ಅಮೆರಿಕದ ನ್ಯೂಜೆರ್ಸಿಯಲ್ಲಿ ಗುಂಡಿನ ದಾಳಿ

ಈ ಗುಂಡಿನ ದಾಳಿಯಲ್ಲಿ ಪೊಲೀಸ್ ಅಧಿಕಾರಿ ಸೇರಿದಂತೆ 6 ಜನರು ಸಾವನ್ನಪ್ಪಿದ್ದಾರೆ ಎಂದು ನ್ಯೂಜೆರ್ಸಿಯ ಮುಖ್ಯ ಪೊಲೀಸ್ ಅಧಿಕಾರಿ ಮೈಕೆಲ್ ಕೆಲ್ಲಿ ಹೇಳಿದ್ದಾರೆ.

Updated: Dec 11, 2019 , 09:34 AM IST
ಅಮೆರಿಕದ ನ್ಯೂಜೆರ್ಸಿಯಲ್ಲಿ ಗುಂಡಿನ ದಾಳಿ
Representational Image

ನ್ಯೂಜೆರ್ಸಿ: ಅಮೆರಿಕದ ನ್ಯೂಜೆರ್ಸಿಯಲ್ಲಿ ಮಂಗಳವಾರ ಗುಂಡಿನ ದಾಳಿ ನಡೆದಿದೆ. ಅಂಗಡಿಯ ಹೊರಗೆ ನಡೆದ ಈ ಗುಂಡಿನ ದಾಳಿಯಲ್ಲಿ 1 ಪೊಲೀಸ್ ಅಧಿಕಾರಿ ಸೇರಿದಂತೆ 6 ಜನರು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ. ಲಭ್ಯವಾಡ ಮಾಹಿತಿಯ ಪ್ರಕಾರ, ನ್ಯೂಜೆರ್ಸಿಯಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಓರ್ವ ಪೊಲೀಸ್ ಅಧಿಕಾರಿ ಸಾವನ್ನಪ್ಪಿದ್ದಾನೆ, ಜೊತೆಗೆ 5 ಇತರ ನಾಗರಿಕರು ಸಹ ಸಾವನ್ನಪ್ಪಿದ್ದಾರೆ. ಇದಲ್ಲದೆ ಈ ಗುಂಡಿನ ದಾಳಿಯಲ್ಲಿ ಇಬ್ಬರು ಪೊಲೀಸ್ ಅಧಿಕಾರಿಗಳು ಗಾಯಗೊಂಡಿದ್ದಾರೆ ಎನ್ನಲಾಗಿದೆ.

ಘಟನೆ ಕುರಿತು ಮಾಹಿತಿ ನೀಡಿದ ನ್ಯೂಜೆರ್ಸಿಯ ಮುಖ್ಯ ಪೊಲೀಸ್ ಅಧಿಕಾರಿ ಮೈಕೆಲ್ ಕೆಲ್ಲಿ, ಕೆಲವು ಜನರು ಶಸ್ತ್ರಾಸ್ತ್ರಗಳೊಂದಿಗೆ ಅಂಗಡಿಯೊಂದನ್ನು ಪ್ರವೇಶಿಸಿದ್ದಾರೆ ಎಂಬ ಮಾಹಿತಿಯು ಪೊಲೀಸರಿಗೆ ಲಭ್ಯವಾಗಿದೆ. ನಂತರ ಕೂಡಲೇ, ಪೊಲೀಸ್ ತಂಡ ಸ್ಥಳಕ್ಕೆ ತಲುಪಿದಾಗ, ದುಷ್ಕರ್ಮಿಗಳು ಅಂಗಡಿಯ ಒಳಗಿನಿಂದ ಪೊಲೀಸರಿಗೆ ಗುಂಡು ಹಾರಿಸಿದರು. ಈ ವೇಳೆ ಪೊಲೀಸ್ ಅಧಿಕಾರಿ ಸೇರಿದಂತೆ 6 ಜನರು ಮೃತಪಟ್ಟಿದ್ದಾರೆ ಎಂದರು.

ಆದಾಗ್ಯೂ ಇದನ್ನು ಭಯೋತ್ಪಾದಕ ಘಟನೆ ಅಲ್ಲ ಎಂದು ಅಧಿಕಾರಿಗಳು ನಂಬಿದ್ದಾರೆ ಎಂದು ನಗರದ ಸಾರ್ವಜನಿಕ ಸುರಕ್ಷತಾ ನಿರ್ದೇಶಕ ಜೇಮ್ಸ್ ಶಿಯಾ ಹೇಳಿದ್ದಾರೆ. ಆದರೆ ಇನ್ನೂ ಇದರ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದವರು ತಿಳಿಸಿದರು.

ಮತ್ತೊಂದೆಡೆ, ಗುಂಡಿನ ದಾಳಿ ಘಟನೆ ವರದಿಯಾದ ಬಳಿಕ ಆ ಪ್ರದೇಶದ ಹತ್ತಿರದ ಶಾಲೆಗಳನ್ನು ಮುಚ್ಚಲಾಗಿದೆ. ಶೂಟ್ ಔಟ್ ಸಮಯದಲ್ಲಿ, ಪೊಲೀಸರು ಹಡ್ಸನ್ ನದಿಯ ಬಳಿಯ ಮುಖ್ಯ ಮಾರ್ಗಗಳನ್ನು ಸಹ ಮುಚ್ಚಿದ್ದರು ಎಂದು ಮಾಹಿತಿ ಲಭ್ಯವಾಗಿದೆ. ಇನ್ನು ದೇಶದಲ್ಲಿ ನಡೆಯುತ್ತಿರುವ ಇಂತಹ ಘಟನೆಗಳ ಬಗ್ಗೆ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಖುದ್ದು ನಿಗಾ ವಹಿಸಿದ್ದಾರೆ ಎಂದು ಹೇಳಲಾಗುತ್ತಿದೆ.