ಸೊಂಟ ನೋವಿನಿಂದ ಅಮಿತಾಬ್ ಬಚ್ಚನ್ ಅಸ್ವಸ್ಥಗೊಂಡಿದ್ದರು - ಪತ್ನಿ ಜಯಾ ಬಚ್ಚನ್ ಹೇಳಿಕೆ

ಬಾಲಿವುಡ್‌ ಬಿಗ್‌ಬಿ ಅಮಿತಾಬ್‌ ಬಚ್ಚನ್‌ ಅವರು ಆರೋಗ್ಯವಾಗಿದ್ದಾರೆ ಎಂದು ಅವರ ಪತ್ನಿ ಹಾಗೂ ರಾಜ್ಯಸಭಾ ಸಂಸದೆ ಜಯಾ ಬಚ್ಚನ್ ತಿಳಿಸಿದ್ದಾರೆ. 

Divyashree K Divyashree K | Updated: Mar 13, 2018 , 06:26 PM IST
ಸೊಂಟ ನೋವಿನಿಂದ ಅಮಿತಾಬ್ ಬಚ್ಚನ್ ಅಸ್ವಸ್ಥಗೊಂಡಿದ್ದರು - ಪತ್ನಿ ಜಯಾ ಬಚ್ಚನ್ ಹೇಳಿಕೆ

ನವದೆಹಲಿ: ಬಾಲಿವುಡ್‌ ಬಿಗ್‌ಬಿ ಅಮಿತಾಬ್‌ ಬಚ್ಚನ್‌ ಅವರು ಆರೋಗ್ಯವಾಗಿದ್ದಾರೆ ಎಂದು ಅವರ ಪತ್ನಿ ಹಾಗೂ ರಾಜ್ಯಸಭಾ ಸಂಸದೆ ಜಯಾ ಬಚ್ಚನ್ ತಿಳಿಸಿದ್ದಾರೆ. 

ರಾಜಸ್ತಾನದ ಜೋಧ್‌ಪುರದಲ್ಲಿ ಇಂದು ಬೆಳಿಗ್ಗೆ ನಡೆಯುತ್ತಿದ್ದ 'ಥಗ್ಸ್‌ ಆಫ್‌ ಹಿಂದೂಸ್ತಾನ್‌' ಸಿನಿಮಾದ ಶೂಟಿಂಗ್‌ ವೇಳೆಯಲ್ಲಿ ಅಮಿತಾಬ್ ಬಚ್ಚನ್ ದಿಢೀರ್‌ ಅಸ್ವಸ್ಥಗೊಂಡಿದ್ದರು. ಈ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಜಯಾ ಬಚ್ಚನ್, ಅಮಿತಾಬ್ ಅವರ ಸೊಂಟ ಮತ್ತು ಕುತ್ತಿಗೆಯಲ್ಲಿ ನೋವು ಜಾಸ್ತಿಯಾಗಿ ಅವರು ಅಸ್ವಸ್ಥಗೊಂಡಿದ್ದರು. ಇದರ ಜೊತೆ ಅವರಿಗೆ ಇತರ ಆರೋಗ್ಯ ಸಮಸ್ಯೆಗಳೂ ಇವೆ. ಆದರೆ ಈಗ ಅವರು ಆರೋಗ್ಯವಾಗಿದ್ದಾರೆ ಎಂದು ಹೇಳಿದರು.

ಅಮಿತಾಬ್ ಅವರ ಆರೋಗ್ಯದ ದೃಷ್ಟಿಯಿಂದ ಜಯಾ ತಮ್ಮ ವೈದ್ಯರ ತಂಡವನ್ನು ಜೋಧ್'ಪುರ್ ಗೆ ಬರಲು ಹೇಳಿದ್ದರು. ಈ ಹಿನ್ನೆಲೆಯಲ್ಲಿ ಇದೀಗ ತಾನೇ ಮುಂಬೈನಿಂದ ವಿಶೇಷ ವಿಮಾನದಲ್ಲಿ ವೈದ್ಯರು ಆಗಮಿಸಿದ್ದಾರೆ ಎನ್ನಲಾಗಿದೆ. 

ಅಮಿತಾಬ್ ಬೇಗ ಗುಣಮುಖರಾಗಲು ರಜನಿಕಾಂತ್ ಪ್ರಾರ್ಥನೆ

ಈ ಮಧ್ಯೆ, ಪುಣ್ಯ ಕ್ಷೇತ್ರಗಳ ಪ್ರವಾಸದಲ್ಲಿರುವ ತಮಿಳು ಸೂಪರ್ ಸ್ಟಾರ್ ರಜನಿಕಾಂತ್ ಡೆಹ್ರಾಡೂನ್ನಗೆ ಆಗಮಿಸಿದ್ದು, ಅಮಿತಾಬ್ ಬಚ್ಚನ್ ಅವರ ಆರೋಗ್ಯದ ಸುದ್ದಿ ತಿಳಿದು ಅವರ ದೀರ್ಘಾಯುಷ್ಯಕ್ಕಾಗಿ ಪ್ರಾರ್ಥನೆ ಮಾಡಿದ್ದಾರೆ. "ನಾನು ತೀರ್ಥಯಾತ್ರೆಗಾಗಿ ಇಲ್ಲಿಗೆ ಬಂದಿದ್ದೇನೆ. ಇದೊಂದು ಆಧ್ಯಾತ್ಮಿಕ ಪ್ರವಾಸವಾಗಿದೆಯೇ ಹೊರತು ಇದರಲ್ಲಿ ಯಾವುದೇ ರಾಜಕೀಯ ಇಲ್ಲ. ಅಮಿತಾಬ್ ಬಚ್ಚನ್ ಅವರ ಆರೋಗ್ಯದ ಬಗ್ಗೆ ತಿಳಿಯಿತು. ಅವರು ಶೀಘ್ರವಾಗಿ ಗುಣಮುಖರಾಗಲು ಆ ದೇವರಲ್ಲಿ ಪ್ರಾರ್ಥಿಸುತ್ತೇನೆ" ಎಂದಿದ್ದಾರೆ. 

75 ವರ್ಷದ ಅಮಿತಾಬ್ ಬಚ್ಚನ್ ‘ಥಗ್ಸ್‌ ಆಫ್‌ ಹಿಂದೂಸ್ತಾನ್‌’ ಚಿತ್ರದ ಶೂಟಿಂಗ್'ಗಾಗಿ ನಿರಂತರವಾಗಿ ಪಾಲ್ಗೊಂಡ ಹಿನ್ನೆಲೆಯಲ್ಲಿ ಮತ್ತು ಹವಾಮಾನದ ಬದಲಾವಣೆಯಿಂದಾಗಿ ತೀವ್ರವಾಗಿ ಆಯಾಸಗೊಂಡಿದ್ದು ಅವರಿಗೆ ಸ್ವಲ್ಪ ವಿಶ್ರಾಂತಿಯ ಅವಶ್ಯಕತೆ ಎಂದು ವೈದ್ಯರು ತಿಳಿಸಿದ್ದಾರೆ.