ಹೈದರಾಬಾದ್:ಹೈದರಾಬಾದ್ ನಲ್ಲಿ ನಡೆದ ಮಹಿಳಾ ಪಶುವೈದ್ಯೆ ದಿಶಾ ಸಾಮೂಹಿಕ ಅತ್ಯಾಚಾರ ಹಾಗೂ ಹತ್ಯೆ ಪ್ರಕರಣದ ಆರೋಪಿಗಳ ಎನ್ಕೌಂಟರ್ ಹತ್ಯೆಗೆ ಸಂಬಂಧಿಸಿದಂತೆ ಇಂದು ತೆಲಂಗಾಣ ಹೈಕೋರ್ಟ್ ಮಹತ್ವದ ಆದೇಶ ನೀಡಿದೆ. ಇಂದು ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ನಡೆಸಿರುವ ಹೈಕೋರ್ಟ್, ಆರೋಪಿಗಳ ಮರುಮರಣೋತ್ತರ ಪರೀಕ್ಷೆ ನಡೆಸಲು ಆದೇಶಿಸಿದೆ. ಎನ್ಕೌಂಟರ್ ಗೆ ಬಳಸಲಾಗಿರುವ ಶಸ್ತ್ರಾಸ್ತ್ರಗಳನ್ನು ತನಿಖೆ ಮುಗಿಯುವ ತನಕ ಶೇಖರಿಸಿ ಇಡಲು ಹೈಕೋರ್ಟ್ ಸೂಚಿಸಿದೆ. ಹೀಗಾಗಿ ಇದೀಗ AIIMS ವೈದ್ಯರ ಉಪಸ್ಥಿತಿಯಲ್ಲಿ ಈ ಮರಣೋತ್ತರ ಪರೀಕ್ಷೆ ನಡೆಯಲಿದೆ.
ಓರ್ವ ಮಹಿಳಾ ವೈದ್ಯೆಯೋರ್ವಳ ಮೇಲೆ ದುಷ್ಕೃತ್ಯ ನಡೆಸಿದ ಆರೋಪ ಎದುರಿಸುತ್ತಿದ್ದ ಆರೋಪಿಗಳನ್ನು ಡಿಸೆಂಬರ್ 6, 2019ಕ್ಕೆ ತೆಲಂಗಾಣ ಪೊಲೀಸರು ಎನ್ಕೌಂಟರ್ ನಡೆಸುವ ಮೂಲಕ ಹತ್ಯೆಗೈದಿದ್ದರು. ಹಾಗೂ ಇದರಿಂದ ಸಂತ್ರಸ್ತೆಯ ಕುಟುಂಬಸ್ಥರಿಗೆ ನ್ಯಾಯ ಸಿಕ್ಕಿದೆ ಎಂದೂ ಕೂಡ ಹೇಳಲಾಗಿತ್ತು. ಆದರೆ, ಆ ಬಳಿಕ ರಾತ್ರೋರಾತ್ರಿ ನಡೆದಿದ್ದಾದರು ಏನು? ಯಾಕೆ ಈ ಆರೋಪಿಗಳನ್ನು ಬೆಳ್ಳಂಬೆಳಗ್ಗೆ ಹತ್ಯೆಗೈಯಲಾಯಿತು ಎಂಬುದರ ಕುರಿತು ಪ್ರಶ್ನೆಗಳು ಏಳಲಾರಂಭಿಸಿವೆ. ಸದ್ಯ ಈ ಪ್ರಕರಣ ದೇಶದ ಸರ್ವೋಚ್ಚ ನ್ಯಾಯಾಲಯದ ಅಂಗಳಕ್ಕೆ ತಲುಪಿದೆ.
ತೆಲಂಗಾಣ ಸರ್ಕಾರದಿಂದ SIT ನೇಮಕ
ಹೈದರಾಬಾದ್ ನ ಹೊರವಲಯದಲ್ಲಿರುವ ಶಾದ್ ನಗರ್ ಬಳಿ ನಡೆದ ಈ ಎನ್ಕೌಂಟರ್ ತನಿಖೆಗೆ ವಿಶೇಷ ತನಿಖಾ ತಂಡ ರಚಿಸಿದೆ. ಈ ಎನ್ಕೌಂಟರ್ ನಲ್ಲಿ ಪೊಲೀಸರು ಓರ್ವ ಮಹಿಳಾ ಪಶುವೈದ್ಯೆಯ ಮೇಲೆ ಸಾಮೂಹಿಕ ಅತ್ಯಾಚಾರ ಎಸಗಿ ಬಳಿಕ ಹತ್ಯೆಗೈದ ನಾಲ್ವರು ಆರೋಪಿಗಳನ್ನು ಹತ್ಯೆಗೈದಿದ್ದರು. ಒಟ್ಟು ಎಂಟು ಸದಸ್ಯರನ್ನು ಒಳಗೊಂಡ ಈ SITಯ ನೇತೃತ್ವ ರಚಕೊಂಡಾ ಪೋಲೀಸ್ ಆಯುಕ್ತ ಮಹೇಶ್ ಎಂ. ಭಗವಾನ್ ವಹಿಸಿಕೊಂಡಿದ್ದಾರೆ. ಇನ್ನೊಂದೆಡೆ ಈ SIT ತಂಡದಲ್ಲಿ ಓರ್ವ ಮಹಿಳಾ ಅಧಿಕಾರಿ ಸೇರಿದಂತೆ ರಾಜ್ಯದ ವಿವಿಧ ವಿಭಾಗಗಳಲ್ಲಿ ಕಾರ್ಯನಿರ್ವಹಿಸುವ ಅಧಿಕಾರಿಗಳೂ ಕೂಡ ಶಾಮೀಲಾಗಿದ್ದಾರೆ.
ನವೆಂಬರ್ 27ರಂದು ನಡೆದಿತ್ತು ಈ ದುಷ್ಕೃತ್ಯ
ನವೆಂಬರ್ 27, 2019 ಕ್ಕೆ ಹೈದರಾಬಾದ್ ನ ಹೊರವಲಯದಲ್ಲಿರುವ ಶಂಶಾಬಾದ್ ಬಳಿ ಮಹಿಳಾ ಪಶುವೈದ್ಯೆಯೋರ್ವರ ಮೇಲೆ ನಾಲ್ವರು ಸಾಮೂಹಿಕ ಅತ್ಯಾಚಾರ ಎಸಗಿ ಬಳಿಕ ಆಕೆಯ ಹತ್ಯೆಗೈದು, ಶವವನ್ನು ಹೈದರಾಬಾದ್ ನಿಂದ ಸುಮಾರು 50 ಕಿ.ಮೀ ದೂರದಲ್ಲಿರುವ ಶಾದ್ ನಗರ್ ನಲ್ಲಿ ಸುಟ್ಟು ಹಾಕಿದ್ದರು. ಈ ಎರಡೂ ಘಟನಾ ಸ್ಥಳಗಳು ಸೈಬರಾಬಾದ್ ಪೋಲೀಸರ ವ್ಯಾಪ್ತಿಗೆ ಒಳಪಡುತ್ತವೆ.