ಬೆಂಗಳೂರು : ಹಾಲಿ ಚಾಂಪಿಯನ್ ದಬಾಂಗ್ ಡೆಲ್ಲಿ ಕೆಸಿ ತಂಡ ಯು ಮುಂಬಾ ವಿರುದ್ಧ 41-27 ಅಂತರದಲ್ಲಿ ಜಯ ಗಳಿಸುವ ಮೂಲಕ ವಿವೋ ಪ್ರೋ ಕಬಡ್ಡಿ ಲೀಗ್‌ನ 9ನೇ ಆವೃತ್ತಿಯ ಮೊದಲ ಪಂದ್ಯದಲ್ಲಿ ಜಯದ ಮೂಲಕ ಅಭಿಯಾನ ಆರಂಭಿಸಿದೆ.
ನಾಯಕ ನವೀನ್ ರೈಡಿಂಗ್‌ನಲ್ಲಿ 13 ಅಂಕಗಳನ್ನು ಜವಾಬ್ದಾರಿಯುತ ಆಟವಾಡುವ ಮೂಲಕ ದಬಾಂಗ್ ಡೆಲ್ಲಿ ಪ್ರಥಮ ಹಾಗೂ ದ್ವಿತೀಯಾರ್ಧದಲ್ಲಿ ಪಂದ್ಯದ ಮೇಲೆ ಹಿಡಿತ ಸಾಧಿಸಿತ್ತು. ಚೊಚ್ಚಲ ಪ್ರೋ ಕಬಡ್ಡಿ ಲೀಗ್ ಆಡುತ್ತಿರುವ ಆಶು ಮಲಿಕ್ 7 ಅಂಕಗಳನ್ನು ಗಳಿಸಿ ತಾನೊಬ್ಬ ಭವಿಷ್ಯದ ತಾರೆ ಎಂಬುದನ್ನು ಸಾರಿದರು. ವಿಶಾಲ್, ಕಿಶನ್ ಹಾಗೂ ಸಂದೀಪ್ ತಲಾ 4 ಅಂಕಗಳನ್ನು ಗಳಿಸಿ ಜಯದಲ್ಲಿ ಪ್ರಮುಖ ಪಾತ್ರವಹಿಸಿದರು.
ಇದನ್ನೂ ಓದಿ : BCCI : ಬಿಸಿಸಿಐ ಅಧ್ಯಕ್ಷ ಚುನಾವಣೆಯಿಂದ ಹಿಂದೆ ಸರಿದ ಗಂಗೂಲಿ : ರೆಸ್'ನಲ್ಲಿ ರೋಜರ್ ಬಿನ್ನಿ!
ನವೀನ್ ಎಕ್ಸ್‌ಪ್ರೆಸ್ ಎಂದೇ ಖ್ಯಾತಿ ಪಡೆದಿರುವ ದಬಾಂಗ್ ಡೆಲ್ಲಿ ಕೆಸಿ ತಂಡ ನಾಯಕ ನವೀನ್ ಪ್ರೋ ಕಬಡ್ಡಿ ಲೀಗ್ ಇತಿಹಾಸಲ್ಲಿ 43ನೇ ಬಾರಿಗೆ ಸೂಪರ್ 10 ಅಂಕಗಳನ್ನು ಗಳಿಸಿದ ಸಾಧನೆ ಮಾಡಿದರು.
ಇನ್ನೊಂದೆಡೆ ಯು ಮುಂಬಾ ತಂಡ ಎರಡು ಬಾರಿ ಆಲೌಟ್ ಆಗುವ ಮೂಲಕ ಚಾಂಪಿಯನ್ ಡೆಲ್ಲಿ ತಂಡಕ್ಕೆ ದಿಟ್ಟ ಉತ್ತರ ನೀಡುವಲ್ಲಿ ವಿಫಲವಾಯಿತು. ತಂಡದ ಪರ ಆಶೀಶ್ 7 ಅಂಕಗಳನ್ನು ಗಳಿಸಿ ಗಮನ ಸೆಳೆದರು. ನಾಯಕ ಸರೀಂದರ್ ಸಿಂಗ್ ತನ್ನ ಜವಾಬ್ದಾರಿಯನ್ನು ಸಮರ್ಪಕವಾಗಿ ನಿಭಾಯಿಸದ ಕಾರಣ ಹಿನ್ನೆಡೆಗೆ ಪ್ರಮುಖ ಕಾರಣವಾಯಿತು.
ಪ್ರಥಮಾರ್ಧದಲ್ಲಿ ಡೆಲ್ಲಿ 19-10 ಮುನ್ನಡೆ
ನಾಯಕ ನವೀನ್ ಕುಮಾರ್ ರೈಡಿಂಗ್‌ನಲ್ಲಿ 8 ಅಂಕಗಳನ್ನು ಗಳಿಸುವುದರೊಂದಿಗೆ ಹಾಲಿ ಚಾಂಪಿಯನ್ ದಬಾಂಗ್ ಡೆಲ್ಲಿ ತಂಡ ಯು ಮುಂಬಾ ವಿರುದ್ಧದ ಮೊದಲ ಪಂದ್ಯದ ಪ್ರಥಮಾರ್ಧದಲ್ಲಿ 19-10 ಅಂತರದಲ್ಲಿ ಮೇಲುಗೈ ಸಾಧಿಸಿತು. ವಿಶಾಲ್, ಕಿಶನ್ ಹಾಗೂ ಸಂದೀಪ್ ತಲಾ 2 ಅಂಕಗಳನ್ನು ಗಳಿಸಿ ತಂಡದ ಮುನ್ನಡೆಗೆ ನೆರವಾದರು. ಯು ಮುಂಬಾ ತಂಡದಲ್ಲಿ ಹೊಂದಾಣಿಕೆಯ ಕೊರತೆ ಸ್ಪಷ್ಟವಾಗಿತ್ತು. ಯಶಸ್ಸಿನ ರೈಡ್ ಅಥವಾ ಟ್ಯಾಕಲ್ ಕಂಡು ಬರಲಿಲ್ಲ. ಗುಮಾನ್ ಸಿಂಗ್ ಹಾಗೂ ಆಶೀಶ್ ತಲಾ 3 ಅಂಕಗಳನ್ನು ಗಳಿಸಿ ತಂಡದ ಗೌರವ ಕಾಪಾಡಿದರು.
ಆರಂಭದಲ್ಲೇ ಯು ಮುಂಬಾ ಆಲೌಟ್
ನಾಯಕ ನವೀನ್ ಕುಮಾರ್ ಅವರು 4 ಅಂಕಗಳನ್ನು ಗಳಿಸುವ ಮೂಲಕ ದಬಾಂಗ್ ಡೆಲ್ಲಿ ಕೆಸಿ ಆರಂಭದಲ್ಲೇ ಎದುರಾಳಿ ಯು ಮುಂಬಾವನ್ನು ಆಲೌಟ್ ಮಾಡಿ ಚಾಂಪಿಯನ್ ರೀತಿಯಲ್ಲೇ ಆರಂಭ ಕಂಡಿತು. ಯು ಮುಂಬಾ ಆಲೌಟ್ ಆದಾಗ ಅಂಕ 11-2 ಆಗಿತ್ತು. ಬಲ ಬದಿಯಲ್ಲಿ ಸಂದೀಪ್ ಧುಲ್ ಎರಡು ಅದ್ಭುತ ಟ್ಯಾಕಲ್ ಮೂಲಕ 2 ಅಂಕಗಳನ್ನು ಆರಂಭದಲ್ಲೇ ಗಳಿಸಿ ತಂಡದ ಆತ್ಮವಿಶ್ವಾಸವನ್ನು ಹೆಚ್ಚಿಸಿದರು. ಡಿಫೆಂಡರ್ ವಿಶಾಲ್ 2 ಅಂಕಗಳನ್ನು ಗಳಿಸಿ ಎದುರಾಳಿ ಯು ಮುಂಬಾ ಆಲೌಟ್ ಆಗುವಲ್ಲಿ ಪ್ರಮುಖ ಪಾತ್ರವಹಿಸಿದರು.
ಇದನ್ನೂ ಓದಿ : IND W vs PAK W : ಏಷ್ಯಾ ಕಪ್ 2022 ರಲ್ಲಿ ಟೀಂ ಇಂಡಿಯಾಗೆ ಪಾಕ್ ವಿರುದ್ಧ ಸೋಲು!
ಇನ್ನೂ ವಿವೋ ಪ್ರೋ ಕಬಡ್ಡಿ ಲೀಗ್‌ನ 9ನೇ ಆವೃತ್ತಿಗೆ ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಭವ್ಯ ಚಾಲನೆ ಸಿಕ್ಕಿತು. ಹಾಲಿ ಚಾಂಪಿಯನ್ ದಬಾಂಗ್ ಡೆಲ್ಲಿ ಕೆಸಿ ಹಾಗೂ ಎರಡನೇ ಆವೃತ್ತಿಯ ಚಾಂಪಿಯನ್ ಯು ಮುಂಬಾ ತಂಡಗಳು ಮೊದಲ ಪಂದ್ಯದಲ್ಲಿ ಮುಖಾಮುಖಿಯಾದವು. ನವೀನ್ ಎಕ್ಸ್‌ಪ್ರೆಸ್ ಖ್ಯಾತಿಯ ನವೀನ್ ದಬಾಂಗ್ ಡೆಲ್ಲಿ ತಂಡದ ನಾಯಕನಾಗಿ ಅಂಗಣಕ್ಕಿಳಿದರು. ಡೆಲ್ಲಿ ತಂಡದಲ್ಲಿ ಸಾಮಾನ್ಯ ಆಟಗಾರನಾಗಿ ಮಿಂಚಿದ್ದ ನವೀನ್ ಈ ಬಾರಿ ನಾಯಕನಾಗಿ ಅಂಗಣದಲ್ಲಿ ಕಾಣಿಸಿಕೊಂಡರು. ಯು ಮುಂಬಾ ತಂಡದ ನಾಯಕರಾಗಿ ಸುರೇಂದರ್ ಸಿಂಗ್ ತಂಡವನ್ನು ಮುನ್ನಡೆಸಿದರು.
ಟಾಸ್ ಗೆದ್ದ ಯು ಮುಂಬಾ ರೈಡಿಂಗ್ ಆಯ್ಕೆಮಾಡಿಕೊಂಡಿತು. ಕರ್ನಾಟಕದ ರಿಯಾಲಿಟಿ ಶೋನಲ್ಲಿ ಜನಮನ ಗೆದ್ದ ಪುಟ್ಟ ತಾರೆ ವಂಶಿಕಾ ಅಂಜನಿ ಕಶ್ಯಪ್ ಅವರು ರಾಷ್ಟ್ರಗೀತೆಯನ್ನು ಹಾಡಿದ್ದು ಆರಂಭಕ್ಕೆ ಮೆರುಗು ನೀಡಿದಂತಿತ್ತು.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.