ಬೆಂಗಳೂರು : ಹೆಬ್ಬುಲಿಯ ಸಕ್ಸಸ್ ನಂತರ ಕಿಚ್ಚ ಸುದೀಪ್ ಅದೇ ತಂಡದ ಜೊತೆಯಲ್ಲಿ ಸಿನಿಮಾ ಮಾಡುವುದಾಗಿ ತಿಳಿಸಿದ್ದ ಸುದೀಪ್, ಎಸ್.ಕೃಷ್ಣ ನಿರ್ದೇಶನದ 'ಪೈಲ್ವಾನ್' ಚಿತ್ರಕ್ಕೆ ಸಖತ್ ತಯಾರಿ ನಡೆಸಿದ್ದಾರೆ.
ಚಿತ್ರದ ಹೆಸರೇ ಹೇಳುವಂತೆ 'ಪೈಲ್ವಾನ್' ಪಾತ್ರದಲ್ಲಿ ಚಿತ್ರದ ನಾಯಕನಾಗಿ ಕಾಣಿಸಿಕೊಳ್ಳಲಿರುವ ಸುದೀಪ್, ಈಗಾಗಲೇ ಬಾಡಿ ಬಿಲ್ಡ್ ಮಾಡಲು ವರ್ಕೌಟ್ ಶುರು ಮಾಡಿದ್ದಾರೆ. ಅದಕ್ಕಾಗಿ ಜಿಮ್ ಗೆ ಹೋಗುತ್ತಿರುವ ಸುದೀಪ್, ಕಟ್ಟುಮಸ್ತಾದ ದೇಹಕ್ಕಾಗಿ ಕಸರತ್ತು ನಡೆಸುತ್ತಿದ್ದು, ಹೊಸ ಲುಕ್ ನಲ್ಲಿ ಅಭಿಮಾನಿಗಳ ಮನ ಗೆಲ್ಲಲಿದ್ದಾರೆ.
ಪ್ರೇಮ್ ನಿರ್ದೇಶನದ ದ ವಿಲನ್ ಚಿತ್ರದ ಚಿತ್ರೀಕರಣವನ್ನು ಬಹುತೇಕ ಮುಗಿಸಿರುವ ನಟ ಸುದೀಪ್ ಬಾಕ್ಸಿಂಗ್ ಮತ್ತು ರೆಸ್ಲಿಂಗ್ ವಿಷಯ ಆಧಾರಿತ ಈ ಚಿತ್ರದಲ್ಲಿ ಮಿಂಚಲಿದ್ದಾರೆ. ಅಷ್ಟೇ ಅಲ್ಲ, ಸುದೀಪ್ ತಮ್ಮ ತರಬೇತುದಾರರ ಜೊತೆ ಇದೇ ವಾರ ಥೈಲ್ಯಾಂಡ್ ಗೆ ಹೋಗಲಿದ್ದಾರಂತೆ. ಅಲ್ಲಿನ ಕುಗ್ರಾಮವೊಂದರಲ್ಲಿ ಬಾಕ್ಸಿಂಗ್ ಮತ್ತು ರೆಸ್ಲಿಂಗ್ ಗೆ ಸಂಬಂಧಪಟ್ಸಾಂಟ ಸಾಂಪ್ರದಾಯಿಕ ತರಬೇತಿ ಪಡೆದು ಬರಲಿದ್ದಾರೆ ಎಂಬ ಸುದ್ದಿ ಈಗ ಸ್ಯಾಂಡಲ್ ವುಡ್ನಲ್ಲಿ ಹರಿದಾದುತ್ತಿದೆ.
ಒಟ್ಟಾರೆ, ಸುದೀಪ್ ಈ ಬಾರಿ ಪ್ರೇಕ್ಷಕರ ಮುಂದೆ ಬೇರೆಯದ್ದೇ ಸ್ಟೈಲ್ ನಲ್ಲಿ ಬರಲಿದ್ದಾರೆ. ಆರ್ ಆರ್ ಆರ್ ಮೋಶನ್ ಪಿಕ್ಚರ್ಸ್ ನಡಿ ತಯಾರಾಗುತ್ತಿರುವ ಪೈಲ್ವಾನ ಚಿತ್ರಕ್ಕೆ ಅರ್ಜುನ್ ಜನ್ಯ ಸಂಗೀತ ಮತ್ತು ಕರುಣಾಕರ್ ಅವರ ಛಾಯಾಗ್ರಹಣವಿದೆ.