FIFA World Cup 2022: ಕಾಲೇ ಇಲ್ಲದ ವ್ಯಕ್ತಿ ಕಾಲ್ಚೆಂಡಿನ ಲೋಕದ ರಾಯಭಾರಿ!

ಫಿಫಾ ವಿಶ್ವಕಪ್ ಉದ್ಘಾಟನಾ ಸಮಾರಂಭದಲ್ಲಿ ಖ್ಯಾತ ಹಾಲಿವುಡ್ ತಾರೆ ಮೋರ್ಗನ್ ಫ್ರೀಮನ್ ಅವರು ‘ಭರವಸೆ, ಏಕತೆ ಮತ್ತು ಸಹಿಷ್ಣುತೆ’ಯ ಸಂದೇಶ ಸಾರಿದರು.

Written by - Puttaraj K Alur | Last Updated : Nov 21, 2022, 05:33 PM IST
  • ಕಾಲೇ ಇಲ್ಲದ ವ್ಯಕ್ತಿ ಫಿಫಾ ಫುಟ್ಬಾಲ್ ವಿಶ್ವಕಪ್ 2022ರ ರಾಯಭಾರಿ
  • ಇಡೀ ಜಗತ್ತಿನ ಗಮನ ಸೆಳೆದ ಕತಾರಿನ ಯುವ ಐಕಾನ್ ಘಾನಿಂ ಅಲ್ ಮುಫ್ತಾಹ್
  • ಯುವಕರು ಮತ್ತು ವಿಶೇಷ ಚೇತನರಿಗೆ ಸ್ಫೂರ್ತಿಯಾಗಿರುವ ಘಾನಿಂ ಅಲ್ ಮುಫ್ತಾಹ್
FIFA World Cup 2022: ಕಾಲೇ ಇಲ್ಲದ ವ್ಯಕ್ತಿ ಕಾಲ್ಚೆಂಡಿನ ಲೋಕದ ರಾಯಭಾರಿ! title=
ಗಮನ ಸೆಳೆದ ಕತಾರಿನ ಯುವ ಐಕಾನ್!

ನವದೆಹಲಿ: ಕತಾರ್‍ನಲ್ಲಿ ಕಾಲ್ಚೆಂಡಿನ ಲೋಕದ ಬಾಗಿಲು ತೆರೆದಿದೆ. FIFA World Cup 2022ಕ್ಕೆ ಅದ್ದೂರಿ ಚಾಲನೆ ದೊರೆತಿದೆ. ಫಿಫಾ ಫುಟ್ಬಾಲ್ ವಿಶ್ವಕಪ್‍ನಲ್ಲಿ ಪಾಲ್ಗೊಂಡಿರುವ 32 ದೇಶಗಳ ಧ್ವಜಗಳ ವಿಶೇಷ ಪ್ರದರ್ಶನ ನಡೆಯಿತು. ವೇದಿಕೆ ಮೇಲೆ ಪ್ರತಿಯೊಂದು ದೇಶದ ಆಟಗಾರರ ಜೆರ್ಸಿ ಪ್ರದರ್ಶನಗೊಂಡಿತು. ಸೌಧಿ ಅರೇಬಿಯಾದ ದೊರೆ ಮೊಹಮ್ಮದ್ ಬಿನ್ ಸಲ್ಮಾನ್ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಆರಂಭಿಕ ಪಂದ್ಯವನ್ನು ವೀಕ್ಷಿಸಿದ ಸಂತಸ ವ್ಯಕ್ತಪಡಿಸಿದರು.

ಫಿಫಾ ವಿಶ್ವಕಪ್ ಉದ್ಘಾಟನಾ ಸಮಾರಂಭದಲ್ಲಿ ಖ್ಯಾತ ಹಾಲಿವುಡ್ ತಾರೆ ಮೋರ್ಗನ್ ಫ್ರೀಮನ್ ಅವರು ‘ಭರವಸೆ, ಏಕತೆ ಮತ್ತು ಸಹಿಷ್ಣುತೆ’ಯ ಸಂದೇಶ ಸಾರಿದರು. ಇದೇ ವೇಳೆ ಫ್ರೀಮನ್ ಜೊತೆ ವೇದಿಕೆ ಮೇಲೆ ಕಾಣಿಸಿಕೊಂಡ ವ್ಯಕ್ತಿಯೊಬ್ಬರೂ ಇಡೀ ಪ್ರಪಂಚದ ಗಮನ ಸೆಳೆದಿದ್ದಾರೆ. ಕಾಲೇ ಇಲ್ಲದ ಈ ವ್ಯಕ್ತಿ ಕಾಲ್ಚೆಂಡಿನ ಲೋಕದ ರಾಯಭಾರಿ ಅನ್ನೋದು ಯಾರಿಗೂ ಗೊತ್ತಿರಲಿಲ್ಲ. ಹಾಗಾದ್ರಾ ಯಾರು ಆ ವ್ಯಕ್ತಿ ಅಂತೀರಾ..? ಅವರೇ ಕತಾರಿನ ಯುವ ಐಕಾನ್ ಘಾನಿಂ ಅಲ್ ಮುಫ್ತಾಹ್.

ಇದನ್ನೂ ಓದಿ: ಯಾರು ಈ ನಾರಾಯಣ್ ಜಗದೀಶನ್? ನಿಮಗೆಷ್ಟು ಗೊತ್ತು ಈ ಬ್ಯಾಟ್ಸ್ಮನ್ ಬಗ್ಗೆ?

ಹೌದು, ಎರಡು ಕಾಲುಗಳಿಲ್ಲದ ಘಾನಿಂ ಅಲ್ ಮುಫ್ತಾಹ್ ಫಿಫಾ ವಿಶ್ವಕಪ್‌ನ ರಾಯಭಾರಿ. ಉದ್ಘಾಟನಾ ಸಮಾರಂಭದಲ್ಲಿ ಅವರು ಕುರಾನ್‌ನ ಕೆಲವು  ಸೂಕ್ತಗಳನ್ನು ಪಠಿಸಿ ಇಡೀ ವಿಶ್ವಕ್ಕೆ ಮಹತ್ವದ ಸಂದೇಶಗಳನ್ನು ನೀಡಿದರು. ಘಾನಿಂ ಅಲ್ ಮುಫ್ತಾರವರು ಅವಳಿ ಸಹೋದರನಾಗಿದ್ದು, ಕಾಡಲ್ ರಿಗ್ರೆಷನ್ ಸಿಂಡ್ರೋಮ್‌ ಕಾಯಿಲೆಗೆ ತುತ್ತಾಗಿ ತಮ್ಮ ಎರಡು ಕಾಲುಗಳನ್ನು ಕಳೆದುಕೊಂಡಿದ್ದಾರೆ. ಇದೊಂದು ಅಪರೂಪದ ರೋಗವಾಗಿದ್ದು, ವ್ಯಕ್ತಿಯ ಕೆಳ ಬೆನ್ನುಮೂಳೆಯ ಬೆಳವಣಿಗೆಯನ್ನೇ ದುರ್ಬಲಗೊಳಿಸುತ್ತದಂತೆ.

ಮುಫ್ತಾಹ್ ಅವರ ಸ್ಥಿತಿ ಕಂಡು ವೈದ್ಯರು ಇವರು ಬದುಕುಳಿಯುವುದೇ ಕಷ್ಟವೆಂದು ಹೇಳಿದ್ದರಂತೆ. ಆದರೆ ಈ ಕಾಯಿಲೆಗೆ ತುತ್ತಾದ 15 ವರ್ಷಗಳ ನಂತರವೂ ಬದುಕಿನಲ್ಲಿ ಉತ್ತಮ ಸಾಧನೆ ಮಾಡಲು ಪ್ರಾರಂಭಿಸಿದರು. ಇವರ ಹೋರಾಟದ ಬದುಕಿನ ಜೀವನವೂ ಕೋಟ್ಯಂತರ ಯುವಕರು ಮತ್ತು ವಿಕಲಚೇತನರಿಗೆ ದೊಡ್ಡ ಸ್ಫೂರ್ತಿಯಾಗಿದೆ. ಇವರ ವ್ಯಕ್ತಿತ್ವವು ಹಲವರನ್ನು ಸಾಧನೆ ಮಾಡುವಂತೆ ಪ್ರೇರೇಪಿಸಿದೆ.

ಇದನ್ನೂ ಓದಿ: ರವೀಂದ್ರ ಜಡೇಜಾನನ್ನು ಧೋನಿಗೆ ಪ್ರಧಾನಿ ಮೋದಿ ಪರಿಚಯಿಸಿದ್ದು ಹೇಗೆ ಗೊತ್ತಾ?

ವರ್ಷದ 365 ದಿನವೂ ಮುಫ್ತಾಹ್ ಯುರೋಪ್‍ನಲ್ಲಿ ಪರಿಣಿತ ಶಸ್ತ್ರಚಿಕಿತ್ಸಾ ಆರೈಕೆ ಪಡೆಯುತ್ತಾರಂತೆ. ಭವಿಷ್ಯದ ಪ್ಯಾರಾಲಿಂಪಿಯನ್ ಆಗುವ ಭರವಸೆ‌  ಹೊಂದಿರುವ ಮುಫ್ತಾಹ್‍ಗೆ ವಿಕಲಾಂಗತೆಯ ಹೊರತಾಗಿಯೂ ದೊಡ್ಡ ಜೀವನೋತ್ಸಾಹವಿದೆ. ಈಜು, ಸ್ಕೂಬಾ ಡೈವಿಂಗ್, ಫುಟ್ಬಾಲ್, ಹೈಕಿಂಗ್ & ಸ್ಕೇಟ್‌ ಬೋರ್ಡಿಂಗ್ ತನ್ನ ನೆಚ್ಚಿನ ಕ್ರೀಡೆಗಳಂತೆ.

ಮುಫ್ತಾಹ್‍ ಶಾಲೆಯಲ್ಲಿ ತನ್ನ ಕೈಗೆ ಬೂಟುಗಳನ್ನು ಧರಿಸಿ ಫುಟ್‌ಬಾಲ್ ಆಡುತ್ತಿದ್ದರಂತೆ. ಗಲ್ಫ್ ಪ್ರದೇಶದ ಅತಿ ಎತ್ತರದ ಪರ್ವತ ಶಿಖರ ಜಬಲ್ ಶಮ್ಸ್ ಏರಿರುವ ಅವರಿಗೆ ಮೌಂಟ್ ಎವರೆಸ್ಟ್ ಏರುವ ಆಸೆ ಇದೆಯಂತೆ. ಕತಾರ್‌ನ ಭವಿಷ್ಯದ ಪ್ರಧಾನಿಯಾಗುವ ಇಚ್ಛೆ ಹೊಂದಿರುವ ಮುಫ್ತಾಹ್‍ಗೆ ರಾಜಕೀಯ ವಿಜ್ಞಾನ ಅಧ್ಯಯನದ ಗುರಿ ಇದೆಯಂತೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News