20 ಲಕ್ಷ ಕೋಟಿ ರೂ. ಪ್ಯಾಕೇಜ್ ಹಳೆಯ ಸರಕಿಗೆ ಹೊಸ ಹೊದಿಕೆ ಎಂಬಂತಿದೆ: ಸಿದ್ದರಾಮಯ್ಯ

ಜನರ ಜೇಬಿಗೆ ದುಡ್ಡು ಹಾಕಿ ಎಂದು ನೊಬೆಲ್ ಪ್ರಶಸ್ತಿ ವಿಜೇತ ವಿದ್ವಾಂಸರು, ಪ್ರಖ್ಯಾತ ಆರ್ಥಿಕ ತಜ್ಞರು ಹೇಳುತ್ತಲೇ ಇದ್ದಾರೆ. ಆದರೆ ಪ್ರಧಾನಿ ಮೋದಿ ಖಾಲಿಯಾಗಿರುವ ಸರ್ಕಾರದ ಖಜಾನೆ ತುಂಬಲು ಹೊರಟಿದ್ದಾರೆ.

Last Updated : May 18, 2020, 07:05 AM IST
20 ಲಕ್ಷ ಕೋಟಿ ರೂ. ಪ್ಯಾಕೇಜ್ ಹಳೆಯ ಸರಕಿಗೆ ಹೊಸ ಹೊದಿಕೆ ಎಂಬಂತಿದೆ: ಸಿದ್ದರಾಮಯ್ಯ title=

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ (Narendra Modi) ಪ್ರಕಟಿಸಿರುವ  20 ಲಕ್ಷ ಕೋಟಿ ರೂಪಾಯಿ ಪ್ಯಾಕೇಜ್ ಕನ್ನಡಿಯೊಳಗಿನ ಗಂಟಿನಂತಿದ್ದು ಟಿವಿ ಪರದೆಯಲ್ಲಿ, ಪತ್ರಿಕೆಯ ಪುಟದಲ್ಲಿ ಕಾಣುತ್ತಿದೆ, ಜನರ ಕೈಗೆ ಮಾತ್ರ ಸಿಗುತ್ತಿಲ್ಲ. ಒಂದು ರೀತಿಯ ಹಳೆಯ ಸರಕಿಗೆ ಹೊಸ ಹೊದಿಕೆ ಎಂಬಂತಿದೆ ಎಂದು ವಿರೋಧ ಪಕ್ಷದ ನಾಯಕರೂ ಆದ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅಭಿಪ್ರಾಯಪಟ್ಟಿದ್ದಾರೆ.

20 ಲಕ್ಷ ಕೋಟಿ ರೂಪಾಯಿ ಪ್ಯಾಕೇಜ್ ಅನ್ನು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ (Nirmala Sitharaman) ಐದು ಕಂತುಗಳಲ್ಲಿ ಬಿಚ್ಚಿಟ್ಟಿದ್ದಾರೆ. ಆದರೆ ಅವರು ಹೇಳಿರುವ ಪ್ಯಾಕೇಜಿನ ಅಂಕಿ ಅಂಶಗಳು ಹಳೆಯ ಸರಕಿಗೆ ಹೊಸ ಹೊದಿಕೆ ಹೊದಿಸಿದಂತಿವೆ ಎಂದು‌ ಸಿದ್ದರಾಮಯ್ಯ ಟೀಕೆ ಮಾಡಿದ್ದಾರೆ.

ಕೊರೊನಾವೈರಸ್ (Coronavirus)  ಹಾವಳಿಯಿಂದ ದೇಶ ಸ್ವತಂತ್ರ ಭಾರತದ ಅತ್ಯಂತ ದೊಡ್ಡ ಮಾನವೀಯತೆಯ ಬಿಕ್ಕಟ್ಟನ್ನು ಎದುರಿಸಿದೆ. ಲಕ್ಷಾಂತರ ವಲಸೆ ಕಾರ್ಮಿಕರು, ಮಹಿಳೆಯರು, ಮಕ್ಕಳು ಊರು ಸೇರಲು ಸಾವು-ಬದುಕಿನ ಹೋರಾಟ ನಡೆಸುತ್ತಿದ್ದಾರೆ. ಈ ಜನರ ಪ್ರಸ್ತಾವವೇ ಇಲ್ಲದ ಪ್ಯಾಕೇಜ್ ಬೆತ್ತಲೆ ಮನುಷ್ಯನ ಮುಂದೆ ಅರಸನ ಬಟ್ಟೆಗಳ ಮೆರವಣಿಗೆಯಂತಿದೆ ಎಂದಿದ್ದಾರೆ.

ಜನರ ಜೇಬಿಗೆ ದುಡ್ಡು ಹಾಕಿ ಎಂದು ನೊಬೆಲ್ ಪ್ರಶಸ್ತಿ ವಿಜೇತ ವಿದ್ವಾಂಸರು, ಪ್ರಖ್ಯಾತ ಆರ್ಥಿಕ ತಜ್ಞರು ಹೇಳುತ್ತಲೇ ಇದ್ದಾರೆ. ಆದರೆ ಪ್ರಧಾನಿ ಮೋದಿ ಖಾಲಿಯಾಗಿರುವ ಸರ್ಕಾರದ ಖಜಾನೆ ತುಂಬಲು ಹೊರಟಿದ್ದಾರೆ. ಇದರಿಂದ ಬಡವರಿಗೆ, ಹಸಿದ ಹೊಟ್ಟೆಗಳಿಗೆ, ಕಾರ್ಮಿಕರಿಗೆ, ರೈತರಿಗೆ, ಸಣ್ಣ ವ್ಯಾಪಾರಿಗಳಿಗೆ ದಕ್ಕಿದ್ದೆಷ್ಟು?  ಅವರಿಗಾದ ಲಾಭ ಎಷ್ಟು ಎಂಬ ವಿವರ ನೀಡುವಿರಾ? ಎಂದು ಸಿದ್ದರಾಮಯ್ಯ ಪ್ರಶ್ನೆ ಮಾಡಿದ್ದಾರೆ.

ದೇಶದಲ್ಲಿ ಗುರುತಿಸಲಾದ13 ಕೋಟಿ ಬಡವರಿಗೆ ಮಾಸಿಕ ರೂ. 5000 ನೀಡಿದರೆ ಆಗುವ ವೆಚ್ಚ ರೂ. 65,000 ಕೋಟಿ. ರೂ. 7000 ನೀಡಿದರೆ ಆಗುವ ವೆಚ್ಚ 97,500 ಕೋಟಿ. ಇಷ್ಟು ಕೊಟ್ಟು ಪುಣ್ಯ ಕಟ್ಕೊಳ್ಳಿ ಎಂದು ನಮ್ಮ ಪಕ್ಷ ಹೇಳುತ್ತಲೇ ಇದೆ. ಇಷ್ಟನ್ನೂ ನೀಡಲು ಸಾಧ್ಯ ಇಲ್ಲದಷ್ಟು‌ ಸರ್ಕಾರ ದಿವಾಳಿ‌ ಆಗಿದೆಯೇ? ಎಂದು ತೀವ್ರವಾಗಿ ಕಿಡಿಕಾರಿದ್ದಾರೆ.

ದೇಶದಲ್ಲಿ ಜನ ರಾಜ್ಯದಿಂದ ರಾಜ್ಯಕ್ಕೆ, ಜಿಲ್ಲೆಯಿಂದ ಜಿಲ್ಲೆಗೆ ಹೋಗಲು ಪರದಾಡುತ್ತಿದ್ದಾರೆ. ಕೇಂದ್ರ ಸರ್ಕಾರ ಆಕಾಶದಲ್ಲಿ ವಿಮಾನದ ಮೂಲಕ ಸಂಚಾರ ವ್ಯವಸ್ಥೆಯನ್ನು ಇನ್ನಷ್ಟು ಸುಲಭ ಮಾಡಿ ದುಡ್ಡು ಮಾಡಿಕೊಳ್ಳುವುದು ಹೇಗೆ ಎನ್ನುವುದಕ್ಕೆ ಪ್ಯಾಕೇಜ್ ಘೋಷಿಸುತ್ತಿದೆ. ಇದು ಹಸಿದ ಹೊಟ್ಟೆಗಳ ಅಪಹಾಸ್ಯವಲ್ಲದೆ ಇನ್ನೇನು? ಎಂದು ವಾಗ್ಯದ್ದ ನಡೆಸಿದ್ದಾರೆ.

ನರೇಗಾ ಯೋಜನೆಯ ಕೆಲಸದ ದಿನಗಳನ್ನು 200ಕ್ಕೆ ಹೆಚ್ಚಿಸಿ ಮತ್ತು ಈ ಯೋಜನೆಯನ್ನು ನಗರಪ್ರದೇಶದ ಬಡವರಿಗೂ ವಿಸ್ತರಿಸಿ ಎಂದು ಪ್ರಾರಂಭದಿಂದಲೇ ನಮ್ಮ ಪಕ್ಷ ಹೇಳುತ್ತಲೇ ಬಂದಿದೆ. ಲಕ್ಷ ಲಕ್ಷ ಪ್ಯಾಕೇಜ್ ನಲ್ಲಿ ಇದರ ಪ್ರಸ್ತಾವವೇ ಇಲ್ಲ ಎಂದು ಸಿದ್ದರಾಮಯ್ಯ ಆಕ್ಣೇಪಿಸಿದ್ದಾರೆ.

ರೈತರು (Farmers) ಮುಂಗಾರು ಬೆಳೆಯ ಸಿದ್ದತೆಯಲ್ಲಿದ್ದಾರೆ. ಈಗಾಗಲೇ ಬೆಳೆದ ಬೆಳೆಗೆ ಮಾರುಕಟ್ಟೆ ಇಲ್ಲದೆ ರೈತರು ದಿವಾಳಿಯಾಗಿದ್ದಾರೆ. ಅವರ ಹಳೆ ಸಾಲ ಮನ್ನಾ ಮಾಡಿ, ರಸಗೊಬ್ಬರ, ಕ್ರಿಮಿನಾಶಕ ಮತ್ತು ಕೃಷಿ ಸಲಕರಣೆಗಳ ಮೇಲಿನ ಜಿಎಸ್ ಟಿ ರದ್ದುಪಡಿಸಿ ಎಂಬ ಬೇಡಿಕೆ ಬಗ್ಗೆ ಪ್ಯಾಕೇಜ್ ನಲ್ಲಿ ಪ್ರಸ್ತಾವವೇ ಇಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಅತಿಸಣ್ಣ,ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳಿಗೆ ನೀಡಿರುವ ಆರ್ಥಿಕ ನೆರವಿನ ಪ್ಯಾಕೇಜನ್ನು ಹಣಕಾಸು ಸಚಿವರು ಘೋಷಿಸಿದ್ದಾರೆ. ಮೇಲ್ನೋಟಕ್ಕೆ ಬಂಪರ್ ಕೊಡುಗೆ ಎಂದು ಅನಿಸಿದರೂ ಒಳಗಿನ ಗುಟ್ಟು ಬೇರೆ ಇದೆ. ದೇಶದಲ್ಲಿ 6.2 ಲಕ್ಷ ಕೋಟಿ ಕಿರುಉದ್ದಿಮೆಗಳಿವೆ, ಅವುಗಳಲ್ಲಿ 45 ಲಕ್ಷ ದೊಡ್ಡಗಾತ್ರದ ಕಿರುಉದ್ದಿಮೆಗಳಿಗೆ ಮಾತ್ರ ಈ ನೆರವು ಲಭ್ಯ. ಕೇಂದ್ರ ಸರ್ಕಾರದ ಆದ್ಯತೆ ಏನು? ಎಂದು ಸಿದ್ದರಾಮಯ್ಯ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಸಣ್ಣ ಕೈಗಾರಿಕೆಗಳಿಗೆ ಸಾಲ ಮತ್ತು ಸಾಲಕ್ಕೆ ಖಾತರಿ ನೀಡಿಕೆಯ ಬಗ್ಗೆ ಪ್ಯಾಕೇಜ್ ನಲ್ಲಿ ಹೇಳಲಾಗಿದೆ. ಉತ್ಪಾದನೆ ಇಲ್ಲದೆ ಖಾಲಿ ಬಿದ್ದಿರುವ ಕೈಗಾರಿಕೆಗಳಿಗೆ ಸಾಲ ಪಡೆಯುವ ಚೈತನ್ಯ ಎಲ್ಲಿದೆ? ಅವುಗಳಲ್ಲಿರುವ ಕಾರ್ಮಿಕರ ಸಂಬಳ ನೀಡಿಕೆಗೆ ನೆರವು, ಅವರ ಹಳೆ ಸಾಲದ ಮೇಲಿನ ಬಡ್ಡಿ ಮನ್ನಾ ಮೊದಲಾದ ನೆರವಿನಿಂದ ಮಾತ್ರ ಎಂದು ಹೇಳಿದ್ದಾರೆ.

ತಾವು ದೇಶಪ್ರೇಮದ ವಾರಸುದಾರರೇ ಕೊಚ್ಚಿಕೊಳ್ಳುವ  ನರೇಂದ್ರ ಮೋದಿ ಈಗ ರಕ್ಷಣಾ ಇಲಾಖೆಯ ವಿದೇಶಿ ಬಂಡವಾಳ ಹೂಡಿಕೆ ಮಿತಿಯನ್ನು ಶೇಕಡಾ 74ಕ್ಕೆ ಹೆಚ್ಚಿಸುವ ಮೂಲಕ ದೇಶದ ಭದ್ರತೆಯ ಜೊತೆ ರಾಜಿ ಮಾಡಲು ಹೊರಟಿದ್ದಾರೆ ಎಂದು ಸಿದ್ದರಾಮಯ್ಯ ಗರಂ ಆಗಿದ್ದಾರೆ.
 

Trending News