ನವ ದೆಹಲಿ : ರಾಜ್ಯ ಸಭೆಯಲ್ಲಿ ವಿಪಕ್ಷಗಳು ಆರಂಭಿಸಿದ ಗದ್ದಲದಿಂದಾಗಿ ಭಾರತವನ್ನು ಕ್ರೀಡಾ
ರಾಷ್ಟವನ್ನಾಗಿಸುವ ಕುರಿತು ತಮ್ಮ ಅಭಿಪ್ರಾಯವನ್ನು ಹಂಚಿಕೊಳ್ಳಬೇಕೆಂದು ಆಶಿಸಿದ್ದ ರಾಜ್ಯಸಭಾ ಸದಸ್ಯ, ಭಾರತೀಯ ಕ್ರಿಕೆಟ್ನ ಮಾಜಿ ನಾಯಕ ಸಚಿನ್ ತೆಂಡೂಲ್ಕರ್ ಆ ಅವಕಾಶವನ್ನು ಕಳೆದುಕೊಂಡ ಪರಿಣಾಮ ಸಾಮಾಜಿಕ ಜಾಲತಾಣದ ಮೊರೆ ಹೋಗಿದ್ದಾರೆ.
ಭಾರತವನ್ನು ಒಂದು ಕ್ರೀಡಾ ಪ್ರೀತಿಯ ರಾಷ್ಟ್ರವನ್ನಾಗಿ ಹೇಗೆ ಪರಿವರ್ತಿಸಬಹುದು ಎಂಬುದರ ಬಗ್ಗೆ ಸುಮಾರು 15 ನಿಮಿಷಗಳ ಕಾಲ್ ಮಾತನಾಡಿರುವ ಸಚಿನ್ ಈ ವಿಡಿಯೋವನ್ನು ಫೇಸ್ಬುಕ್ನಲ್ಲಿ ಹಂಚಿಕೊಂಡಿದ್ದಾರೆ. ಇದರಲ್ಲಿ ಅವರು ಮುಂದಿನ ಜನಾಂಗವು ಆರೋಗ್ಯವಂತರಾಗಿ ಫಿಟ್ನೆಸ್ ಕಾಯ್ದುಕೊಳ್ಳುವುದರ ಬಗ್ಗೆ ವಿವರಣೆ ನೀಡಿದರು.
ಓರ್ವ ಕ್ರೀಡಾಪಟುವಾಗಿ ತಾವು ಕ್ರೀಡೆ, ಆರೋಗ್ಯ ಮತ್ತು ಫಿಟ್ನೆಸ್ ಬಗ್ಗೆ ಮಾತನಾಡಲು ಇಚ್ಛಿಸುವುದಾಗಿ ತಿಳಿಸಿರುವ ಸಚಿನ್, ಇದು ಭಾರತದ ಆರ್ಥಿಕತೆಯ ಮೇಲೂ ಪರಿಣಾಮ ಬೀರಲಿದೆ ಎಂಬುದನ್ನು ವಿವರಿಸಿದರು.
ಭಾರತದಲ್ಲಿ ಆರೋಗ್ಯ ಸಮಸ್ಯೆಯಿಂದಾಗಿ ಅಭಿವೃದ್ಧಿಗೂ ಮಾರಕವಾಗುತ್ತಿದೆ ಎಂಬುದನ್ನು ಬೊಟ್ಟು ಮಾಡಿದರು. ಇದರಿಂದಾಗಿ ಕ್ರೀಡಾ ಸಂಸ್ಕೃತಿ ದೇಶವನ್ನಾಗಿ ರೂಪುಗೊಳಿಸಬೇಕಾದ ಅಗತ್ಯವಿದೆ ಎಂದರಲ್ಲದೆ, ಅಂತೆಯೇ ದೇಶದ ಮಕ್ಕಳಿಗೆ ಹೆಚ್ಚಿನ ಕ್ರೀಡಾ ಮೂಲಸೌಕರ್ಯ ಒದಗಿಸುವ ಮಹತ್ವವನ್ನು ವಿವರಿಸಿದರು. ಸ್ಮಾರ್ಟ್ ಸಿಟಿಯಂತೆ ಸ್ಮಾರ್ಟ್ ಕ್ರೀಡಾ ನಗರ ರೂಪಿಸುವ ಅಗತ್ಯವಿದೆ ಎಂದು ಅವರು ಅಭಿಪ್ರಾಯಪಟ್ಟರು.
ಇಂದು ರಾಜ್ಯಸಭೆಯಲ್ಲಿ ವಿಪಕ್ಷಗಳು ಗದ್ದಲ ಎಬ್ಬಿಸಿದ್ದರಿಂದ ಸಚಿನ್ ಭಾಷಣಕ್ಕೆ ಅಡ್ಡಿಯುಂಟಾಗಿತ್ತು. 2012ರಲ್ಲಿ ಮೇಲ್ಮನೆಗೆ ನಾಮನಿರ್ದೇಶನಗೊಂಡಿದ್ದ ಸಚಿನ್ ಅವರ ಮೊದಲ ಭಾಷಣ ಇದಾಗಿತ್ತು.