ಕರಾಚಿ: ಪಾಕಿಸ್ತಾನದಲ್ಲಿ ಹಿಂದೂಗಳ ಮೇಲಿನ ದೌರ್ಜನ್ಯ ಪ್ರಕರಣ ಮತ್ತೊಮ್ಮೆ ಸದ್ದು ಮಾಡಿದೆ. ಪಾಕಿಸ್ತಾನದ ಸಿಂಧ್ ಪ್ರಾಂತ್ಯದ ಶಾಲೆಯಲ್ಲಿ ಅಲ್ಪಸಂಖ್ಯಾತ ಹಿಂದೂ ಸಮುದಾಯದ ಪ್ರಾಂಶುಪಾಲರ ವಿರುದ್ಧ ಧರ್ಮನಿಂದೆಯ ಪ್ರಕರಣ ದಾಖಲಾದ ನಂತರ ಭಾನುವಾರ ಪ್ರಾಂತ್ಯದ ಹಲವಾರು ಪ್ರದೇಶಗಳಲ್ಲಿ ಗಲಭೆಗಳು ನಡೆದವು. ಪಾಕಿಸ್ತಾನದ ಮಾಧ್ಯಮಗಳ ಪ್ರಕಾರ, ಜನಸಮೂಹವು ಹಿಂದೂ ಪ್ರಾಂಶುಪಾಲರೊಂದಿಗೆ ಗೋಟ್ಕಿ ನಗರದ ಹಿಂದೂ ದೇವಾಲಯ ಮತ್ತು ಶಾಲೆಯನ್ನು ಧ್ವಂಸಮಾಡಿತು.
ಶಾಲೆಯಲ್ಲಿ ನಡೆದ ವಿಧ್ವಂಸಕ ಕೃತ್ಯದ ವಿಡಿಯೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಬಿಡುಗಡೆ ಮಾಡಲಾಗಿದ್ದು, ಪಾಕಿಸ್ತಾನ ಮಾನವ ಹಕ್ಕುಗಳ ಆಯೋಗವು ಪರಿಸ್ಥಿತಿ ಗಂಭೀರವಾಗಿದೆ ಎಂದು ಕಳವಳ ವ್ಯಕ್ತಪಡಿಸಿದೆ. ಈ ವಿಧ್ವಂಸಕ ಕೃತ್ಯದ ಬಗ್ಗೆ ಪೊಲೀಸ್ ಆಡಳಿತವು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕು ಮತ್ತು ಶಾಲಾ ಪ್ರಾಂಶುಪಾಲರ ಸುರಕ್ಷತೆಯನ್ನು ಖಾತ್ರಿಪಡಿಸಿಕೊಳ್ಳಬೇಕು ಎಂದು ಆಯೋಗ ತಿಳಿಸಿದೆ.
ವಿಡಿಯೋವನ್ನು ಆಘಾತಕಾರಿ ಎಂದು ಬಣ್ಣಿಸಿರುವ ಆಯೋಗ, ಧಾರ್ಮಿಕ ಅಲ್ಪಸಂಖ್ಯಾತ ಸಮುದಾಯದ ವಿರುದ್ಧ ನಡೆಯುತ್ತಿರುವ ಜನಸಮೂಹ ಹಿಂಸಾಚಾರ ಅನಾಗರಿಕ ಮತ್ತು ಅದು ಸ್ವೀಕಾರಾರ್ಹವಲ್ಲ ಎಂದು ಆಯೋಗ ಹೇಳಿದೆ.