ನವದೆಹಲಿ: ಜೊಮ್ಯಾಟೋ ಷೇರು ದರ ಶುಕ್ರವಾರ 57.65 ರೂ.ಗಳ ಕನಿಷ್ಠ ಮಟ್ಟ ತಲುಪುವ ಮೂಲಕ ಸಾರ್ವಕಾಲಿಕ ಗರಿಷ್ಠ ಮಟ್ಟದಿಂದ ಷೇರು ಶೇ.65ರಷ್ಟು ಕುಸಿತ ಕಂಡಿದೆ. ಪರಿಣಾಮ ಆಹಾರ ವಿತರಣಾ ಕಂಪನಿ ಮೇಲೆ ಹಣ ಹೂಡಿದ್ದ ಹೂಡಿಕೆದಾರರು ಬರೋಬ್ಬರಿ 87,800 ಕೋಟಿ ರೂ. ಕಳೆದುಕೊಂಡಿದ್ದಾರೆ.
ಷೇರುದಾರರಿಗೆ ಬಂಪರ್ ಲಾಭ ನೀಡಿದ್ದ ಜೊಮ್ಯಾಟೋ
2021ರ ಜುಲೈ 14ರಿಂದ ಆರಂಭಗೊಂಡಿದ್ದ ಜೊಮ್ಯಾಟೋ ಐಪಿಓಗೆ ಷೇರು ಮಾರುಕಟ್ಟೆ ತಜ್ಞರು ಮಿಶ್ರ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದರು. ಆದರೆ, ಜುಲೈ 23ರಂದು ಲಿಸ್ಟಿಂಗ್ ಆಗಿದ್ದ ಜೊಮ್ಯಾಟೋ ಹೂಡಿಕೆದಾರರಿಗೆ ಬಂಪರ್ ಲಾಭ ನೀಡಿತ್ತು. ಐಪಿಒ ಇಶ್ಯೂ ಪ್ರೈಸ್ಗಿಂತಲೂ ಶೇ.53ರಷ್ಟು ಹೆಚ್ಚಿನ ಬೆಲೆಗೆ ಲಿಸ್ಟ್ ಆಗಿತ್ತು.
ಇದನ್ನೂ ಓದಿ: PAN Card ಫೋಟೋ ಬದಲಿಸುವ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ
ಜೊಮ್ಯಾಟೋ ಷೇರುಗಳು ರಾಷ್ಟ್ರೀಯ ಷೇರು ವಿನಿಮಯ ಕೇಂದ್ರ(NSE)ದಲ್ಲಿ ಪ್ರತಿ ಷೇರಿಗೆ 116 ರೂ.ಗಳಂತೆ ಲಿಸ್ಟ್ ಆದರೆ, ಬಾಂಬೆ ಷೇರು ವಿನಿಮಯ ಕೇಂದ್ರ(BSE)ಯಲ್ಲಿ115 ರೂ.ಗೆ ಲಿಸ್ಟ್ ಆಗಿತ್ತು. ಇದರ ಐಪಿಒ ಮೂಲ ಬೆಲೆ 72-76 ರೂ. ಆಗಿತ್ತು. ಆದರೆ, ಬರೋಬ್ಬರಿ ಶೇ.51ರಷ್ಟು ಹೆಚ್ಚಿನ ಬೆಲೆಗೆ ಷೇರುಗಳು ಲಿಸ್ಟ್ ಆಗಿದ್ದರಿಂದ ಹೂಡಿಕೆದಾರರು ಜಾಕ್ಪಾಟ್ ಹೊಡೆದಿದ್ದರು.
ಷೇರುಪೇಟೆಯಲ್ಲಿ ಕರಡಿ ಕುಣಿತ; ಜೊಮ್ಯಾಟೋ ಷೇರು ಪಾತಾಳಕ್ಕೆ!
ಕಳೆದ ಕೆಲವು ವಾರಗಳಿಂದ ಷೇರುಪೇಟೆಯಲ್ಲಿ ಕರಡಿ ಕುಣಿತದ ಅಬ್ಬರ ಜೋರಾಗಿದೆ. ಪರಿಣಾಮ ದೇಶದ ಹೂಡಿಕೆದಾರರು ಸಾವಿರಾರು ಕೋಟಿ ರೂ. ಹಣ ಕಳೆದುಕೊಂಡಿದ್ದಾರೆ. ದೇಶದ ಅತಿದೊಡ್ಡ ಆನ್ಲೈನ್ ಆಹಾರ ವಿತರಣಾ ಸಂಸ್ಥೆ ಜೊಮ್ಯಾಟೋ ಷೇರುಗಳಲ್ಲಿ ಹೂಡಿಕೆ ಮಾಡಿದ್ದ ಹೂಡಿಕೆದಾರರು ಕೈಸುಟ್ಟುಕೊಂಡಿದ್ದಾರೆ.
ಇದನ್ನೂ ಓದಿ: Short Nap at Office: ಕಚೇರಿಯಲ್ಲಿ ಸಣ್ಣ ನಿದ್ದೆ- ಬೆಂಗಳೂರು ಮೂಲದ ಕಂಪನಿಯಿಂದ ಮಹತ್ವದ ಘೋಷಣೆ
ಜೊಮ್ಯಾಟೋ ಷೇರುಗಳ 54 ವಾರಗಳ ಗರಿಷ್ಠ ಬೆಲೆ(52-wk high)169 ರೂ. ಆಗಿದ್ದರೆ, 54 ವಾರಗಳ ಕನಿಷ್ಠ ಬೆಲೆ(52-wk low) 57.65 ರೂ. ಆಗಿದೆ. ಲಿಸ್ಟ್ ಆದ ದಿನದಿಂದ ಇಲ್ಲಿವರೆಗೆ ಜೊಮ್ಯಾಟೋ ಷೇರು ಶೇ.51.03ರಷ್ಟು ಕುಸಿತ ಕಂಡಿದೆ. ಕಳೆದ 1 ತಿಂಗಳಿನಲ್ಲಿ ಈ ಷೇರು ಶೇ.26.02 ರಷ್ಟು ಕುಸಿತ ಕಂಡಿದೆ. ಶುಕ್ರವಾರದ ಷೇರುಪೇಟೆ ವಹಿವಾಟಿನ ಅಂತ್ಯಕ್ಕೆ ಜೊಮ್ಯಾಟೋ ಷೇರು 54 ವಾರಗಳ ಕನಿಷ್ಠ ಮಟ್ಟ ತಲುಪಿತ್ತು. ಗ್ರಾಹಕರಿಗೆ ಅತ್ಯುತ್ತಮ ಸೇವೆ ನೀಡುವ ಗುರಿಯೊಂದಿಗೆ ಕಾರ್ಯಾಚರಿಸುತ್ತಿರುವ ಜೊಮ್ಯಾಟೋ ಲಾಭದ ವಿಷಯದಲ್ಲಿ ಹಿಂದೆ ಬಿದ್ದಿದೆ.
ಜೊಮ್ಯಾಟೋ ಕಂಪನಿ ನಂಬಿ ಹೂಡಿಕೆ ಮಾಡಿದವರಿಗೆ ಮರ್ಮಾಘಾತವಾಗಿದೆ. ಇಂದು ಏರುತ್ತದೆ, ನಾಳೆ ಏರುತ್ತದೆ ಎಂದು ಹೂಡಿಕೆ ಮಾಡಿದ ಹೂಡಿಕೆದಾರರು ಕೈಕೈ ಹಿಸುಕಿಕೊಳ್ಳುವಂತಾಗಿದೆ. ಚೇತರಿಕೆ ಕಾಣದಂತೆ ಜೊಮ್ಯಾಟೋ ಷೇರು ಪಾತಾಳಕ್ಕೆ ತಲುಪಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.