ನವದೆಹಲಿ: ಭಯೋತ್ಪಾದನೆ ಕೃತ್ಯಗಳಿಗೆ ಹೆಸರುವಾಸಿಯಾಗಿರುವ ಜೈಶ್–ಎ-ಮೊಹಮ್ಮದ್ ಉಗ್ರ ಸಂಘಟನೆಯ ಮುಖ್ಯಸ್ಥ ಮೌಲಾನ ಮಸೂದ್ ಅಜ್ಹರ್ ಕಿಡ್ನಿ ವೈಫಲ್ಯದಿಂದ ಬಳಲುತ್ತಿದ್ದಾನೆ ಎಂದು ವರದಿಯಾಗಿದೆ.
ನೆನ್ನೆಯಷ್ಟೇ ಜೈಶ್–ಎ-ಮೊಹಮ್ಮದ್ ಉಗ್ರ ಸಂಘಟನೆಯ ಮುಖ್ಯಸ್ಥ ಮೌಲಾನ ಮಸೂದ್ ಅಜ್ಹರ್ ಪಾಕಿಸ್ತಾನದಲ್ಲೇ ಇದ್ದಾನೆ ಎಂಬುದನ್ನು ಒಪ್ಪಿಕೊಂಡಿದ್ದ ಪಾಕಿಸ್ತಾನ ವಿದೇಶಾಂಗ ಸಚಿವ ಶಾ ಮೊಹಮ್ಮದ್ ಖುರೇಷಿ, ಆತ ಗಂಭೀರವಾದ ಕಾಯಿಲೆಯಿಂದ ಬಳಲುತ್ತಿದ್ದಾನೆ ಎಂದಿದ್ದರು.
ಗುರುವಾರವಷ್ಟೇ ಮಸೂದ್ ಅಜ್ಹರ್ ಬಗ್ಗೆ ಮಾತನಾಡಿದ್ದ ಖುರೇಷಿ, 'ಮಸೂದ್ ಅಜ್ಹರ್ ಆರೋಗ್ಯ ಸರಿಯಿಲ್ಲ. ಮನೆಯಿಂದ ಹೊರಬರಲು ಸಾಧ್ಯವಾಗದಷ್ಟು ಮಟ್ಟಿಗೆ ಆತನಿಗೆ ಅನಾರೋಗ್ಯವಿದೆ' ಎಂದಿದ್ದರು.
ಇದೀಗ ಈ ಬಗ್ಗೆ ಭದ್ರತಾ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದು, ಅಜ್ಹರ್ ನ ಎರಡೂ ಮೂತ್ರಪಿಂಡಗಳು ಕೆಲಸ ಮಾಡುತ್ತಿಲ್ಲ. ಸದ್ಯ ಪಾಕಿಸ್ತಾನದ ರಾವಲ್ಪಿಂಡಿಯ ಸೇನಾ ಆಸ್ಪತ್ರೆಯಲ್ಲಿ ಮಸೂದ್ ಅಜ್ಹರ್ ಚಿಕಿತ್ಸೆ ಪಡೆಯುತ್ತಿದ್ದಾನೆ. ಇಲ್ಲಿ ಅವನಿಗೆ ಸಾಮಾನ್ಯ ಡಯಾಲಿಸಿಸ್ ಮಾಡಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಮಸೂದ್ ಅಜರ್ನನ್ನು ಜಾಗತಿಕ ಭಯೋತ್ಪಾದಕ ಎಂದು ಘೋಷಿಸಲು ಅಮೆರಿಕ, ಯುನೈಟೆಡ್ ಕಿಂಗ್ಡಮ್ ಮತ್ತು ಫ್ರಾನ್ಸ್ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಒತ್ತಾಯಿಸಿದ್ದಾರೆ.
ಉಗ್ರ ಮಸೂದ್ ಅಜರ್ನನ್ನು ಕಪ್ಪು ಪಟ್ಟಿಗೆ ಸೇರಿಸುವುದು, ಜಾಗತಿಕ ಪ್ರವೇಶಕ್ಕೆ ನಿಷೇಧ ಹೇರುವುದು ಸೇರಿದಂತೆ ಆತನಿಗೆ ಸೇರಿದ ಸ್ವತ್ತುಗಳನ್ನು ಮುಟ್ಟುಗೋಲು ಹಾಕುವಂತೆ ಮಾಡಲು ಮೂರನೇ ಬಾರಿಗೆ ಪ್ರಯತ್ನ ನಡೆದಿದೆ. ಈ ಮೂಲಕ ಮಸೂದ್ ಅಜರ್ನನ್ನು 'ಜಾಗತಿಕ ಭಯೋತ್ಪಾದಕ' ಎಂದು ಸಾರುವಂತೆ ಒತ್ತಾಯಿಸಿ ಸಲ್ಲಿಕೆಯಾದ ಪ್ರಸ್ತಾವನೆಯಲ್ಲಿ ಇದು ನಾಲ್ಕನೇಯದಾಗಿದೆ.
ಈ ಹಿಂದೆ 2009, 2016 ಹಾಗೂ 2017ರಲ್ಲಿ ಇದೇ ಪ್ರಸ್ತಾಪವನ್ನು ಭಾರತ ಸೇರಿ ಅನೇಕ ರಾಷ್ಟ್ರಗಳು ಮುಂದಿಟ್ಟಾಗ ಚೀನಾ ಅಡ್ಡಗಾಲು ಹಾಕಿತ್ತು.