ಇರಾನ್ನಲ್ಲಿ ಕರೋನಾ ವೈರಸ್ನಿಂದ ಸಾವನ್ನಪ್ಪಿದವರ ಸಂಖ್ಯೆ ಇದುವರೆಗೆ ಸುಮಾರು 3800ಕ್ಕೆ ತಲುಪಿದೆ. ಆದರೆ ಇದರಲ್ಲಿ ಆಶ್ಚರ್ಯಕರ ಸಂಗತಿ ಎಂದರೆ ವಿಷಕಾರಿ ಮದ್ಯ ಸೇವಿಸಿ ಇಲ್ಲಿ 600 ಜನರು ಸಾವನ್ನಪ್ಪಿದ್ದಾರೆ. ಇನ್ನೊಂದೆಡೆ, ವಿಷಕಾರಿ ಮದ್ಯ ಸೇವಿಸಿದ ನಂತರ 3000 ಜನರು ಅನಾರೋಗ್ಯಕ್ಕೆ ತುತ್ತಾಗಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಡೆಲಿ ಮೇಲ್ ನಲ್ಲಿ ಪ್ರಕಟಗೊಂಡ ಒಂದು ವರದಿಯ ಪ್ರಕಾರ, ಮಂಗಳವಾರ ಇರಾನ್ ವಕ್ತಾರ ಘೋಲಂ ಹುಸೈನ್ ಇಸ್ಮೈಲಿ ಈ ಕುರಿತು ಮಾಹಿತಿ ನೀಡಿದ್ದು, ಜನರು ಕೊರೊನಾ ವೈರಸ್ ನ ಔಷಧಿ ಎಂದು ಭಾವಿಸಿ ನಿಟ್ ಅಲ್ಕೋಹಾಲ್ ಅನ್ನು ಸೇವಿಸಿದ್ದು, ಬಳಿಕ ಹಲವು ಜನರು ಅಸ್ವಸ್ಥರಾಗಿದ್ದಾರೆ ಎಂದು ತಿಳಿಸಿದ್ದಾರೆ.
ಈ ನಿಟ್ ಅಲ್ಕೋಹಾಲ್ ಸೇವಿಸಿ ಸಾವನ್ನಪ್ಪಿರುವವರ ಸಂಖ್ಯೆಯಲ್ಲಿ ಭಾರಿ ಏರಿಕೆಯಾಗಿದೆ ಎಂದು ಹೇಳಿರುವ ಇಸ್ಮೈಲಿ, ಇದು ತಮ್ಮ ಅಂದಾಜಿಗಿಂತ ಹೆಚ್ಚಾಗಿದೆ. ಇದೇವೇಳೆ ಈ ಕುರಿತು ಸ್ಪಷ್ಟನೆ ನೀಡಿರುವ ಅವರು, ಅಲ್ಕೋಹಾಲ್ ಸೇವನೆಯಿಂದ ರೋಗ ಗುಣಪಡುವುದಿಲ್ಲ. ಇದು ಪ್ರಾಣಕ್ಕೆ ಕುತ್ತು ತರುತ್ತದೆ ಎಂದಿದ್ದಾರೆ.
ತಂಸೀಮ್ ನ್ಯೂಸ್ ಏಜೆನ್ಸಿಗೆ ನೀಡಿರುವ ಸಂದರ್ಶನವೊಂದರಲ್ಲಿ ಮಾತನಾಡಿರುವ ಅವರು, ಸದ್ಯ ಈ ಪ್ರಕರಣದಲ್ಲಿ ಹಲವರನ್ನು ಬಂಧಿಸಲಾಗಿದ್ದು, ಅಪರಾಧಿ ಕೃತ್ಯ ನಡೆಸಿದ ಆರೋಪದ ಹಿನ್ನೆಲೆ ಅವರ ಮೇಲೆ ಪ್ರಕರಣ ದಾಖಲಿಸಲಾಗಿದೆ ಎಂದು ತಿಳಿಸಿದ್ದಾರೆ.
ಇರಾನ್ ನಲ್ಲಿ ಕೊರೊನಾ ವೈರಸ್ ಸೋಂಕಿಗೆ ಸುಮಾರು 62 ಸಾವಿರಕ್ಕೂ ಅಧಿಕ ಜನರು ಗುರಿಯಾಗಿದ್ದಾರೆ. ಆದರೆ, ಇರಾನ್ ವತಿಯಿಂದ ಬಿಡುಗಡೆಗೊಳಿಸಲಾಗಿರುವ ಕೊರೊನಾ ವೈರಸ್ ಅಂಕಿ-ಅಂಶಗಳ ಮೇಲೆ ಇದೀಗ ಪ್ರಶ್ನೆಗಳು ಏಳಲಾರಂಭಿಸಿವೆ. ಈ ವೈರಸ್ ದಾಳಿಗೆ ಮೃತಪಟ್ಟವರ ಸಂಖ್ಯೆಯನ್ನು ಸರ್ಕಾರ ಕಡಿಮೆ ಮಾಡಿ ಹೇಳುತ್ತಿದೆ ಎಂದು ಆರೋಪಿಸಲಾಗುತ್ತಿದೆ.
ಇರಾನ್ ಸಂಸತ್ತಿನ ಸುಮಾರು 31 ಸದಸ್ಯರು ಈ ಮಾರಕ ವೈರಸ್ ದಾಳಿಗೆ ಗುರಿಯಾಗಿದ್ದಾರೆ. ಬಳಿಕ ಅಲ್ಲಿನ ಸಂಸತ್ತನ್ನು ಬಂದ್ ಮಾಡಲಾಗಿದೆ. ಆದರೆ, ಮಂಗಳವಾರ ಸಂಸತ್ತು ಎಂದಿನಂತೆ ತನ್ನ ಕಾರ್ಯಕಲಾಪ ಪುನರಾರಂಭಿಸಿದೆ.
ವಿಶ್ವಾಧ್ಯಂತ ಕೊರೊನಾ ಸೋಂಕಿತರ ಸಂಖ್ಯೆ ಬುಧವಾರ 1,431,900 ಕ್ಕೂ ಅಧಿಕ ತಲುಪಿದ್ದು, ಸುಮಾರು 82000 ಜನರು ಈ ಮಾರಕ ವೈರಸ್ ದಾಳಿಗೆ ಬಲಿಯಾಗಿದ್ದಾರೆ.