Viral Video: ವಿಮಾನವೇರಲು ಮುಗಿಬೀಳುತ್ತಿರುವ ಅಫ್ಘಾನ್ ಜನರ ಪರಿಸ್ಥಿತಿ ನೋಡಿ..!

ಮಹತ್ವದ ಬದಲಾವಣೆಗೆ ಸಜ್ಜಾಗಿರುವ ಯುದ್ಧದಿಂದ ಹಾನಿಗೊಳಗಾದ ದೇಶದಿಂದ ಅನೇಕ ಮನಕಲುಕುವ ವಿಡಿಯೋಗಳು ಹೊರಬರುತ್ತಿವೆ.

Written by - Puttaraj K Alur | Last Updated : Aug 16, 2021, 06:36 PM IST
  • ತಾಲಿಬಾನ್‌ ಉಗ್ರರು ಕಾಬೂಲ್ ವಶಕ್ಕೆ ಪಡೆಯುತ್ತಲೇ ದೇಶ ತೊರೆಯಲು ನಿರ್ಧರಿಸಿದ ಅಫ್ಘಾನ್ ಜನರು
  • ಕಾಬೂಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದತ್ತ ಜನರ ದಂಡು, ವಿಮಾನವೇರಲು ನೂಕುನುಗ್ಗಲು
  • ಕಾಬೂಲ್‌ ವಿಮಾನ ನಿಲ್ದಾಣದಲ್ಲಿ ವಾಣಿಜ್ಯ ವಿಮಾನಗಳ ಸಂಚಾರಕ್ಕೆ ಸೋಮವಾರದಿಂದ ಅವಕಾಶವಿಲ್ಲ
Viral Video: ವಿಮಾನವೇರಲು ಮುಗಿಬೀಳುತ್ತಿರುವ ಅಫ್ಘಾನ್ ಜನರ ಪರಿಸ್ಥಿತಿ ನೋಡಿ..! title=
ಕಾಬೂಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಜನಜಾತ್ರೆ

ಕಾಬೂಲ್: ರಾಜಧಾನಿ ಕಾಬೂಲ್ ಸೇರಿದಂತೆ ಅಫ್ಘಾನಿಸ್ತಾನದ ಎಲ್ಲ ಪ್ರದೇಶಗಳ ಮೇಲೂ ತಾಲಿಬಾನ್ ಉಗ್ರ ಸಂಘಟನೆ ಹಿಡಿತ ಸಾಧಿಸಿದೆ. ಭಾನುವಾರವಷ್ಟೇ ಕಾಬೂಲ್ ವಶಪಡಿಸಿಕೊಳ್ಳುವ ಮೂಲಕ ತಾಲಿಬಾನ್ ಉಗ್ರರು ವಿಜಯೋತ್ಸವ ಆಚರಿಸಿದ್ದಾರೆ. ಈ ಹಿನ್ನೆಲೆ ಮುಂದೇನು ಮಾಡುವುದು ಅಂತಾ ಅಫ್ಘಾನ್ ಪ್ರಜೆಗಳು ತಲೆಮೇಲೆ ಕೈಹೊತ್ತು ಕುಳಿತಿದ್ದಾರೆ.

ಉಗ್ರರ ಕಪಿಮುಷ್ಠಿಯಲ್ಲಿ ಸಿಲುಕಿ ಇಡೀ ಅಫ್ಘಾನಿಸ್ತಾನ(Afghanistan)ವೇ ನಲುಗಿ ಹೋಗಿದೆ. ಅಫ್ಘಾನಿಸ್ತಾನವನ್ನು ಸಂಪೂರ್ಣವಾಗಿ ವಶಪಡಿಸಿಕೊಂಡಿರುವ ತಾಲಿಬಾನ್ ಉಗ್ರ ಸಂಘಟನೆ ಸರ್ಕಾರ ರಚಿಸುವುದಾಗಿ ಘೋಷಿಸಿದೆ. ಈ ಮಧ್ಯೆ ದೇಶ ತೊರೆಯಲು ಅಫ್ಘಾನ್ ಪ್ರಜೆಗಳು ನಿರ್ಧರಿಸಿದ್ದಾರೆ. ಹೇಗಾದರೂ ಮಾಡಿ ದೇಶಬಿಟ್ಟು ಬೇರೆಡೆ ಹೋಗಬೇಕು ಎಂದು ನಿರ್ಧರಿಸಿರುವ ಸಾವಿರಾರು ಜನರು ಕಾಬೂಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದತ್ತ ಮುಖಮಾಡಿದ್ದಾರೆ.

ಇದನ್ನೂ ಓದಿ: Afghanistan Crisis: ತಾಲಿಬಾನ್ ಮುಂದೆ ಮಂಡಿಯೂರಿದ ಅಫ್ಘಾನಿಸ್ತಾನ, ದೇಶ ತೊರೆದ ಅಧ್ಯಕ್ಷ Ashraf Ghani

ಪ್ರಜಾಸತ್ತಾತ್ಮಕವಾಗಿ ಚುನಾಯಿತರಾದ ಅಶ್ರಫ್ ಘನಿ(Ashraf Ghani)ಸರ್ಕಾರವನ್ನು ತಾಲಿಬಾನ್ ಉರುಳಿಸಿದ ಬಳಿಕ ದೇಶದ ರಾಜಕೀಯ ಪರಿಸ್ಥಿತಿ ಹದಗೆಟ್ಟು ಹೋಗಿದೆ. ಮಹತ್ವದ ಬದಲಾವಣೆಗೆ ಸಜ್ಜಾಗಿರುವ ಯುದ್ಧದಿಂದ ಹಾನಿಗೊಳಗಾದ ದೇಶದಿಂದ ಅನೇಕ ಮನಕಲುಕುವ ವಿಡಿಯೋಗಳು ಹೊರಬರುತ್ತಿವೆ. ಉಗ್ರರ ಕಪಿಮುಷ್ಠಿಯಿಂದ ಪಾರಾಗಿ ಜೀವ ಉಳಿಸಿಕೊಂಡರೆ ಸಾಕು ಎಂದು ಸಾವಿರಾರು ಜನರು ವಿಮಾನ ನಿಲ್ದಾಣಕ್ಕೆ ಆಗಮಿಸುತ್ತಿದ್ದಾರೆ. ನಿನ್ನೆ ರಾತ್ರಿ ಕಾಬೂಲ್ ವಿಮಾನ ನಿಲ್ದಾಣದಿಂದ ಹೊರಡುವ ಕೊನೆಯ ವಿಮಾನದ ಕಡೆಗೆ ಜನರು ಓಡೋಡಿ ಬರುತ್ತಿರುವ ವಿಡಿಯೋ ಸೋಷಿಯಲ್ ಮೀಡಿಯಾ(Social Media)ಗಳಲ್ಲಿ ಸಖತ್ ವೈರಲ್ ಆಗಿವೆ.

ಕಾಬೂಲ್‌ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ(Hamid Karzai International Airport)ದಲ್ಲಿ ವಾಣಿಜ್ಯ ವಿಮಾನಗಳ ಸಂಚಾರಕ್ಕೆ ಸೋಮವಾರದಿಂದ ಅವಕಾಶ ಕಲ್ಪಿಸಿಲ್ಲ. ವಿಮಾನ ನಿಲ್ದಾಣದಲ್ಲಿ ಸಾವಿರಾರು ಮಂದಿ ಸೇರಿದ್ದರಿಂದ ಗದ್ದಲ ಮತ್ತು ಗೊಂದಲಮಯ ಪರಿಸ್ಥಿತಿ ನಿರ್ಮಾಣವಾಗಿದೆ. ಅಫ್ಘಾನಿಸ್ತಾನದಿಂದ ತೆರಳಲು ಈ ವಿಮಾನ ನಿಲ್ದಾಣದಿಂದ ಮಾತ್ರ ಅವಕಾಶವಿದೆ. ಹೀಗಾಗಿ ಸಾವಿರಾರು ಸಂಖ್ಯೆಯ ಜನರು ಆಗಮಿಸುತ್ತಿದ್ದಾರೆ. ಜನಜಾತ್ರೆಯಂತೆ ಜನರು ಸೇರಿರುವ ವಿಡಿಯೋಗಳು ಸಾಮಾಜಿಕ ಜಾಲತಾಣಗಳ ತುಂಬ ಹರಿದಾಡುತ್ತಿವೆ.

ಇದನ್ನೂ ಓದಿ: Afghanistan Crisis: ತಾಲಿಬಾನಿಗಳ ಮುಂದೆ ಕಾಬೂಲ್ ಸರೆಂಡರ್! ಅಧಿಕಾರ ಹಸ್ತಾಂತರಕ್ಕೆ ಮಾತುಕತೆ ಆರಂಭ !

‘ಲೂಟಿ ತಡೆಯಲು ವಾಣಿಜ್ಯ ವಿಮಾನಗಳ ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ. ಯಾರೂ ಕಾಬೂಲ್‌ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬರಬಾರದು’ ಅಂತಾ ವಿಮಾನ ನಿಲ್ದಾಣ ಪ್ರಾಧಿಕಾರ ತಿಳಿಸಿದೆ. ಆದರೂ ಕೂಡ ಜನರು ದಂಡು ದಂಡಾಗಿ ಆಗಮಿಸುತ್ತಿದ್ದು, ವಿಮಾನವೇರಲು ಪೈಪೋಟಿ ನಡೆಸುತ್ತಿದ್ದಾರೆ. ಅಫ್ಘಾನಿಸ್ತಾನದಲ್ಲಿ ತಾಲಿಬಾನ್(Taliban)ಅಧಿಕೃತವಾಗಿ ತಮ್ಮ ಹೊಸ ಆಡಳಿತ ಜಾರಿಗೊಳಿಸುವ ಮೊದಲು ಜನರು ದೇಶವನ್ನು ತೊರೆಯಲು ಶತಪ್ರಯತ್ನ ನಡೆಸುತ್ತಿದ್ದಾರೆ.  

ಅಫ್ಘಾನಿಸ್ತಾನ(Afghanistan)ದಿಂದ ತನ್ನ ಮತ್ತು ಮಿತ್ರ ರಾಷ್ಟ್ರಗಳ ನಾಗರಿಕರು ಸುರಕ್ಷಿತವಾಗಿ ಸ್ವದೇಶಕ್ಕೆ ತೆರಳುವಂತೆ ಅನುಕೂಲ ಕಲ್ಪಿಸಲು ಅಮೆರಿಕ 6 ಸಾವಿರ ಯೋಧರನ್ನು ಕಾಬೂಲ್‌ ವಿಮಾನ ನಿಲ್ದಾಣದಲ್ಲಿ ನಿಯೋಜಿಸಲು ನಿರ್ಧರಿಸಿದೆ. ಅಫ್ಘಾನಿಸ್ತಾನವನ್ನು ತಾಲಿಬಾನ್‌ ತನ್ನ ವಶಕ್ಕೆ ತೆಗೆದುಕೊಂಡಿರುವುದರಿಂದ ಅಮೆರಿಕ ಈ ಕ್ರಮಕೈಗೊಂಡಿದೆ ಎಂದು ತಿಳಿದುಬಂದಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy

ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News