ಮೈಸೂರು ದಸರಾ 2019: ಅರಮನೆಯಲ್ಲಿಂದು 'ರತ್ನ ಖಚಿತ ಸಿಂಹಾಸನ' ಜೋಡಣೆ

ಇಂದಿನ ಶುಭ ಲಗ್ನದಲ್ಲಿ ಮೈಸೂರು ಅರಮನೆಯಲ್ಲಿ 'ರತ್ನ ಖಚಿತ ಸಿಂಹಾಸನ' ಜೋಡಣೆ ಕಾರ್ಯ ನಡೆಯಲಿದೆ.

Last Updated : Sep 24, 2019, 09:43 AM IST
ಮೈಸೂರು ದಸರಾ 2019: ಅರಮನೆಯಲ್ಲಿಂದು 'ರತ್ನ ಖಚಿತ ಸಿಂಹಾಸನ' ಜೋಡಣೆ title=
File Image

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾಗೆ ಸಜ್ಜಾಗುತ್ತಿರುವ ಸಾಂಸ್ಕೃತಿಕ ನಗರಿಯಲ್ಲಿ ನಾಡಹಬ್ಬದ ಸಂಭ್ರಮ ಸಡಗರ ಮನೆ ಮಾಡಿದೆ. ಸೆಪ್ಟೆಂಬರ್ 29 ರಿಂದ ಅಕ್ಟೋಬರ್ 8ರವರೆಗೆ ನಡೆಯಲಿರುವ ಮೈಸೂರು ದಸರೆಗೆ ಅರಮನೆ ನಗರಿ ಸಿದ್ಧಗೊಳ್ಳುಟ್ಟಿದೆ. ಸೆ. 29ರಂದು ರಾಜ ಮನೆತನದ ಖಾಸಗಿ ದರ್ಬಾರ್ ಪ್ರಾರಂಭವಾಗಲಿದ್ದು, ಈ ಹಿನ್ನೆಲೆಯಲ್ಲಿ ಇಂದಿನ ಶುಭ ಲಗ್ನದಲ್ಲಿ ಮೈಸೂರು ಅರಮನೆಯಲ್ಲಿ 'ರತ್ನ ಖಚಿತ ಸಿಂಹಾಸನ' ಜೋಡಣೆ ಕಾರ್ಯ ನಡೆಯಲಿದೆ.

ಅರಮನೆಯ ದರ್ಬಾರ್​ ಹಾಲ್​ನಲ್ಲಿ ಸಂಪ್ರದಾಯದಂತೆ 'ರತ್ನ ಖಚಿತ ಸಿಂಹಾಸನ' ಜೋಡಣೆ ಕಾರ್ಯ ನಡೆಯುತ್ತಿದೆ. ಹೀಗಾಗಿ ಇಂದು ಬೆಳಿಗ್ಗೆ 10 ಗಂಟೆಯಿಂದ ಮಧ್ಯಾಹ್ನ 1 ಗಂಟೆವರೆಗೆ ಸಾರ್ವಜನಿಕ ಪ್ರವೇಶವನ್ನು ನಿರ್ಬಂಧಿಸಲಾಗಿದೆ.

ಯದುವಂಶದ ರಾಜಮಾತೆ ಪ್ರಮೋದಾದೇವಿ ಒಡೆಯರ್ ನೇತೃತ್ವದಲ್ಲಿ 'ಚಿನ್ನದ ಸಿಂಹಾಸನದ ಜೋಡಣೆ' ಕಾರ್ಯ ನಡೆಯಲಿದೆ. ಅರಮನೆಯ ಸಿಬ್ಬಂದಿ ಸಿಂಹಾಸನ ಜೋಡಣಾ ಕಾರ್ಯ ನೆರವೇರಿಸಲಿದ್ದಾರೆ. ಈ ಸಂದರ್ಭದಲ್ಲಿ ಸಂಪ್ರದಾಯದಂತೆ ನವಗ್ರಹ ಹೋಮ ಮತ್ತು ಗಣಹೋಮ ಮಾಡಿ ಪೂಜೆ ನೆರವೇರಿಸಲಾಗುತ್ತದೆ.

ದಸರಾ ಸಂದರ್ಭದಲ್ಲಿ ಮಾತ್ರ ಸಿಂಹಾಸನ ಜೋಡಣೆ ಮಾಡಲಾಗುತ್ತದೆ. ವಾಡಿಕೆಯಂತೆ ನವರಾತ್ರಿ ಸಂದರ್ಭದಲ್ಲಿ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ 'ರತ್ನ ಖಚಿತ ಸಿಂಹಾಸನ'ದಲ್ಲಿ ಕುಳಿತು ಖಾಸಗಿ ದರ್ಬಾರ್ ನಡೆಸುತ್ತಾರೆ.
 

Trending News