ನವದೆಹಲಿ: ವಿಶ್ವದಲ್ಲೇ ನೂತನ ಆವಿಷ್ಕಾರಗಳಿಗೆ ಹೆಸರಾಗಿರುವ ಯುಎಇ, ಇದೀಗ ಮುಂಬೈನಿಂದ ಯುಎಇಗೆ ನೀರಿನೊಳಗೆ ಪೈಪ್ಲೈನ್ ಮೂಲಕ ರೈಲು ಸಂಚಾರ ಆರಂಭಿಸಲು ಚಿಂತನೆ ನಡೆಸಿದೆ.
ಈಗಾಗಲೇ ಹೈಪರ್ ಲೂಪ್ ಮತ್ತು ಚಾಲಕ ರಹಿತ ಹಾರುವ ಕಾರುಗಳ ಸೃಷ್ಟಿಯ ನಂತರ ಅಂಡರ್ ವಾಟರ್ ರೈಲು ಸೇವೆ ಆರಂಭಿಸಲು ಯೋಜನೆ ರೂಪಿಸಿದೆ. ಈ ಯೋಜನೆ ಜಾರಿಗೆ ಬಂದಿದ್ದೇ ಆದಲ್ಲಿ ಯುಎಇ ಯ ಫುಜೈರಹ್ ನಗರದಿಂದ ಭಾರತದ ಮುಂಬಯಿಗೆ ಸಮುದ್ರದೊಳಗೆ ರೈಲಿನಲ್ಲಿ ಸಂಚರಿಸಬಹುದಾಗಿದೆ. ಕೇವಲ ಪ್ರಯಾಣಿಕರಷ್ಟೇ ಅಲ್ಲದೆ, ಸರಕುಗಳ ಸಾಗಾಣಿಕೆಗೂ ಅನುಕೂಲವಾಗಲಿದೆ ಎಂದು ಅಬುದಾಬಿಯಲ್ಲಿ ನಡೆದ ಯುಎಇ-ಇಂಡಿಯಾ ಕಾಂಕ್ಲೇವ್ ನಲ್ಲಿ ನ್ಯಾಷನಲ್ ಅಡ್ವೈಸರಿ ಬ್ಯೂರೋ ವ್ಯವಸ್ಥಾಪಕ ನಿರ್ದೇಶಕ ಅಬ್ದುಲ್ಲಾ ಆಲ್ಶೀಷಿ ತಿಳಿಸಿದ್ದಾರೆ ಎಂದು ಖಲೀಜಾ ಟೈಮ್ಸ್ ವರದಿ ಮಾಡಿದೆ.
ಸುಮಾರು 2,000 ಕಿ.ಮೀ. ಅಂತರದ ರೈಲು ಮಾರ್ಗವನ್ನು ಸಮುದ್ರದೊಳಗೆ ನಿರ್ಮಾಣ ಮಾಡಲು ಅರಬ್ ರಾಷ್ಟ್ರ ಮುಂದಾಗಿದೆ. 2022ರೊಳಗೆ ಸಮುದ್ರದೊಳಗಿನ ರೈಲು ಸಂಚಾರಕ್ಕೆ ಕಾಮಗಾರಿ ಆರಂಭವಾಗುವ ಸಾಧ್ಯತೆಯಿದೆ ಎಂದಿದ್ದಾರೆ.