ಬೆಂಗಳೂರು : ಪವಾಡಸದೃಶ ಪ್ರಕರಣದಲ್ಲಿ, ಬೆಂಗಳೂರಿನ ಮದರ್ಹುಡ್ ಹಾಸ್ಪಿಟಲ್ಸ್ನ ನವಜಾತ ಶಿಶುಗಳ ತಜ್ಞರ ವಿಶೇಷ ತಂಡವು ಎರಡು ದಿನಗಳ ಹಿಂದಷ್ಟೇ ಜನಿಸಿದ ಶಿಶುವಿನ ಜೀವವನ್ನು ಉಳಿಸಲು- “ಟೋಟಲ್ ಬಾಡಿ ಕೂಲಿಂಗ್” ಎಂಬ ನವೀನ ಕಾರ್ಯವಿಧಾನವನ್ನು ಬಳಸಿತು. ಹೃದಯದ ಲಯದಲ್ಲಿ ಗಂಭೀರ ಅಡಚಣೆಯಾಗಿ, ಹೃದಯ ಬಡಿತವನ್ನು ಅಸಹಜವಾಗಿ ವೇಗಗೊಳಿಸುವ (ಪ್ರತಿ ನಿಮಿಷಕ್ಕೆ 250-280) ನಿಯೋನೇಟಲ್ ಸುಪ್ರಾ ವೆಂಟ್ರಿಕ್ಯುಲರ್ ಟಾಕಿಕಾರ್ಡಿಯಾ ಎಂಬ ಅಸ್ವಸ್ಥತೆಯಿಂದ ಈ ಶಿಶುವು ಬಳಲುತ್ತಿತ್ತು.
ಅನಂತಪುರದ 'ಹೃದಯ' ಆಸ್ಪತ್ರೆಯಿಂದ ಡಾ. ಶ್ರೀನಿವಾಸ್ ಅವರು ಬೆಂಗಳೂರಿನ ಮದರ್ಹುಡ್ ಹಾಸ್ಪಿಟಲ್ಸ್ ನ NICU ತಂಡಕ್ಕೆ ತುರ್ತು ಕರೆ ಮಾಡಿದ್ದರು. ಅಲ್ಲಿ ಸುಪ್ರಾವೆಂಟ್ರಿಕ್ಯುಲರ್ ಟ್ಯಾಕಿಕಾರ್ಡಿಯಾ (SVT) ರೋಗನಿರ್ಣಯ ಮಾಡಲಾದ ಮಗುವನ್ನು ಗಂಭೀರ ಸ್ಥಿತಿಯಲ್ಲಿ ದಾಖಲಿಸಿಕೊಳ್ಳಲಾಗಿತ್ತು. ಸಾಮಾನ್ಯವಾಗಿ ನಿಮಿಷಕ್ಕೆ 120-160 ವೇಗದಲ್ಲಿ ಬಡಿಯುವ ಹೃದಯವು ಈ ಶಿಶುವು SVT ಯಿಂದ ಬಳಲುತ್ತಿದ್ದ ಕಾರಣ, ಅದರ ಹೃದಯವು ಬಹುತೇಕ ದ್ವಿಗುಣ ವೇಗದಲ್ಲಿ ಬಡಿಯುತ್ತಿತ್ತು.
ನವಜಾತ ಶಿಶುವಿನ SVT (ಸುಪ್ರಾವೆಂಟ್ರಿಕ್ಯುಲರ್ ಟಾಕಿಕಾರ್ಡಿಯಾ) ಇದು ಹೃದಯವು ಅಸಹಜವಾಗಿ ವೇಗವಾಗಿ ಬಡಿಯುವ ಸ್ಥಿತಿಯಾಗಿದೆ. ಸಾಮಾನ್ಯವಾಗಿ ಪ್ರತಿ ನಿಮಿಷಕ್ಕೆ 120ರಿಂದ 160ರ ನಡುವೆ ಇರುವ ನವಜಾತ ಶಿಶುಗಳ ಹೃದಯ ಬಡಿತವು ಈ ಸ್ಥಿತಿಯಲ್ಲಿ ಪ್ರತಿ ನಿಮಿಷಕ್ಕೆ 250ರಷ್ಟು ಹೆಚ್ಚಿರಬಹುದು. ಚಿಕಿತ್ಸೆ ನೀಡದಿದ್ದರೆ ಹೃದಯ ವೈಫಲ್ಯಕ್ಕೂ ಕಾರಣವಾಗಬಹುದು. ಮದರ್ಹುಡ್ ಹಾಸ್ಪಿಟಲ್ಸ್ ನ NICU ತಂಡವು "NICU ಆನ್ ವೀಲ್ಸ್" ಆಂಬ್ಯುಲೆನ್ಸ್ ಸೇವೆಯನ್ನು ಬಳಸಿಕೊಂಡು ಶಿಶುವನ್ನು ಬೆಂಗಳೂರಿಗೆ ಕರೆತರಲು ತಕ್ಷಣವೇ ಹೊರಟಿತು. ನವಜಾತ ಅಥವಾ ತೀವ್ರವಾಗಿ ಅಸ್ವಸ್ಥರಾಗಿರುವ ಶಿಶುಗಳನ್ನು ಆಸ್ಪತ್ರೆಗೆ ಸಾಗಿಸಲು ಅತ್ಯಾಧುನಿಕ NICU ಸೌಲಭ್ಯಗಳಿರುವ ಉನ್ನತ-ಮಟ್ಟದ ಸಾರಿಗೆ ವಾಹನ ಇದಾಗಿದೆ.
ಇದನ್ನೂ ಓದಿ : Home Remedies : ಮುಟ್ಟಿನ ನೋವಿಗೆ ಗರಿಕೆ ಕಷಾಯ! ಇಲ್ಲಿದೆ ಮಾಡುವ ವಿಧಾನ
ಅನಂತಪುರ ಮತ್ತು ಬೆಂಗಳೂರು ನಡುವೆ 200 ಕಿ.ಮೀ.ಗಿಂತಲೂ ಹೆಚ್ಚಿನ ಅಂತರವಿದೆ. ಮಗುವಿಗೆ ತಕ್ಷಣದ ವೈದ್ಯಕೀಯ ಆರೈಕೆಯ ಅಗತ್ಯವಿರುವುದರಿಂದ ಎರಡೂ ಆಸ್ಪತ್ರೆಗಳ ತಂಡಗಳು ಮಧ್ಯದಲ್ಲಿರುವ ಚಿಕ್ಕಬಳ್ಳಾಪುರದಲ್ಲಿ ಭೇಟಿಯಾಗಲು ನಿರ್ಧರಿಸಿದವು. ಚಿಕ್ಕಬಳ್ಳಾಪುರ ತಲುಪಿದ ತಕ್ಷಣ ಮಗುವನ್ನು NICU ಆನ್ ವೀಲ್ಸ್ ಗೆ ಸ್ಥಳಾಂತರಿಸಲಾಯಿತು. ಶಿಶುವಿನ ಹೃದಯ ಬಡಿತವನ್ನು ಸಾಮಾನ್ಯ ಸ್ಥಿತಿಗೆ ತರಲು 3 ಡೋಸ್ ಅಡೆನೊಸಿನ್ ನೀಡಲಾಯಿತು. ಅಡೆನೊಸಿನ್ ಹೃದಯವನ್ನು ಒಂದು ಸೆಕೆಂಡ್ ಅಥವಾ ಅದಕ್ಕಿಂತ ಹೆಚ್ಚು ಕಾಲ ನಿಲ್ಲಿಸಿ, ಬಳಿಕ ಹೃದಯ ಬಡಿತವನ್ನು ಸಾಮಾನ್ಯ ಸ್ಥಿತಿಗೆ ತರುವ ಮೂಲಕ ಮರುಪ್ರಾರಂಭಿಸುತ್ತದೆ. ಮೂರು ಡೋಸ್ ಅಡೆನೊಸಿನ್ ಪಡೆದ ಮೇಲೆ ಮಗುವಿನ ಹೃದಯ ಬಡಿತ ನಿಧಾನವಾಗಲಿಲ್ಲ. ಶಿಶುವನ್ನು ಮದರ್ಹುಡ್ NICU ಗೆ ವರ್ಗಾಯಿಸಲಾಯಿತು ಮತ್ತು ಹೃದಯ ಬಡಿತವನ್ನು ಕಡಿಮೆ ಮಾಡಲು ದ್ರವರೂಪದಲ್ಲಿ ಇನ್ನೂ 3 ಔಷಧಿಗಳನ್ನು ನಿರಂತರವಾಗಿ ನೀಡಲಾಯಿತು. ಈ ಮಧ್ಯೆ, ಇತರ ಕಾರಣಗಳನ್ನು ತಳ್ಳಿಹಾಕಲು ಮತ್ತು ಹೃದಯದ ಸಾಮಾನ್ಯ ರಚನೆಯನ್ನು ಖಚಿತಪಡಿಸಿಕೊಳ್ಳಲು ಕಾರ್ಡಿಯಾಕ್ ಎಕೋ, ECG ಮತ್ತು ರಕ್ತ ಪರೀಕ್ಷೆಗಳನ್ನು ಮಾಡಲಾಯಿತು. ಬಳಿಕ ತಂಡವು ಕಾರ್ಡಿಯೋವರ್ಟ್ ಲಯಕ್ಕೆ ಆಘಾತ ನೀಡಲು ಮಾಡಿದ ಪ್ರಯತ್ನವೂ ವ್ಯರ್ಥವಾಯಿತು.
ಮದರ್ಹುಡ್ ಹಾಸ್ಪಿಟಲ್ಸ್ ನ ನಿಯೋನಾಟಾಲಜಿಸ್ಟ್ ಮತ್ತು ಪೀಡಿಯಾಟ್ರಿಶಿಯನ್ ಡಾ. ಪ್ರತಾಪ್ ಚಂದ್ರ ಅವರ ನೇತೃತ್ವದ ತಂಡವು ಸುಧಾರಣೆಯ ಯಾವುದೇ ಲಕ್ಷಣಗಳನ್ನು ಕಾಣದಿದ್ದರೂ, ಮಗುವಿನ ದೇಹದ ಉಷ್ಣತೆಯನ್ನು 37o C ಯಿಂದ 33.5o C ಗೆ ಕಡಿಮೆ ಮಾಡಲು ಟೋಟಲ್ ಬಾಡಿ ಕೂಲಿಂಗ್ ತಂತ್ರವನ್ನು ಬಳಸಲು ನಿರ್ಧರಿಸಿ, ಮುನ್ನಡೆಯಿತು. ಜನನದ ಬಳಿಕ ಅಳದ ಹಾಗೂ ಮೆದುಳಿಗೆ ಸಾಕಷ್ಟು ಆಮ್ಲಜನಕ ಪಡೆಯದ ಶಿಶುಗಳನ್ನು ಉಳಿಸಿಕೊಳ್ಳಲು ಈ ಈ ತಂತ್ರವನ್ನು ಸಾಮಾನ್ಯವಾಗಿ ಬಳಸಲಾಗುತ್ತದೆ. ಆದರೂ, SVT ರೋಗನಿರ್ಣಯ ಮಾಡಿದ ಶಿಶುವಿಗೆ ಈ ತಂತ್ರವನ್ನು ಇದೇ ಮೊದಲ ಬಾರಿಗೆ ಬಳಸಲಾಗಿದೆ. ಕೂಲಿಂಗ್ ಹೃದಯ ಬಡಿತವನ್ನು ಗಮನಾರ್ಹವಾಗಿ ಕಡಿಮೆ ಮಾಡಲು ಮತ್ತು ಮಗುವಿನ ಸಾಮಾನ್ಯ ಲಯವನ್ನು ಮರಳಿ ತರಲು ಸಹಾಯ ಮಾಡಿತಲ್ಲದೆ, ಅದರ ಜೀವವನ್ನು ಉಳಿಸಿತು.
ಈ ಮಗು ಈಗ ಪೂರ್ಣವಾಗಿ ಚೇತರಿಸಿಕೊಂಡಿದೆ ಮತ್ತು ಆರೋಗ್ಯವಂತವಾಗಿದೆ. ನಿಯಮಿತ ತಪಾಸಣೆಗಳಿಗೆ ಆಸ್ಪತ್ರೆಗೆ ಭೇಟಿ ನೀಡುತ್ತಿದೆ. ಈ ಮಗುವಿನ ಚೇತರಿಕೆಯ ಶ್ರೇಯವು ಸಕಾಲದಲ್ಲಿ ರೋಗಪತ್ತೆ ಮಾಡಿ, ಸೂಕ್ತ ಚಿಕಿತ್ಸೆ ನೀಡಿದ ತಜ್ಞರ ತಂಡಕ್ಕೆ ಲಭಿಸಿದೆ.
ವೈದ್ಯರ ಪ್ರಯತ್ನದ ಕುರಿತು ಪ್ರತಿಕ್ರಿಯಿಸಿದ ಮದರ್ಹುಡ್ ಹಾಸ್ಪಿಟಲ್ಸ್ CEO ವಿಜಯರತ್ನ ವೆಂಕಟರಾಮನ್, "ಮದರ್ಹುಡ್ನ ತಂಡವು ಯಾವುದೇ ಭೌಗೋಳಿಕ ಅಡೆತಡೆಗಳನ್ನು ಲೆಕ್ಕಿಸದೆ ರೋಗಿಗಳಿಗೆ ಸಕಾಲಿಕ ಹಾಗೂ ಅಗತ್ಯ ವೈದ್ಯಕೀಯ ಸೇವೆಯನ್ನುನ ಒದಗಿಸಲು ಬದ್ಧವಾಗಿದೆ. ರೋಗಿಯ ಆರೋಗ್ಯವೇ ನಮ್ಮ ಪ್ರಧಾನ ಆದ್ಯತೆಯಾಗಿದೆ. ನಮ್ಮ ಪರಿಣಿತ ವೈದ್ಯರು ಮತ್ತು ಸಹಾಯಕ ಸಿಬ್ಬಂದಿಯ ತಂಡವು ತಮ್ಮ ಪರಿಣತಿಯೊಂದಿಗೆ ಈ ಮಗುವಿನ ಜೀವವನ್ನು ಉಳಿಸಿಕೊಂಡಿದ್ದಾರೆ ಎಂಬ ಬಗ್ಗೆ ನಾವು ಹೆಮ್ಮೆಪಡುತ್ತೇವೆ. ಹೆಚ್ಚಿನ ತೀವ್ರತೆಯ ನವಜಾತ ಶಿಶುಗಳಿಗೆ 24/7 ಆರೈಕೆ ನೀಡಿ, ತೊಡಕುಗಳೊಂದಿಗೆ ಜನಿಸಿದ ನವಜಾತ ಶಿಶುಗಳು ಆರೋಗ್ಯವಂತರಾಗುವುದನ್ನು ನಾವು ಖಚಿತಪಡಿಸಿಕೊಳ್ಳುತ್ತೇವೆ. ನಮ್ಮ ನವಜಾತ ಶಿಶುಶಾಸ್ತ್ರ ವಿಭಾಗವು ನಿರಂತರ ಮೇಲ್ವಿಚಾರಣೆ ಮತ್ತು ಆರೈಕೆಯ ಅಗತ್ಯವಿರುವ ನವಜಾತ ಶಿಶುಗಳಿಗೆ ಅತ್ಯಾಧುನಿಕ ಚಿಕಿತ್ಸೆಯನ್ನು ಒದಗಿಸುತ್ತದೆ" ಎಂದು ವಿವರಿಸಿದರು.
ಇದನ್ನೂ ಓದಿ : Basil Seeds: ಕಾಮ ಕಸ್ತೂರಿ ಬೀಜದಲ್ಲಿದೆ ಆರೋಗ್ಯದ ನಿಧಿ.. ಅನೇಕ ರೋಗಗಳಿಗೆ ಇದೇ ಮದ್ದು!
ಬೆಂಗಳೂರಿನ ಮದರ್ಹುಡ್ ಹಾಸ್ಪಿಟಲ್ಸ್ ವೈದ್ಯಕೀಯ ಕಾರ್ಯಾಚರಣೆಗಳ ಮುಖ್ಯಸ್ಥ ಡಾ. ಪಲ್ಲವ್ ಗುಪ್ತಾ ಅವರು NICU ಕಾರ್ಯಕ್ರಮದ ಕುರಿತು ಮಾತನಾಡಿ, “ಮದರ್ಹುಡ್ನಲ್ಲಿ ನವಜಾತ ಶಿಶುಶಾಸ್ತ್ರ ಕಾರ್ಯಕ್ರಮವು ಈ ಪ್ರದೇಶದಲ್ಲೇ ಅತಿ ದೊಡ್ಡದಾಗಿದೆ. ನಾವು 14,000ಕ್ಕೂ ಹೆಚ್ಚು ನವಜಾತ / ಅಕಾಲಿಕವಾಗಿ ಜನಿಸಿದ ಶಿಶುಗಳಿಗೆ ಯಶಸ್ವಿಯಾಗಿ ಚಿಕಿತ್ಸೆ ನೀಡಿದ್ದೇವೆ. ಈ ಪೈಕಿ 40% ಶಿಶುಗಳನ್ನು ಕರ್ನಾಟಕದ ದೂರದ ಪ್ರದೇಶಗಳಿಂದ (ಕೊಪ್ಪಳ, ಹುಬ್ಬಳ್ಳಿ, ಚಿಕ್ಕಮಗಳೂರು, ಅನಂತಪುರ, ಚಿತ್ರದುರ್ಗ, ಬಳ್ಳಾರಿ, ಹಾಸನ, ಕಡಪ ಮತ್ತು ಗದಗ ಮುಂತಾದ ಕಡೆಗಳಿಂದ) ನಮ್ಮ ನಿಯೋನಾಟಲ್ ಟ್ರಾನ್ಸ್ಪೋರ್ಟ್ - 'NICU ಆನ್ ವೀಲ್ಸ್' ಮೂಲಕ ಕರೆತರಲಾಗಿದೆ. ನಮ್ಮ ಸಂಯೋಜಿತ ನಿಯೋನಾಟಾಲಜಿ ತಂಡವು NICU ಬೆಂಬಲದ ಅಗತ್ಯವಿರುವ ಶಿಶುಗಳಿಗೆ ಉತ್ತಮ ಆರೈಕೆಯನ್ನು ನೀಡುತ್ತದೆ.
ಡಾ. ಪ್ರತಾಪ್ ಚಂದ್ರ ಮಾತನಾಡಿ, "ಇದು ಅತ್ಯಂತ ಸವಾಲಿನ ಪ್ರಕರಣಗಳಲ್ಲಿ ಒಂದಾಗಿತ್ತು ಮತ್ತು ಮಗುವಿನ ಜೀವವನ್ನು ಉಳಿಸುವುದು ನಮ್ಮ ಏಕೈಕ ಆದ್ಯತೆಯಾಗಿತ್ತು. SVT ಯು ಪ್ರಮುಖ ಅಂಗಗಳಿಗೆ ರಕ್ತದ ಹರಿವನ್ನು ಅಡ್ಡಿಪಡಿಸುವ ಸ್ಥಿತಿಯಾಗಿದ್ದು, ಕೂಲಿಂಗ್ ತಂತ್ರವು ಮೂಲದ ಚಯಾಪಚಯ ದರವನ್ನು ಕಡಿಮೆ ಮಾಡಲು ಸಹಾಯ ಮಾಡಿತು. ಈ ಮೂಲಕ ಹೆಣ್ಣು ಮಗುವಿನ ಹೃದಯ ಬಡಿತ ಸಹಜ ಸ್ಥಿತಿಗೆ ಮರಳಿತು. ಮಗುವಿಗೆ ಈಗ ಸುಮಾರು 4 ತಿಂಗಳ ವಯಸ್ಸು. ಚೆನ್ನಾಗಿ ಚೇತರಿಸಿಕೊಂಡಿದೆ ಮತ್ತು ತಪಾಸಣೆಗಾಗಿ ಆಸ್ಪತ್ರೆಗೆ ನಿಯಮಿತವಾಗಿ ಭೇಟಿ ನೀಡುತ್ತಿದೆ" ಎಂದು ಹರ್ಷ ವ್ಯಕ್ತಪಡಿಸಿದರು.
ಮಗುವಿನ ಅಜ್ಜಎಂ. ಮರಿಸ್ವಾಮಿ ನಾಯ್ಕ್ ಹರ್ಷ ವ್ಯಕ್ತಪಡಿಸಿ, "ನನ್ನ ಮೊಮ್ಮಗಳಿಗೆ ಚಿಕಿತ್ಸೆ ನೀಡಿ ಅವಳಿಗೆ ಹೊಸ ಜೀವನ ನೀಡಿದ ಮದರ್ಹುಡ್ ಹಾಸ್ಪಿಟಲ್ಸ್ ನ ಇಡೀ ತಂಡಕ್ಕೆ ನಾನು ಹಾಗೂ ನನ್ನ ಕುಟುಂಬ ಚಿರಋಣಿಯಾಗಿದ್ದೇವೆ. ನಾವು ಸಂಪೂರ್ಣವಾಗಿ ಭರವಸೆಯನ್ನು ಕಳೆದುಕೊಂಡಿದ್ದೆವು, ಅವಳನ್ನು ಆ ಸ್ಥಿತಿಯಲ್ಲಿ ನೋಡಿ ಆಘಾತಗೊಂಡಿದ್ದೆವು. ಆಕೆಯನ್ನು ಬೆಂಗಳೂರಿಗೆ ಕರೆತಂದ ವೈದ್ಯರು ಮಗುವನ್ನು ರಕ್ಷಿಸಲು ಹರಸಾಹಸ ಪಟ್ಟರು, ಅದರಲ್ಲಿ ಯಶಸ್ವಿಯೂ ಆದರು" ಎಂದರು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.