ಡೇನಿಸ್​​ ಮುಕ್ವೆಜ್​, ನಾಡಿಯಾ ಮುರಾದ್​ಗೆ 2018 ರ ನೊಬೆಲ್ ಶಾಂತಿ​ ಪುರಸ್ಕಾರ!

ಲೈಂಗಿಕ  ಹಿಂಸೆಯನ್ನು ಯುದ್ದಾಸ್ತ್ರವಾಗಿ ಬಳಸುವುದರ ವಿರುದ್ಧದ ಹೋರಾಟಕ್ಕಾಗಿ ಡೆನಿಸ್ ಮುಕ್ವೆಜ್ ಮತ್ತು ನಾಡಿಯಾ ಮುರಾದ್ ಅವರಿಗೆ  2018 ರ ನೊಬೆಲ್ ಶಾಂತಿ ಪ್ರಶಸ್ತಿಯನ್ನು ನೀಡಲಾಗುತ್ತಿದೆ.

Updated: Oct 5, 2018 , 04:47 PM IST
ಡೇನಿಸ್​​ ಮುಕ್ವೆಜ್​, ನಾಡಿಯಾ ಮುರಾದ್​ಗೆ 2018 ರ ನೊಬೆಲ್ ಶಾಂತಿ​ ಪುರಸ್ಕಾರ!

ನ್ಯೂಯಾರ್ಕ್: ಲೈಂಗಿಕ ದೌರ್ಜನ್ಯದ ವಿರುದ್ಧ ಹೋರಾಡುತ್ತಿರುವ ಕಂಗೊದ ಸ್ತ್ರೀ ರೋಗ ತಜ್ಞ ಡೇನಿಸ್​​ ಮುಕ್ವೆಜ್ ಹಾಗೂ ಯಝೀದಿ ಹೋರಾಟಗಾರ್ತಿ ನಾಡಿಯಾ ಮುರಾದ್ ಅವರಿಗೆ 2018ನೇ ಸಾಲಿನ ನೊಬೆಲ್ ಶಾಂತಿ ಪುರಸ್ಕಾರ ಲಭಿಸಿದೆ.

ಲೈಂಗಿಕ ಹಿಂಸೆಯನ್ನು ಯುದ್ಧಾಸ್ತ್ರವಾಗಿ ಬಳಸುವುದರ ವಿರುದ್ಧ ಹೋರಾಡಿದ ಇವರಿಗೆ 2018ರ ನೊಬೆಲ್​ ಪುರಸ್ಕಾರ ನೀಡಲು ಸಮಿತಿ ಮುಂದಾಗಿದೆ ಎಂದು ನೊಬೆಲ್​ ಸಮಿತಿ ಅಧ್ಯಕ್ಷೆ ಬೆಲಿಟ್​ ರೀಸ್​ ಆ್ಯಂಡ್ರೆಸೆನ್​  ತಿಳಿಸಿದ್ದಾರೆ. ಇಬ್ಬರು ಪ್ರಶಸ್ತಿ  ಪುರಸ್ಕೃತರು ಯುದ್ಧಾಪರಾಧಗಳ ವಿರುದ್ಧದ ಹೋರಾಟಕ್ಕಾಗಿ  ಪ್ರಮುಖ ಕೊಡುಗೆ ನೀಡಿದ್ದಾರೆ.

ಸ್ತ್ರೀ ರೋಗ ತಜ್ಞರಾಗಿರುವ ಡೆನಿಸ್ ಮುಕ್ವೆಜ್  ಹೀಗೆ ಬಲಿಯಾದವರಿಗಾಗಿ ತಮ್ಮ ಜೀವಮಾನ ಹೋರಾಟ ನಡೆಸಿದ್ದಾರೆ. ಯುದ್ದದ ಸಂದರ್ಭದಲ್ಲಿ ಲೈಂಗಿಕ ಹಿಂಸೆ ಹಾಗೂ ಸಶಸ್ತ್ರ ಸಂಘರ್ಷದ ವಿರುದ್ಧ  ರಾಷ್ಟ್ರೀಯ ಹಾಗೂ ಅಂತಾರಾಷ್ಟ್ರೀಯ ಮಟ್ಟದ ಸಂಕೇತವಾಗಿ ಡೆನಿಸ್ ಮುಕ್ವೆಜ್  ಹೋರಾಟ ನಡೆಸಿದ್ದಾರೆ ಎಂದು ನೊಬೆಲ್ ಸಮಿತಿ ಹೇಳಿದೆ.

ಇರಾಕ್ ನಲ್ಲಿ 2014ರಲ್ಲಿ ಐಸಿಸ್ ಸಂಘಟನೆಯ ಉಗ್ರರಿಗೆ ಸೆರೆ ಸಿಕ್ಕಿದ್ದ ಯಾಜಿದಿ ಮಹಿಳೆ ನಾಡಿಯಾ ಮುರಾದ್, ನಿರಂತರ ಲೈಂಗಿಕ ದೌರ್ಜನ್ಯಕ್ಕೊಳಗಾಗಿದ್ದರು. ಕೆಲದಿನಗಳ ಬಳಿಕ ಅಲ್ಲಿಂದ ತಪ್ಪಿಸಿಕೊಂಡಿದ್ದ ಅವರು ಮಾನವ ಹಕ್ಕುಗಳ ಹೋರಾಟ ಆರಂಭಿಸಿದ್ದರು. ನಾಡಿಯಾ ಮುರಾದ್ ಸ್ವತಃ ನೋವು ನುಂಗಿಕೊಂಡು ಎಲ್ಲವನ್ನು ಧೈರ್ಯದಿಂದ ಎದುರಿಸಿದ್ದಾರೆ ಎಂದು ನೊಬೆಲ್  ಪ್ರಶಸ್ತಿ ಸಮಿತಿ ತಿಳಿಸಿದೆ.