ಶ್ರಾವಣ ಮಾಸದ ಹುಣ್ಣಿಮೆ ಬಂತೆಂದರೆ ಎಲ್ಲೆಲ್ಲೂ ರಕ್ಷಾ ಬಂಧನ ಹಬ್ಬದ ಸಡಗರ, ಸಂಭ್ರಮ. ಅಂದು ಹೆಣ್ಣು ಮಕ್ಕಳೆಲ್ಲರೂ ತನ್ನ ಅಣ್ಣನಿಗೆ ರಾಖಿ ಕಟ್ಟಲು ಕಾತುರರಾಗಿರುತ್ತಾರೆ. ಅಂಗಡಿಗಳಲ್ಲಂತೂ ಬಗೆಬಗೆಯ ರಾಖಿ ಮಾರಾಟದ ಪ್ರಕ್ರಿಯೆ ಆರಂಭವಾದರೆ, ಮತ್ತೊಂದೆಡೆ ತನ್ನ ಅಣ್ಣನಿಗಾಗಿ ಯಾವ ಬಗೆಯ ರಾಖಿ ಕೊಳ್ಳುವುದು ಎಂದು ಹಪಹಪಿಸುವ ತಂಗಿಯರು! ಈ ಎಲ್ಲದರ ನಡುವೆ ರಾಖಿ ಹಬ್ಬದಂದು ಹಂಚಿಕೆಯಾಗುವುದು ಅಣ್ಣ ತಂಗಿಯರ ನಿರ್ಮಲವಾದ ಪ್ರೀತಿ, ಭಾಂಧವ್ಯ ಮತ್ತು ಸಂತಸ. ಈ ರಾಖಿ ಹಬ್ಬ ಈ ಬಾರಿ ಆಗಸ್ಟ್ 26ರಂದು ದೇಶಾದ್ಯಂತ ಆಚರಿಸಲಾಗುತ್ತಿದೆ.
ಉತ್ತರ ಭಾರತದ ಸಡಗರದ ಹಬ್ಬ
ಉತ್ತರ ಭಾರತದಲ್ಲಿ ಹೆಚ್ಚಾಗಿ ಆಚರಿಸಲ್ಪಡುವ 'ರಕ್ಷಾಬಂಧನ ಹಬ್ಬ' ದಕ್ಷಿಣ ಭಾರತದಲ್ಲೂ ಕೊಂಚ ಮಟ್ಟಿಗೆ ಆಚರಣೆಯಲ್ಲಿದೆ. ಯಾವುದೇ ಜಾತಿ, ಬೇಧ, ಭಾವವೆನ್ನುವ ಅಡೆತಡೆಗಳಿಲ್ಲದೆ ಪ್ರತಿಯೊಬ್ಬರೂ ಆಚರಿಸಬಹುದಾದ ಹಬ್ಬವೇ ರಕ್ಷಾ ಬಂಧನ. `ರಕ್ಷಾ’ ಎಂದರೆ ರಕ್ಷಿಸು ಹಾಗೂ 'ಬಂಧನ’ ಎಂದರೆ ಬಾಂಧವ್ಯ ಅಥವಾ ಬದ್ಧತೆ. ಹೀಗೆ ಒಡಹುಟ್ಟಿದ ಅಣ್ಣ-ತಂಗಿ ನಡುವಿನ ಸಂಬಂಧ ಹಸನಾಗಿರಲೆಂದು ಹಾಗೂ ಅಣ್ಣವಾದವನು ಸದಾ ತನ್ನ ರಕ್ಷಣೆಗೆ ಇರಬೇಕೆಂದು ಆಶಿಸಿ ತಂಗಿ ತನ್ನ ಅಣ್ಣನಿಗೆ ಕಟ್ಟುವ ದಾರವೇ ರಕ್ಷಾ ಬಂಧನ.
ಭಾವನೆಗಳಿಗೆ ಸಂಬಂಧಿಸಿದ ಹಬ್ಬ
'ರಕ್ಷಾ ಬಂಧನ' ಭಾವನೆಗಳಿಗೆ ಸಂಬಂಧಿಸಿದ ಹಬ್ಬ. ಅಂದು ಬೆಳಿಗ್ಗೆಯೇ ಎದ್ದು ನಿತ್ಯ ಕರ್ಮಗಳನ್ನು ಮುಗಿಸಿ ಹೊಸ ಬಟ್ಟೆ ಧರಿಸಿ, ಅಣ್ಣ-ತಂಗಿಯರ ಸಂಬಂಧ ಉತ್ತಮವಾಗಿರಲೆಂದು ಬೇಡಿ, ತನ್ನ ಅಣ್ಣನಿಗೆ ತಿಲಕವಿಟ್ಟು ಆರತಿ ಮಾಡಿ, ಆತನ ಮಣಿಕಟ್ಟಿಕೆ ರಾಖಿ ಕಟ್ಟಿ ನಮಸ್ಕರಿಸಿ ಆಶೀರ್ವಾದವನ್ನು ತಂಗಿ ಸ್ವೀಕರಿಸುತ್ತಾಳೆ. ಅಣ್ಣನೂ ಸಹ ಅದಕ್ಕೆ ಪ್ರತಿಯಾಗಿ ಉಡುಗೊರೆ ನೀಡುತ್ತಾನೆ. ಆದರೆ ಇವೆಲ್ಲಾ ಪೂಜಾ ಕ್ರಮಗಳನ್ನು ಹಬ್ಬದಂದು ಮಾತ್ರ ಮಾಡುವ ಆಚರಣೆಯಾಗಿದೆ.
ಅಣ್ಣನಿಂದ ರಕ್ಷಣೆಯ ಭರವಸೆ
ಬಹುಷಃ ಯಾವಾಗ ಮನೆ ಮಗಳು ಮದುವೆಯಾಗಿ ತವರು ಮನೆಯಿಂದ ಗಂಡನ ಮನೆಗೆ ಸೇರಿದಳೋ ಅಂದಿನಿಂದಲೇ ಆಕೆಗೆ ಹೆಚ್ಚಿನ ರಕ್ಷಣೆಯ ಅಗತ್ಯವಿರುತ್ತದೆ. ಹೆಣ್ಣಿನ ಮೇಲೆ ಹಲವು ರೀತಿಯ ಶೋಷಣೆ ಹಾಗೂ ಕಿರುಕುಳದಿಂದಾಗಿ ಆಕೆ ತನ್ನ ಗಂಡನ ಮನೆ ತೊರೆದು ತವರಿಗೆ ಬರುತ್ತಾಳೆ. ಏಕೆಂದರೆ ತವರಿನಲ್ಲಿ ತನಗೆ ರಕ್ಷಣೆ ಹಾಗೂ ಸಹಕಾರ ದೊರೆಯುತ್ತದೆಂಬ ನಂಬಿಕೆಯಿಂದ. ಹಾಗೆಯೇ ಎಲ್ಲಿ ತನ್ನ ತಂಗಿ ಪುನಃ ಗಂಡನ ಮನೆಗೆ ಹೋದರೆ ಸಂಕಷ್ಟಕ್ಕೆ ಸಿಲುಕುತ್ತಾಳೋ ಎಂಬ ಭಯದಿಂದ ಇಂದಿಗೂ ಮದುವೆಯಾದ ಹೆಣ್ಣು ಮಗಳು ತನ್ನ ತವರಿನಲ್ಲೇ ಉಳಿದಿರುವ ಸಂಖ್ಯೆಯೂ ಅದೆಷ್ಟೋ. ಇಂತಹ ಸಂದರ್ಭದಲ್ಲಿ ಅಣ್ಣ ಧೈರ್ಯ ಹೇಳಿ ಪುನಃ ತಂಗಿಯನ್ನು ಕರೆದುಕೊಂಡು ಹೋಗಿ ಗಂಡನ ಮನೆಯಲ್ಲಿ ಬಿಟ್ಟಾಗ ತನ್ನ ರಕ್ಷಣೆಗೆ ಹಾಗೂ ಸಹಾಯಕ್ಕೆ ಸದಾ ತನ್ನ ತವರು ಇದ್ದೇ ಇರುತ್ತದೆ ಎಂಬ ದೃಢ ವಿಶ್ವಾಸವನ್ನು ವ್ಯಕ್ತಪಡಿಸುತ್ತಾಳೆ. ಇದೇ ನಿಜವಾದ ರಕ್ಷಾ ಬಂಧನ.
ಪುರಾಣದಲ್ಲಿ ರಕ್ಷಾ ಬಂಧನ
ಇಂದು ರಕ್ಷಾ ಬಂಧನವನ್ನು ಕೇವಲ ಒಡಹುಟ್ಟಿದ ಅಣ್ಣ ತಂಗಿಯರು ಮಾತ್ರ ಆಚರಿಸುವ ಹಬ್ಬವಾಗಿರದೆ ಪ್ರತೀ ಹೆಣ್ಣೂ ಕೂಡ ತನ್ನ ರಕ್ಷಣೆಗಾಗಿ ತಾನು ನಂಬಿರುವ ಹಾಗೂ ವಿಶ್ವಾಸವಿರುವ ಗಂಡಿಗೆ ರಾಖಿ ಕಟ್ಟುವುದು ಸಾಮಾನ್ಯವಾಗುತ್ತಿದೆ. ಈ ಬದಲಾವಣೆ ಹೊಸತೇನಲ್ಲ. ಮಹಾಭಾರತದಲ್ಲಿ ಶ್ರೀಕೃಷ್ಣನು ರಾಜ್ಯದ ಪ್ರಜೆಗಳಿಗೆ ತೊಂದರೆ ನೀಡುತ್ತಿದ್ದ ರಾಜಾ ಶಿಶುಪಾಲನನ್ನು ಯುದ್ಧದಲ್ಲಿ ಕೊಂದ ನಂತರ ಆತನ ಬೆರಳಿನಲ್ಲಿ ರಕ್ತ ಹರಿಯುತ್ತಿರುವುದನ್ನು ಕಂಡ ದ್ರೌಪದಿಯು ತನ್ನ ಸೆರಗಿನ ಅಂಚನ್ನು ಹರಿದು ಆ ಬಟ್ಟೆಯನ್ನು ಶ್ರೀಕೃಷ್ಣನ ಮಣಿಕಟ್ಟಿಗೆ ಕಟ್ಟಿ ರಕ್ತ ಸ್ರಾವವನ್ನು ನಿಲ್ಲಿಸುತ್ತಾಳೆ. ಆ ಘಳಿಗೆಯಲ್ಲಿ ಶ್ರೀಕೃಷ್ಣನು ದ್ರೌಪದಿಗೆ ತನ್ನ ಮೇಲಿರುವ ಅನುಕಂಪ ಹಾಗೂ ವಾತ್ಸಲ್ಯವನ್ನು ಅರಿತು ಆಕೆಯನ್ನು ತಂಗಿ ಭಾವದಿಂದ ನೋಡಿ ನಿನಗೆ ಕಷ್ಟ ಬಂದಾಗ ನಿನ್ನ ಸಹಾಯಕ್ಕೆ ಸದಾ ಇರುವುದಾಗಿ ಪ್ರಮಾಣ ಮಾಡುತ್ತಾನೆ. ಅದರಂತೆ ಹಲವು ವರ್ಷಗಳ ನಂತರ ಒಮ್ಮೆ ಪಾಂಡವರು ಕೌರವರ ನಡುವುನ ಪಗಡೆಯಾಟದಲ್ಲಿ ದೌಪದಿಯನ್ನು ಅಡವಿಟ್ಟು ಸೋತ ಸಂದರ್ಭದಲ್ಲಿ ಕೌರವರು ದ್ರೌಪದಿಯ ವಸ್ತ್ರಾಪಹರಣ ಮಾಡಲು ಮುಂದಾಗುತ್ತಾರೆ. ಆಗ ದ್ರೌಪದಿಯು ಕೃಷ್ಣಾ ಎಂದು ಕೂಗಿದೊಡನೆ ಆತ ಬಂದು ವಸ್ತ್ರಾಪಹರಣ ಮಾಡದಂತೆ ತಡೆದು ಆಕೆಗೆ ರಕ್ಷಣೆಯನ್ನು ನೀಡುತ್ತಾನೆ. ಇದು ಅಣ್ಣ ತನ್ನ ತಂಗಿಯ ರಕ್ಷಣೆಗಾಗಿ ಸದಾ ಸಿದ್ಧನಿರುತ್ತಾನೆ ಎಂಬುದಕ್ಕೆ ಒಂದು ನಿದರ್ಶನ.
ಹುಡುಗಾಟದ ಆಚರಣೆಯಾಗುತ್ತಿರುವ ಹಬ್ಬ
ಆದರೆ ಇತ್ತೀಚಿನ ದಿನಗಳಲ್ಲಿ ರಕ್ಷಾ ಬಂಧನ ಎಂಬುದು ಹುಡುಗಾಟಿಕೆಯ ವಸ್ತುವಾಗಿ ಬಳಸಲಾಗುತ್ತಿದೆ. ಸಹ ಶಿಕ್ಷಣ ಶಾಲೆಗಳಲ್ಲಿ ಕಾಲೇಜುಗಳಲ್ಲಿ ಹುಡುಗಿಯರು ಹುಡುಗರ ಕೆಟ್ಟ ದೃಷ್ಟಿಯಿಂದ ತಪ್ಪಿಸಿಕೊಳ್ಳಲು ಆತನಿಗೆ ರಾಕಿ ಕಟ್ಟುವುದು ಹಾಗೂ ಹುಡುಗನೊಬ್ಬ ಪ್ರೇಮಿಸುವುದಾಗಿ ಹೇಳಿದಾಗ ಇಷ್ಟವಿಲ್ಲದಿದ್ದರೆ ಆತನ ಮನಸ್ಸಿಗೆ ನೋವಾಗದಂತೆ ನಾಜೂಕಾಕಿ ಆತನ ಕೈಗೆ ರಾಕಿ ಕಟ್ಟುವ ಮೂಲಕ ಪ್ರೇಮವನ್ನು ನಂiÀiವಾಗಿ ತಿರಸ್ಕರಿಸಿ ‘ನಾವಿಬ್ಬರೂ ಅಣ್ಣ-ತಂಗಿಯರಾಗಿ, ಸ್ನೇಹಿತರಾಗಿ ಇರೋಣ’ ಎಂದು ಹೇಳುವ, ಹುಡುಗರು ಚುಡಾಯಿಸಿದರೆ ಆತನಿಗೆ ರಾಕಿ ಕಟ್ಟಿ ಬೆದರಿಸುವ ಮಟ್ಟಕ್ಕೆ ರಕ್ಷಾ ಬಂಧನ ತಲುಪಿದೆ. ಇಷ್ಟಾದರೂ ಸಹ ರಕ್ಷಾ ಬಂಧನ ಹಬ್ಬ ತನ್ನ ಪಾವಿತ್ರ್ಯತೆ ಕಳೆದುಕೊಳ್ಳದೆ ಒಳ್ಳೆಯ ರೀತಿಯಲ್ಲಿ ಹೆಣ್ಣಿನ ರಕ್ಷಣೆಗೆ ನಿಂತಿರುವ ಸಾಧನವಾಗಿ ಕಾರ್ಯ ನಿರ್ವಹಿಸುತ್ತಿದೆ.
ಶಾಂತಿನಿಕೇತನದಲ್ಲಿ ರಾಖಿ ಉತ್ಸವ
ಇತ್ತೀಚೆಗೆ ಪಾದ್ರಿಗಳು ಭಕ್ತರಿಗೆ, ಹೆಂಡತಿ ಗಂಡನಿಗೆ, ಹುಡುಗಿ ಹುಡುಗನಿಗೆ, ಶಿಷ್ಯರು ಗುರುಗಳಿಗೆ ರಾಖಿ ಕಟ್ಟುವ ಮೂಲಕ ತಮ್ಮ ರಕ್ಷಣೆ ಹಾಗೂ ಬಾಂಧವ್ಯವನ್ನು ಉತ್ತಮಪಡಿಸಿಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಇಂತಹ ಒಂದು ಪ್ರಯತ್ನಕ್ಕೆ ರವೀಂದ್ರನಾಥ್ ಠಾಗೂರರು ತಮ್ಮ ಶಾಂತಿನಿಕೇತನದಲ್ಲಿ ನಡೆದ ರಾಖಿ ಮಹೋತ್ಸವದಲ್ಲಿ ಉತ್ತೇಜನ ನೀಡಿದರು. ಮಾನವರ ನಡುವೆ ಸೋದರ ಮನೋಭಾವ, ಮಾನವೀಯತೆ ಹಾಗೂ ಉತ್ತಮ ಬಾಂಧವ್ಯ ಬೆಸೆಯಲು ಇರುವ ಮಾರ್ಗ ಇದೊಂದೇ ಎಂದು ಅವರು ನಂಬಿದ್ದರು. ಅದರಂತೆ ಅಂದಿನಿಂದ ನೆರೆಹೊರೆಯವರು, ಸ್ನೇಹಿತರು ಹಾಗೂ ಸಂಬಂಧಿಗಳ ನಡುವೆಯೂ ರಾಖಿ ಕಟ್ಟುವ ಆಚರಣೆಗೆ ಹೆಚ್ಚು ಒತ್ತು ನೀಡಲಾಯಿತು.
ಅಣ್ಣ-ತಂಗಿಯರ ಬಾಂಧವ್ಯಕ್ಕೆ ಬೆಸುಗೆಯಾಗಿ ರಾಖಿ
ಇನ್ನು, ರಾಖಿ ಹಬ್ಬದಂದು ರಾಕಿ ಮಾರುವ ಹಾಗೂ ಕೊಳ್ಳುವ ಭರಾಟೆ ಭರದಿಂದಲೇ ಸಾಗಿರುತ್ತದೆ. ತನ್ನ ಅಣ್ಣ ತಾನು ಕಟ್ಟುವ ರಾಖಿಯನ್ನು ಕಟ್ಟಿದ ಕೂಡಲೇ ಸಂತೋಷಪಡಬೇಕೆಂಬ ಆಸೆಯಿಂದ ಅತಿ ಹೆಚ್ಚು ಬೆಲೆಯ ರಾಖಿ ಕೊಳ್ಳುವ ತಂಗಿಯರೂ ಇದ್ದಾರೆ. ಅದರಂತೆ ತನ್ನ ತಂಗಿ ಖುಷಿಯಾಗಲೆಂದು ಅಣ್ಣ ಹೆಚ್ಚು ಬೆಲೆಯ ಉಡುಗೊರೆ ನೀಡುವುದೂ ವಾಸ್ತವ. ಆದರೆ ರಕ್ಷಾ ಬಂಧನದಲ್ಲಿ ಶ್ರೀಮಂತಿಕೆಯ ತೋರಾಣಿಕೆಯಿಂದ ಮಾತ್ರ ಉತ್ತಮ ಬಾಂಧವ್ಯ ಮೂಡಲು ಸಾಧ್ಯ ಎಂಬ ನಂಬಿಕೆಯನ್ನು ತೊರೆದು, ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದು ಎಂಬ ಗಾದೆಯಂತೆ ನಿರ್ಮಲವಾದ ಮನೋಭಾವದಿಂದ ಒಂದು ದಾರ ಕಟ್ಟಿದರೂ ಅಷ್ಟೇ ಪ್ರಾಮುಖ್ಯತೆ, ಶ್ರೇಷ್ಠತೆಯಿಂದ ಕೂಡಿರುತ್ತದೆ ಎಂಬುದನ್ನು ಮರೆಯಬಾರದು.