ನವದೆಹಲಿ: ಲಡಾಖ್ನ ಎಲ್ಎಸಿ ಬಳಿ ಚೀನಾ ಮತ್ತೆ ದುಸ್ಸಾಹಸ ಮೆರೆದಿದೆ. ಗಡಿಯಲ್ಲಿ ಮಂಗಳವಾರ ಚೀನಾದ ಹೆಲಿಕಾಪ್ಟರ್ಗಳು ಕಾಣಿಸಿಕೊಂಡಿದ್ದು, ಭಾರತೀಯ ಸೇನೆಯು ಎಚ್ಚೆತ್ತುಕೊಂಡಿದೆ. ಗಡಿಯಲ್ಲಿ ಚೀನಾದ ಹೆಲಿಕಾಪ್ಟರ್ಗಳು ಕಾಣಿಸಿಕೊಂಡ ನಂತರ ಭಾರತೀಯ ಜೆಟ್ ಫೈಟರ್ ಗಳು ಹಾರಾಟ ನಡೆಸಿವೆ. ಕಳೆದ ವಾರವೂ ಇಲ್ಲಿ ಭಾರತೀಯ ಸೈನಿಕರು ಮತ್ತು ಚೀನಾದ ಸೈನಿಕರ ನಡುವೆ ಘರ್ಷಣೆಗಳು ನಡೆದಿವೆ ಎಂಬುದು ಇಲ್ಲಿ ಉಲ್ಲೇಖನೀಯ.
ಪೂರ್ವ ಲಡಾಖ್ ಮತ್ತು ಉತ್ತರ ಸಿಕ್ಕಿಂನ ನಕು ಲಾ ಪಾಸ್ ಬಳಿ ಇತ್ತೀಚೆಗೆ ಭಾರತ ಮತ್ತು ಚೀನಾದ ಸೈನಿಕರ ನಡುವೆ ಘರ್ಷಣೆ ಸಂಭವಿಸಿದ್ದು, ಇದರಲ್ಲಿ ಉಭಯ ದೇಶಗಳ ಹಲವು ಸೈನಿಕರು ಗಾಯಗೊಂಡಿದ್ದಾರೆ ಎಂಬುದು ವರದಿಯಾಗಿತ್ತು. ಮಾಹಿತಿಯ ಪ್ರಕಾರ, ಭಾರತೀಯ ಸೈನಿಕರು ಮತ್ತು ಚೀನಾದ ಸೈನಿಕರ ನಡುವೆ ಮೊದಲ ಘರ್ಷಣೆ ಪೂರ್ವ ಲಡಾಖ್ನ ಪಾಂಗೊಂಗ್ ಸರೋವರದ ಉತ್ತರ ಭಾಗದಲ್ಲಿ ಮೇ 5 ರಂದು ಸಂಜೆ ನಡೆದಿದ್ದು, ಮರುದಿನ ಬೆಳಿಗ್ಗೆ ಎರಡೂ ಕಡೆಯ ಸೈನಿಕರ ನಡುವಿನ ಮಾತುಕತೆಯ ಬಳಿಕ ಬಗೆಹರಿದಿದೆ.
ವರದಿಗಳ ಪ್ರಕಾರ, ಎರಡೂ ಕಡೆಗಳ ಹಲವು ಸೈನಿಕರಿಗೆ ಈ ಘರ್ಷಣೆಯಲ್ಲಿ ಸಣ್ಣಪುಟ್ಟ ಗಾಯಗಳಾಗಿವೆ, ಏಕೆಂದರೆ ಉಭಯ ದೇಶಗಳ ಸೈನಿಕರ ನಡುವೆ ಮಾರಾಮಾರಿ ಸಂಭವಿಸಿದ್ದು, ಬಳಿಕ ಕಲ್ಲು ತೂರಾಟ ಕೂಡ ನ್ದದೆದಿದೆ ಎನ್ನಲಾಗಿದೆ. ಮೂಲಗಳ ಪ್ರಕಾರ, ಉಭಯ ದೇಶಗಳ ಸೈನಿಕರ ನಡುವೆ ಘರ್ಷಣೆಯ ಈ ಘಟನೆಯಲ್ಲಿ ಸುಮಾರು 200 ಸೈನಿಕರು ಶಾಮೀಲಾಗಿದ್ದರು, ಎನ್ನಲಾಗಿದ್ದು, ಪ್ರಸ್ತುತ ಅಲ್ಲಿ ಶಾಂತಿ ನೆಲೆಸಿದೆ ಎನ್ನಲಾಗಿದೆ.
ಭಾರತ ಮತ್ತು ಚೀನಾ ಸೈನಿಕರ ನಡುವೆ ನಡೆದ ಈ ಘರ್ಷಣೆಗೆ ಸಂಬಂಧಿಸಿದಂತೆ ನೇರ ಪ್ರತಿಕ್ರಿಯೆ ನೀಡಿದ್ದ ಚೀನಾ, ಉಭಯ ದೇಶಗಳ ಗಡಿ ಭಾಗದಲ್ಲಿ ಶಾಂತಿ ಮತ್ತು ತಾಳ್ಮೆಯನ್ನು ಕಾಪಾಡುವಲ್ಲಿ ತನ್ನ ಸೈನಿಕರು ಬದ್ಧರಾಗಿದ್ದಾರೆ ಎಂದು ರಾಗ ಎಳೆದಿತ್ತು. ಈ ಘರ್ಷಣೆಯ ಕುರಿತು ಇತ್ತೀಚೆಗಷ್ಟೇ ಪ್ರತಿಕ್ರಿಯೆ ನೀಡಿದ್ದ ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಝಾವೋ ಲಿಜಿಯಾನ್, ಎರಡೂ ದೇಶಗಳು ತಮ್ಮ ನಡುವಿನ ಭಿನ್ನಾಭಿಪ್ರಾಯಗಳನ್ನೂ ಉತ್ತಮವಾಗಿ ನಿರ್ವಹಿಸುವ ಅಗತ್ಯತೆ ಇದೆ ಎಂದು ಹೇಳಿದ್ದರು.
ಈ ಕುರಿತು ಮಾತನಾಡಿದ್ದ ಅವರು, 'ಚೀನಾದ ಗಡಿಯಲ್ಲಿ ನಿಯೋಜನೆಗೊಂಡಿರುವ ನಮ್ಮ ಸೈನಿಕರು ಗಡಿಯಲ್ಲಿ ಶಾಂತಿ ಮತ್ತು ತಾಳ್ಮೆ ಹೊಂದಿದ್ದಾರೆ. ಗಡಿ ವಿಷಯದ ಬಗ್ಗೆ ಭಾರತ ಮತ್ತು ಚೀನಾ ದೇಶಗಳ ಮಧ್ಯೆ ಅಸ್ತಿತ್ವದಲ್ಲಿರುವ ವ್ಯವಸ್ಥೆಯ ಬಗ್ಗೆ ಉಭಯ ದೇಶಗಳು ಉತ್ತಮ ಸಂವಹನ ಮತ್ತು ಸಮನ್ವಯವನ್ನು ಹೊಂದಿವೆ" ಎಂದಿದ್ದಾರೆ. . ಕೋವಿಡ್ -19 ಸಾಂಕ್ರಾಮಿಕದ ಹಿನ್ನೆಲೆ ಚೀನಾದ ಆಕ್ರಮಣಕಾರಿ ವರ್ತನೆಯ ಬಗ್ಗೆ ಪ್ರಶ್ನಿಸಿದಾಗ, "ಸಂಬಂಧಿತ ಪರಿಕಲ್ಪನೆಯು ಆಧಾರ ರಹಿತವಾಗಿದೆ" ಎಂದು ಝಾವೋ ಹೇಳಿದ್ದಾರೆ. ಜೊತೆಗೆ ಭಾರತ ಮತ್ತು ಚೀನಾ ದೇಶಗಳ ನಡುವಿನ ರಾಜತಾಂತ್ರಿಕ ಸಂಬಂಧಗಳ 70ನೇ ವರ್ಷ ಇದಾಗಿದ್ದ ಕಾರಣ ಉಭಯ ದೇಶಗಳು ಕೊರೊನಾ ವೈರಸ್ ಮಹಾಮಾರಿಯ ವಿರುದ್ಧ ಒಗ್ಗಟ್ಟಿನಿಂದ ಹೋರಾಟ ನಡೆಸಲು ನಿರ್ಧರಿಸಿವೆ ಎಂದು ಹೇಳಿದ್ದರು.