ಕ್ಯಾನ್ಸರ್ ಮಹಾಮಾರಿ ಗೆದ್ದ ಯುವ’ರಾಜ್ ನ ಸ್ಪೂರ್ತಿದಾಯಕ ಕಥನ

ವಿಶ್ವಕಪ್‌ ಹೀರೋ, ಸಿಕ್ಸರ್‌ ಕಿಂಗ್‌, ದಾಖಲೆಗಳ ಸರದಾರ, ಹೀಗೆ ನಾನಾ ಹೆಸರಲ್ಲಿ ಭಾರತೀಯ ಕ್ರಿಕೆಟ್‌ ಪ್ರೇಮಿಗಳ ಮನದಲ್ಲಿ ಮನೆಮಾಡಿರುವ ಆಟಗಾರ ಯುವರಾಜ್‌ ಸಿಂಗ್‌. 2007,2011 ರ ವಿಶ್ವಕಪ್‌ ಗೆಲುವಿನ ರುವಾರಿ ಈ ಹೀರೋ. ಒಮ್ಮೆ ಕ್ರಿಸ್‌ಗೆ ಅಂಟಿಕೊಂಡ್ರೆ ಸಾಕು ಅದೆಂಥಾ ಬೌಲರ್‌ಗೂ ಬೆವರಿಳಿಸಿಬಿಡುತ್ತಿದ್ದ.ಭಾರತ ಕಂಡ ಶೇಷ್ಠ ಆಟಗಾರರ ಪಟ್ಟಿಯಲ್ಲಿ ಖಂಡಿತ ಈ ಆಟಗಾರನ ಹೆಸರು ಇದ್ದೇ ಇರುತ್ತೆ.

Written by - MALLIKARJUN PATIL | Edited by - Manjunath N | Last Updated : Jan 16, 2023, 09:06 PM IST
  • ಟೀಂ ಇಂಡಿಯಾ ವಿಶ್ವಕಪ್‌ ಹೀರೋ, ಸಿಕ್ಸರ್‌ ಕಿಂಗ್‌ ಯುವರಾಜ್‌ಸಿಂಗ್‌
  • ಸ್ಟುವರ್ಟ್ ಬ್ರಾಡ್‌ಗೆ 6 ಎಸೆತಗಳಲ್ಲಿ 6 ಸಿಕ್ಸರ್‌ ಬಾರಿಸಿದ್ದ ಯುವರಾಜ್‌ಸಿಂಗ್
  • ಕ್ಯಾನ್ಸರ್‌ ಗೆದ್ದು ಯುವ ಮನಸ್ಸುಗಳಿಗೆ ಸ್ಫೂರ್ತಿಯಾಗಿರುವ ಕ್ರಿಕೆಟಿಗ
ಕ್ಯಾನ್ಸರ್ ಮಹಾಮಾರಿ ಗೆದ್ದ ಯುವ’ರಾಜ್ ನ ಸ್ಪೂರ್ತಿದಾಯಕ ಕಥನ title=

ವಿಶ್ವಕಪ್‌ ಹೀರೋ, ಸಿಕ್ಸರ್‌ ಕಿಂಗ್‌, ದಾಖಲೆಗಳ ಸರದಾರ, ಹೀಗೆ ನಾನಾ ಹೆಸರಲ್ಲಿ ಭಾರತೀಯ ಕ್ರಿಕೆಟ್‌ ಪ್ರೇಮಿಗಳ ಮನದಲ್ಲಿ ಮನೆಮಾಡಿರುವ ಆಟಗಾರ ಯುವರಾಜ್‌ ಸಿಂಗ್‌. 2007,2011 ರ ವಿಶ್ವಕಪ್‌ ಗೆಲುವಿನ ರುವಾರಿ ಈ ಹೀರೋ. ಒಮ್ಮೆ ಕ್ರಿಸ್‌ಗೆ ಅಂಟಿಕೊಂಡ್ರೆ ಸಾಕು ಅದೆಂಥಾ ಬೌಲರ್‌ಗೂ ಬೆವರಿಳಿಸಿಬಿಡುತ್ತಿದ್ದ.ಭಾರತ ಕಂಡ ಶೇಷ್ಠ ಆಟಗಾರರ ಪಟ್ಟಿಯಲ್ಲಿ ಖಂಡಿತ ಈ ಆಟಗಾರನ ಹೆಸರು ಇದ್ದೇ ಇರುತ್ತೆ.

ಮರೆಯಲಾಗದ ಆ 6 ಸಿಕ್ಸರುಗಳ ನೆನಪು..

2007ರ ವಿಶ್ವಕಪ್‌... ಇಂಗ್ಲೆಂಡ್‌ ವಿರುದ್ಧದ ಪಂದ್ಯ ಭಾರತೀಯ ಕ್ರಿಕೆಟ್‌ ಅಭಿಮಾನಿಗಳು ಎಂದಿಗೂ ಮರೆಯಲಾಗದ ದಿನ ಅಂದ್ರೆ ತಪ್ಪಾಗಲ್ಲ. ಪ್ಲಿಂಟಾಪ್‌ ಕಿರಿಕ್‌ಗೆ ಸರಿಯಾಗಿ ಉತ್ತರ ನೀಡಿದ್ದ ಯುವಿ ಸ್ಟುವರ್ಟ್‌ ಬ್ರಾಡ್‌ ಬೌಲಿಂಗ್‌ನಲ್ಲಿ 6 ಎಸೆತಗಳಲ್ಲಿ 6 ಸಿಕ್ಸ  ಬಾರಿಸಿ ಹೊಸ ಇತಿಹಾಸ ಸೃಷ್ಟಿ ಮಾಡಿದ್ದ.ಅಂದು ಭಾರತದ ಕ್ರಿಕೆಟ್‌ ಪ್ರೇಮಿಗಳ ಸಂಭ್ರಮವಂತೂ ಮುಗಿಲು ಮುಟ್ಟಿತ್ತು. ಇಂತಹ ನೂರಾರು ಪಂದ್ಯಗಳಲ್ಲಿ ಟೀಂ ಇಂಡಿಯಾಗೆ ಆಸೆರೆಯಾಗಿದ್ದ ಯುವಿ ಕ್ರಿಕೆಟ್‌ ಸಾಧನೆ ಎಂಥವರನ್ನು ಸೆಳೆಯುತ್ತದೆ.

ಇದನ್ನೂ ಓದಿ: ಕೇಂದ್ರ ಸಚಿವ ನಿತಿನ್ ಗಡ್ಕರಿಯವರಿಗೆ ಬೆದರಿಕೆ ಕರೆ; ಸಂಪೂರ್ಣ ತನಿಖೆ: ಸಿಎಂ ಬೊಮ್ಮಾಯಿ

ಅಂತರಾಷ್ಟ್ರೀಯ ಏಕದಿನ ಪಂದ್ಯಗಳಲ್ಲಿ ಯುವರಾಜ್‌ ಸಿಂಗ್‌ ಸಾಧನೆ ನೋಡಿದ್ರೆ 304 ಏಕದಿನ ಪಂದ್ಯಗಳನ್ನು ಆಡಿರುವ ಅವರು, 8701 ರನ್‌ ಗಳಿಸಿದ್ದಾರೆ. 150 ರನ್‌ ಇವರ ವೈಯಕ್ತಿಕ ಅತಿ ಹೆಚ್ಚು ರನ್‌ ಆಗಿದ್ದು, 86.67ರ ಸ್ಟ್ರೈಕ್‌ ರೇಟ್‌ನಲ್ಲಿ ಬ್ಯಾಟ್‌ ಬೀಸಿದ್ದಾರೆ. ಒಟ್ಟು 14 ಶತಕ ಹಾಗೂ 54 ಅರ್ಧಶತಕ ಸಿಡಿಸಿರುವ ಯುವಿ, ಏಕದಿನ ಪಂದ್ಯಗಳಲ್ಲಿ ಟೀಂ ಇಂಡಿಯಾದ ಮಧ್ಯಮ ಕ್ರಂಮಾಕದ ಬ್ಯಾಟಿಂಗ್‌ ಆಧಾರ ಸ್ತಂಬವಾಗಿದ್ದರು. ಇನ್ನೂ 40 ಟೆಸ್ಟ್‌ ಪಂದ್ಯಗಳನ್ನು ಆಡಿರುವ ಯುವರಾಜ್ ಸಿಂಗ್‌ 62 ಇಂನಿಂಗ್ಸ್‌ಗಳ ಪೈಕಿ 1,900 ರನ್‌ ಗಳಿಸಿದ್ದಾರೆ.169 ಇವರ ಗರಿಷ್ಠ ಮೊತ್ತವಾಗಿದ್ದು, 33.92 ಸರಾಸರಿಯಲ್ಲಿ, 57.97 ಸ್ರ್ಟೈಕ್‌ ರೇಟ್‌ನಲ್ಲಿ ಬ್ಯಾಟ್‌ ಬೀಸಿದ್ದಾರೆ. ಟೆಸ್ಟ್‌ ಪಂದ್ಯಗಳ ಪೈಕಿ 3 ಶತಕ ಹಾಗೂ 11 ಅರ್ಧಶತಕ ಸಿಡಿಸಿದ್ದಾರೆ. ಇನ್ನೂ ಚುಟುಕು ಕ್ರಿಕೆಟ್‌ನಲ್ಲಿ ತಮ್ಮದೇ ಅಭಿಮಾನಿ ಬಳಗ ಹೊಂದಿದ್ದ ಯುವರಾಜ್‌, 58 ಪಂದ್ಯಗಳ ಪೈಕಿ 1,177 ರನ್‌ ಕಲೆಹಾಕಿದ್ದಾರೆ. 77 ರನ್‌ ಇವರ ವಯಕ್ತಿಕ ಗರಿಷ್ಠ ರನ್‌ ಆಗಿದ್ದು, 136.38ರ ಸ್ರ್ಟೈಕ್‌ರೇಟ್‌ನಲ್ಲಿ ಬ್ಯಾಟ್‌ ಬೀಸಿದ್ದಾರೆ.28.02 ಸರಾಸರಿ ಹೊಂದಿರುವ ಯುವರಾಜ್‌ ಸಿಂಗ್‌ ಟಿ-20 ಗೇಮ್‌ಗಳ ಕಿಂಗ್‌ ಎನಿಸಿಕೊಂಡಿದ್ದರು.

ಇನ್ನೂ ಬ್ಯಾಟಿಂಗ್‌ ಅಷ್ಟೇ ಅಲ್ಲದೇ ಬೌಲಿಂಗ್‌ನಲ್ಲೂ ಭರ್ಜರಿ ಪ್ರದರ್ಶನ ತೋರಿರುವ ಯುವರಾಜ್‌ ಸಿಂಗ್‌ 304 ಏಕದಿನ ಪಂದ್ಯಗಳ ಫೈಕಿ 111 ವಿಕೆಟ್‌ ಕಬಳಿಸಿದ್ದಾರೆ. 31 ರನ್‌ ನೀಡಿ 5 ವಿಕೆಟ್‌ ಗಳಿಸಿದ್ದು ಇವರ ಉತ್ತಮ ಬೌಲಿಂಗ್‌ ಸಾಧನೆಯಾಗಿದೆ. ಇನ್ನೂ ಟೆಸ್ಟ್‌ ಪಂದ್ಯಗಳ ಪೈಕಿ 40 ಪಂದ್ಯಗಳಲ್ಲಿ 9 ವಿಕಟ್‌ ಪಡೆದಿದ್ದಾರೆ. 9 ರನ್‌ ನೀಡಿ 2 ವಿಕೆಟ್‌ ಪಡೆದಿದ್ದು ಇವರ ಉತ್ತಮ ಟೆಸ್ಟ್‌ ಬೌಲಿಂಗ್‌ ಸಾಧನೆಯಾಗಿದೆ, ಇನ್ನೂ ಟಿ-20 ಪಂದ್ಯಗಳಲ್ಲೂ ಕೂಡ ಬೌಲಿಂಗ್‌ನಲ್ಲಿ ತಂಡಕ್ಕೆ ಆಸರೆಯಾಗುತ್ತಿದ್ದ ಯುವಿ 58 ಪಂದ್ಯಗಳ ಪೈಕಿ 28 ವಿಕೆಟ್‌ ಪಡೆದು ಮಿಂಚಿದ್ದಾರೆ. 17 ರನ್‌ಗೆ 3 ವಿಕೆಟ್‌ ಪಡೆದಿದ್ದು ಇವರ ಟಿ-20 ಗೇಮ್‌ನಲ್ಲಿ ಉತ್ತಮ ಬೌಲಿಂಗ್‌ ಪ್ರದರ್ಶವಾಗಿದೆ.

12 ಡಿಸೆಂಬರ್‌ 1981 ರಲ್ಲಿ ಪಂಜಾಬಿ ಸಿಖ್ ಕುಟುಂಬದಲ್ಲಿ ಯೋಗರಾಜ್ ಸಿಂಗ್ ಮತ್ತು ಶಬನಮ್ ಸಿಂಗ್ ದಂಪತಿ ಮಗನಾಗಿ ಯುವರಾಜ್‌ ಸಿಂಗ್ ಜನಿಸಿದರು.‌  ಯುವರಾಜ್ ಸಿಂಗ್‌ಗೆ ಬಾಲ್ಯದಲ್ಲಿ ಟೆನಿಸ್ ಮತ್ತು ರೋಲರ್ ಸ್ಕೇಟಿಂಗ್ ಅಚ್ಚುಮೆಚ್ಚಿನ ಕ್ರೀಡೆಯಾಗಿತ್ತು ಮತ್ತು ಅವರು ಎರಡರಲ್ಲೂ ಸಾಕಷ್ಟು ಉತ್ತಮ ಆಡುತ್ತಿದ್ರು. ಅವರು ರಾಷ್ಟ್ರೀಯ ಅಂಡರ್-14 ರೋಲರ್ ಸ್ಕೇಟಿಂಗ್ ಚಾಂಪಿಯನ್‌ಶಿಪ್ ಕೂಡ ಗೆದ್ದಿದ್ದರು. ಪದಕವನ್ನು ತಂದೆಗೆ ತಂದು ತೋರಿಸಿದಾಗ ಅದನ್ನ ಕೋಪದಿಂದ ಹೊರಗೆ ಎಸೆದಿದ್ರಂತೆ. ತದನಂತರ ತಮ್ಮ ಇಷ್ಟದ ಕ್ರಿಡೆಗಳನ್ನು ತ್ಯಜಿಸಿ ಬಾಲ್ಯದ ಹಂತದಲ್ಲಿ ಕ್ರಿಕಟ್‌ ಕಡೆಗೆ ಹೆಚ್ಚಿನ ಗಮನ ಹರಿಸಿದ್ರು ಯುವರಾಜ್‌ ಸಿಂಗ್. ಚಂಡೀಗಢದ ಡಿಎವಿ ಪಬ್ಲಿಕ್ ಸ್ಕೂಲ್‌ನಲ್ಲಿ ಬಾಲ್ಯದ ವಿದ್ಯಾಬ್ಯಾಸ ಮಾಡಿದ್ದ ಯುವರಾಜ್‌ ಸಿಂಗ್‌ ಪಂಜಾಬ್ ವಿಶ್ವವಿದ್ಯಾನಿಲಯದ DAV ಕಾಲೇಜಿನಲ್ಲಿ ವಾಣಿಜ್ಯಶಾಸ್ತ್ರದಲ್ಲಿ ಪದವಿಯನ್ನು ಪೂರ್ಣಗೊಳಿಸಿದರು.

1995-96 ನವೆಂಬರ್‌ನಲ್ಲಿ ತಮ್ಮ ವೃತ್ತಿ ಜೀವನ ಆರಂಭಿಸಿದ ಯುವರಾಜ್‌ಸಿಂಗ್‌ ಪಂಜಾಬ್ ಅಂಡರ್-16 ತಂಡದ ಪರವಾಗಿ ಕಣಕ್ಕಿಳಿದಿದ್ದರು. ಈ ವೇಳೆ ಜಮ್ಮು ಮತ್ತು ಕಾಶ್ಮೀರ ಜೊತೆಗಿನ ಪಂದ್ಯದಲ್ಲಿ ಉತ್ತಮ ಬ್ಯಾಟಿಂಗ್‌ ಪ್ರದರ್ಶನ ಮಾಡಿದ್ರು. ನಂತರ ಅಂಡರ್‌ 16 ಪಂದ್ಯಗಳ ಉತ್ತಮ ಪ್ರದರ್ಶನ ನಂತರ 1996-97ರಲ್ಲಿ ಯುವರಾಜ್‌ ಅಂಡರ್‌ 19 ತಂಡಕ್ಕೆ ಆಯ್ಕೆಯಾಗಿದ್ದರು. ಹಿಮಾಚಲ ಪ್ರದೇಶ ಅಂಡರ್-19 ತಂಡದ ವಿರುದ್ಧ ನಡೆದ ಪಂದ್ಯದಲ್ಲಿ ಔಟಾಗದೆ 137 ರನ್ ಗಳಿಸಿದರು.ಯುವರಾಜ್ 1997-98 ರ ರಣಜಿ ಟ್ರೋಫಿಯಲ್ಲಿ ಒರಿಸ್ಸಾ ವಿರುದ್ಧ 1997 ರ ಕೊನೆಯಲ್ಲಿ ಪ್ರಥಮ ದರ್ಜೆಗೆ ಪಾದಾರ್ಪಣೆ ಮಾಡಿದರು. ಆದರೆ ಇನ್ನಿಂಗ್ಸ್‌ನಲ್ಲಿ ಡಕ್‌ಗೆ ಔಟಾದರು. ಫೆಬ್ರವರಿ 1999 ರಲ್ಲಿ ಭಾರತದಲ್ಲಿ ನಡೆದ ಶ್ರೀಲಂಕಾ ಅಂಡರ್-19 ವಿರುದ್ಧದ ಸರಣಿಯಲ್ಲಿ ಯುವರಾಜ್ ಭಾರತವನ್ನು ಪ್ರತಿನಿಧಿಸಿದರು. ಮೂರನೇ ODI ನಲ್ಲಿ, ಯುವರಾಜ್ 55 ಎಸೆತಗಳಲ್ಲಿ 89 ರನ್ ಗಳಿಸಿದರು. 1999-2000 ರಣಜಿ ಟ್ರೋಫಿಯಲ್ಲಿ, ಅವರು ಹರಿಯಾಣ ವಿರುದ್ಧ 149 ರನ್ ಗಳಿಸಿದರು. 1995ರಲ್ಲಿ ತಮ್ಮ 13ನೇ ವರ್ಷಕ್ಕೆ ಪಂಜಾಬ್ ನ 16 ವಯೋಮಿತಿ ತಂಡದ ಪರವಾಗಿ ಆಡಿದ ಯುವಿ, ಬಿಹಾರ ವಿರುದ್ಧ ನಡೆದ 19 ವಯೋಮಿತಿ ಕೂಚ್ ಬೆಹಾರ್ ಟ್ರೋಫಿಯಲ್ಲಿ358 ರನ್ ಸಿಡಿಸಿದ್ದರು. ಕ್ರಿಕೆಟ್ ಜಗತ್ತಿಗೆ ಯುವರಾಜ್ ಸಿಂಗ್ ಅನ್ನುವ ಹೆಸರು ಗೊತ್ತಾಗಿದ್ದು ಈ ಪಂದ್ಯದ ಬಳಿಕ.

ಇದನ್ನೂ ಓದಿ: "ಸುಳ್ಳು ಹೇಳದೇ ಬಿಜೆಪಿಯವರು ಬದುಕಲು ಸಾಧ್ಯವಿಲ್ಲ"

ಯುವರಾಜ್ ಅಂಡರ್-19 ತಂಡದಲ್ಲಿ ಉತ್ತಮ ಪ್ರದರ್ಶನದ ಹಿನ್ನೆಲೆಯಲ್ಲಿ 2000ನೇ ವರ್ಷದಲ್ಲಿ ಐಸಿಸಿ ನಾಕ್‌ಔಟ್ ಟ್ರೋಫಿಗೆ ಭಾರತೀಯ ತಂಡದಲ್ಲಿ ಆಯ್ಕೆಯಾದರು. ಪ್ರೀ-ಕ್ವಾರ್ಟರ್‌ ಫೈನಲ್‌ನಲ್ಲಿ ಕೀನ್ಯಾ ವಿರುದ್ಧ ಅಂತಾರಾಷ್ಟ್ರೀಯ ಪಂದ್ಯಕ್ಕೆ ಪಾದಾರ್ಪಣೆ ಮಾಡಿದರು. ನಾಲ್ಕು ಓವರ್‌ಗಳನ್ನು ಬೌಲ್ ಮಾಡಿದ ಅವರು 16 ರನ್‌ಗಳನ್ನು ಬಿಟ್ಟುಕೊಟ್ಟರು ಆದರೆ ಬ್ಯಾಟಿಂಗ್‌ನಲ್ಲಿ ಅಂದು ಯುವಿಗೆ ಅವಕಾಶ ಸಿಗಲಿಲ್ಲ. ಆದ್ರೆ ಮುಂಬರುವ ಸರಣಿಯಲ್ಲಿ ಆಸ್ಟ್ರೇಲಿಯಾ ವಿರುದ್ಧದ ಕ್ವಾರ್ಟರ್‌ಫೈನಲ್ ಪಂದ್ಯದಲ್ಲಿ, ಗ್ಲೆನ್ ಮೆಕ್‌ಗ್ರಾತ್, ಬ್ರೆಟ್ ಲೀ ಮತ್ತು ಜೇಸನ್ ಗಿಲ್ಲೆಸ್ಪಿ ಅವರ ವೇಗದ ದಾಳಿಯ ವಿರುದ್ಧ ಯುವರಾಜ್ 80 ಎಸೆತಗಳಲ್ಲಿ 84 ರನ್‌ಗಳ ತನ್ನ ಇನ್ನಿಂಗ್ಸ್‌ಗಾಗಿ ಪಂದ್ಯ ಪುರುಷೋತ್ತಮರಾದರು, ಅದು ಭಾರತವನ್ನು 20 ರನ್‌ಗಳಿಂದ ಗೆಲ್ಲಲು ಸಹಾಯ ಮಾಡಿತು. ದಕ್ಷಿಣ ಆಫ್ರಿಕಾ ವಿರುದ್ಧದ ಸೆಮಿಫೈನಲ್‌ನಲ್ಲಿ, ಅವರು 41 ರನ್ ಗಳಿಸಿದರು ಮತ್ತು ಬೌಲಿಂಗ್‌ನಲ್ಲೂ ಕೂಡ 15 ರನ್‌ ನೀಡಿ 1 ವಿಕೆಟ್‌ ಪಡೆದರು. ಶ್ರೀಲಂಕಾದಲ್ಲಿ 2001 ರ ಕೋಕಾ-ಕೋಲಾ ಕಪ್ ಸರಣಿಯಲ್ಲಿ ಶ್ರೀಲಂಕಾ ವಿರುದ್ಧ ನಿರ್ಣಾಯಕ ಪಂದ್ಯದಲ್ಲಿ 98* ರನ್ ಗಳಿಸಿದರು. ಜೊತೆಗೆ ಈ ಸರಣಿಯಲ್ಲಿ 8 ವಿಕೆಟ್‌ ಗಳಿಸುವದರೊಂದಿಗೆ ತಾನೊಬ್ಬ ಉತ್ತಮ ಆಲ್‌ರೌಂಡರ್‌ ಆಟಗಾರ ಅನ್ನೋದನ್ನು ತೋರಿಸಿಕೊಟ್ಟಿದ್ದರು. ನಂತರ ಅಂತರಾಷ್ಟ್ರೀಯ ಪಂದ್ಯಗಳಲ್ಲಿ ಖಾಯಂ ಆಟಗಾರನಾಗಿ ಗುರುತಿಸಿಕೊಂಡ ಅವರು ಟೀಂ ಇಂಡಿಯಾ ಪ್ರಮುಖ ಆಟಗಾರನಾಗಿ ಗುರುತಿಸಿಕೊಂಡರು.

ಜುಲೈ 13, 2002ರ ನ್ಯಾಟ್‌ವೆಸ್ಟ್ ಟ್ರೋಫಿ ಫೈನಲ್‌ನಲ್ಲಿ ಮೆನ್ ಇನ್ ಬ್ಲೂ ಇಂಗ್ಲೆಂಡ್ ತಂಡದೊಂದಿಗೆ ಸೆಣಸಾಡಿ ವಿರೋಚಿತ ಗೆಲುವು ಸಾಧಿಸಿತ್ತು. ನಾಯಕ ಸೌರವ್ ಗಂಗೂಲಿ ಅಂದು ತಮ್ಮ ಜರ್ಸಿ ಕಳಿಚಿ ಸಂಭ್ರಮ ಪಟ್ಟಿದ್ರು. ಇಂಗ್ಲೆಂಡ್ ವಿರುದ್ಧದ ಈ ಪ್ರಸಿದ್ಧ ವಿಜಯ ಇಂದಿಗೂ ಕ್ರಿಕೆಟ್‌ ಅಭಿಮಾನಿಗಳು ಮರೆಯಲು ಸಾಧ್ಯವಿಲ್ಲ. ಇಂಗ್ಲೆಂಡ್‌ ಆರಂಭಿಕ ಆಟಗಾರ ಮಾರ್ಕಸ್ ಟ್ರೆಸ್ಕೊಥಿಕ್ ಮತ್ತು ನಾಯಕ ನಾಸಿರ್ ಹುಸೇನ್ ಆತಿಥೇಯರ ಪರವಾಗಿ ಶತಕಗಳನ್ನು ಗಳಿಸಿದರು. ಇವರಿಬ್ಬರ ಅಬ್ಬರ ಬ್ಯಾಟಿಂಗ್‌ನಿಂದ ಭಾರತ 326ರನ್‌ಗಳ ಗುರಿ ಪಡೆಯಿತು. ಇದಕ್ಕೆ ಪ್ರತ್ಯುತ್ತರವಾಗಿ ಭಾರತ ತಂಡ, ಸೌರವ್ ಗಂಗೂಲಿ ಮತ್ತು ವೀರೇಂದ್ರ ಸೆಹ್ವಾಗ್ ಅವರು ಮೊದಲ 15 ಓವರ್‌ಗಳಲ್ಲಿ 106 ರನ್‌ಗಳನ್ನು ಬಾರಿಸುವ ಮೂಲಕ ಇಂಗ್ಲೆಂಡ್ ಬೌಲಿಂಗ್ ದಾಳಿಯನ್ನು ಉತ್ತಮವಾಗಿ ಎದುರಿಸಿತ್ತು. ನಂತರ 146 ರನ್‌ಗಳಿಗೆ ಪ್ರಮುಖ 5 ವಿಕೆಟ್ ಕಳೆದುಕೊಂಡಿತ್ತು. ಆಗ ಯುವ ಬ್ಯಾಟ್ಸ್‌ಮನ್‌ಗಳಾದ ಯುವರಾಜ್ ಸಿಂಗ್ ಮತ್ತು ಮೊಹಮ್ಮದ್ ಕೈಫ್ ಭಾರತವನ್ನು ನ್ಯಾಟ್‌ವೆಸ್ಟ್ ಟ್ರೋಫಿಗೆ ಎತ್ತಿ ಹಿಡಿಯಲು 121 ರನ್‌ಗಳ ಜೊತೆಯಾಟವನ್ನು ಆಡಿದರು. ಕೊನೆಯಲ್ಲಿ ಜಹೀರ್ ಖಾನ್ ಎರಡು ಬಾರಿ ಚೆಂಡನ್ನು ಬೌಂಡರಿ ಗೆರೆ ದಾಟಿಸುವ ಮೂಲಕ ಇಂಗ್ಲೆಂಡ್‌ಗೆ ಸೋಲಿನ ರುಚಿ ತೋರಿಸಿದರು. ಫೈನಲ್‌ನಲ್ಲಿ ವೀರೋಚಿತ ಇನ್ನಿಂಗ್ಸ್‌ಗಾಗಿ ಮೊಹಮ್ಮದ್ ಕೈಫ್ ಪಂದ್ಯಶ್ರೇಷ್ಠ ಆಟಗಾರ ಪ್ರಶಸ್ತಿ ಪಡೆದುಕೊಂಡರು. ಆದ್ರೆ ಈ ಪಂದ್ಯದಲ್ಲಿ ಯುವರಾಜ್‌ ಪ್ರದರ್ಶನ ಅತಿ ಉತ್ತಮವಾಗಿ ಮೂಡಿಬಂದಿತ್ತು.

ದಕ್ಷಿಣ ಆಫ್ರಿಕಾದ ಡರ್ಬನ್‌ನಲ್ಲಿ ನಡೆದ ಚೊಚ್ಚಲ ಟ್ವೆಂಟಿ-20 ವಿಶ್ವಕಪ್ ಕ್ರಿಕೆಟ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಭಾರತದ ಸ್ಟೈಲಿಷ್ ಬ್ಯಾಟ್ಸ್‌ಮನ್ 'ಸಿಕ್ಸರ್ ಕಿಂಗ್' ಯುವರಾಜ್ ಸಿಂಗ್ ಓವರ್‌ವೊಂದರ ಆರು ಎಸೆತಗಳನ್ನು ಸಿಕ್ಸರ್‌ಗಟ್ಟುವ ಮೂಲಕ ವಿಶೇಷ ದಾಖಲೆ ಬರೆದಿದ್ದರು. ಇಂಗ್ಲೆಂಡ್ ಬಲಗೈ ವೇಗಿ ಸ್ಟುವರ್ಟ್ ಬ್ರಾಡ್‌ಗೆ ಅಂದು ಯುವಿ ಮೂಲೆಮೂಲೆಯ ದರ್ಶನ ಮಾಡಿಸಿದ್ರು. ಅಂದು ಆಂಡ್ರ್ಯೂ ಫ್ಲಿಂಟಾಫ್ ಜೊತೆಗಿನ ಮಾತಿನ ಬಿಸಿ ಸ್ಟುವರ್ಟ್‌ ಬ್ರಾಡ್‌ ಮೇಲೆ ಬಿದ್ದಂತೆ ಆಗಿತ್ತು. ಯುವಿ ಪ್ರತಿಯೊಂದು ಸಿಕ್ಸರ್‌ ನೋಡಿ ಇಂಗ್ಲೆಂಡ್‌ ಆಟಗಾರರಿಗೆ ಅಂದು ಕಣ್ಣು ತಿರುಗುವಂತೆ ಮಾಡಿತ್ತು.  ಅಂದು ಕೇವಲ 12 ಎಸೆತಗಳಲ್ಲೇ ಅರ್ಧಶತಕ ಬಾರಿಸುವ ಮೂಲಕ ವಿಶ್ವ ದಾಖಲೆ ಬರೆದರು ಯುವರಾಜ್‌ಸಿಂಗ್. ಅಂತಿಮವಾಗಿ 16 ಎಸೆತಗಳನ್ನು ಎದುರಿಸಿದ ಯುವಿ ಮೂರು ಬೌಂಡರಿ ಹಾಗೂ ಏಳು ಭರ್ಜರಿ ಸಿಕ್ಸರ್‌ಗಳ ನೆರವಿನಿಂದ 58 ರನ್ ಗಳಿಸಿದರು.

ಯುವರಾಜ್‌ ಸಿಂಗ್‌ ಹೆಸರಲ್ಲಿರುವ ಕೆಲವು ವಿಶ್ವದಾಖಲೆಗಳನ್ನು ನಾವು ನೋಡುವದಾದ್ರೆ, ಅಂತಾರಾಷ್ಟ್ರೀಯ ಟಿ20ಯಲ್ಲಿ ಅತಿ ವೇಗದ ಅರ್ಧ ಶತಕ ಗಳಿಸಿದ ಆಟಗಾರ ಯುವರಾಜ್‌ ಸಿಂಗ್‌, 2007ರ ವಿಶ್ವಕಪ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಕೇವಲ 12 ಎಸೆತಗಳಲ್ಲಿ ಅರ್ಧ ಶತಕ ಸಿಡಿಸಿ ದಾಖಲೆ ಬರೆದಿದ್ದಾರೆ. ಇದು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ದಾಖಲಾದ ಅತ್ಯಂತ ವೇಗದ ಅರ್ಧಶತಕವಾಗಿ ಇಂದಿಗೂ ಉಳಿದುಕೊಂಡಿದೆ. ODI ಮಾದರಿಯಲ್ಲಿ 5ನೇ ಕ್ರಮಾಂಕದಲ್ಲಿ ಅತಿ ಹೆಚ್ಚು ಶತಕ ಗಳಿಸಿದ ಏಕೈಕ ಆಟಗಾರ ಯುವರಾಜ್ ಸಿಂಗ್. ಯುವಿ ಒಟ್ಟು 7 ಶತಕಗಳನ್ನು ಐದನೇ ಕ್ರಮಾಂಕದಲ್ಲಿ ಗಳಿಸಿದ್ದಾರೆ. ಅತಿ ಹೆಚ್ಚು ಐಸಿಸಿ ಟೂರ್ನಿಯ ಫೈನಲ್ ಪಂದ್ಯಗಳಲ್ಲಿ ಕಣಕ್ಕೆ ಯುವರಾಜ್ ಸಿಂಗ್ ಮತ್ತೊಂದು ಅತ್ಯಂತ ವಿಶೇಷ ಹಾಗೂ ಪ್ರಮುಖ ದಾಖಲೆಯನ್ನು ತಮ್ಮ ಹೆಸರಿನಲ್ಲಿ ಹೊಂದಿದ್ದಾರೆ. ಒಟ್ಟು 7 ಐಸಿಸಿ ಟೂರ್ನಿಯ ಫೈನಲ್ ಪಂದ್ಯಗಳಲ್ಲಿ ಆಡಿ ಯುವಿ ದಾಖಲೆ ಬರೆದಿದ್ದಾರೆ. ಇದನ್ನು ಕೂಡ ಈವರೆಗೆ ಯಾರಿಂದಲೂ ಮುರಿಯಲು ಸಾಧ್ಯವಾಗಿಲ್ಲ. ಐಪಿಎಲ್ ಆವೃತ್ತಿಯೊಂದರಲ್ಲಿ ಅತಿ ಹೆಚ್ಚು ಹ್ಯಾಟ್ರಿಕ್ ಯುವರಾಜ್ ಸಿಂಗ್ ಬ್ಯಾಟಿಂಗ್‌ನಲ್ಲಿ ಮಾತ್ರವಲ್ಲ ಬೌಲಿಂಗ್‌ನಲ್ಲಿಯೂ ಸಾಕಷ್ಟು ಸಂದರ್ಭಗಳಲ್ಲಿ ಮ್ಯಾಚ್ ವಿನ್ನರ್ ಆಗಿ ಕಾಣಿಸಿಕೊಂಡಿದ್ದಾರೆ.

ಇದನ್ನೂ ಓದಿ: ಕೇಂದ್ರ ಸಚಿವ ನಿತಿನ್ ಗಡ್ಕರಿಯವರಿಗೆ ಬೆದರಿಕೆ ಕರೆ; ಸಂಪೂರ್ಣ ತನಿಖೆ: ಸಿಎಂ ಬೊಮ್ಮಾಯಿ

ಅದು 2011 ರ ವಿಶ್ವಕಪ್‌ ಸಮಯ, 28 ವರ್ಷಗಳ ಬಳಿಕ ಟೀಂ ಇಂಡಿಯಾ ವಿಶ್ವಕಪ್‌ ಎತ್ತಿ ಹಿಡಿದಿತ್ತು. ಆದ್ರೆ ಇದಾದ ಕೆಲ ದಿನಗಳ ನಂತರ ಕ್ರಿಕೆಟ್‌ ಲೋಕವೇ ಒಮ್ಮೆ ಶಾಕ್‌ಗೆ ಒಳಗಾಗಿತ್ತು. ʻಪಂಜಾಬ್‌ ಕಾ ಪುತ್ತರʼ ಯುವರಾಜ್‌ ಸಿಂಗ್‌, ಕ್ಯಾನ್ಸರ್‌ನಿಂದ ಬಳಲುತ್ತಿದ್ದಾರೆ ಎಂಬ ಸುದ್ದಿ ಕೇಳಿ ಭಾರತೀಯ ಕ್ರಿಕೆಟ್‌ ಪ್ರೇಮಿಗಳು ಆಘಾತಕ್ಕೆ ಒಳಗಾಗಿದ್ದರು. ವಿಶ್ವಕಪ್‌ ಹಿರೋಗಾಗಿ  ಇಡೀ ಕ್ರಿಕೆಟ್‌ ಜಗತ್ತು ಪ್ರಾರ್ಥನೆ ಮಾಡಿತ್ತು. ವಿದೇಶದಲ್ಲಿ ಕಾನ್ಸರ್‌ ಚಿಕಿತ್ಸೆ ಪಡೆದ ಯುವಿ ಯಮನನ್ನೇ ಸೋಲಿಸಿ ಜೀವನದಲ್ಲಿ ಗೆದ್ದಿದ್ರು. ಈ ಸಂದರ್ಭದಲ್ಲಿ ಯುವಿ ಗುಣಮುಖರಾಗಲಿ ಕೋಟ್ಯಾಂತರ ಜನರು ದೇವಸ್ಥಾನಕ್ಕೆ ಹೋಗಿ ಪ್ರಾರ್ಥನೆ ಕೂಡ ಮಾಡಿದ್ರು. ನಂತರದ ದಿನಗಳಲ್ಲಿ ಕ್ಯಾನ್ಸರ್‌ ಗೆದ ಯುವಿ ಅಭಿಮಾನಿಗಲ ಆಶಯದಂತೆ ಪೂರ್ಣ ಗುಣಮುಖರಾದರು.

ಯುವರಾಜ್ ಅವರು 2016ರಲ್ಲಿ ಹೇಜೆಲ್ ಕೀಚ್ ಅವರನ್ನು ವಿವಾಹವಾದರು. ವಿವಾಹಕ್ಕೂ ಮುಂಚೆ 3 ವರ್ಷ ಹೇಜೆಲ್ ಹಿಂದೆ ಸೈಕಲ್‌ ಹೊಡೆದಿದ್ದ ಯುವಿ ಕೊನೆಗೂ ತಮ್ಮ ಪ್ರೀತಿಯಲ್ಲಿ ಗೆದ್ದಿದ್ರು. ಕ್ರಿಕಟ್‌ ಬಗ್ಗೆ ಕಿಂಚಿತ್ತು ಗೊತ್ತಿಲ್ಲದ ಹೇಜೆಲ್ ಕೊನೆಗೂ ಯುವಿ ಮನಸ್ಸಿಗೆ ಸೋತು 2016 ರಲ್ಲಿ ವಿವಾಹವಾದ್ರು. 2022 ರಲ್ಲಿ ತಮ್ಮ ಮೊದಲ ಮಗುವನ್ನು ಸ್ವಾಗತಿಸಿದರು. ಅವರು ತಮ್ಮ ಪ್ರೀತಿಪಾತ್ರರ ಜೊತೆ ಮುಂಬೈನ ಅತ್ಯಂತ ಐಷಾರಾಮಿ ಪ್ರದೇಶದಲ್ಲಿ ಒಂದು ಅದ್ಭುತವಾದ ಅಪಾರ್ಟ್‌ಮೆಂಟ್‌ನಲ್ಲಿ ವಾಸಿಸುತ್ತಿದ್ದಾರೆ.

ಅದೇನೇ ಇರಲಿ ಯುವರಾಜ್‌ ಸಿಂಗ್‌ ಅನ್ನೋ ಈ ಸಿಕ್ಸರ್‌ ಕಿಂಗ್‌ ಇಂದಿಗೂ ಎಂದಿಗೂ ಎಂದೆಂದಿಗೂ ಯುವ ಮನಸ್ಸುಗಳಲ್ಲಿ ತಮ್ಮದೇ ಸ್ಥಾನ ಪಡೆದುಕೊಂಡಿದ್ದಾರೆ. ಅವರ ಆಟದ ಜೊತೆಗೆ ಅವರ ನಡುವಳಿಕೆ ಇಂದಿಗೂ ಎಲ್ಲರಿಗೂ ದಾರಿದೀಪವಾಗಿದೆ. ಜೊತೆಗೆ ಅವರು ಕ್ಯಾನ್ಸ್‌ರನಿಂದ ಹೊರಬಂದಿದ್ದು, ಜೊತೆಗೆ ಮತ್ತೇ ಕ್ರಿಕೆಟ್‌ ಆಡಿದ್ದು ಎಂದಿಗೂ ಮರೆಯಲು ಸಾಧ್ಯವೇ ಇಲ್ಲ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

 

Trending News