Financial Crisis: ಈ ದೇಶದಲ್ಲಿ ಲೀಟರ್ ಪೆಟ್ರೋಲ್‌ಗೆ 303 ರೂ.!

ತೈಲವನ್ನು ಆಮದು ಮಾಡಿಕೊಳ್ಳಲು ವಿದೇಶಿ ವಿನಿಮಯದ ಕೊರತೆ ಎದುರಾಗಿರುವುದರಿಂದ ಶ್ರೀಲಂಕಾದಲ್ಲಿ ತೈಲದರ ಮತ್ತೆ ಶೇ.20ರಷ್ಟು ಏರಿಕೆಯಾಗಿದೆ.

Written by - Puttaraj K Alur | Last Updated : Mar 27, 2022, 10:03 AM IST
  • 1948ರಲ್ಲಿ ಬ್ರಿಟನ್‌ನಿಂದ ಸ್ವಾತಂತ್ರ್ಯ ಪಡೆದ ಶ್ರೀಲಂಕಾದಲ್ಲಿ ಕೆಟ್ಟ ಆರ್ಥಿಕ ಬಿಕ್ಕಟ್ಟು ಉಂಟಾಗಿದೆ
  • ತೈಲ ಆಮದಿಗೆ ವಿದೇಶಿ ವಿನಿಮಯ ಕೊರತೆ ಹಿನ್ನೆಲೆ ಶ್ರೀಲಂಕಾದಲ್ಲಿ ತೈಲದರ ಮತ್ತೆ ಶೇ.20ರಷ್ಟು ಏರಿಕೆ
  • ಶ್ರೀಲಂಕಾ ಐಒಸಿ ಲೀಟರ್ ಪೆಟ್ರೋಲ್ ದರವನ್ನು 49 ರೂ.ನಷ್ಟು ಹೆಚ್ಚಿಸಿದ್ದು, 303 ರೂ.ಗೆ ತಲುಪಿದೆ
Financial Crisis: ಈ ದೇಶದಲ್ಲಿ ಲೀಟರ್ ಪೆಟ್ರೋಲ್‌ಗೆ 303 ರೂ.!   title=
ಶ್ರೀಲಂಕಾದಲ್ಲಿ ಕೆಟ್ಟ ಆರ್ಥಿಕ ಬಿಕ್ಕಟ್ಟು ಉಂಟಾಗಿದೆ

ನವದೆಹಲಿ: 1948ರಲ್ಲಿ ಬ್ರಿಟನ್‌ನಿಂದ ಸ್ವಾತಂತ್ರ್ಯ ಪಡೆದ ಶ್ರೀಲಂಕಾ ಇದೀಗ ಕೆಟ್ಟ ಆರ್ಥಿಕ ಬಿಕ್ಕಟ್ಟಿನಿಂದ(Sri Lanka Financial Crisis) ಕಂಗೆಟ್ಟು ಹೋಗಿದೆ. ತೈಲವನ್ನು ಆಮದು ಮಾಡಿಕೊಳ್ಳಲು ವಿದೇಶಿ ವಿನಿಮಯದ ಕೊರತೆ ಎದುರಾಗಿರುವುದರಿಂದ ಶ್ರೀಲಂಕಾದಲ್ಲಿ ತೈಲದರ ಮತ್ತೆ ಶೇ.20ರಷ್ಟು ಏರಿಕೆಯಾಗಿದೆ. ಪರಿಣಾಮ ದ್ವೀಪರಾಷ್ಟ್ರದಲ್ಲಿ ಇದೀಗ ಲೀಟರ್ ಪೆಟ್ರೋಲ್ ಬೆಲೆ 303 ರೂ.ಗೆ ಏರಿಕೆಯಾಗಿದೆ.  

ಶ್ರೀಲಂಕಾದ ತೈಲ ಮಾರುಕಟ್ಟೆಯ 3ನೇ ಒಂದು ಭಾಗದಷ್ಟು ತೈಲ ಪೂರೈಸುವ ಶ್ರೀಲಂಕಾ ಐಒಸಿ(Indian Oil Corporation Sri Lanka) 1 ಲೀಟರ್ ಪೆಟ್ರೋಲ್ ದರವನ್ನು 49 ರೂ.ನಷ್ಟು ಹೆಚ್ಚಿಸಿದ್ದು, 303 ರೂ.ಗೆ ತಲುಪಿದೆ. ಕಳೆದ 15 ದಿನದಲ್ಲಿ 2ನೇ ಬಾರಿ ಬೆಲೆ ಏರಿಕೆ ಮಾಡಿದಂತಾಗಿದೆ. ಶ್ರೀಲಂಕಾದ ಕರೆನ್ಸಿಯಾದ ರೂಪಾಯಿ ಈ ತಿಂಗಳಿನಲ್ಲಿ ಅಮೆರಿಕನ್ ಡಾಲರ್ ಹಾಗೂ ಇತರ ಪ್ರಮುಖ ಕರೆನ್ಸಿಗಳ ಎದುರು ಶೇ.30ರಷ್ಟು ಅಪಮೌಲ್ಯಗೊಂಡಿದೆ. ಹೀಗಾಗಿ ತೈಲ ದರ ಏರಿಕೆ ಅನಿವಾರ್ಯವೆಂದು ಲಂಕಾ ಐಒಸಿ ಹೇಳಿದೆ.

ಇದನ್ನೂ ಓದಿ: Economic Crisis: ಈ ದೇಶದಲ್ಲಿ ಪೇಪರ್ ಪ್ರಿಂಟ್ ಮಾಡಲೂ ಇಲ್ಲ ಹಣ: ಲಕ್ಷಾಂತರ ಮಕ್ಕಳ ಭವಿಷ್ಯ ಕತ್ತಲಲ್ಲಿ!

ಶ್ರೀಲಂಕಾ ಸರ್ಕಾರಿ ಸ್ವಾಮ್ಯದ ತೈಲ ಮಾರಾಟ ಸಂಸ್ಥೆ ಸಿಲೋನ್ ಪೆಟ್ರೋಲಿಯಂ ಕಾರ್ಪೊರೇಶನ್(Ceylon Petroleum Corporation) ಸಹ ದರ ಏರಿಸಲು ನಿರ್ಧರಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ದೇಶದ ವಿದೇಶಿ ವಿನಿಮಯ ದಾಸ್ತಾನು ಕನಿಷ್ಟ ಮಟ್ಟಕ್ಕೆ ತಲುಪಿದ್ದು, ಇದರಿಂದ ಆಹಾರ, ತೈಲ, ಔಷಧ ಮುಂತಾದ ದೈನಂದಿನ ಅಗತ್ಯದ ವಸ್ತುಗಳನ್ನು ವಿದೇಶದಿಂದ ಆಮದು ಮಾಡಿಕೊಳ್ಳಲು ತೊಡಕಾಗಿದೆ. ತೈಲ ಖರೀದಿಸಲು ದೊಡ್ಡ ಕ್ಯೂನಲ್ಲಿ ನಿಂತಿದ್ದ ವೇಳೆ 4 ಮಂದಿ ಕುಸಿದುಬಿದ್ದು ಮೃತಪಟ್ಟ ಘಟನೆ ಕಳೆದ ವಾರ ವರದಿಯಾಗಿದೆ.

ಪ್ರವಾಸೋದ್ಯಮವೇ ದ್ವೀಪರಾಷ್ಟ್ರ ಶ್ರೀಲಂಕಾ(Sri Lanka Economy Reels)ಗೆ ಪ್ರಮುಖ ಆದಾಯದ ಮೂಲವಾಗಿದೆ. ಕಳೆದ 2 ವರ್ಷಗಳಿಂದ ಕೊರೊನಾ ಸಾಂಕ್ರಾಮಿಕದ ಹೊಡೆತಕ್ಕೆ ಸಿಲುಕಿ ತತ್ತರಿಸಿ ಹೋಗಿರುವ ಲಂಕಾದ ಅರ್ಥವ್ಯವಸ್ಥೆ ಸಂಪೂರ್ಣ ಹದಗೆಟ್ಟು ಹೋಗಿದೆ. ವಿದೇಶಿ ವಿನಿಮಯ ಉಳಿಸಿಕೊಳ್ಳುವ ಉದ್ದೇಶದಿಂದ 2020ರ ಮಾರ್ಚ್‌ನಲ್ಲಿ ಸರ್ಕಾರವು ಆಮದಿನ ಮೇಲೆ ನಿಷೇಧ ಹೇರಿತ್ತು. ಪರಿಣಾಮ ದೈನಂದಿನ ಬಳಕೆಯ ವಸ್ತುಗಳ ಕೊರತೆ ಎದುರಾಗಿದ್ದು, ಕಳೆದ ತಿಂಗಳು ಆಹಾರದ ದರ ಶೇ.25ರಷ್ಟು ಹೆಚ್ಚಾಗಿದ್ದರೆ, ಹಣದುಬ್ಬರದ ಪ್ರಮಾಣ ಶೇ.17.5ರಷ್ಟು ಏರಿಕೆಯಾಗಿದೆ.

ಇದನ್ನೂ ಓದಿ: ಮಣ್ಣು ಉಳಿಸಿ ಅಭಿಯಾನಕ್ಕಾಗಿ ಲಂಡನ್‌ನಿಂದ 100-ದಿನಗಳ ಮೋಟಾರ್‌ಸೈಕಲ್ ಪ್ರಯಾಣ ಆರಂಭಿಸಿದ ಸದ್ಗುರು

ದ್ವೀಪರಾಷ್ಟ್ರದಲ್ಲಿ ವಿದ್ಯುತ್ ಉತ್ಪಾದನೆಗೆ ತೈಲದ ಕೊರತೆ(Sri Lanka Financial Crisis) ಎದುರಾಗಿರುವುದರಿಂದ ವಿದ್ಯುತ್ ಉತ್ಪಾದನೆ ಕುಸಿತ ಕಂಡಿದೆ. ಹೀಗಾಗಿ ದೇಶದೆಲ್ಲೆಡೆ ದಿನಕ್ಕೆ 5 ಗಂಟೆ ವಿದ್ಯುತ್ ಕಡಿತಕ್ಕೆ ಲಂಕಾ ಸರ್ಕಾರ ಆದೇಶಿಸಿದೆ. ಅಂತಾರಾಷ್ಟ್ರೀಯ ಸಾಲದ ಹೊರೆ ಹೆಚ್ಚಿರುವುದರಿಂದ ತುರ್ತು ಸಾಲಕ್ಕೆ ಅಂತಾರಾಷ್ಟ್ರೀಯ ಹಣಕಾಸು ನಿಧಿ(IMF)ಗೆ ಮನವಿ ಮಾಡಿರುವುದಾಗಿ ಸರ್ಕಾರ ಹೇಳಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News