ಇಸ್ಲಾಮಾಬಾದ್: 2008ರ ಮುಂಬೈ ದಾಳಿಯ ಮಾಸ್ಟರ್ ಮೈಂಡ್ ಹಫೀಜ್ ಸಯೀದ್ ನೇತೃತ್ವದ ಜಮಾತ್-ಉದ್-ದವಾ ಮತ್ತು ಅದರ ಅಂಗಸಂಸ್ಥೆಯಾದ ಫಲ್ಹಾ-ಇ-ಇನ್ಸಯಾತ್ ಫೌಂಡೇಷನ್ಅನ್ನು ಪಾಕಿಸ್ತಾನ ನಿಷೇಧ ಮಾಡಿದೆ.
ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ಇತ್ತೀಚೆಗೆ ನಡೆದ ಭಯೋತ್ಪಾದಕ ದಾಳಿಯಲ್ಲಿ, 40 ಸಿಆರ್ಪಿಎಫ್ ಸಿಬ್ಬಂದಿ ಹುತಾತ್ಮರಾದ ಬಳಿಕ ಪಾಕಿಸ್ತಾನದ ವಿರುದ್ಧ ಕ್ರಮ ಕೈಗೊಳ್ಳಲು ಅಂತಾರಾಷ್ಟ್ರೀಯ ಮಟ್ಟದಲ್ಲಿ ನಿರಂತರ ಒತ್ತಡವಿತ್ತು.
ಪ್ರಧಾನ ಮಂತ್ರಿ ಇಮ್ರಾನ್ ಖಾನ್ ಅಧ್ಯಕ್ಷತೆಯಲ್ಲಿ ಇಂದು ನಡೆದ ನ್ಯಾಷನಲ್ ಸೆಕ್ಯುರಿಟಿ ಕಮಿಟಿಯ ಸಭೆಯಲ್ಲಿ ಈ ಸಂಘಟನೆಗಳನ್ನು ನಿಷೇಧಿಸುವ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ ಎಂದು ಗೃಹ ಸಚಿವಾಲಯದ ವಕ್ತಾರರು ತಿಳಿಸಿದ್ದಾರೆ.
"ಸಭೆಯಲ್ಲಿ ಅಕ್ರಮವಾಗಿ ಘೋಷಿಸಲ್ಪಟ್ಟ ಸಂಘಟನೆಗಳ ವಿರುದ್ಧ ಕ್ರಮ ಕೈಗೊಳ್ಳುವ ನಿರ್ಧಾರ ತೆಗೆದುಕೊಳ್ಳಲಾಗಿದೆ. ಅದರಂತೆ, ಜಮಾತ್-ಉದ್-ದವಾ ಮತ್ತು ಫಾಲ್ಹಾ-ಇ-ಇನ್ಸಾಯತ್ ಸಂಘಟನೆಗಳನ್ನು ಅಕ್ರಮ ಎಂದು ಘೋಷಿಸಿ ಗೃಹ ಸಚಿವಾಲಯ ನಿಷೇಧಿಸಿದೆ" ಎಂದು ಅವರು ಹೇಳಿದ್ದಾರೆ.
ಅಧಿಕಾರಿಗಳ ಪ್ರಕಾರ, JUD ಸಂಘಟನೆಯು 300 ಮದ್ರಸಾಗಳು ಮತ್ತು ಶಾಲೆಗಳು, ಆಸ್ಪತ್ರೆಗಳು, ಪಬ್ಲಿಷಿಂಗ್ ಹೌಸ್ ಮತ್ತು ಆಂಬ್ಯುಲೆನ್ಸ್ ಸೇವೆಯನ್ನು ಹೊಂದಿದೆ. ಎರಡೂ ಗುಂಪುಗಳಲ್ಲಿ ಸುಮಾರು 50,000 ಸ್ವಯಂಸೇವಕರು ಮತ್ತು ನೂರಾಕ್ಕೂ ಹೆಚ್ಚು ಉದ್ಯೋಗಿಗಳು ಕಾರ್ಯನಿರ್ವಹಿಸುತ್ತಿದ್ದಾರೆ.