ಕೋಲ್ಕತ್ತಾ: ವೈದ್ಯಕೀಯ ಸೇವೆಗಳ ಮೇಲೆ ಪರಿಣಾಮ ಬೀರುವ ವೈದ್ಯಕೀಯ ಮುಷ್ಕರ ಕುರಿತು ಕೇಂದ್ರ ಸರ್ಕಾರ ಶನಿವಾರ ಪಶ್ಚಿಮ ಬಂಗಾಳ ಸರ್ಕಾರದಿಂದ ವಿವರವಾದ ವರದಿಯನ್ನು ಕೋರಿದೆ.
ಇದಕ್ಕೂ ಮುನ್ನ ಮುಷ್ಕರ ನಿರತ ಕಿರಿಯ ವೈದ್ಯರನ್ನು ಬಿಕ್ಕಟ್ಟನ್ನು ಪರಿಹರಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಸಭೆಗೆ ಆಹ್ವಾನವನ್ನುನೀಡಿದ್ದರು. ಆದರೆ ಇದನ್ನು ವೈದ್ಯರು ತಿರಸ್ಕರಿಸಿದ್ದಾರೆ. ಇದರಿಂದಾಗಿ ಸತತ ಐದನೇ ದಿನವೂ ವೈದ್ಯರು ತಮ್ಮ ಪ್ರತಿಭಟನೆಯನ್ನು ಮುಂದುವರೆಸಿದರು.
ಎನ್ಆರ್ಎಸ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಇಬ್ಬರು ವೈದ್ಯರ ಮೇಲಿನ ಹಲ್ಲೆ ವಿರುದ್ಧ ಪ್ರತಿಭಟಿಸುತ್ತಿರುವ ವೈದ್ಯರು ಶುಕ್ರವಾರ ಮಮತಾ ಬ್ಯಾನರ್ಜಿಯಿಂದ ಬೇಷರತ್ತಾಗಿ ಕ್ಷಮೆಯಾಚಿಸಬೇಕೆಂದು ಕೋರಿದ್ದರು ಮತ್ತು ತಮ್ಮ ಪ್ರತಿಭಟನೆಯನ್ನು ಹಿಂತೆಗೆದುಕೊಳ್ಳುವ ಸಲುವಾಗಿ ರಾಜ್ಯ ಸರ್ಕಾರಕ್ಕೆ ಆರು ಷರತ್ತುಗಳನ್ನು ವಿಧಿಸಿದ್ದರು.
ಮಮತಾ ಬ್ಯಾನರ್ಜಿ ಎಸ್ಎಸ್ಕೆಎಂ ಆಸ್ಪತ್ರೆಗೆ ಗುರುವಾರ ಭೇಟಿ ನೀಡಿದ ಸಂದರ್ಭದಲ್ಲಿ ಅವರು ನೀಡಿದ ಹೇಳಿಕೆಗಳಿಗೆ ಅವರು ನಿಲ್ ರತನ್ ಸಿರ್ಕಾರ್ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ ಬಂದು ಬೇಷರತ್ತಾಗಿ ಕ್ಷಮೆಯಾಚಿಸಬೇಕಾಗುತ್ತದೆ ಎಂದು ಕಿರಿಯ ವೈದ್ಯರ ಜಂಟಿ ವೇದಿಕೆಯ ವಕ್ತಾರ ಅರಿಂದಮ್ ದತ್ತಾ ಪಿಟಿಐಗೆ ತಿಳಿಸಿದ್ದಾರೆ. "ಮಮತಾ ಅವರು ಎಸ್ಎಸ್ಕೆಎಂಗೆ ಹೋಗಲು ಸಾಧ್ಯವಾದರೆ ಅವರು ಎನ್ಆರ್ಎಸ್ಗೆ ಕೂಡ ಬರಬಹುದು ... ಇಲ್ಲದಿದ್ದರೆ ಈ ಆಂದೋಲನ ಮುಂದುವರಿಯುತ್ತದೆ" ಎಂದು ದತ್ತಾ ಹೇಳಿದರು.
ಗುರುವಾರದಂದು ಸರ್ಕಾರಿ ಎಸ್ಎಸ್ಕೆಎಂ ಆಸ್ಪತ್ರೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಮಮತಾ ಬ್ಯಾನರ್ಜಿ, ಹೊರಗಿನವರು ವೈದ್ಯಕೀಯ ಕಾಲೇಜುಗಳಲ್ಲಿ ಗೊಂದಲಗಳನ್ನು ಸೃಷ್ಟಿಸುತ್ತಿದ್ದಾರೆ ಮತ್ತು ನಡೆಯುತ್ತಿರುವ ಆಂದೋಲನವು ಸಿಪಿಐ (ಎಂ) ಮತ್ತು ಬಿಜೆಪಿಯ ಪಿತೂರಿಯಾಗಿದೆ ಎಂದು ಆರೋಪಿಸಿದ್ದರು.
ಏತನ್ಮಧ್ಯೆ, ಏಮ್ಸ್ ದೆಹಲಿಯ ವೈದ್ಯಕೀಯ ವೈದ್ಯರು ಶನಿವಾರ ತಮ್ಮ ಪ್ರತಿಭಟನೆಯನ್ನು ಹಿಂತೆಗೆದುಕೊಂಡರು ಮತ್ತು ಬೇಡಿಕೆಗಳನ್ನು ಈಡೇರಿಸಲು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಗೆ 48 ಗಂಟೆಗಳ ಕಾಲಾವಕಾಶವನ್ನು ನೀಡಿದ್ದಾರೆ. ಒಂದು ವೇಳೆ 48 ಗಂಟೆಗಳ ಒಳಗೆ ಬೇಡಿಕೆಗಳನ್ನು ಈಡೇರಿಸದಿದ್ದರೆ, ದೆಹಲಿ ಆಸ್ಪತ್ರೆಯಲ್ಲಿ ಅನಿರ್ದಿಷ್ಟ ಮುಷ್ಕರ ನಡೆಸಲಾಗುವುದು ಎಂದು ಏಮ್ಸ್ ರೆಸಿಡೆಂಟ್ ಡಾಕ್ಟರ್ಸ್ ಅಸೋಸಿಯೇಶನ್ (ಆರ್ಡಿಎ) ಹೇಳಿಕೆಯಲ್ಲಿ ತಿಳಿಸಿದೆ.
ಏತನ್ಮಧ್ಯೆ, ಭಾರತೀಯ ವೈದ್ಯಕೀಯ ಸಂಘ (ಐಎಂಎ) ನಿಯೋಗ ಹಿಂದಿನ ದಿನ ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷ್ ವರ್ಧನ್ ಅವರನ್ನು ಭೇಟಿ ಮಾಡಿ ಈ ವಿಷಯದ ಬಗ್ಗೆ ಚರ್ಚಿಸಿತು.