ನವದೆಹಲಿ: ಅಧಿಕ ಪ್ರಮಾಣದಲ್ಲಿ ವಿದೇಶಿ ಕಂಪನಿಗಳುಮಾರುಕಟ್ಟೆಯಲ್ಲಿ ಹೂಡಲು ಬಯಸಿದ್ದಲ್ಲಿ ಅಂತಹ ಕಂಪನಿಗಳು ಭಾರತಕ್ಕೆ ಬರಬೇಕು ಎಂದು ಪ್ರಧಾನಿ ಮೋದಿ ತಿಳಿಸಿದ್ದಾರೆ.
ಬುಧುವಾರದಂದು ನ್ಯೂಯಾರ್ಕ್ ನ ಗ್ಲೋಬಲ್ ಬಿಸಿನೆಸ್ ಫೋರಂನಲ್ಲಿ ಮಾತನಾಡಿದ ಪ್ರಧಾನಿ ಮೋದಿ 'ನೀವು ಇತ್ತೀಚಿನ ಪ್ರವೃತ್ತಿಗಳು ಮತ್ತು ವೈಶಿಷ್ಟ್ಯಗಳನ್ನು ಮೆಚ್ಚುವ ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಲು ಬಯಸಿದರೆ, ಭಾರತಕ್ಕೆ ಬನ್ನಿ, ನೀವು ದೊಡ್ಡ ಮಾರುಕಟ್ಟೆಯೊಂದಿಗೆ ಸ್ಟಾರ್ಟ್ ಅಪ್ ಗಳಲ್ಲಿ ಹೂಡಿಕೆ ಮಾಡಲು ಬಯಸಿದರೆ, ಭಾರತಕ್ಕೆ ಬನ್ನಿ" ಎಂದು ಹೇಳಿದರು.
ವಿಶ್ವದ ಅತಿದೊಡ್ಡ ಮೂಲಸೌಕರ್ಯ ಪರಿಸರ ವ್ಯವಸ್ಥೆಯಾಗಿ ಭಾರತದ ನಿಲುವನ್ನು ವಿವರಿಸಿರುವ ಪ್ರಧಾನಿ ಮೋದಿ ಅವರು ಜಾಗತಿಕ ವ್ಯಾಪಾರ ಸಮುದಾಯವನ್ನು ದೇಶದಲ್ಲಿ ನಗರೀಕರಣದಲ್ಲಿ ಬಂಡವಾಳ ಹೂಡಿಕೆ ಮಾಡಲು ಆಹ್ವಾನಿಸಿದ್ದಾರೆ. 'ನೀವು ವಿಶ್ವದ ಅತಿದೊಡ್ಡ ಮೂಲಸೌಕರ್ಯ ಪರಿಸರ ವ್ಯವಸ್ಥೆಯಲ್ಲಿ ಹೂಡಿಕೆ ಮಾಡಲು ಬಯಸಿದರೆ, ಭಾರತಕ್ಕೆ ಬನ್ನಿ. ನಾವು ನಮ್ಮ ನಗರಗಳನ್ನು ವೇಗವಾಗಿ ಆಧುನೀಕರಿಸುತ್ತಿದ್ದೇವೆ ಮತ್ತು ಅವುಗಳನ್ನು ಇತ್ತೀಚಿನ ತಂತ್ರಜ್ಞಾನ ಮತ್ತು ನಾಗರಿಕ ಸ್ನೇಹಿ ಮೂಲಸೌಕರ್ಯಗಳೊಂದಿಗೆ ಸಜ್ಜುಗೊಳಿಸುತ್ತಿದ್ದೇವೆ. ಹೀಗಾಗಿ ನೀವು ನಗರೀಕರಣದಲ್ಲಿ ಹೂಡಿಕೆ ಮಾಡಲು ಬಯಸಿದರೆ, ಭಾರತಕ್ಕೆ ಬನ್ನಿ' ಎಂದು ಆಹ್ವಾನ ನೀಡಿದರು.
ಇದೇ ವೇಳೆ ರಕ್ಷಣಾ ವಲಯದಲ್ಲಿ ಹೂಡಿಕೆ ಅವಕಾಶಗಳ ಬಗ್ಗೆ ಮಾತನಾಡಿದ ಪ್ರಧಾನಿ ಮೋದಿ ' ನಾವು ಹಿಂದೆಂದಿಗಿಂತಲೂ ನಮ್ಮ ರಕ್ಷಣಾ ಕ್ಷೇತ್ರವನ್ನು ಮುಕ್ತವಾಗಿ ತೆರೆದಿದ್ದೇವೆ' ಎಂದರು. ಪ್ರಧಾನಿ ಮೋದಿ ತಮ್ಮ ಭಾಷಣಕ್ಕೂ ಮೊದಲು, ನ್ಯೂಯಾರ್ಕ್ ನಗರದ ಮಾಜಿ ಮೇಯರ್ ಮೈಕೆಲ್ ಬ್ಲೂಮ್ಬರ್ಗ್ ಅವರೊಂದಿಗೆ ಸಭೆ ನಡೆಸಿದ್ದರು.
ಒಂದು ವಾರಗಳ ಅಮೇರಿಕಾದ ಭೇಟಿಯಲ್ಲಿರುವ ಪ್ರಧಾನಿ ಮೋದಿ, ಶುಕ್ರವಾರದಂದು ವಿಶ್ವಸಂಸ್ಥೆ ಸಾಮಾನ್ಯ ಸಭೆಯಲ್ಲಿ ಭಾಷಣ ಮಾಡಲಿದ್ದಾರೆ.