ನವದೆಹಲಿ: ಕರೋನಾ ವೈರಸ್ ಬಿಕ್ಕಟ್ಟಿನ ಹಿನ್ನೆಲೆ ಭಾರತ ಸರ್ಕಾರ ದೊಡ್ಡ ಆರ್ಥಿಕ ಪ್ಯಾಕೇಜ್ ಘೋಷಿಸಿದೆ. ಪ್ರತಿಯೊಬ್ಬರೂ ಈ ಬಗ್ಗೆ ತಮ್ಮ ಪ್ರತಿಕ್ರಿಯೆಗಳನ್ನು ನೀಡುತ್ತಿದ್ದಾರೆ, ಈ ಮಧ್ಯೆ ಲಂಡನ್ನಿಂದಲೂ ಕೂಡ ಪ್ರತಿಕ್ರಿಯೆ ಬಂದಿದೆ. ಸರ್ಕಾರ ಘೋಷಿಸಿರುವ ಆರ್ಥಿಕ ಪ್ಯಾಕೇಜ್ ಗೆ ವಿಜಯ್ ಮಲ್ಯ ಕೇಂದ್ರ ಸರ್ಕಾರವನ್ನು ಅಭಿನಂದಿಸಿದ್ದಾರೆ.ಜೊತೆಗೆ ಇದೀಗ ಸರ್ಕಾರ ತಮ್ಮಿಂದಲೂ ಕೂಡ ಹಣ ವಾಪಸ್ ಪಡೆಯಬೇಕು ಎಂದು ಹೇಳಿದ್ದಾರೆ.
ಈ ಕುರಿತು ಟ್ವೀಟ್ ಮಾಡಿರುವ ವಿಜಯ್ ಮಲ್ಯ, " ಕೊರೊನಾ ವೈರಸ್ ಸೃಷ್ಟಿಸಿರುವ ಬಿಕ್ಕಟ್ಟಿನ ನಡುವೆ ಆರ್ಥಿಕ ಪ್ಯಾಕೇಜ್ ಘೋಷಿಸಿರುವ ಸರ್ಕಾರವನ್ನು ನಾನು ಅಭಿನಂದಿಸುತ್ತೇನೆ. ಸರ್ಕಾರ ಬಯಸಿದಷ್ಟು ಹಣವನ್ನು ಮುದ್ರಿಸಬಹುದು. ಆದರೆ ಸ್ಟೇಟ್ ಬ್ಯಾಂಕ್ ನಿಂದ ಪಡೆದ ಹಣವನ್ನು ಹಿಂದಿರುಗಿಸಲು ಬಯಸುವ ನನ್ನಂತಹ ಸಣ್ಣ ಕೊಡುಗೆದಾರನನ್ನು ನಿರ್ಲಕ್ಷಿಸಬೇಕು" ಎಂದಿದ್ದಾರೆ. ಇದರ ಜೊತೆಗೆ ನನಗೆ ನೀಡಿರುವ ಹಣವನ್ನು ಯಾವುದೇ ಷರತ್ತು ವಿಧಿಸದೆ ವಾಪಸ್ ಪಡೆಯಿರಿ ಮತ್ತು ಪ್ರಕರಣಕ್ಕೆ ಅಂತ್ಯಹಾಡಿ ಎಂದು ಮದ್ಯ ದೊರೆ ಹೇಳಿದ್ದಾರೆ.
Congratulations to the Government for a Covid 19 relief package. They can print as much currency as they want BUT should a small contributor like me who offers 100% payback of State owned Bank loans be constantly ignored ? Please take my money unconditionally and close.
— Vijay Mallya (@TheVijayMallya) May 14, 2020
ಈಗಾಗಲೇ ಭಾರತ ಸರ್ಕಾರ ಮಧ್ಯ ದೊರೆ ವಿಜಯ್ ಮಲ್ಯ ಅವರನ್ನು ಪರಾರಿ ಎಂದು ಘೋಷಿಸಿರುವುದು ಇಲ್ಲಿ ಉಲ್ಲೇಖನೀಯ. ಅವರ ಮೇಲೆ ಸುಮಾರು 9000 ಕೋಟಿ ರೂ. ಹಣ ಲಪಟಾಯಿಸಿದ ಆರೋಪವಿದೆ. ಸದ್ಯ ದೀರ್ಘ ಕಾಲದಿಂದ ಮಲ್ಯ ಲಂಡನ್ ನಲ್ಲಿ ವಾಸವಾಗಿದ್ದಾರೆ.
ವಿಜಯ್ ಮಲ್ಯ ಅವರನ್ನು ಭಾರತಕ್ಕೆ ಹಸ್ತಾಂತರಿಸುವಂತೆ ಲಂಡನ್ ನ್ಯಾಯಾಲಯವೊಂದು ಇತ್ತೀಚಿಗೆ ಆದೇಶ ಕೂಡ ನೀಡಿದೆ. ಅದರ ವಿರುದ್ಧ ಅವರು ಸುಪ್ರೀಂ ಕೋರ್ಟ್ನಲ್ಲಿ ಅರ್ಜಿ ಕೂಡ ಸಲ್ಲಿಸಿದ್ದಾರೆ. ಈ ಹಿಂದೆ ವಿಜಯ್ ಮಲ್ಯ ಅವರನ್ನು ಒಮ್ಮೆ ಬಂಧಿಸಲಾಗಿತ್ತು, ಆದರೆ, ಸದ್ಯ ಮಲ್ಯ ಜಾಮೀನಿನ ಮೇಲೆ ಹೊರಗಿದ್ದಾರೆ.
ಈ ಮೊದಲೂ ಕೂಡ ಹಲವು ಭಾರಿ ವಿಜಯ್ ಮಲ್ಯ ತಾವು ಬ್ಯಾಂಕ್ ನಿಂದ ಸಾಲದ ರೂಪದಲ್ಲಿ ಪಡೆದ ಎಲ್ಲಾ ಹಣವನ್ನು ವಾಪಸ್ ನೀಡುವುದಾಗಿ ಹೇಳಿದ್ದಾರೆ.
ಕರೋನಾ ವೈರಸ್ ನಿಂದ ಸೃಷ್ಟಿಯಾಗಿರುವ ಆರ್ಥಿಕ ಬಿಕ್ಕಟ್ಟಿನ ನಡುವೆ ಎರಡು ದಿನಗಳ ಹಿಂದೆಯಷ್ಟೇ ಭಾರತ ಸರ್ಕಾರ 20 ಲಕ್ಷ ಕೋಟಿ ರೂ.ಗಳ ಆರ್ಥಿಕ ಪ್ಯಾಕೇಜ್ ಘೋಷಿಸಿದೆ.ಈ ಪ್ಯಾಕೇಜ್ ಅಡಿಯಲ್ಲಿ ವಿವಿಧ ಕ್ಷೇತ್ರಗಳಿಗೆ ಆರ್ಥಿಕ ನೆರವು ನೀಡಲಾಗುವುದು ಎಂದು ಸರ್ಕಾರ ಹೇಳಿದೆ.