ಬೆಂಗಳೂರು: ಕರ್ನಾಟಕ ಸೆಕೆಂಡರಿ ಎಜುಕೇಶನ್ ಎಕ್ಸಾಮಿನೇಷನ್ ಬೋರ್ಡ್ (ಕೆಎಸ್ಇಇಬಿ) ನಡೆಸುವ ಎಸ್ಎಸ್ಎಲ್ಸಿ ಪರೀಕ್ಷೆಗಳು ಮಾರ್ಚ್ 23(ನಾಳೆಯಿಂದ) ರಿಂದ ಏಪ್ರಿಲ್ 6ರವರೆಗೆ ನಡೆಯಲಿವೆ.
45 ಸೂಕ್ಷ್ಮ, 23 ಅತಿ ಸೂಕ್ಷ್ಮ ಕೇಂದ್ರಗಳು ಸೇರಿದಂತೆ ರಾಜ್ಯದ 2817 ಕೇಂದ್ರಗಳಲ್ಲಿ ಪರೀಕ್ಷೆಗಳು ನಡೆಯಲಿವೆ. ಒಟ್ಟು 8,54,424 ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಣಿ ಮಾಡಿದ್ದಾರೆ.
ಪರೀಕ್ಷಾ ಕೇಂದ್ರಗಳಲ್ಲಿ ಯಾವುದೇ ಅಹಿತಕರ ಹಾಗೂ ಅಕ್ರಮಗಳಿಗೆ ಅವಕಾಶ ನೀಡದ ರೀತಿಯಲ್ಲಿ ಎಚ್ಚರ ವಹಿಸಲು ಎಲ್ಲಾ ಪರೀಕ್ಷಾ ಕೇಂದ್ರಗಳಲ್ಲಿ ಸಿಸಿಟಿವಿ ಅಳವಡಿಸಲಾಗಿದೆ.
ಮೊದಲ ಬಾರಿಗೆ ಆನ್ಲೈನ್ನಲ್ಲಿಯೇ ಪ್ರವೇಶ ಪತ್ರ ಹಂಚಿಕೆ ಮಾಡಿರುವ ಬೋರ್ಡ್, ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಲು ಮೇಲ್ವಿಚಾರಕರು ಸೇರಿದಂತೆ ಎಲ್ಲಾ ಪರೀಕ್ಷಾ ಸಿಬ್ಬಂದಿಗೆ ಗುರುತಿನ ಚೀಟಿ ನೀಡಿದೆ. ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಪರೀಕ್ಷೆ ನಡೆಯಲಿದೆ.
ವಿದ್ಯಾರ್ಥಿಗಳು, ಪೋಷಕರ ಅನುಕೂಲಕ್ಕಾಗಿ ಸಹಾಯವಾಣಿ 080-23310075/76 ಸಂಖ್ಯೆಗೆ ಕರೆ ಮಾಡಿ.
ಕಳೆದ ವರ್ಷ ಮಾರ್ಚ್ 30 ರಂದು ಪರೀಕ್ಷೆ ಪ್ರಾರಂಭವಾಯಿತು ಮತ್ತು ಫಲಿತಾಂಶವನ್ನು ಮೇ ತಿಂಗಳಲ್ಲಿ ಘೋಷಿಸಲಾಯಿತು. ಈ ವರ್ಷ, ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಪರೀಕ್ಷೆಯ ದಿನಾಂಕವನ್ನು ಮಾರ್ಚ್ ಕೊನೆಯ ವಾರದಲ್ಲಿ ನಿಗದಿಗೊಳಿಸಲಾಗಿದೆ.