ನವದೆಹಲಿ: ದೆಹಲಿಯ ತೀಸ್ ಹಜಾರಿ ಕೋರ್ಟ್ ಕಾಂಪ್ಲೆಕ್ಸ್‌ನಲ್ಲಿ ಶನಿವಾರ ದೆಹಲಿ ಪೊಲೀಸರು ಮತ್ತು ವಕೀಲರ ನಡುವೆ ಹಿಂಸಾತ್ಮಕ ಘರ್ಷಣೆಯ ಘಟನೆ ಕುರಿತು ವಿಶೇಷ ತನಿಖಾ ತಂಡ (ಎಸ್‌ಐಟಿ) ತನಿಖೆ ನಡೆಸಲಿದೆ. ಘಟನೆಯ ತನಿಖೆಗಾಗಿ ಅಪರಾಧ ವಿಭಾಗದ ಅಧಿಕಾರಿಗಳನ್ನು ಒಳಗೊಂಡ ಮತ್ತು ಜಂಟಿ ಪೊಲೀಸ್ ಆಯುಕ್ತರ (ಜೆ.ಟಿ. ಸಿಪಿ) ನೇತೃತ್ವದಲ್ಲಿ ಎಸ್‌ಐಟಿ ರಚಿಸಲಾಗಿದೆ.
ನ್ಯಾಯಾಲಯದ ಕಟ್ಟಡದ ಒಳಗೆ ವಾಹನ ನಿಲುಗಡೆ ಮಾಡುವ ಬಗ್ಗೆ ವಕೀಲರು ಮತ್ತು ಕೆಲವು ಪೊಲೀಸರ ನಡುವೆ ಸಣ್ಣಪುಟ್ಟ ವಾಗ್ವಾದ ನಡೆದ ನಂತರ ಶನಿವಾರ ಹಿಂಸಾತ್ಮಕ ಘರ್ಷಣೆ ಭುಗಿಲೆದ್ದಿತು. ಹೆಚ್ಚುವರಿ ಡಿಸಿಪಿ ಸೇರಿದಂತೆ ಕನಿಷ್ಠ 20 ಪೊಲೀಸರು ಈ ಘಟನೆಯಲ್ಲಿ ಗಾಯಗೊಂಡಿದ್ದರೆ, ಎಂಟು ವಕೀಲರು ಸಹ ಗಾಯಗೊಂಡಿದ್ದಾರೆ. ಪೊಲೀಸರು ತಮ್ಮ ಮೇಲೆ ಗುಂಡು ಹಾರಿಸಿದ ನಂತರ ಆತ್ಮರಕ್ಷಣೆಗಾಗಿ ತಾವು ಗುಂಡು ಹಾರಿಸಿರುವುದಾಗಿ ವಕೀಲರು ಹೇಳಿದ್ದಾರೆ.
"ಒಂದು ಹೆಚ್ಚುವರಿ ಡಿಸಿಪಿ ಮತ್ತು 2 ಎಸ್‌ಎಚ್‌ಒಗಳು ಸೇರಿದಂತೆ ಇಪ್ಪತ್ತು ಪೊಲೀಸ್ ಅಧಿಕಾರಿಗಳು ಗಾಯಗೊಂಡಿದ್ದಾರೆ. ಎಂಟು ಮಂದಿ ವಕೀಲರು ಸಹ ಗಾಯಗೊಂಡಿದ್ದಾರೆ. ಬೆಂಕಿಯಲ್ಲಿ 12 ಖಾಸಗಿ ಮೋಟಾರ್‌ಸೈಕಲ್‌ಗಳು, 1 ಕ್ಯೂಆರ್‌ಟಿ ಜಿಪ್ಸಿ ಆಫ್ ಪೋಲಿಸ್ ಮತ್ತು 8 ಜೈಲು ವ್ಯಾನ್‌ಗಳು ಹಾನಿಗೊಂಡಿವೆ" ಎಂದು ಪೊಲೀಸರು ತಿಳಿಸಿದ್ದಾರೆ. .
ದೆಹಲಿ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಡಿ.ಎನ್. ಪಟೇಲ್ ಶನಿವಾರ ಹಿರಿಯ ಪೊಲೀಸ್ ಅಧಿಕಾರಿಗಳನ್ನು ಭೇಟಿ ಮಾಡಿ ಘಟನೆ ಕುರಿತು ಚರ್ಚಿಸಿದ್ದಾರೆ. ಸಭೆಯಲ್ಲಿ ದೆಹಲಿ ಹೈಕೋರ್ಟ್‌ನ ಕೆಲವು ನ್ಯಾಯಾಧೀಶರು ಕೂಡ ಹಾಜರಿದ್ದರು ಮತ್ತು ಅವರು ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ಚರ್ಚಿಸಿದ್ದಾರೆ ಎಂದು ತಿಳಿದುಬಂದಿದೆ.
ಈ ಘಟನೆ ಕುರಿತು ಚರ್ಚೆ ನಡೆಸಲು ನ್ಯಾಯಮೂರ್ತಿ ಪಟೇಲ್ ಅವರು ದೆಹಲಿ ಪೊಲೀಸ್ ಆಯುಕ್ತರನ್ನು ಭಾನುವಾರ ಭೇಟಿಯಾಗಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಈ ವಿಷಯದ ಬಗ್ಗೆ ಸುಪ್ರೀಂ ಕೋರ್ಟ್ ಬಾರ್ ಅಸೋಸಿಯೇಶನ್ ಪ್ರತಿನಿಧಿಗಳು ಶನಿವಾರ ನ್ಯಾಯಮೂರ್ತಿ ಪಟೇಲ್ ಅವರನ್ನು ಭೇಟಿಯಾದರು.