ಕಾಡುಗೊಲ್ಲರ ಮೂಢನಂಬಿಕೆಗೆ ಹಸುಗೂಸು ಬಲಿ ಪ್ರಕರಣ: ಗಂಡ-ತಂದೆ ವಿರುದ್ದ ಎಫ್‌ಐ‌ಆರ್ ದಾಖಲು

Kadugollas Superstition Case: ಕಾಡುಗೊಲ್ಲರ ಮೂಢನಂಬಿಕೆಯಿಂದ ನವಜಾತ ಶಿಶು ಸಾವು ಪ್ರಕರಣಕ್ಕೆ ಸಂಬಂಧಿಸಿದಂತೆ ಕೋರಾ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿದೆ. ಇದಲ್ಲದೆ ಈಗಾಗಲೇ  ಮನೆಯೊಳಗೆ ಬಾಣಂತಿ ಸೇರಿಸುವಲ್ಲಿ ಆರೋಗ್ಯ ಇಲಾಖೆ ಯಶಸ್ವಿಯಾಗಿದ್ದು, ಬಾಣಂತಿ ಆರೋಗ್ಯ ನಿಗಾಕ್ಕೆ ಪ್ರಾಥಮಿಕ ಕೇಂದ್ರಕ್ಕೆ ದಾಖಲು ಮಾಡಲಾಗಿದೆ. 

Written by - Yashaswini V | Last Updated : Jul 28, 2023, 10:00 AM IST
  • ಕಾಡುಗೊಲ್ಲರ ಮೂಢನಂಬಿಕೆಗೆ ಹಸುಗೂಸು ಬಲಿ ಪ್ರಕರಣ..!
  • ಮೌಢ್ಯಾಚರಣೆ ಮಾಡಿದವರ ವಿರುದ್ದ ಎಫ್‌ಐ‌ಆರ್ ದಾಖಲು
  • ಕೊನೆಗೂ ಮನೆ ಸೇರಿದ ಮಗು ಕಳೆದುಕೊಂಡ ಬಾಣಂತಿ..!
ಕಾಡುಗೊಲ್ಲರ ಮೂಢನಂಬಿಕೆಗೆ ಹಸುಗೂಸು ಬಲಿ ಪ್ರಕರಣ: ಗಂಡ-ತಂದೆ ವಿರುದ್ದ ಎಫ್‌ಐ‌ಆರ್ ದಾಖಲು title=

Kadugollas Superstition Case: ಸಂಪ್ರದಾಯ, ಆಚರಣೆ ಅನ್ನೋ ಹೆಸರಿನಲ್ಲಿ ಬಾಣಂತಿ ಮತ್ತು ಹಸುಗೂಸನ್ನ ಊರ ಹೊರಗಿನ ಚಿಕ್ಕಗುಡಿಸಲಿನಲ್ಲಿಟ್ಟಿದ್ದ ಆ ಕುಟುಂಬ ಮಗುವನ್ನೇ ಬಲಿಪಡೆದಿತ್ತು. ಆದರೂ ಆ ಕುಟುಂಬಕ್ಕೆ ಬುದ್ಧಿ ಬಂದಿರಲಿಲ್ಲ. ಮಗು ಕಳೆದುಕೊಂಡ ಮೇಲೂ ತಮ್ಮ ಮನಸ್ಥಿತಿ ಬದಲಾಯಿಸಿಕೊಳ್ಳದ ಮನೆಯವರು ಬಾಣಂತಿಯನ್ನ ಮತ್ತೆ ಅದೇ ಗುಡಿಸಲಿನಲ್ಲಿರಿಸಿದ್ದರು. ನಿನ್ನೆಯಷ್ಟೇ (ಜುಲೈ 27, 2023) ಆ ಬಾಣಂತಿ ಮಹಿಳೆಯನ್ನ (ವಸಂತ)  ಮನೆಯೊಳಗೆ ಸೇರಿಸುವಲ್ಲಿ ಆರೋಗ್ಯ ಇಲಾಖೆಯ ಯಶಸ್ವಿಯಾಗಿತ್ತು. ಇದೀಗ ಮೌಢ್ಯಾಚರಣೆಯಿಂದಾಗಿ ಮಗು ಸಾವಿಗೆ ಕಾರಣರಾದ ವಸಂತ ಅವರ ಪತಿ ಸಿದ್ದೇಶ್ ಹಾಗೂ ಸಿದ್ದೇಶ್ ಅವರ ತಂದೆ ವಿರುದ್ದ ಎಫ್‌ಐ‌ಆರ್ ದಾಖಲಿಸಲಾಗಿದೆ. 

ತುಮಕೂರು ಜಿಲ್ಲೆಯ ಬೆಳ್ಳಾವಿ ಹೋಬಳಿಯ ಮಲ್ಲೇನಹಳ್ಳಿ ಗೊಲ್ಲರಹಟ್ಟಿಯಲ್ಲಿ ನಡೆದಿದ್ದ ಆ ಘಟನೆ ಇಡೀ ಸಮಾಜವನ್ನೇ ತಲೆತಗ್ಗಿಸುವಂತೆ ಮಾಡಿತ್ತು. ಕುಟುಂಬಸ್ಥರ ಮೌಢ್ಯಾಚರಣೆಗೆ ಏನೂ ಅರಿಯದ ಹಸುಗೂಸೊಂದು ಪ್ರಪಂಚವನ್ನೇ ಕಣ್ತೆರೆದು ನೋಡೋದಕ್ಕೂ ಮುನ್ನವೇ ಸಾವಿಗೀಡಾಗಿತ್ತು. ಈ ಘಟನೆಯನ್ನ ನೋಡಿದ್ದವರು ನಮ್ಮಲ್ಲಿ ಇನ್ನೂ ಈ ಮಟ್ಟಿಗೆ ಮೌಢ್ಯಾಚರಣೆಗಳಿವೆಯಾ ಅಂತಾ ಆಶ್ಚರ್ಯ ಪಟ್ಟಿದ್ರು. ಹೆತ್ತ ಮಗುವನ್ನ ಬಲಿ ಪಡೆದ ಮೇಲಾದ್ರೂ ಅವರ ಮೌಢ್ಯಾಚರಣೆಗೆ ಬ್ರೇಕ್ ಬೀಳಬಹುದು ಅಂತಾ ಹಲವರು ಅಂದುಕೊಂಡಿದ್ರು. ಆದ್ರೆ ಸಿದ್ದೇಶ್ ಕುಟುಂಬಸ್ಥರ ಮನಸ್ಥಿತಿ ಮಾತ್ರ ಬದಲಾಗಿಯೇ ಇರಲಿಲ್ಲ. 

ಹೌದು, ಊರ ಹೊರಗಿನ ಚಿಕ್ಕ ಗುಡಿಸಲಿನಲ್ಲಿದ್ದ ಹಸುಗೂಸು ವಿಪರೀತ ಶೀತದಿಂದ, ಉಸಿರಾಟದ ಸಮಸ್ಯೆ ಉಂಟಾಗಿ ಸಾವಿಗೀಡಾಗಿರೋ ಬಗ್ಗೆ ನಿಮ್ಮ ಜೀಕನ್ನಡ ನ್ಯೂಸ್  ಸುದ್ದಿ ಪ್ರಸಾರವಾದ ಬೆನ್ನಲ್ಲೇ ತಹಶೀಲ್ದಾರ್ ಸೇರಿ ಹಲವು ಅಧಿಕಾರಿಗಳು ಮಲ್ಲೇನಹಳ್ಳಿ ಗೊಲ್ಲರಹಟ್ಟಿಗೆ ಭೇಟಿಕೊಟ್ಟಿದ್ದರು. ಈ ವೇಳೆ ಕುಟುಂಬಸ್ಥರು ಮತ್ತು ಗ್ರಾಮಸ್ಥರಿಗೆ ಮೌಢ್ಯಾಚರಣೆಯ ಬಗ್ಗೆ ತಿಳಿ ಹೇಳಿ, ತಕ್ಷಣವೇ ಬಾಣಂತಿ ವಸಂತ ಅವರನ್ನು  ಮನೆಯೊಳಗೆ ಸೇರಿಸಿಕೊಳ್ಳುವಂತೆ ಸೂಚಿಸಿದರು. 

ಇದನ್ನೂ ಓದಿ- ಬ್ರೈನ್ ಮ್ಯಾಪಿಂಗ್ ಟೆಸ್ಟ್‌ನಲ್ಲಿ ಕಳ್ಳಿಯ ಅಸಲಿಯತ್ತು ಬಯಲು : ರಾಜ್ಯದಲ್ಲಿ ಇದೇ ಮೊದಲು

ಅಧಿಕಾರಿಗಳ ಮುಂದೆ ಅಂದು (ಜುಲೈ 26, ಬುಧವಾರ) ಸಾಯಂಕಾಲದ ಒಳಗೆ ಪತ್ನಿಯನ್ನ ಮನೆಯೊಳಗೆ ಸೇರಿಸುತ್ತೇನೆ ಎಂದಿದ್ದ ಪತಿರಾಯ ಸಿದ್ದೇಶ್, ಅಧಿಕಾರಿಗಳು ವಾಪಾಸ್ ಆಗ್ತಿದ್ದಂತೆ ಮತ್ತೆ ಸಂಪ್ರದಾಯಕ್ಕೆ ಜೋತು ಬಿದ್ದು ಬಾಣಂತಿಯನ್ನ ಅದೇ ಗುಡಿಸಲಿನಲ್ಲಿಟ್ಟಿದ್ದ.. ಎಷ್ಟು ಹೇಳಿದರೂ ಮಾತು ಕೇಳದ ಸಿದ್ದೇಶ್ ಕುಟುಂಬದ ನಡೆಯ ಬಗ್ಗೆ ಬೇಸತ್ತ ಆರೋಗ್ಯ ಇಲಾಖೆ ಸಿಬ್ಬಂದಿ ನಿನ್ನೆ ಗುರುವಾರದಂದು ಬೆಳಗ್ಗೆ ಮತ್ತೆ ಊರಿಗೆ ಭೇಟಿ ನೀಡಿ, ಬಾಣಂತಿ ವಸಂತಾಳನ್ನ ಮನೆಯೊಳಗೆ ಸೇರಿಸುವಲ್ಲಿ ಯಶಸ್ವಿಯಾಗಿದ್ದರು. ಬಾಣಂತಿಯನ್ನ ಮನೆಯೊಳಗೆ ಕರೆದುಕೊಂಡು ಹೋಗಿ ಅವಳಿಗೆ ಅಲ್ಲಿಯೇ ಚಿಕಿತ್ಸೆಯನ್ನು ಸಹ ನೀಡಿದ್ದರು. 

ಇನ್ನು ಇದೇ ವಿಚಾರವಾಗಿ ಹಿರಿಯ ಸಿವಿಲ್ ನ್ಯಾಯಾಧೀಶೆ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ನೂರುನ್ನಿಸಾ ಕೂಡ ಗ್ರಾಮಕ್ಕೆ ಭೇಟಿ ನೀಡಿದರು. ಬಾಣಂತಿ ವಸಂತಾ ಆರೋಗ್ಯ ವಿಚಾರಿಸಿದ್ದಾರೆ. ಗ್ರಾಮಸ್ಥರ ಜೊತೆ ಚರ್ಚಿಸಿ ಜಾಗೃತಿ ಮೂಡಿಸಿದ ನೂರುನ್ನಿಸಾ, ಆಚಾರಗಳಿಗಿಂತ ಪ್ರಾಣ ಮುಖ್ಯ ಅನ್ನೋದನ್ನ ಯಾರೂ ಮರೆಯಬಾರದು. ಈ ಪ್ರಕರಣವನ್ನು ನಾವು ಗಂಭೀರವಾಗಿ ಪರಿಗಣಿಸಿದ್ದೇವೆ. ತಪ್ಪಿಸ್ಥತರ ವಿರುದ್ದ ಕಠಿಣ ಕ್ರಮವಹಿಸಿ ಶಿಕ್ಷೆಗೆ ಗುರಿಪಡಿಸಲಾಗುವುದು, ಈ ಬಗ್ಗೆ ಸಮಗ್ರ ವರದಿಯನ್ನು ಮಹಿಳೆ ಮತ್ತು ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗಕ್ಕೆ ಸಲ್ಲಿಸಲಾಗುತ್ತದೆ ಎಂದು ತಿಳಿಸಿದ್ದರು. 

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಕೋರಾ ಠಾಣೆಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮೇಲ್ವಿಚಾರಕಿ ರಾಜಶ್ರೀ ಅವರು ಮೌಢ್ಯಾಚರಣೆ ಮಾಡಿ, ನಿರ್ಲಕ್ಷ್ಯ ತೋರಿ, ಮಗುವಿನ ಸಾವಿಗೆ ಕಾರಣರಾಗಿದ್ದಾರೆ ಎಂದು ಆರೋಪಿಸಿ ನೀಡಿದ್ದ ದೂರಿನನ್ವಯ ಇದೀಗ ಎಫ್‌ಐ‌ಆರ್ ದಾಖಲಿಸಲಾಗಿದೆ. ಮೌಢ್ಯಾಚರಣೆ ಮಾಡಿದವರ ವಿರುದ್ದ ದೂರು ದಾಖಲಾಗಿದ್ದು, ಬಾಣಂತಿ ವಸಂತಾಳ ಪತಿ ಸಿದ್ದೇಶ್ ಹಾಗೂ ತಂದೆ ಚಿಕ್ಕ ಹುಲಿಗಪ್ಪ ವಿರುದ್ದ ನ್ಯಾಯಾದೀಶರಾದ ನೂರುನ್ನಿಸಾರವರ ಮಾರ್ಗದರ್ಶನದಂತೆ ಎಫ್‌ಐ‌ಆರ್ ದಾಖಲು ಮಾಡಲಾಗಿದೆ. 

ಇದನ್ನೂ ಓದಿ- ಉಡುಪಿ ಖಾಸಗಿ ಕಾಲೇಜು ವಿದ್ಯಾರ್ಥಿನಿಯರ ವಿಡಿಯೋ ಪ್ರಕರಣ, ಪೊಲೀಸ್ ಠಾಣೆಯಲ್ಲಿ ದೂರು ದಾಖಲು

ಅದೇನೆ ಇರಲಿ  ಕೊನೆಗೂ ಬಾಣಂತಿ ಮಹಿಳೆ ಮನೆ ಸೇರಿದ್ದಾಳೆ. ವಾರಗಟ್ಟಲೇ ಮಳೆ, ಚಳಿಯಲ್ಲಿ ನಲುಗುತ್ತಾ ಶಿಕ್ಷೆ ಅನುಭವಿಸಿದ್ದ ವಸಂತಾಳ ಆರೋಗ್ಯದ ದೃಷ್ಠಿಯಿಂದ ಬೆಳ್ಳಾವಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.. ಇಷ್ಟೇಲ್ಲಾ ಘಟನೆ ಎರಡು ಕಂದಮ್ಮಗಳು ಜೀವ ಕಳೆದುಕೊಂಡಿದ್ದು ಮಾತ್ರ ಮೌಢ್ಯತೆಯಲ್ಲಿ ಬದುಕುತ್ತಿರುವ ಸಮಾಜವನ್ನು ಪ್ರಶ್ನಿಸುವಂತಾಗಿದೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News