ಮಾತಿಗೆ ತಕ್ಕಂತೆ ಕೋಮು ಸಾಮರಸ್ಯ ಕದಡುವರ ವಿರುದ್ದ ಕ್ರಮ ಕೈಗೊಳ್ಳಿ: ಬಿಎಸ್‌ವೈಗೆ ಡಿಕೆಶಿ ಸಲಹೆ

ಏಪ್ರಿಲ್ 14ರ ನಂತರ ಲಾಕ್ ಡೌನ್ ಮುಂದುವರಿದರೆ ಸರ್ಕಾರಿ ನೌಕರರ ವೇತನ ಕಡಿತಗೊಳಿಸುವ ವಿಚಾರವಾಗಿ ಯಡಿಯೂರಪ್ಪ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ. 

Last Updated : Apr 7, 2020, 04:11 PM IST
ಮಾತಿಗೆ ತಕ್ಕಂತೆ ಕೋಮು ಸಾಮರಸ್ಯ ಕದಡುವರ ವಿರುದ್ದ ಕ್ರಮ ಕೈಗೊಳ್ಳಿ: ಬಿಎಸ್‌ವೈಗೆ ಡಿಕೆಶಿ ಸಲಹೆ title=

ಬೆಂಗಳೂರು: ಸಾಮಾಜಿಕ ಮಾಧ್ಯಮಗಳ ದುರ್ಬಳಕೆ ಮಾಡಿಕೊಂಡು ಕೆಲವು ಕಿಡಿಗೇಡಿಗಳು ಒಂದು ಕೋಮಿನ ವಿರುದ್ಧ ಅಪಪ್ರಚಾರ ಮಾಡಿ ಸಮಾಜದಲ್ಲಿ ಶಾಂತಿ ಭಂಗ ಮಾಡಲು ಪ್ರಯತ್ನಿಸುತ್ತಿದ್ದಾರೆ. ಕೆಲವು ಊರುಗಳಲ್ಲಿ ಈ ಸಮುದಾಯದವರನ್ನು ಗಡಿಪಾರು ಮಾಡುವ ಹಾಗೂ ಸಾಮಾಜಿಕವಾಗಿ ಬಹಿಷ್ಕಾರ ಹಾಕುವ ಮಟ್ಟಕ್ಕೆ ಸುಳ್ಳು ಸುದ್ದಿ ಹಬ್ಬಿಸಲಾಗುತ್ತಿದೆ. ಈ ವಿಚಾರವಾಗಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ (BS Yeddyurappa) ಮಾಧ್ಯಮಗಳಿಗೆ ನೀಡಿರುವ ಹೇಳಿಕೆಯನ್ನು ಅಭಿನಂದಿಸುತ್ತೇನೆ ಎಂದು ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಹೇಳಿದ್ದಾರೆ.

ಮಂಗಳವಾರ ಸುದ್ದಿಗೋಷ್ಟಿ ಉದ್ದೇಶಿಸಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ (DK Shivakumar), ಕೋಮು‌ ಸಹಾರ್ದ ಕದಡುವವರ ವಿರುದ್ಧ ಮಾತನಾಡಿರುವ ಸಿಎಂ ಯಡಿಯೂರಪ್ಪ, ತಮ್ಮ ಮಾತನ್ನು ಕೃತಿ ರೂಪಕ್ಕೆ ಇಳಿಸಬೇಕು. ಅವರ ಮಾತು ಗ್ರಾಮಪಂಚಾಯ್ತಿ ಮಟ್ಟಕ್ಕೂ ತಲುಪಬೇಕು. ಮುಖ್ಯಮಂತ್ರಿಗಳ ಹೆಸರು ಹೇಳಿಕೊಂಡೇ ಈ ಅಪಪ್ರಚಾರ ಮಾಡಲಾಗುತ್ತಿದೆ. ಹೀಗಾಗಿ ಸರ್ಕಾರ ಸೈಬರ್ ಕ್ರೈಮ್ ವಿಭಾಗವನ್ನು ಬಳಸಿಕೊಂಡು ಈ ರೀತಿ ಅಪಪ್ರಚಾರ ಮಾಡುತ್ತಿರುವವರನ್ನು ಪತ್ತೆ ಹಚ್ಚಬೇಕಿದೆ. ಜೊತೆಗೆ ಈ ಕೃತ್ಯ ಮಾಡಿದವರನ್ನು ಬಂಧಿಸಿ ಜೈಲಿಗೆ ಹಾಕಬೇಕು. ಈ ವಿಚಾರವಾಗಿ ಇಂದು ಸಂಜೆಯೊಳಗಾಗಿ ಮುಖ್ಯಮಂತ್ರಿಗಳು ಸೂಚನೆ ಹೊರಡಿಸಬೇಕು. ಅಥವಾ ವಾಟ್ಸಪ್ ವಿಡಿಯೋ ಮೂಲಕ ಕಠಿಣ ಕ್ರಮ ಕೈಗೊಳ್ಳುವ ಸಂದೇಶ ರವಾನಿಸಬೇಕು ಎಂದು ಸಲಹೆ ನೀಡಿದರು.

ಏಪ್ರಿಲ್ 14ರ ನಂತರ ಲಾಕ್‌ಡೌನ್ (Lockdown)  ಮುಂದುವರಿದರೆ ಸರ್ಕಾರಿ ನೌಕರರ ವೇತನ ಕಡಿತಗೊಳಿಸುವ ವಿಚಾರವಾಗಿ ಯಡಿಯೂರಪ್ಪ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ. ಸರ್ಕಾರ ಯಾವುದೇ ಕಾರಣಕ್ಕೂ ಎಲ್ಲಾ ಇಲಾಖೆಗಳ ಸಿಬ್ಬಂದಿ ವೇತನ ಕಡಿತ ಮಾಡಬಾರದು ಎಂದು ಮುಖ್ಯಮಂತ್ರಿಗಳಲ್ಲಿ ಮನವಿ ಮಾಡಿಕೊಳ್ಳುತ್ತೇನೆ. ಸರ್ಕಾರಿ ಸಿಬ್ಬಂದಿಗಳಿಗೆ ಸಂಬಳ ನೀಡದಿರುವಷ್ಟರ ಮಟ್ಟಿಕೆ ಸರ್ಕಾರಕ್ಕೆ ದಾರಿದ್ರ ಬಂದಿಲ್ಲ. ಅವರಿಗೆ ಕೆಲಸ ಮಾಡಬೇಡಿ ಅಂತಾ ನಾವು ಹೇಳಿದ್ದೇವೆ. ಹೀಗಾಗಿ ಅವರ ಸಂಬಳ ನೀಡದಿರುವುದು ಸರಿಯಲ್ಲ. ಅವರು ಮನೆಯಲ್ಲೇ ಇದ್ದರೂ ಮನೆ ಬಾಡಿಗೆ, ಇಎಂಐ, ಸಾಲದ ಬಡ್ಡಿ ಸೇರಿದಂತೆ ಅನೇಕ ಖರ್ಚುಗಳಿವೆ. ಈಗಾಗಲೇ ನಾವು ಹೇಳಿರುವಂತೆ ಸರ್ಕಾರ ಬೇಕಾದರೆ ಕೆಲವು ಯೋಜನೆಗಳನ್ನು ತಾತ್ಕಾಲಿಕವಾಗಿ ನಿಲ್ಲಿಸಲಿ. ಆ ದುಡ್ಡನ್ನು ಈ ಕಾರ್ಯಕ್ಕೆ ಬಳಸಿಕೊಳ್ಳಲಿ. ಸದ್ಯ ಜನರು ನೆಮ್ಮದಿಯಾಗಿ ಉಸಿರಾಡಿ ಜೀವನ ನಡೆಸುವಂತೆ ಮಾಡುವುದು ಮುಖ್ಯ. ಹೀಗಾಗಿ ಯಾವುದೇ ಕಾರಣಕ್ಕೂ ಸರ್ಕಾರಿ ಸಿಬ್ಬಂದಿಗಳ ವೇತನ ನಿಲ್ಲಿಸಬಾರದು ಎಂದು ಒತ್ತಾಯಿಸಿದರು.

ಕೆಪಿಸಿಸಿ ವತಿಯಿಂದ ಮಾಜಿ ಸಚಿವ ರಮೇಶ್ ಕುಮಾರ್ ಅವರ ನೇತೃತ್ವದಲ್ಲಿ ಟಾಸ್ಕ್ ಫೋರ್ಸ್ ರಚನೆ ಮಾಡಲಾಗಿದ್ದು, ಈ ಸಮಿತಿಯು ಕೇಂದ್ರ ಹಾಗೂ ರಾಜ್ಯ ಸರ್ಕಾರದ ಘೋಷಣೆಗಳು ಜನರಿಗೆ ತಲುಪುತ್ತಿದೆಯೇ, ವೈದ್ಯರಿಗೆ ಪಿಪಿಇ ಕಿಟ್ ಕೊರತೆ, ಪ್ರಯೋಗಾಲಯಗಳ ಕೊರತೆ ಸೇರಿದಂತೆ  ಜನರ ಸಮಸ್ಯೆಗಳೇನು? ಎಂಬುದನ್ನು ಸ್ಥಳೀಯರನ್ನು ಸಂಪರ್ಕಿಸಿ ಮಾಹಿತಿ ಕಲೆಹಾಕಿದ್ದಾರೆ. ಈ ಬಗ್ಗೆ ನಿನ್ನೆ ಚರ್ಚೆ ಮಾಡಿದ್ದು, ಸರ್ಕಾರಕ್ಕೆ ಸಲಹೆ ಪಟ್ಟಿಯನ್ನು ನೀಡುತ್ತೇವೆ ಎಂದು ಹೇಳಿದರು.

ಸರ್ಕಾರಕ್ಕೆ ಎಲ್ಲ ರೀತಿಯ ಸಹಕಾರ ನೀಡಬೇಕು ಎಂದು ನಮ್ಮ ಕಾರ್ಯಕರ್ತರಿಗೆ ಸೂಚನೆ ನೀಡಲಾಗಿದೆ. ಜತೆಗೆ ಸಾಮಾಜಿಕ ತರ ಕಾಯ್ದುಕೊಳ್ಳುವಂತೆ ಸೂಚಿಸಿದ್ದೇವೆ. ಕೊರೋನಾ ಸಮಸ್ಯೆ ಮುಗಿದ ನಂತರ ನಾವು ದೊಡ್ಡ ಆರ್ಥಿಕ ಸಾವಲು ಎದುರಿಸಬೇಕಾಗುತ್ತದೆ. ಐಟಿ ಕ್ಷೇತ್ರದಲ್ಲಿ ಶೇ.30ರಷ್ಟು ಉದ್ಯೋಗ ಕಡಿತ ಮಾಡುವ ಬಗ್ಗೆ ಚರ್ಚೆಯಾಗುತ್ತಿದೆ. ನಾವು ನಮ್ಮ ಐಟಿ ಕ್ಷೇತ್ರವನ್ನು ಉಳಿಸಿಕೊಳ್ಳಬೇಕು. ವಿಶ್ವದಾದ್ಯಂತ ಜನರು ರಾಜ್ಯವನ್ನು ಗಮನಿಸುತ್ತಿದ್ದಾರೆ. ಉದ್ಯೋಗಿಗಳ ಜತೆಗೆ ಉದ್ಯೋಗದಾತರ ಹಿತಾಸಕ್ತಿಯನ್ನು ಕಾಪಾಡಬೇಕಿದೆ. ಈ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ಆರ್ಥಿಕ ಸಮಸ್ಯೆ ಎದುರಿಸಿ ರಾಜ್ಯ ಯಾವ ದಿಕ್ಕಿನಲ್ಲಿ ಸಾಗಬೇಕು ಎಂಬ ಬಗ್ಗೆ ಮಾರ್ಗಸೂಚಿ ಸಿದ್ದಪಡಿಸಲು ಮಾಜಿ ಸಚಿವ ಆರ್.ವಿ ದೇಶಪಾಂಡೆ ಅವರ ನೇತೃತ್ವದಲ್ಲಿ ರಾಜ್ಯಸಭಾ ಸದಸ್ಯ ರಾಜೀವಗೌಡ ಅವರ ಸಂಚಾಲಕರನ್ನಾಗಿ ಮಾಡಿ ಸಮತಿ ರಚಿಸಲಾಗಿದೆ. ರಾಜ್ಯದ ಹಿತಾಸಕ್ತಿ ಕಾಪಾಡಲು ಹೊಸ ಆರ್ಥಿಕ ನೀತಿಗಳನ್ನು ಜಾರಗೆ ತರಬೇಕಾದ ಅಗತ್ಯವಿದೆ. ಕೈಗಾರಿಕೆ, ಕೃಷಿ ಸೇರಿದಂತೆ ಎಲ್ಲ ಕ್ಷೇತ್ರದ ಕುರಿತು ಅಧ್ಯಯನ ನಡೆಸಲಾಗುತ್ತಿದೆ. ಈ ವಿಚಾರದಲ್ಲಿ ಕಾಂಗ್ರೆಸ್ ಪಕ್ಷ ವಿರೋಧ ಪಕ್ಷ ಸ್ಥಾನದಲ್ಲಿ ಕೂತು ತನ್ನ ಕರ್ತವ್ಯ ಮಾಡುತ್ತಿದೆ ಎಂದು ಹೇಳಿದರು.

ಉಳಿದಂತೆ ಈ ಸಂದರ್ಭದಲ್ಲಿ ಸರ್ಕಾರದ ಸಚಿವರ ನಡುವಿನ ಅಸಮಾಧಾನ, ಸಿಂಧನೂರಿನ ಮಹಿಳೆ ಸಾವು ಪ್ರಕರಣಗಳನ್ನು ನಾವು ದೊಡ್ಡ ವಿವಾದ ಮಾಡಲು ಹೋಗುವುದಿಲ್ಲ. ಸರ್ಕಾರ ಈ ವಿಚಾರಗಳಲ್ಲಿ ಸೂಕ್ಷ್ಮವಾಗಿ ಕೆಲಸ ಮಾಡಬೇಕು ಎಂದು ಸಲಹೆ ನೀಡುತ್ತೇವೆ ಎಂದರು.

Trending News