ನಾಡಿನ ಹೆಮ್ಮೆಯ ಪುತ್ರ ಅನಿಲ್ ಕುಂಬ್ಳೆಗೆ ಜನ್ಮದಿನದ ಶುಭಾಶಯ

17 ಅಕ್ಟೋಬರ್ 1970 ರಲ್ಲಿ ಬೆಂಗಳೂರಿನಲ್ಲಿ ಅನಿಲ್ ಕುಂಬ್ಳೆ ಜನಿಸಿದರು. 

Last Updated : Oct 17, 2018, 11:46 AM IST
ನಾಡಿನ ಹೆಮ್ಮೆಯ ಪುತ್ರ ಅನಿಲ್ ಕುಂಬ್ಳೆಗೆ ಜನ್ಮದಿನದ ಶುಭಾಶಯ title=
Pic: Zee Kannada

ಬೆಂಗಳೂರು: ಭಾರತೀಯ ಕ್ರಿಕೆಟ್ ತಂಡದಲ್ಲಿ 'ಜಂಬೋ' ಎಂದೇ ಖ್ಯಾತಿ ಪಡೆದಿರುವ ಲೆಗ್ ಸ್ಪಿನ್ನರ್, ಮಾಜಿ ಕ್ರಿಕೆಟ್ ಆಟಗಾರ ಮತ್ತು ತರಬೇತುದಾರ ಅನಿಲ್ ಕುಂಬ್ಳೆಗೆ ಇಂದು ಹುಟ್ಟು ಹಬ್ಬದ ಸಂಭ್ರಮ. ಅಕ್ಟೋಬರ್ 17, 1970 ರಂದು ಬೆಂಗಳೂರಿನಲ್ಲಿ ಅನಿಲ್ ಕುಂಬ್ಳೆ ಜನಿಸಿದರು. ಬಾಲ್ ಹಿಡಿದು ಜಿಂಕೆಯಂತೆ ಚಿಮ್ಮುವ ಅವರ ಬೌಲಿಂಗ್ ವೈಖರಿಯನ್ನು ನೋಡುವುದೇ ಒಂದು ಸೊಗಸು. ಕುಂಬ್ಳೆ ಬೌಲರ್ ಆಗಿ ಖ್ಯಾತಿ ಪಡೆದಿದ್ದರೂ ಕೂಡ, ಬ್ಯಾಟಿಂಗ್ ನಲ್ಲೂ ಭರವಸೆ ಹುಟ್ಟಿಸುತ್ತಿದ್ದ ಅಪರೂಪದ ಆಟಗಾರ. 

ತಮ್ಮ 13 ನೇ ವಯಸ್ಸಿನಲ್ಲಿ "ಯಂಗ್ ಕ್ರಿಕೆಟರ್ಸ್" ಕ್ಲಬ್ ಸೇರಿದ ಕುಂಬ್ಳೆ ತಮ್ಮ 19 ನೇ ವಯಸ್ಸಿನಲ್ಲಿ ಪ್ರಥಮ ದರ್ಜೆಯ ಕ್ರಿಕೆಟ್ ಪ್ರವೇಶಿಸಿದರು. ಅವರು ಆರಂಭಿಕ ದಿನಗಳಲ್ಲಿ ಬ್ಯಾಟ್ಸ್ಮನ್ ಆಗಿ ಆಡುತ್ತಿದ್ದರು. 1990 ರಲ್ಲಿ ಅವರು ಅಂಡರ್ -19 ತಂಡದಲ್ಲಿ ಆಡುತ್ತಿದ್ದಾಗ, ಅದೇ ಸಮಯದಲ್ಲಿ, ಪಾಕಿಸ್ತಾನದ ಅಂಡರ್ -19 ತಂಡ ಭಾರತ ಪ್ರವಾಸಕ್ಕೆ ಬಂದಾಗ, ಅವರು ಯುವ ಟೆಸ್ಟ್ನಲ್ಲಿ ಮೊದಲ ಇನ್ನಿಂಗ್ಸ್ನಲ್ಲಿ 113 ರನ್ ಗಳಿಸಿದರು. ಇದರ ನಂತರ ಅವರು ಭಾರತೀಯ ತಂಡದಲ್ಲಿ ಆಯ್ಕೆಯಾದರು. ಅದೇ ವರ್ಷ ಅವರು ತಮ್ಮ ಟೆಸ್ಟ್ ವೃತ್ತಿಜೀವನವನ್ನು ಪ್ರಾರಂಭಿಸಿದರು, ಇದರಲ್ಲಿ ಮ್ಯಾಂಚೆಸ್ಟರ್ನ ಓಲ್ಡ್ ಟ್ರಾಫರ್ಡ್ನಲ್ಲಿ ಗ್ರಹಾಂ ಗೂಚ್ಸ್ ಇಂಗ್ಲೀಷ್ ತಂಡಕ್ಕೆ ವಿರುದ್ಧವಾಗಿ ಅವರು ತಮ್ಮ ಮೊದಲ ಪಂದ್ಯದಲ್ಲಿ ಮೂರು ವಿಕೆಟ್ಗಳನ್ನು ಪಡೆದರು. 

1990 ರಲ್ಲಿ ಆಸ್ಟ್ರೇಲಿಯಾ-ಏಷ್ಯಾ ಕಪ್ ಗೆ ಆಯ್ಕೆಯಾದ 'ಕುಂಬ್ಳೆ' ತದನಂತರದಲ್ಲಿ ಇಂಗ್ಲೆಂಡ್ ವಿರುದ್ದ ಟೆಸ್ಟ್ ಪಂದ್ಯ ಪ್ರಾರಂಭಿಸಿದರು. ಅಲ್ಲಿಂದೀಚೆಗೆ 132 ಟೆಸ್ಟ್ ಪಂದ್ಯಗಳಲ್ಲಿ ಭಾರತದ ಟೆಸ್ಟ್ ತಂಡವನ್ನು ಪ್ರತಿನಿಧಿಸಿ, ಭಾರತದ ಹಲವು ವಿಜಯಗಳಿಗೆ ಕಾರಣರಾದರು. 

ಕುಂಬ್ಳೆ ಸಹಚರರು ಅವರನ್ನು ಪ್ರೀತಿಯಿಂದ "ಜಂಬೋ" ಎಂದು ಕರೆಯುತ್ತಾರೆ. ಸಾಮಾನ್ಯ ವೇಗಕ್ಕಿಂತ ಹೆಚ್ಚಿನ ವೇಗದಲ್ಲಿ ಬೌಲ್ ಮಾಡುವುದನ್ನು ಕರಗತ ಮಾಡಿಕೊಂಡಿರುವ ಹಿನ್ನೆಲೆಯಲ್ಲಿ ಅದನ್ನು ಜುಂಬೋ ಜೆಟ್ ಗೆ ಹೋಲಿಸಿ, ಇವರನ್ನು ಜುಂಬೋ ಎಂದು ಕರೆಯಲಾಗುತ್ತದೆ.

1996 ರ ಹೊತ್ತಿಗಾಗಲೇ ಯಶಸ್ವಿ ಬೌಲರ್ ಆಗಿ ಹೊರಹೊಮ್ಮಿದ್ದ ಕುಂಬ್ಳೆ 1996 ರ ವಿಶ್ವಕಪ್ನಲ್ಲಿ ಸ್ಥಾನ ಪಡೆದರು. 1999 ರಲ್ಲಿ ಫೆಬ್ರವರಿ 4ರಿಂದ ಫೆಬ್ರವರಿ 8ರವರಗೆ ನವದೆಹಲಿಯಲ್ಲಿ ಪಾಕಿಸ್ತಾನದ ವಿರುದ್ದ ಆಡಿದ ಟೆಸ್ಟ್ ಪಂದ್ಯದಲ್ಲಿ ರೋಚಕವಾಗಿ ಆಡಿದ ಎಲ್ಲಾ ವಿಕೆಟ್ ಗಳನ್ನು ಕಬಳಿಸಿ ಕುಂಬ್ಳೆ ಲೋಕದಾಖಲೆ ನಿರ್ಮಿಸಿದರು.

ವಿಶ್ವದಾಖಲೆಯ ಸಾಧನೆಯ ಸ್ಮರಣಾರ್ಥಕ ವೃತ್ತಕ್ಕೆ ಕುಂಬ್ಳೆ ಹೆಸರು:
ಒಂದು ಟೆಸ್ಟ್ ಇನ್ನಿಂಗ್ಸಿನಲ್ಲಿನ ಎಲ್ಲಾ ಹತ್ತು ವಿಕೆಟುಗಳನ್ನು ಪಡೆದ ವಿಶ್ವದ ಎರಡೇ ಬೌಲರುಗಳಲ್ಲಿ, ಅನಿಲ್ ಕುಂಬ್ಳೆ ಒಬ್ಬರಾಗಿದ್ದಾರೆ. ಇನ್ನೊಬ್ಬರು ಇಂಗ್ಲೆಂಡಿನ ಜಿಂ ಲೇಕರ್. ಈ ಸಾಧನೆಯನ್ನು ಕುಂಬ್ಳೆ 1999ರ ಫೆಬ್ರವರಿಯಲ್ಲಿ ನವದೆಹಲಿಯಲ್ಲಿ ನಡೆದ ಪಾಕಿಸ್ತಾನ ವಿರುದ್ಧದ ಟೆಸ್ಟ್ ಪಂದ್ಯದಲ್ಲಿ ಮಾಡಿದರು. ಈ ವಿಶ್ವದಾಖಲೆಯ ಸಾಧನೆಯ ಸ್ಮರಣಾರ್ಥಕವಾಗಿ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದ ಪಕ್ಕದಲ್ಲಿರುವ ಎಂ.ಜಿ.ರಸ್ತೆಯಲ್ಲಿನ ವೃತ್ತಕ್ಕೆ, ಅನಿಲ್ ಕುಂಬ್ಳೆ ವೃತ್ತ(Anil Kumble Circle) ಎಂದು ನಾಮಕರಣ ಮಾಡಲಾಗಿದೆ.

ಇಂತಹ ಒಬ್ಬ ಮಹಾನ್ ಆಟಗಾರ ನಮ್ಮ ಕರ್ನಾಟಕದ ಆಸ್ತಿ ಎಂಬುದೇ ನಮಗೂ ಹೆಮ್ಮೆಯ ವಿಷಯ. 

Trending News