ಲಾಹೋರ್: ಖ್ಯಾತ ನಟಿ ಹಾಗೂ ಗಾಯಕಿ ರೇಷ್ಮಾ ಎಂಬುವವರನ್ನು ಪತಿಯೇ ಗುಂಡಿಕ್ಕಿ ಕೊಂದಿರುವ ಘಟನೆ ಪಾಕಿಸ್ತಾನದ ಖೈಬರ್ ಫಕ್ತುಂಖ್ವಾದಲ್ಲಿ ನಡೆದಿದೆ. ರೇಷ್ಮಾ ಪತಿಯ ನಾಲ್ಕನೇ ಪತ್ನಿಯಾಗಿದ್ದು, ತನ್ನ ಸಹೋದರನ ಜೊತೆ ಹಾಕಿಮ್‍ಬಾದ್‍ನಲ್ಲಿ ವಾಸಿಸುತ್ತಿದ್ದಳು. ಅಲ್ಲಿಗೆ ಬಂದ ಪತಿ ರೇಷ್ಮಾ ಮೇಲೆ ಗುಂಡು ಹಾರಿಸಿದ್ದಾನೆ ಎಂದು ಪಾಕಿಸ್ತಾನದ ಮಾಧ್ಯಮಗಳಲ್ಲಿ ವರದಿಯಾಗಿದೆ. ಈ ಘಟನೆ ಆಗಸ್ಟ್ 1 ರಂದು ನಡೆದಿದೆ ಎನ್ನಲಾಗಿದೆ.
ಆರೋಪಿಯ ನಾಲ್ಕನೇ ಪತ್ನಿಯಾಗಿದ್ದ ರೇಶ್ಮಾ ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಪತಿಯಿಂದ ದೂರವಾಗಿ ಹಾಕಿಮಾಬಾದ್ ಪ್ರದೇಶದಲ್ಲಿ ತನ್ನ ಸೋದರನ ಮನೆಯಲ್ಲಿ ವಾಸಿಸುತ್ತಿದ್ದಳು. ಈ ವೇಳೆ ಮನೆಗೆ ನುಗ್ಗಿದ ಆತ ಏಕಾ ಏಕಿ ಆಕೆಯ ಮೇಲೆ ಗುಂಡಿನ ಮಳೆಗರೆದಿದ್ದಾನೆ. ನಂತರ ಆರೋಪಿ ಪರಾರಿಯಾಗಿದ್ದಾನೆ. ಈ ಕುರಿತು ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ಮುಂದುವರೆಸಿದ್ದಾರೆ.
ರೇಷ್ಮಾ ‘ಪಾಶ್ತೋ’ ಹಾಡಿನಿಂದ ಹೆಚ್ಚು ಜನಪ್ರಿಯಗೊಂಡಿದ್ದು, ‘ಜೋಬಲ್ ಗೋಲುನಾ’ ಎಂಬ ಚಿತ್ರದಲ್ಲಿ ನಟಿಸಿದ್ದರು.