೊಳ್ಳುತ್ತಿವೆ. ಅವರಿಗೆ ಬೆಲೆ ಇಳಿಕೆ ಬಗ್ಗೆ ಚಿಂತನೆಯೇ ಇಲ್ಲ’ವೆಂದು ಕುಮಾರಸ್ವಾಮಿ ಕುಟುಕಿದ್ದಾರೆ.
ಇದನ್ನೂ ಓದಿ: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆ ಗೃಹ ಜ್ಯೋತಿಗೆ ಭರ್ಜರಿ ಪ್ರತಿಕ್ರಿಯೆ
‘ಇನ್ನೊಬ್ಬರ ಮೇಲೆ ಗೂಬೆ ಕೂರಿಸುವ ಈ ಸರ್ಕಾರ ಬಂದು ತಿಂಗಳ ಮೇಲಾಯಿತು. ಅಧಿಕಾರ ಸಿಕ್ಕ ಕೂಡಲೇ ವರ್ಗಾವಣೆ ದಂಧೆಯ ದಾಸ್ಯಕ್ಕೆ ಬಿದ್ದ ಸರ್ಕಾರಕ್ಕೆ ಮಾರುಕಟ್ಟೆಯಲ್ಲಿ ಹೆಚ್ಚುತ್ತಲೇ ಹೋಗುತ್ತಿರುವ ಬೆಲೆಗಳ ಬಗ್ಗೆ, ಆಹಾರ ಪದಾರ್ಥಗಳ ದುಬಾರಿ ಬಗ್ಗೆ ಗಮನ ಹೋಗಲೇ ಇಲ್ಲ. ಹಣದ ಹಪಾಹಪಿ ಭಾಗ್ಯಗಳನ್ನು ಬಲಿ ತೆಗೆದುಕೊಳ್ಳುವ ದುಸ್ಥಿತಿಗೆ ದೂಡಿದೆ’ ಎಂದು ಅವರು ಕಿಡಿಕಾರಿದ್ದಾರೆ.
‘ಬೆಲೆ ಏರಿಕೆ ಪಟ್ಟಿ ಓದಿದರೆ ಎದೆ ನಡುಗುತ್ತದೆ. ಅಕ್ಕಿ ಬೆಲೆ ಕೆಜಿಗೆ ಸರಾಸರಿ ₹20 ಏರಿದ್ದರೆ, ಕೆಜಿ ಟೊಮ್ಯಾಟೋ ಬೆಲೆ ₹100 ಮುಟ್ಟಿದೆ. ಈ ಏರಿಕೆ ಲಾಭ ಅತ್ತ ರೈತನಿಗೂ ಇಲ್ಲ, ಇತ್ತ ಗ್ರಾಹಕನಿಗೂ ಇಲ್ಲ. ಜನರು ಬೆಲೆ ಬೆಂಕಿಯಲ್ಲಿ ಬೇಯುತ್ತಿದ್ದರೆ ಈ ಸರ್ಕಾರ ಆ ಬೇಗೆಯಲ್ಲಿ ಚಳಿ ಕಾಯಿಸಿಕೊಳ್ಳುತ್ತಿದೆ, ಹೊಸ ಹುಂಡಿಗಳಿಗೆ ಜಾಗ ಹುಡುಕುತ್ತಿದೆ’ ಎಂದು ಎಚ್ಡಿಕೆ ಟೀಕಿಸಿದ್ದಾರೆ.
‘ಕಾಂಗ್ರೆಸ್ ಪಕ್ಷವು ತಾನು ಕೊಟ್ಟ ಭರವಸೆಗಳ ಬಗ್ಗೆ ಉತ್ತರ ಹೇಳಲಿ? ಬೆಲೆಗಳ ಇಳಿಕೆಯ ಬಗ್ಗೆ ಹೇಳಿದ್ದೆಲ್ಲ ಎಲ್ಲಿ ಹೋಯಿತು? ಮತ ಪಡೆದ ಮೇಲೆ ಎಲ್ಲಾ ಮರೆತು ಹೋಯಿತಾ? 135 ಸೀಟು ಸಿಕ್ಕಿದ ಮೇಲೆ ಪ್ರಣಾಳಿಕೆ ಪುಸ್ತಕಕ್ಕೆ ಮೂವತ್ತೇ ದಿನದಲ್ಲಿ ಗೆದ್ದಲು ಹಿಡಿಯಿತಾ? ನುಡಿದಂತೆ ನಡೆದಿದ್ದೇವೆ ಎಂದಿರಿ, ನುಡಿದಂತೆ ಎಲ್ಲಿ ನಡೆದಿದ್ದೀರಿ? ನುಡಿದಂತೆ ನಡೆದಿದ್ದೇವೆ ಎಂದರೆ ಲಂಗೂ ಲಗಾಮು ಇಲ್ಲದೆ ಬೆಲೆಗಳನ್ನು ಆಕಾಶಕ್ಕೆ ಜಿಗಿಸುವುದಾ? ಮಾರುಕಟ್ಟೆಯ ದಲ್ಲಾಳಿಗಳಿಗೆ ಶಕ್ತಿ ತುಂಬುವುದಾ? ಶಕ್ತಿ ಯೋಜನೆ ಮೂಲಕ ಮಹಿಳೆಯರ ಗಮನ ಬೇರೆಡೆಗೆ ಸೆಳೆದು, ಅವರ ಅಡುಗೆ ಮನೆ ಬಜೆಟ್'ಗೆ ಕೊಳ್ಳಿ ಇಡುವುದಾ?’ ಎಂದು ಅವರು ಪ್ರಶ್ನಿಸಿದ್ದಾರೆ.
ಇದನ್ನೂ ಓದಿ: "ಸಂವಿಧಾನದ ರಕ್ಷಣೆಗೆ ಕಾಂಗ್ರೆಸ್ ನವರು ಎಲ್ಲ ಹೋರಾಟಗಳಿಗೂ ಸಿದ್ಧರಾಗಬೇಕಿದೆ"
ಕಾಂಗ್ರೆಸ್ ಪಕ್ಷದ ಹೊಸ ಗ್ಯಾರಂಟಿಗಳು ಹೀಗಿವೆ ಎಂದು ಟಾಂಗ್ ನೀಡಿರುವ ಕುಮಾರಸ್ವಾಮಿ, ಕಾಂಗ್ರೆಸ್ ಸರ್ಕಾರದ ಹೊಸ 5 ಗ್ಯಾರಂಟಿಗಳನ್ನು ಹೀಗೆ ಪಟ್ಟಿ ಮಾಡಿದ್ದಾರೆ.
1. ಅಕ್ಕಿಭಾಗ್ಯ ಹಗಲು ಕನಸು, ಬೆಲೆ ಏರಿಕೆ ಕನಸು ನನಸು!
2. ಗೃಹಜ್ಯೋತಿ ಈಗ ಸುಡುಜ್ಯೋತಿ!!
3. ಶಕ್ತಿ ಯೋಜನೆಯಿಂದ ಸಾರಿಗೆ ವ್ಯವಸ್ಥೆಯಲ್ಲಿ ಅರಾಜಕತೆ!!!
4. ಗೃಹಲಕ್ಷ್ಮಿಗೆ ಗ್ರಹಣ!!!!
5. ನಿದಿರೆಗೆ ಜಾರಿದೆ ಯುವನಿಧಿ!!!!
‘ಕಾಂಗ್ರೆಸ್ ಸರ್ಕಾರ ಸುಳ್ಳು ಹೇಳಿದ್ದು ಸಾಕು, ಇನ್ನಾದರೂ ಏರಿದ ಬೆಲೆ ಕಡಿತಕ್ಕೆ ಕ್ರಮ ಕೈಗೊಳ್ಳಲಿ. ಇಲ್ಲವಾದರೆ ರಾಜ್ಯದ ನಾರಿಶಕ್ತಿ ಆಕ್ರೋಶಕ್ಕೆ ನೀವು ನಾಮಾವಶೇಷ ಇಲ್ಲದಂತೆ ಹೋಗುತ್ತೀರಿ ಎಚ್ಚರ’ ಎಂದು ಎಚ್ಡಿಕೆ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.
ಇದನ್ನೂ ಓದಿ: ಶಕ್ತಿ ಯೋಜನೆ ಹೊಡೆತ: ಆಟೋ ಮಾರಾಟಕ್ಕೆ ನಿಂತ ಆಟೋ ಚಾಲಕರು
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.