ಪಶ್ಚಿಮ ಉಗಾಂಡದಲ್ಲಿ ಇಂಧನ ಟ್ಯಾಂಕರ್ ಸ್ಫೋಟ; 20 ಮಂದಿ ಸಾವು

ಟ್ಯಾಂಕರ್ ಚಾಲಕ ವಾಹನದ ನಿಯಂತ್ರಣ ಕಳೆದುಕೊಂಡು ಸರಕು ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಬೆಂಕಿ ಕಾಣಿಸಿಕೊಂಡು ಟ್ಯಾಂಕರ್ ಸ್ಫೋಟಗೊಂಡಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

Updated: Aug 19, 2019 , 12:27 PM IST
ಪಶ್ಚಿಮ ಉಗಾಂಡದಲ್ಲಿ ಇಂಧನ ಟ್ಯಾಂಕರ್ ಸ್ಫೋಟ; 20 ಮಂದಿ ಸಾವು

ಪಶ್ಚಿಮ ಉಗಾಂಡಾದಲ್ಲಿ ಸಂಭವಿಸಿದ ಇಂಧನ ಟ್ಯಾಂಕರ್ ಸ್ಫೋಟದಲ್ಲಿ 20 ಕ್ಕೂ ಹೆಚ್ಚು ಜನರು ಸಾವನ್ನಪ್ಪಿದ್ದು, 12ಕ್ಕೂ ಅಧಿಕ ಮಂದಿ ಗಾಯಗೊಂಡ ಘಟನೆ ಭಾನುವಾರ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕೀನ್ಯಾದಿಂದ ಕಾಂಗೋಗೆ ತೆರಳುತ್ತಿದ್ದಾಗ ಉಗಾಂಡಾದ ಪಶ್ಚಿಮ ರುಬುರಿಜಿ ಜಿಲ್ಲೆಯಲ್ಲಿ ಇಂಧನ ಟ್ಯಾಂಕರ್ ನಲ್ಲಿ ಬೆಂಕಿ ಕಾಣಿಸಿಕೊಂಡು ಈ ಅವಘಡ ಸಂಭವಿಸಿದೆ.

ಟ್ಯಾಂಕರ್ ಚಾಲಕ ವಾಹನದ ನಿಯಂತ್ರಣ ಕಳೆದುಕೊಂಡು ಸರಕು ವಾಹನಕ್ಕೆ ಡಿಕ್ಕಿ ಹೊಡೆದ ಪರಿಣಾಮ ಬೆಂಕಿ ಕಾಣಿಸಿಕೊಂಡು ಟ್ಯಾಂಕರ್ ಸ್ಫೋಟಗೊಂಡಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

"ಈ ಅವಘಡದಲ್ಲಿ ಅಂಗಡಿ ಮಳಿಗೆಗಳು ಮತ್ತು ಮಾರುಕಟ್ಟೆಯಷ್ಟೇ ಅಲ್ಲದೆ, ಎರಡು ವಾಹನಗಳೂ ಬೆಂಕಿಗೆ ಆಹುತಿಯಾಗಿವೆ. ಘಟನೆಯಲ್ಲಿ ಸುಮಾರು 20 ಮಂದಿ ಸಾವನ್ನಪ್ಪಿದ್ದು, ಗಾಯಗೊಂಡವರನ್ನು ಹತ್ತಿರದ ಆಸ್ಪತ್ರೆಗಳಿಗೆ ಸ್ಥಳಾಂತರಿಸಲಾಗಿದೆ" ಎಂದು ಪ್ರದೇಶದ ಪೊಲೀಸ್ ವಕ್ತಾರ ಮಾರ್ಷಲ್ ತುಮುಸಿಮ್ ಹೇಳಿದ್ದಾರೆ.