ಬೆಂಗಳೂರು: 2017-2018ನೇ ಸಾಲಿನ SSLC ಪರೀಕ್ಷಾ ಫಲಿತಾಂಶ ಪ್ರಕಟವಾಗಿದ್ದು, ಈ ಬಾರಿಯೂ ವಿದ್ಯಾರ್ಥಿನಿಯರೇ ಮೇಲುಗೈ ಸಾಧಿಸಿದ್ದಾರೆ. ಕಳೆದ ಬಾರಿ ಫಲಿತಾಂಶ ಶೇ. 67.87 ಫಲಿತಾಂಶ ದಾಖಲಾಗಿತ್ತು. ಈ ಬಾರಿ ಶೇ. 71.93 ಫಲಿತಾಂಶ ಬಂದಿದೆ. ಕರ್ನಾಟಕ ಪ್ರೌಢಶಿಕ್ಷಣ ಪರೀಕ್ಷಾ ಮಂಡಳಿಯು SSLC ಪರೀಕ್ಷೆ ಫಲಿತಾಂಶವನ್ನು ಪ್ರಕಟಿಸಿದ್ದು, ಇದೇ ಮೊದಲ ಬಾರಿಗೆ ವಿದ್ಯಾರ್ಥಿಗಳ ಪೋಷಕರ ಮೊಬೈಲ್ ಫೋನ್'ಗಳಿಗೆ ಫಲಿತಾಂಶವನ್ನು SMS ಮೂಲಕ ಕಳಿಸಲು ಕ್ರಮ ಕೈಗೊಂಡಿದೆ.
SSLC ಫಲಿತಾಂಶದಲ್ಲಿ ಉಡುಪಿ ಅಗ್ರಸ್ಥಾನ ಪಡೆದಿದ್ದರೆ, ಉತ್ತರ ಕನ್ನಡ ದ್ವಿತೀಯ ಸ್ಥಾನ, ಚಿಕ್ಕೋಡಿ ತೃತೀಯ ಸ್ಥಾನ ಗಳಿಸಿದೆ. ಯಾದಗಿರಿ ಕೊನೆಯ ಸ್ಥಾನ ಗಳಿಸಿದೆ. ಇಬ್ಬರು ವಿದ್ಯಾರ್ಥಿಗಳು 625 ಅಂಕಗಳನ್ನು ಪಡೆದಿದ್ದರೆ, 08 ವಿದ್ಯಾರ್ಥಿಗಳು 624 ಅಂಕ ಗಳಿಸಿದ್ದಾರೆ. ಅಲ್ಲದೆ 12 ವಿದ್ಯಾರ್ಥಿಗಳು 623 ಅಂಕಗಳಿಸಿದ್ದಾರೆ.
http://kseeb.kar.nic.in/ ಮತ್ತು http://karresults.nic.in/ ವೆಬ್ಸೈಟ್ನಲ್ಲಿ ಬೆಳಿಗ್ಗೆ 11ರ ನಂತರ ವಿದ್ಯಾರ್ಥಿಗಳು ತಮ್ಮ ಫಲಿತಾಂಶ ಲಭ್ಯವಾಗಲಿದ್ದು, ಮೇ 8ರ ಮಂಗಳವಾರ ಮಧ್ಯಾಹ್ನ 12:00 ಗಂಟೆ ನಂತರ ರಾಜ್ಯದ ಎಲ್ಲಾ ಪ್ರೌಢಶಾಲೆಗಳಲ್ಲಿ ಫಲಿತಾಂಶ ಪ್ರಕಟಿಸಲಾಗುತ್ತದೆ.
ರಾಜ್ಯದಾದ್ಯಂತ 33 ವಿಷಯಗಳಲ್ಲಿ 2,812 ಕೇಂದ್ರಗಳಲ್ಲಿ ಪರೀಕ್ಷೆ ನಡೆದಿತ್ತು. ಒಟ್ಟು 8,54,424 ವಿದ್ಯಾರ್ಥಿಗಳು SSLC ಪರೀಕ್ಷೆ ಬರೆದಿದ್ದರು. ಇವರಲ್ಲಿ 70,253 ಮಂದಿ ಪುನರಾವರ್ತಿತ ವಿದ್ಯಾರ್ಥಿಗಳು ಮತ್ತು 23,199 ಮಂದಿ ಖಾಸಗಿ ವಿದ್ಯಾರ್ಥಿಗಳು ಸೇರಿದ್ದಾರೆ. ಹೀಗೆ ಪರೀಕ್ಷೆ ಬರೆದ ಒಟ್ಟು ವಿದ್ಯಾರ್ಥಿಗಳಲ್ಲಿ 4,56,103 ಬಾಲಕರು ಹಾಗೂ 3,98,321 ಬಾಲಕಿಯರು ಸೇರಿದ್ದಾರೆ.