ಬೆಂಗಳೂರು: ಬೆಂಗಳೂರಿನಲ್ಲಿ ಕಾಲೇಜು ವಿದ್ಯಾರ್ಥಿಗಳು ‘ಪಾಕಿಸ್ತಾನ್ ಜಿಂದಾಬಾದ್’ ಘೋಷಣೆ ಕೂಗಿದ್ದಾರೆ. ಮಾರತ್ತಳ್ಳಿಯ ನ್ಯೂ ಹೊರಿಝೋನ್(New Horizon) ಕಾಲೇಜಿನಲ್ಲಿ ಈ ಘಟನೆ ನಡೆದಿದೆ. ಕಾಲೇಜಿನಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ಈ ವೇಳೆ ತಮಾಷೆಗಾಗಿ ‘ಪಾಕಿಸ್ತಾನ್ ಜಿಂದಾಬಾದ್’ ಎಂದು ವಿದ್ಯಾರ್ಥಿಗಳು ಘೋಷಣೆ ಕೂಗಿದ್ದಾರಂತೆ.
ರಿಯಾ, ಆರ್ಯನ್ ಮತ್ತು ದಿನಕರ್ ಎಂಬ ವಿದ್ಯಾರ್ಥಿಗಳು ಘೋಷಣೆ ಕೂಗಿದ್ದಾರೆ. ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಪೊಲೀಸರು ವಿದ್ಯಾರ್ಥಿಗಳ ಮೇಲೆ ದೂರು ದಾಖಲಿಸಲು ಸಿದ್ಧತೆ ನಡೆಸಿದ್ದಾರೆ. ತಮಾಷೆಗಾಗಿ ಮಾಡಿದ ಎಡವಟ್ಟಿಗೆ ವಿದ್ಯಾರ್ಥಿಗಳು ದಂಡ ತೆತ್ತಿದ್ದಾರೆ. ಖಾಸಗಿ ಕಾಲೇಜ್‍ನಲ್ಲಿ ಪಾಕಿಸ್ತಾನಕ್ಕೆ ಜೈಕಾರ ಪ್ರಕರಣ ಸಂಬಂಧ ಮಾರತ್ತಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: Chikkmagaluru : ಬಾಬಾಬುಡನ್ ಸ್ವಾಮಿ ದರ್ಗಾ ವಿವಾದ : ರಾಜ್ಯ ಸರ್ಕಾರದಿಂದ ಆಡಳಿತ ಮಂಡಳಿ ರಚನೆ
ಐಪಿಸಿ 153, 505(1)B ಅಡಿ ಪ್ರಕರಣ ದಾಖಲಿಸಲಾಗಿದೆ. ದಾವಣೆಗೆರೆ ಮೂಲದ ರಿಯಾ (18), ಮುಂಬೈ ಮೂಲದ ಆರ್ಯನ್ (18) ಮತ್ತು ಆಂಧ್ರಪ್ರದೇಶದ ಮೂಲದ ದಿನಕರ್ (17) ಮೂರು ಜನರ ವಿರುದ್ಧ ಎಫ್ಐಆರ್ ದಾಖಲಾಗಿದೆ. ಪಾಕ್ ಪರ ಘೋಷಣೆ ಕೂಗಿರುವುದನ್ನು ಬೇರೆ ವಿದ್ಯಾರ್ಥಿಗಳು ವಿಡಿಯೋ ರೆಕಾರ್ಡ್ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಹಂಚಿದ್ದಾರೆ. ವಿಡಿಯೋ ವೈರಲ್ ಆಗ್ತಿದ್ದ ಬೆನ್ನಲ್ಲೇ ಮೂವರನ್ನೂ ಕಾಲೇಜು ಮಂಡಳಿ ಸಸ್ಪೆಂಡ್ ಮಾಡಿದೆ. ನಂತರ ಮಾರತ್ತಹಳ್ಳಿ ಠಾಣೆಗೆ ದೂರು ನೀಡಲಾಗಿದೆ.
ಕೂಡಲೇ ಮೂವರು ವಿದ್ಯಾರ್ಥಿಗಳನ್ನು ವಶಕ್ಕೆ ಪಡೆದಿದ್ದ ಮಾರತ್ತಹಳ್ಳಿ ಪೊಲೀಸರು ಈ ಬಗ್ಗೆ ವಿಚಾರಣೆ ನಡೆಸಿದ್ದಾರೆ. ಈ ವೇಳೆ ಉದ್ದೇಶ ಪೂರ್ವಕವಾಗಿ ಪಾಕ್ ಪರ ಘೋಷಣೆ ಕೂಗಿಲ್ಲ ಅನ್ನೋದು ತಿಳಿದುಬಂದಿದೆ. ಕಾಲೇಜು ಫಂಕ್ಷನ್‍ನಲ್ಲಿ ಕ್ರಿಕೆಟ್ ಟೀಂಗಳಿಗೆ ವಿದ್ಯಾರ್ಥಿಗಳು ಜೈಕಾರ ಹಾಕ್ತಿದ್ದರಂತೆ. ಈ ವೇಳೆ ಆರ್‍ಸಿಬಿಗೆ ಜೈ, ಮುಂಬೈ ಇಂಡಿಯನ್ಸ್‍ಗೆ ಜೈ, ಇಂಗ್ಲೆಂಡ್‍ಗೆ ಜೈ ಅಂತಾ ಕೂಗಿದ್ದಾರೆ. ಇದೇ ವೇಳೆ ‘ಪಾಕಿಸ್ತಾನ್ ಜಿಂದಾಬಾದ್’ ಎಂದು ಮೂವರು ವಿದ್ಯಾರ್ಥಿಗಳು ಕೂಗಿದ್ದಾರೆ. ಎಸಿಪಿ ಕಿಶೋರ್ ಭರಣಿ ನೇತೃತ್ವದಲ್ಲಿ ವಿದ್ಯಾರ್ಥಿಗಳ ವಿಚಾರಣೆ ನಡೆದಿದೆ. ವಿಚಾರಣೆ ವೇಳೆ ಮೂವರ ಮೊಬೈಲ್ ಫೋನ್ ವಶಕ್ಕೆ ಪಡೆಯಲಾಗಿತ್ತು. ತಾವು ತಮಾಷೆಗಾಗಿ ಪಾಕ್ ಪರ ಘೋಷಣೆ ಕೂಗಿದ್ದು ಅಂತಾ ಹೇಳಿದ್ದಾರೆ.
ಇದನ್ನೂ ಓದಿ: ನಿಮ್ಮ ಬೆಳೆಗಳು ರೋಗ ಮತ್ತು ಕೀಟಗಳಿಂದ ಸುರಕ್ಷಿತವಾಗಿರಬೇಕೆ? ಇಲ್ಲಿದೆ ಸುಲಭ ವಿಧಾನ
ಇಂದು ಪೊಲೀಸರು ವಿದ್ಯಾರ್ಥಿಗಳ ಮೊಬೈಲ್ ಫೋನ್ ಪರಿಶೀಲನೆ ನಡೆಸಲಿದ್ದಾರೆ. ಪಾಕ್ ಪರ ಘೋಷಣೆ ಕೂಗಿದ ವಿದ್ಯಾರ್ಥಿಗಳು ಯಾರ ಜೊತೆಗಾದರೂ ಸಂಪರ್ಕದಲ್ಲಿದ್ದಾರಾ? ಯಾವುದಾದರು ಸಂಘಟನೆಯ ನಂಟು ಇದ್ಯಾ? ಎಂದು ಪರಿಶೀಲನೆ ನಡೆಸಲಿದ್ದಾರೆ. ಇದುವರೆಗೆ ಪ್ರಾಥಮಿಕ ತನಿಖೆಯಲ್ಲಿ ಸಂಘಟನೆಗಳ ನಂಟು ಹೊಂದಿರೋದು ಕಂಡು ಬಂದಿಲ್ಲ. ಇಂದು ಬೆಳಗ್ಗೆ 10 ಗಂಟೆಗೆ ಮತ್ತೆ ವಿಚಾರಣೆಗೆ ಹಾಜರಾಗುವಂತೆ ವಿದ್ಯಾರ್ಥಿಗಳಿಗೆ ಸೂಚನೆ ನೀಡಲಾಗಿದೆ.
ಇದೇ ತಿಂಗಳ 25 ಮತ್ತು 26ರಂದು ಕಾಲೇಜಿನಲ್ಲಿ ಫೆಸ್ಟ್ ಇದೆ. ಇದಕ್ಕಾಗಿ ವಿದ್ಯಾರ್ಥಿಗಳು ಸಿದ್ಧತೆ ಮಾಡಿಕೊಳ್ತಿದ್ದರು. ಹೀಗಾಗಿ ನವಂಬರ್ 17ರ ಸಂಜೆ ಒಟ್ಟಿಗೆ ಸೇರಿದ್ದಾರೆ. ಮಾತುಕತೆ ನಡೆಸುತ್ತಿದ್ದಾಗ ಪಾಕ್ ಪರ ಘೋಷಣೆ ಹಾಕಿದ್ದಾರೆ. ಪಾಕ್ ಪರ ಘೋಷಣೆ ಕೂಗಿದ್ದು ಮೊಬೈಲ್ ನಲ್ಲಿ ಸೆರೆಯಾಗಿದೆ. ಅದೇ ವಿಡಿಯೋ ಕ್ಲಿಪ್ ಅನ್ನು ಕಾಲೇಜು ವಿದ್ಯಾರ್ಥಿಗಳ ಗ್ರೂಪ್ ನಲ್ಲಿ ಶೇರ್ ಮಾಡಿಕೊಂಡಿದ್ರು. ಇದನ್ನು ನೋಡಿದ ಇತರೆ ವಿದ್ಯಾರ್ಥಿಗಳು ಘೋಷಣೆ ಕೂಗಿದವರ ಮೇಲೆ ಹಲ್ಲೆಗೂ ಮುಂದಾಗಿದ್ರು. ನಂತರ ತಪ್ಪಾಯಿತು ಎಂದು ವಿದ್ಯಾರ್ಥಿಗಳು ಕ್ಷಮೆ ಕೇಳಿದ್ದರಂತೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.