ಬೆಂಗಳೂರು: ಕರ್ನಾಟಕ ಸರ್ಕಾರದಿಂದ ಮೈಸೂರಿನಲ್ಲಿ ಸ್ಥಾಪಿತವಾಗಿರುವ ರಂಗಾಯಣ ಭಾರತೀಯ ರಂಗ ಶಿಕ್ಷಣ ಕೇಂದ್ರವು ರಂಗ ಶಿಕ್ಷಣದಲ್ಲಿ ಡಿಪ್ಲೂಮೂ ತರಬೇತಿಯನ್ನು ನೀಡಲು 2020-21 ನೇ ಸಾಲಿಗೆ ಅರ್ಹ ಅಭ್ಯರ್ಥಿಗಳಿಂದ ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ರಂಗ ತರಬೇತಿ ಕೋರ್ಸ್ಗೆ ಸೇರ ಬಯಸುವ ವಿದ್ಯಾರ್ಥಿಗಳು ಕನಿಷ್ಠ ದ್ವೀತಿಯ ಪಿಯುಸಿ(10+2) ಅಥವಾ ತತ್ಸಮಾನ ಪರೀಕ್ಷೆ ತೇರ್ಗಡೆ ಹೊಂದಿರಬೇಕು. ಅರ್ಜಿ ಸಲ್ಲಿಸಲು ನಿಗದಿಗೊಳಿಸಿದ ಕೊನೆಯ ದಿನಾಂಕಕ್ಕೆ ಅರ್ಜಿ ಸಲ್ಲಿಸುವ ಆಭ್ಯರ್ಥಿಯ ವಯಸ್ಸು 18 ವರ್ಷಗಳು ತುಂಬಿದ 28 ವರ್ಷದೊಳಗಿರಬೇಕು. ಆಯ್ಕೆಯಾದ ಅಭ್ಯರ್ಥಿಗಳಿಗೆ ನಿಯಮಾನುಸಾರ ರಂಗಾಯಣದಿಂದಲೇ ವಸತಿ ಕಲ್ಪಿಸಲಾಗುವುದು ಮತ್ತು ತಿಂಗಳಿಗೆ 3000 ರೂ.ಗಳ ವಿದ್ಯಾರ್ಥಿವೇತನ ಹಾಗೂ ಮಾಸಿಕ 2000 ರೂ.ಗಳ ಊಟೋಪಚಾರದ ಭತ್ಯೆ ಪಾವತಿಸಲಾಗುವುದು.
ಅರ್ಜಿ ಸಲ್ಲಿಸಲಿಚ್ಛಿಸುವ ಅಭ್ಯರ್ಥಿಗಳು ರಂಗಾಯಣದ ವೆಬ್ಸೈಟ್ www.rangayana.orgನಲ್ಲಿ ಅರ್ಜಿಯನ್ನು ಡೌನ್ಲೋಡ್ ಮಾಡಿಕೊಂಡು ಅಥವಾ ರಂಗಾಯಣದ ಕಚೇರಿಯಲ್ಲಿ ಖುದ್ದಾಗಿ ಪಡೆದು ಅಗತ್ಯ ದಾಖಲೆಗಳೊಂದಿಗೆ ಭರ್ತಿ ಮಾಡಿದ ಅರ್ಜಿಯನ್ನು ಅರ್ಜಿ ಶುಲ್ಕ ರಂಗ ಕೈಪಿಡಿ ಸೇರಿ(ಸಾಮಾನ್ಯ ವರ್ಗಕ್ಕೆ 200 ರೂ. ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗ ಮತ್ತು ಪ್ರವರ್ಗ-1 ಅಭ್ಯರ್ಥಿಗಳಿಗೆ 150 ರೂ.) ಡಿ.ಡಿ.ಯನ್ನು ಜಂಟಿ ನಿರ್ದೇಶಕರು, ರಂಗಾಯಣ, ಕಲಾಮಂದಿರ ಆವರಣ, ವಿನೋಬಾ ರಸ್ತೆ, ಮೈಸೂರು-570005 ಇವರ ಹೆಸರಿನಲ್ಲಿ ಪಡೆದು ರಂಗಾಯಣ ವಿಳಾಸಕ್ಕೆ ಜುಲೈ 10 ರೊಳಗೆ ತಲುಪುವಂತೆ ಅಂಚೆಯ ಮೂಲಕ ಕಳುಹಿಸಬಹುದಾಗಿದೆ.
ಅಂಚೆ ಮೂಲಕ ಅರ್ಜಿ ಸಲ್ಲಿಸುವವರು ಅರ್ಜಿ ಸಲ್ಲಿಸಲು ನಿಗಧಿಪಡಿಸಿರುವ ಕಡೆಯ ದಿನಾಂಕದಿಂದ 10 ದಿನದೊಳಗೆ ಸಂದರ್ಶನಕ್ಕೆ ಪತ್ರ ಮುಖೇನ ತಿಳಿಸಲಾಗುವುದು. ಪ್ರತಿ ವರ್ಷದಂತೆ 20 ವಿದ್ಯಾರ್ಥಿಗಳಿಗೆ ಮಾತ್ರ ಪ್ರವೇಶಾವಕಾಶವಿರುತ್ತದೆ.
ಕೋವಿಡ್ ನಿರ್ಬಂಧಗಳ ಹಿನ್ನೆಲೆಯಲ್ಲೆ ಸರರ್ಕಾರವು ಹೊರಡಿಸುವ ಮಾರ್ಗಸೂಚಿಗಳನ್ನು ಅನುಸರಿಸಿ ಈ ಕೋರ್ಸ್ ಆರಂಭವಾಗುವ ದಿನಾಂಕ ಮತ್ತು ಮುಕ್ತಾಯಗೊಳ್ಳುವ ದಿನಾಂಕವನ್ನು ನಿಗದಿಗೊಳಿಸಲಾಗುವುದು. ಹೆಚ್ಚಿನ ಮಾಹಿತಿಗಾಗಿ ದೂರವಾಣಿ ಸಂಖ್ಯೆ: 0821-2512639/ 94489388661/9916600027 ಮತ್ತು 9448422343 ಅನ್ನು ಸಂಪರ್ಕಿಸಬಹುದಾಗಿದೆ ಎಂದು ಮೈಸೂರು ರಂಗಾಯಣದ ಜಂಟಿ ನಿರ್ದೇಶಕರು ತಿಳಿಸಿದ್ದಾರೆ.