ಗಾಳಿಯಿಂದಲೂ ಬರಬಹುದು ಕರೋನಾ ವೈರಸ್: ಸಂಶೋಧನೆ

ಹೊಸ ಅಧ್ಯಯನವೊಂದು ವಾಯುಮಾಲಿನ್ಯದ ಕಣಗಳ ಮೇಲೆಯೂ ಮಾರಕ COVID-19 ರೋಗಕಾರಕದ ಉಪಸ್ಥಿತಿಯನ್ನು ಪತ್ತೆ ಮಾಡಿದೆ. 

Last Updated : Apr 25, 2020, 09:50 AM IST
ಗಾಳಿಯಿಂದಲೂ ಬರಬಹುದು ಕರೋನಾ ವೈರಸ್: ಸಂಶೋಧನೆ title=

ನವದೆಹಲಿ: ಜಗತ್ತಿಗೇ ಕಂಟಕ ಪ್ರಾಯವಾಗಿ ಕಾಡುತ್ತಿರುವ ಮಹಾಮಾರಿ ಕರೋನಾವೈರಸ್ (Coronavirus)   ಮಟ್ಟ ಹಾಕಲು ಹೋರಾಟ ಮುಂದುವರೆದಿದೆ. ಏತನ್ಮಧ್ಯೆ ಹೊಸ ಅಧ್ಯಯನವೊಂದು ವಾಯುಮಾಲಿನ್ಯದ ಕಣಗಳ ಮೇಲೆಯೂ COVID-19 ವೈರಸ್ ಇರುವುದನ್ನು ಪತ್ತೆ ಮಾಡಿದೆ.

ಇಟಲಿ (Italy)ಯ ಬರ್ಗಾಮೊ ಪ್ರಾಂತ್ಯದ ಕೈಗಾರಿಕಾ ತಾಣಗಳಿಂದ ಸಂಗ್ರಹಿಸಲಾದ ಮಾದರಿಗಳಲ್ಲಿ COVID-19 ನಿರ್ದಿಷ್ಟ ಜೀನ್ ಇರುವಿಕೆಯನ್ನು ಇಟಾಲಿಯನ್ ವಿಜ್ಞಾನಿಗಳು ಪತ್ತೆ ಹಚ್ಚಿದ್ದು ಖಾಸಗಿ ಪ್ರಯೋಗಾಲಯದಿಂದ ಇದನ್ನು ದೃಢಪಡಿಸಲಾಗಿದೆ.

ಇಟಲಿಯ ಬೊಲೊಗ್ನಾ ವಿಶ್ವವಿದ್ಯಾಲಯದ ಲಿಯೊನಾರ್ಡೊ ಸೆಟ್ಟಿ ಈ ಸಂಶೋಧನೆಯ ಮಾರ್ಗದರ್ಶಕರಾಗಿದ್ದು ವಾಯುಮಾಲಿನ್ಯದಿಂದ ವೈರಸ್ ಹೆಚ್ಚು ವ್ಯಾಪಕವಾಗಿ ಹರಡಬಹುದೇ  ಎಂಬುದರ ಬಗ್ಗೆ ತನಿಖೆ ಕೈಗೊಳ್ಳುವುದು ಅತ್ಯಗತ್ಯ ಎಂದು ಅಭಿಪ್ರಾಯ ಪಟ್ಟಿದ್ದಾರೆ.

ನಾನೊಬ್ಬ ವಿಜ್ಞಾನಿಯಾಗಿ ಯಾವುದಾದರು ರೋಗದ ಬಗ್ಗೆ ನನಗೆ ಗೊತ್ತಿಲ್ಲದಿದ್ದಾಗ ನಾನು ಅದರ ಬಗ್ಗೆ ಚಿಂತಿಸುತ್ತೇನೆ. ಆದರೆ ಆ ಬಗ್ಗೆ ನಮಗೆ ಮಾಹಿತಿ ಇದ್ದಾಗ ಚಿಂತಿಸುವ ಬದಲಿಗೆ ಪರಿಹಾರ ಕಂಡುಕೊಳ್ಳಬಹುದು ಎಂದು  ದಿ ಗಾರ್ಡಿಯನ್ ವರದಿಯಲ್ಲಿ ಸೆಟ್ಟಿ ಹೇಳಿದ್ದಾರೆ.

ಇಟಲಿಯ ಈ ನೂತನ ಸಂಶೋಧನೆಯ ಹೊರತಾಗಿ ಈ ಹಿಂದಿನ ಹಲವು ಸಂಶೋಧನೆಗಳೂ ಸಹ ಕೊರೋನಾವೈರಸ್ ಮಾಲಿನ್ಯ ಕಣಗಳ ಮೂಲಕ ಹರಡಬಹುದು ಎಂದು ಸೂಚಿಸಿವೆ. ಅಷ್ಟೇ ಅಲ್ಲದೆ ಈ ಹಿಂದಿನ ಅಧ್ಯಯನಗಳು ವಾಯುಮಾಲಿನ್ಯದ ಕಣಗಳು ಸೂಕ್ಷ್ಮಜೀವಿಗಳನ್ನು ಆಶ್ರಯಿಸುತ್ತವೆ ಮತ್ತು ಮಾಲಿನ್ಯವು ಪಕ್ಷಿ ಜ್ವರ, ದಡಾರ ಮತ್ತು ಕಾಲು-ಬಾಯಿ ರೋಗ ವೈರಸ್‌ಗಳನ್ನು ಸಾಕಷ್ಟು ವೇಗವಾಗಿ ಹರಡುವ ಸಾಧ್ಯತೆಯಿದೆ ಎಂದು ತೋರಿಸಿವೆ.

ವಾಯುಮಾಲಿನ್ಯ ಕಣಗಳ ಸಂಭಾವ್ಯ ಪಾತ್ರವು ಕರೋನವೈರಸ್ ಹೇಗೆ ಹರಡುತ್ತದೆ ಎಂಬ  ಪ್ರಶ್ನೆಗೆ ಸಂಬಂಧಿಸಿದೆ. 2003ರಲ್ಲಿ ಎಲ್ಲರನ್ನೂ ಬೆಚ್ಚಿ ಬೀಳಿಸಿದ್ದ ಸಾರ್ಸ್ ಕರೋನವೈರಸ್ ಗಾಳಿಯಲ್ಲಿ ಹರಡಿತು ಮತ್ತು ಕೋವಿಡ್-19 (Covid-19)  ರೋಗಕಾರಕವು ಸಣ್ಣ ಹನಿಗಳಲ್ಲಿ ಗಂಟೆಗಳವರೆಗೆ ಜೀವಂತವಾಗಿರುತ್ತವೆ ಎಂದು ತಿಳಿದಿದ್ದರೂ ಸೋಂಕಿತ ವ್ಯಕ್ತಿಗಳಿಂದ ಸಣ್ಣ ವಾಯುಗಾಮಿ ಹನಿಗಳು ಸಾಂಕ್ರಾಮಿಕವಾಗಿದೆಯೆ ಎಂಬುದರ ಬಗ್ಗೆ ತಜ್ಞರು ಇನ್ನೂ ಖಚಿತ ಪಡಿಸಿಲ್ಲ.

ಆದರೆ ಯಾವುದೇ ವೈಜ್ಞಾನಿಕ ಪುರಾವೆಗಳಿಲ್ಲದೆ ವಾಯು ಮಾಲಿನ್ಯಕಾರಕಗಳು ವೈರಸ್ ಅನ್ನು ಸಾಗಿಸುವ ಸಾಧ್ಯತೆಯನ್ನು ತಳ್ಳಿಹಾಕಲಾಗುವುದಿಲ್ಲ ಎಂದು ಸಂಶೋಧಕರು ಹೇಳುತ್ತಾರೆ.

Trending News