ನವದೆಹಲಿ: ಈ ವರ್ಷದ ಕೋವಿಡ್ -19 ಮಹಾಮಾರಿಯ ಹಿನ್ನೆಲೆ ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ (ಐಸಿಸಿ) ತನ್ನ ಎರಡು ಅರ್ಹತಾ ಸ್ಪರ್ಧೆಗಳನ್ನು ಗುರುವಾರ ಮುಂದೂಡಿದೆ. ಸೆಪ್ಟೆಂಬರ್‌ನಲ್ಲಿ ನಮೀಬಿಯಾದಲ್ಲಿ ನಡೆಯಲಿರುವ ಪುರುಷರ ಕ್ರಿಕೆಟ್ ವಿಶ್ವಕಪ್ ಲೀಗ್ -2 ಸರಣಿ ಮತ್ತು ಟಾಂಜಾನಿಯಾದಲ್ಲಿ ನಡೆಯಲಿರುವ ಅಂಡರ್ -19 ಕ್ರಿಕೆಟ್ ವಿಶ್ವಕಪ್ ಪ್ರಾದೇಶಿಕ ಅರ್ಹತಾ ವಿಭಾಗ ಎರಡನ್ನು ಐಸಿಸಿ ಮುಂದೂಡಿದೆ. ಐಸಿಸಿ ಹೇಳಿಕೆಯ ಪ್ರಕಾರ ನಮೀಬಿಯಾದಲ್ಲಿ ವಿಶ್ವಕಪ್ ಲೀಗ್ -2 ಈ ಸರಣಿಯು ವಿಶ್ವಕಪ್ 2023 ಅರ್ಹತೆಯ ಭಾಗವಾಗಿತ್ತು. ನಮೀಬಿಯಾ, ಪಪುವಾ ನ್ಯೂಗಿನಿಯಾ ಮತ್ತು ಅಮೆರಿಕ ತಂಡಗಳು ಇದರಲ್ಲಿ ಭಾಗವಹಿಸಬೇಕಿತ್ತು.
19 ವರ್ಷದೊಳಗಿನವರ ವಿಶ್ವಕಪ್ ಪ್ರಾದೇಶಿಕ ಅರ್ಹತಾ ಸ್ಪರ್ಧೆ ಡಿವಿಜನ್ ಎರಡು ಟಾಂಜಾನಿಯಾದಲ್ಲಿ ಆಗಸ್ಟ್ 7 ರಿಂದ 14 ರವರೆಗೆ ನಡೆಯಬೇಕಿತ್ತು, ಬೋತ್ಸವಾನಾ, ಕೀನ್ಯಾ, ಮೊಜಾಂಬಿಕ್, ರುವಾಂಡಾ, ಸಿಯೆರಾ ಲಿಯೋನ್ ಮತ್ತು ಆತಿಥೇಯ ರಾಷ್ಟ್ರಗಳು ಇರರಲ್ಲಿ ಭಾಗವಹಿಸಬೇಕಿದ್ದವು. ಆಟಗಾರರು, ತರಬೇತುದಾರರು, ಅಧಿಕಾರಿಗಳು, ಅಭಿಮಾನಿಗಳು ಮತ್ತು ಇಡೀ ಕ್ರಿಕೆಟ್ ಸಮುದಾಯದ ಸುರಕ್ಷತೆ ಇನ್ನೂ ಇದರ ಆದ್ಯತೆಯಾಗಿದೆ ಎಂದು ಐಸಿಸಿ ಹೇಳಿದೆ. ಪ್ರಸ್ತುತ ಸಮಯದಲ್ಲಿ, ಅಂತರರಾಷ್ಟ್ರೀಯ ಪ್ರಯಾಣ ನಿರ್ಬಂಧಗಳೊಂದಿಗೆ ಜಾಗತಿಕ ಆರೋಗ್ಯ ಕಾಳಜಿ ಮುಖ್ಯವಾಗಿದೆ ಮತ್ತು ಕೋವಿಡ್ -19 ಗೆ ಸಂಬಂಧಿಸಿದಂತೆ ಸರ್ಕಾರ ಮತ್ತು ಸಾರ್ವಜನಿಕ ಆರೋಗ್ಯ ಸಂಸ್ಥೆಗಳ ಸಲಹೆಯ ಮೇರೆಗೆ, ಇತರ ಎರಡು ಅರ್ಹತಾ ಸ್ಪರ್ಧೆಗಳನ್ನು ಮುಂದೂಡಲು ನಾವು ನಮ್ಮ ಸದಸ್ಯರಿಗೆ ಸಲಹೆ ನೀಡಿದ್ದೇವೆ ಎಂದು ಐಸಿಸಿ ಸ್ಪರ್ಧೆಯ ಮುಖ್ಯಸ್ಥ ಕ್ರಿಸ್ ಟೆಟ್ಲಿ ಹೇಳಿದ್ದಾರೆ.
ಏಷ್ಯಾದಲ್ಲಿ ಡಿಸೆಂಬರ್ 1 ರಿಂದ 9 ರವರೆಗೆ ಏಷ್ಯಾದ 19 ವರ್ಷದೊಳಗಿನವರ ವಿಶ್ವಕಪ್ ಪ್ರಾದೇಶಿಕ ಅರ್ಹತಾ ವಿಭಾಗ ಎರಡರ ಪಂದ್ಯಗಳನ್ನು ಸಹ ಪರಿಶೀಲಿಸಲಾಗುವುದು ಎಂದು ಈ ಕ್ರೀಡೆಯ ಉನ್ನತ ಸಂಸ್ಥೆ ತಿಳಿಸಿದೆ. ಕರೋನಾ ವೈರಸ್ ಸಾಂಕ್ರಾಮಿಕ ರೋಗದಿಂದಾಗಿ ಅಕ್ಟೋಬರ್-ನವೆಂಬರ್ ನಲ್ಲಿ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ 20 ವಿಶ್ವಕಪ್ ಅನ್ನು ಐಸಿಸಿ ಸೋಮವಾರ ಮುಂದೂಡಿದೆ. ಇದಲ್ಲದೆ, 2023 ರಲ್ಲಿ ಭಾರತದಲ್ಲಿ ನಡೆಯಲಿರುವ 50 ಓವರ್‌ಗಳ ವಿಶ್ವಕಪ್ ಗಾಗಿ ಅರ್ಹತಾ ಪ್ರಕ್ರಿಯೆಗೆ ಹೆಚ್ಚಿನ ಸಮಯ ನೀಡುವ ಉದ್ದೇಶದಿಂದ ಇದನ್ನು ಮಾರ್ಚ್-ಏಪ್ರಿಲ್ ಬದಲಿಗೆ ನವೆಂಬರ್‌ನಲ್ಲಿ ನಡೆಸಲಾಗುವುದು ಎಂದು ICC ಹೇಳಿದೆ.