ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ಸಿದ್ಧತೆ; ಯಾರಾಗಲಿದ್ದಾರೆ ಕರ್ನಾಟಕದ ಮುಖ್ಯಮಂತ್ರಿ?

ಹೊಸ ಸರ್ಕಾರ ರಚನೆ ಸಂಬಂಧ ಡಿಪಿಎಆರ್‌ ಶಿಷ್ಟಾಚಾರ ವಿಭಾಗದ ಅಧಿಕಾರಿಗಳಿಗೆ ರಾಜಭವನ ಅಧಿಕಾರಿಗಳು ಯಾವುದಕ್ಕೂ ಸಿದ್ಧರಾಗಿರಿ ಎಂಬ ಸೂಚನೆ ನೀಡಿದ್ದಾರೆ. 

Last Updated : May 16, 2018, 08:11 PM IST
ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ಸಿದ್ಧತೆ; ಯಾರಾಗಲಿದ್ದಾರೆ ಕರ್ನಾಟಕದ ಮುಖ್ಯಮಂತ್ರಿ? title=

ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಯಾವ ಪಕ್ಷವೂ ಬಹುಮತ ಪಡೆಯದ ಹಿನ್ನೆಲೆಯಲ್ಲಿ ಅತಂತ್ರ ಪರಿಸ್ಥಿತಿ ನಿರ್ಮಾಣವಾಗಿದ್ದು, ಕಾಂಗ್ರೆಸ್-ಜೆಡಿಎಸ್ ಮೈತ್ರಿಕೂಟಕ್ಕೆ ಅವಕಾಶ ನೀಡಬೇಕೋ ಅಥವಾ ದೊಡ್ಡ ಪಕ್ಷವಾಗಿ ಹೊರಹೊಮ್ಮಿಸುವ ಬಿಜೆಪಿಗೆ ಅಧಿಕಾರ ನೀಡಬೇಕೋ ಎಂಬ ಸಂದಿಗ್ಧ ಪರಿಸ್ಥಿತಿಯಲ್ಲಿರುವ ರಾಜ್ಯಪಾಲ ವಜುಭಾಯಿ ವಾಲಾ ಅವರು, ಏನಾದರಾಗಲಿ ನಾಳೆ ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ಸಿದ್ಧತೆ ನಡೆಸಲು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ ಎನ್ನಲಾಗಿದೆ. 

ಹೊಸ ಸರ್ಕಾರ ರಚನೆ ಸಂಬಂಧ ಡಿಪಿಎಆರ್‌ ಶಿಷ್ಟಾಚಾರ ವಿಭಾಗದ ಅಧಿಕಾರಿಗಳಿಗೆ ರಾಜಭವನ ಅಧಿಕಾರಿಗಳು ಯಾವುದಕ್ಕೂ ಸಿದ್ಧರಾಗಿರಿ ಎಂಬ ಸೂಚನೆ ನೀಡಿದ್ದಾರೆ.  ಆದರೆ, ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಪ್ರಮಾಣವಚನ ಸಮಾರಂಭದ ಬಗ್ಗೆ ಯಾವುದೇ ಮಾಹಿತಿ ಇನ್ನೂವರೆಗೂ ತಲುಪಿಲ್ಲ ಎಂದು ಉನ್ನತ ಮೂಲಗಳು ತಿಳಿಸಿವೆ. 
 
ಬಿಜೆಪಿ ಬಗ್ಗೆ ಹೆಚ್ಚು ಒಲವು ಹೊಂದಿರುವ ರಾಜ್ಯಪಾಲರು ತಮಗೇ ಸರ್ಕಾರ ರಚನೆಗೆ ಅವಕಾಶ ನೀಡುತ್ತಾರೆ, ನಾಳೆ ಪ್ರಮಾಣ ವಚನ ಸ್ವೀಕರಿಸುತ್ತೇನೆ ಎಂದು ಬಿ.ಎಸ್.ಯಡಿಯೂರಪ್ಪ ಅವರು ವಿಶ್ವಾಸದಿಂದ ಹೇಳುತ್ತಿದ್ದಾರೆ. ಚುನಾವಣೆಯಲ್ಲಿ 104 ಸ್ಥಾನಗಳನ್ನು ಪಡೆದು ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿರುವ ಬಿಜೆಪಿಗೇ ಸರಕಾರ ರಚನೆಗೆ ಅವಕಾಶ ಕೊಡಬೇಕು. ಮೊದಲು ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿ, ನಂತರ ಗಡುವು ಪಡೆದು ಬಹುಮತ ಸಾಬೀತು ಮಾಡುವುದಾಗಿ ಯಡಿಯೂರಪ್ಪ ಹೇಳಿದ್ದಾರೆ. 

ಕಾಂಗ್ರೆಸ್ ಬಾಹ್ಯ ಬೆಂಬಲದಿಂದ ಜೆಡಿಎಸ್ ನಾಯಕತ್ವದ ಸರ್ಕಾರ ರಚನೆ: ಸಿದ್ದರಾಮಯ್ಯ

ಮತ್ತೊಂದೆಡೆ, 78 ಸ್ಥಾನಗಳನ್ನು ಗಳಿಸಿರುವ ಕಾಂಗ್ರೆಸ್ ಮತ್ತು 38 ಸ್ಥಾನಗಳನ್ನು ಗಳಿಸಿರುವ ಜೆಡಿಎಸ್ ಮೈತ್ರಿಯಲ್ಲಿ ಇಬ್ಬರು ಇತರ ಶಾಸಕರನ್ನೂ ಒಳಗೊಂಡಂತೆ ಒಟ್ಟು 117 ಶಾಸಕರ ಸಹಿ ಇರುವ ಪಟ್ಟಿಯನ್ನು ರಾಜ್ಯಪಾಲರಿಗೆ ಸಲ್ಲಿಸಿ ಸರ್ಕಾರ ರಚನೆಗೆ ಅವಕಾಶ ಕಲ್ಪಿಸುವಂತೆ ಕಾಂಗ್ರೆಸ್-ಜೆಡಿಎಸ್ ನಿಯೋಗ ಮನವಿ ಮಾಡಿ, ತಮ್ಮ ನಿರ್ಣಯಗಳನ್ನು ರಾಜ್ಯಪಾಲರ ಮುಂದಿಟ್ಟಿದೆ. 

ನಾಳೆ ಮುಖ್ಯಮಂತ್ರಿ ಆಗಿ ಯಡಿಯೂರಪ್ಪ ಪ್ರಮಾಣ ವಚನ?

ಈ ನಡುವೆ ಯಾರಿಗೆ ಸರ್ಕಾರ ರಚನೆಗೆ ಅವಕಾಶ ನೀಡಬೇಕು ಎಂಬ ಬಗ್ಗೆ ರಾಜ್ಯಪಾಲ ವಾಜುಭಾಯಿ ವಾಲಾ ಅವರು, ಮಾಜಿ ಅಟಾರ್ನಿ ಜನರಲ್‌ ಗಳಾದ ಸೋಲಿ ಸೊರಾಬ್ಜಿ ಹಾಗೂ ಮುಕುಲ್‌ ರೋಹಟಗಿ ಅವರ ಸಲಹೆ ಪಡೆದಿದ್ದಾರೆ ಎನ್ನಲಾಗಿದೆ. ಈ ಇಬ್ಬರು ಕಾನೂನು ತಜ್ಞರು ನೀಡಿರುವ ಸಲಹೆ ಅನ್ವಯ ಸರ್ಕಾರ ರಚನೆಗೆ ರಾಜ್ಯಪಾಲರು ಅವಕಾಶ ನೀಡುವ ಸಾಧ್ಯತೆ ಇದೆ. 

ಸಂವಿಧಾನದ ಅನ್ವಯ ನಿರ್ಧಾರ ಕೈಗೊಳ್ಳುವುದಾಗಿ ರಾಜ್ಯಪಾಲರು ಭರವಸೆ: ಕುಮಾರಸ್ವಾಮಿ

ಒಂದು ವೇಳೆ ರಾಜ್ಯಪಾಲರು ತಮ್ಮ ಬಿಜೆಪಿ ಬಗೆಗಿನ ಒಲವನ್ನು ಬದಿಗಿಟ್ಟು, ಸಂವಿಧಾನ ಮತ್ತು ಈ ಹಿಂದಿನ ಸುಪ್ರೀಂ ಕೋರ್ಟ್ ತೀರ್ಪಿನ ಅನ್ವಯ ನಡೆದುಕೊಂಡಿದ್ದೇ ಆದರೆ, ಜೆಡಿಎಸ್-ಕಾಂಗ್ರೆಸ್ ಮೈತ್ರಿಕೂಟಕ್ಕೆ ಬಹುಮತ ಸಾಬೀತುಪಡಿಸಲು ಮೊದಲ ಅವಕಾಶ ನೀಡಲೇಬೇಕಾಗುತ್ತದೆ. ಆಗ ಯಡಿಯೂರಪ್ಪನವರನ್ನು ಹಿಂದಿಕ್ಕಿ ಹೆಚ್.ಡಿ.ಕುಮಾರಸ್ವಾಮಿ ಅವರು ಎರಡನೇ ಬಾರಿ ಕರ್ನಾಟಕದ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಲಿದ್ದಾರೆ. ಅಥವಾ ಬಿಜೆಪಿಗೆ ಅವಕಾಶ ನೀಡಿ ಬಹುಮತ ಸಾಬೀತುಪಡಿಸಲು ಅವಕಾಶ ನೀಡಿದರೆ, ಆಪರೇಶನ್ ಕಮಲದಲ್ಲಿ ತೊಡಗಿರುವ ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿ ನಾಳೆ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ.

ಆಪರೇಶನ್ ಕಮಲದ ಭೀತಿ; ರೆಸಾರ್ಟ್'ನತ್ತ ಕಾಂಗ್ರೆಸ್ ಶಾಸಕರು!

ಏನೇ ಆದರೂ, ಹೊಸ ಸರ್ಕಾರ ರಚನೆಯ ಚೆಂಡು ಈಗ ರಾಜ್ಯಪಾಲರ ಅಂಗಳದಲ್ಲಿದ್ದು, ಜೆಡಿಎಸ್-ಕಾಂಗ್ರೆಸ್ ಮೈತ್ರಿಕೂಟಕ್ಕೆ ಸರ್ಕಾರ ರಚನೆಗೆ ಭಾಗ್ಯ ದೊರೆಯಲಿದೆಯೇ ಅಥವಾ ಅತಿ ಹೆಚ್ಚು ಸ್ಥಾನಗಳನ್ನು ಗೆದ್ದು ದೊಡ್ಡ ಪಕ್ಷವಾಗಿ ಹೊಮ್ಮಿರುವ ಬಿಜೆಪಿಗೆ ರಾಜ್ಯಪಾಲರು ಸರ್ಕಾರ ರಚನೆ ಅವಕಾಶ ನೀಡಲಿದ್ದಾರೆಯೇ ಎಂಬುದನ್ನು ಕಾದುನೋಡಬೇಕಿದೆ.

Trending News