ಪುಣೆ: ಜೈಲುಗಳಲ್ಲಿ ಗೋವು ಸಾಕಾಣಿಕಾ ಕೇಂದ್ರಗಳನ್ನು ತೆರೆಯುವ ಪರಿಕಲ್ಪನೆಯನ್ನು ಸಮರ್ಥಿಸಿರುವ ಆರ್.ಎಸ್.ಎಸ್ ಮುಖ್ಯಸ್ಥ ಮೋಹನ್ ಭಾಗ್ವತ್, ಕಾರಾಗೃಹಗಳಲ್ಲಿ ಗೋವುಗಳನ್ನು ಸಾಕಿದ ಕೈದಿಗಳ 'ಕ್ರಿಮಿನಲ್ ಮನೋಪ್ರವೃತ್ತಿ' ಯಲ್ಲಿ ಪರಿವರ್ತನೆಯಾಗಿದೆ ಎಂದು ಹೇಳಿದ್ದಾರೆ. ಶನಿವಾರ ಪುಣೆಯಲ್ಲಿ ಆಯೋಜಿಸಲಾಗಿದ್ದ ಸಮಾರಂಭವೊಂದರಲ್ಲಿ ಮಾತನಾಡಿರುವ ಅವರು "ಹಲವಾರು ಜೈಲುಗಳಲ್ಲಿ ಗೋವು ಸಾಕಾಣಿಕಾ ಕೇಂದ್ರಗಳನ್ನು ತೆರೆಯಲಾಗಿದ್ದು, ಕೆಲವು ಕೈದಿಗಳು ಗೋವುಗಳನ್ನು ಸಹ ಸಾಕಲು ಪ್ರಾರಂಭಿಸಿದ್ದಾರೆ. ಅಷ್ಟೇ ಅಲ್ಲ ವಿವಿಧ ಕಾರಾಗೃಹಗಳಲ್ಲಿ ಗೋವುಗಳನ್ನುಸಾಕಿದ ಕೈದಿಗಳ ಕ್ರಿಮಿನಲ್ ಮನೋಪ್ರವೃತ್ತಿಯಲ್ಲಿ ಪರಿವರ್ತನೆಯಾಗಿರುವುದನ್ನು ಸ್ವತಃ ಅಲ್ಲಿನ ಜೈಲರಗಳೇ ಒಪ್ಪಿಕೊಂಡಿದ್ದಾರೆ" ಎಂದು ಭಾಗವತ್ ಹೇಳಿದ್ದಾರೆ.
ಅವರು ನಡೆಸಿರುವ ಈ ಅಧ್ಯಯನವನ್ನು ದೇಶದಾದ್ಯಂತ ವಿವಿಧ ಜೈಲುಗಳಲ್ಲಿ ಜಾರಿಗೆ ತರಬೇಕು ಹಾಗೂ ಪ್ರಪಂಚದ ಮುಂದೆ ಈ ಸತ್ಯವನ್ನು ಸಿದ್ಧಪಡಿಸಲು ಇಡೀ ಪ್ರಕ್ರಿಯೆಯನ್ನು ದಾಖಲಿಸಬೇಕು. "ಈ ಅಧ್ಯಯನವನ್ನು ಜಾಗತಿಕ ಮಟ್ಟದಲ್ಲಿ ಸ್ಥಾಪಿಸಬೇಕಾದರೆ ದಾಖಲೆಗಳು ಅಗತ್ಯ. ಗೋವುಗಳನ್ನು ಸಾಕಿದ ಅಪರಾಧಿಗಳು ಮಾನಸಿಕ ವಿಶ್ಲೇಷಣೆಗೆ ಒಳಗಾಗಬೇಕಾಗುತ್ತದೆ. ಈ ವೇಳೆ ನಾವು ಮತ್ತೆ ಬದಲಾವಣೆಗಳನ್ನು ಗಮನಿಸಬೇಕು ಮತ್ತು ಅದರ ಸಂಖ್ಯಾಶಾಸ್ತ್ರೀಯ ಸಂಭವನೀಯತೆಗಳನ್ನು ತೆಗೆದುಕೊಂಡು ಅವುಗಳನ್ನು ಮತ್ತು ಪುನರ್ದಾಖಲಿಸಬೇಕು. ಸಾವಿರಾರು ಸ್ಥಳಗಳಿಂದ ಇಂತಹ ನಿದರ್ಶನಗಳು ಹೊರಬಂದಾಗ, ನಾವು ಈ ಸತ್ಯವನ್ನು ಜಾಗತಿಕ ಮಟ್ಟದಲ್ಲಿ ಸಿದ್ಧಪಡಿಸಬಹುದು. ಅದಕ್ಕಾಗಿ ಇಂತಹ ಪ್ರಕ್ರಿಯೆಗಳನ್ನು ನಡೆಸುವ ಅವಶ್ಯಕತೆ ಇದೆ" ಎಂದು ಭಾಗ್ವತ್ ಹೇಳಿದ್ದಾರೆ.
ಈ ವೇಳೆ ನಿರ್ಲಕ್ಷಕ್ಕೆ ಒಳಗಾದ ಗೋವುಗಳ ಆರೈಕೆಗೆ ಜನರು ಮುಂದಾಗಬೇಕು ಎಂದ RSS ಮುಖಂಡ, ಭಾರತೀಯರು ಯಾವಾಗಲೂ ಗೋವುಗಳನ್ನು ಪವಿತ್ರ ಉದ್ದೇಶದಿಂದ ಸಾಕಿದ್ದಾರೆ ಮತ್ತು ಅವುಗಳನ್ನು ಲಾಭಕ್ಕಾಗಿ ಎಂದಿಗೂ ಬಳಸುವುದಿಲ್ಲ. "ನಮ್ಮ ಸಮಾಜದಲ್ಲಿ, ಎಲ್ಲಾ ವಿಷಯಗಳನ್ನು ಧಾರ್ಮಿಕ ದೃಷ್ಟಿಕೋನದಿಂದ ನೋಡಲಾಗುತ್ತದೆ. ಪಾಶ್ಚಿಮಾತ್ಯ ದೇಶಗಳಲ್ಲಿ ಗೋವುಗಳನ್ನು ಹಾಲು ಮತ್ತು ಮಾಂಸವನ್ನು ನೀಡುತ್ತದೆ ಎಂದು ಭಾವಿಸಲಾಗುತ್ತದೆ. ಆದ್ದರಿಂದ ಅದು ಅವರಿಗೆ ಸೇವನೆಯ ವಿಷಯವಾಗಿದೆ. ಆದರೆ, ಭಾರತದಲ್ಲಿ ಮಾತ್ರ ಗೋವುಗಳನ್ನು ಯಾವಾಗಲು ಧಾರ್ಮಿಕ ಉದ್ದೇಶದಿಂದ ಸಾಕಲಾಗುತ್ತದೆ. ಹಾಲು ಮತ್ತು ಅದರ ಉತ್ಪನ್ನಗಳನ್ನು ಮಾರಾಟ ಮಾಡುವ ಉದ್ದೇಶದಿಂದ ಎಂದಿಗೂ ಸಾಕಲಾಗುವುದಿಲ್ಲ "ಎಂದು ಭಾಗ್ವತ್ ಹೇಳಿದ್ದಾರೆ.