ಹುಬ್ಬಳ್ಳಿಯಲ್ಲಿ ಅದ್ದೂರಿಯಾಗಿ ನಡೆದ ಬನಾರಸ್ ಫಿಲ್ಮ್ ಪ್ರೀರಿಲೀಸ್ ಸಮಾರಂಭ

Banaras Prerelease Event: ಈಗಾಗಲೇ ತನ್ನ ಸುಂದರ ಹಾಡುಗಳು ಹಾಗೂ ಟ್ರೈಲರ್ ಮೂಲಕ ಜನಪ್ರಿಯವಾಗಿರುವ ಬನಾರಸ್ ಚಿತ್ರದ ಈ ವರ್ಣರಂಜಿತ ಕಾರ್ಯಕ್ರಮದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್, ವಿನೋದ್ ಪ್ರಭಾಕರ್, ನೆನಪಿರಲಿ ಪ್ರೇಮ್, ವಿ.ನಾಗೇಂದ್ರ ಪ್ರಸಾದ್, ನಿರ್ದೇಶಕ ಜಯತೀರ್ಥ ಸೇರಿದಂತೆ ಚಿತ್ರರಂಗದ ಹಲವಾರು ಪ್ರಮುಖರು ಭಾಗವಹಿಸಿದ್ದರು.

Written by - Yashaswini V | Last Updated : Oct 24, 2022, 11:02 AM IST
  • ಶಾಸಕ ಜಮೀರ್ ಅಹ್ಮದ್‌ಖಾನ್ ಅವರ ಪುತ್ರ ಝೈದ್‌ಖಾನ್ ನಾಯಕನಾಗಿ ನಟಿಸಿರುವ ಬಹುನಿರೀಕ್ಷಿತ ಚಿತ್ರ ಬನಾರಸ್.
  • ಬನಾರಸ್ ಕನ್ನಡ, ತೆಲುಗು, ತಮಿಳು, ಹಿಂದಿ, ಮಲಯಾಳಂ ಹೀಗೆ ಏಕಕಾಲದಲ್ಲಿ ಐದು ಭಾಷೆಗಳಲ್ಲಿ ತಯಾರಾಗಿರುವ ಪ್ಯಾನ್ ಇಂಡಿಯಾ ಚಿತ್ರ
  • ಈ ಚಿತ್ರವನ್ನು ತಿಲಕ್‌ರಾಜ್ ಬಲ್ಲಾಳ್ ಅವರು ಬಹುಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಿದ್ದಾರೆ.
ಹುಬ್ಬಳ್ಳಿಯಲ್ಲಿ ಅದ್ದೂರಿಯಾಗಿ ನಡೆದ ಬನಾರಸ್ ಫಿಲ್ಮ್ ಪ್ರೀರಿಲೀಸ್ ಸಮಾರಂಭ
Banaras Prerelease Event

Banaras Prerelease Event: ಶಾಸಕ ಜಮೀರ್ ಅಹ್ಮದ್‌ಖಾನ್ ಅವರ ಪುತ್ರ ಝೈದ್‌ಖಾನ್ ನಾಯಕನಾಗಿ ನಟಿಸಿರುವ ಬಹುನಿರೀಕ್ಷಿತ ಚಿತ್ರ ಬನಾರಸ್. ಬೆಲ್ ಬಾಟಂ ಖ್ಯಾತಿಯ ಜಯತೀರ್ಥ ಕಥೆ, ಚಿತ್ರಕಥೆ ಬರೆದು ನಿರ್ದೇಶನ ಮಾಡಿರುವ ಈ ಚಿತ್ರದ ಬಿಡುಗಡೆ ಪೂರ್ವ ಮನರಂಜನಾ (ಪ್ರೀರಿಲೀಸ್ ಇವೆಂಟ್) ಕಾರ್ಯಕ್ರಮ ಶನಿವಾರ ಸಂಜೆ ಗಂಡುಮೆಟ್ಟಿದ ನಾಡು ಹುಬ್ಬಳ್ಳಿಯ ರೈಲ್ವೇ ಸ್ಪೋರ್ಟ್ಸ್ ಗ್ರೌಂಡ್ ಆವರಣದಲ್ಲಿ ಅದ್ದೂರಿಯಾಗಿ ನೆರವೇರಿತು. 

ಈಗಾಗಲೇ ತನ್ನ ಸುಂದರ ಹಾಡುಗಳು ಹಾಗೂ ಟ್ರೈಲರ್ ಮೂಲಕ ಜನಪ್ರಿಯವಾಗಿರುವ ಬನಾರಸ್ ಚಿತ್ರದ ಈ ವರ್ಣರಂಜಿತ ಕಾರ್ಯಕ್ರಮದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್, ವಿನೋದ್ ಪ್ರಭಾಕರ್, ನೆನಪಿರಲಿ ಪ್ರೇಮ್, ವಿ.ನಾಗೇಂದ್ರ ಪ್ರಸಾದ್, ನಿರ್ದೇಶಕ ಜಯತೀರ್ಥ ಸೇರಿದಂತೆ ಚಿತ್ರರಂಗದ ಹಲವಾರು ಪ್ರಮುಖರು ಭಾಗವಹಿಸಿದ್ದರು. ಸತತ ಮೂರು ಗಂಟೆಗಳ ಕಾಲ ನಡೆದ ಕಾರ್ಯಕ್ರಮದಲ್ಲಿ ನಡೆದ ವಿವಿಧ ಮನಮೋಹಕ ನೃತ್ಯ-ಗಾಯನಗಳನ್ನು  ನೆರೆದಿದ್ದ ಜನತೆ ತದೇಕಚಿತ್ತದಿಂದ ವೀಕ್ಷಿಸಿದರು. 

ಇದನ್ನೂ ಓದಿ- Puneeth Parva : ʼಕನ್ನಡ ಇರೋವರೆಗೂ ಕನ್ನಡಾಭಿಮಾನಿಗಳ ಹೃದಯದಲ್ಲಿ ಅಪ್ಪು ಅಮರʼ

ನಂತರ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ನಟ ಚಾಲೆಂಜಿಂಗ್ ಸ್ಟಾರ್  ದರ್ಶನ್, ‘ನಾನು ಈಗಾಗಲೇ ಚಿತ್ರವನ್ನು ನೋಡಿದ್ದೇನೆ. ಜೈದ್ ನನಗೆ ಮೊದಲೇ ಸಿನಿಮಾ ತೋರಿಸಿದ್ದಾನೆ, ಆರಂಭದಲ್ಲಿ ನಾನೂ ಸಹ ಶ್ರೀಮಂತರ ಮಗ, ಏನೋ ಮಾಡಿರಬಹುದು ಎಂದುಕೊಂಡಿದ್ದೆ. ಆದರೆ ಚಿತ್ರ ನೋಡುತ್ತ ನನಗೇ ಆಶ್ಚರ್ಯವಾಯಿತು. ಅಷ್ಟು ಅದ್ಭುತವಾಗಿ ಅಭಿನಯಿಸಿದ್ದಾನೆ. ಜೊತೆಗೆ ಕಥೆ, ನಿರ್ದೇಶನ ಎಲ್ಲವೂ ಚೆನ್ನಾಗಿದೆ. ಚಿತ್ರ ಖಂಡಿತ ಯಶಸ್ವಿಯಾಗುತ್ತದೆ’ ಎಂದು ಹೇಳಿದರು. 

ನಂತರ ನಾಯಕನಟ ಜೈದ್‌ಖಾನ್ ಮಾತನಾಡುತ್ತ ‘ಇಂದು ನನ್ನ ಜೀವನದಲ್ಲಿ  ತುಂಬಾ ದೊಡ್ಡ ದಿನ, ನನ್ನ ಜೀವನದ ಇಬ್ಬರು ದೊಡ್ಡ ಶಕ್ತಿಗಳು ಇಲ್ಲಿ ಬಂದಿದ್ದಾರೆ. ನನಗೆ ಅಣ್ಣನ ಸಮಾನರಾದ ದರ್ಶನ್ ಹಾಗೂ  ನನ್ನಪ್ಪ, ಅವರು ಇದೇ ಮೊದಲಬಾರಿಗೆ ನನ್ನ ಸಿನಿಮಾ ಕಾರ್ಯಕ್ರಮಕ್ಕೆ ಬಂದಿದ್ದಾರೆ. ಅಪ್ಪನಿಗೆ ಈ ವೇದಿಕೆಯ ಮೇಲೆ ಭರವಸೆ ನೀಡುತ್ತೇನೆ. ಅಪ್ಪಾ, ನೀವು ತಲೆತಗ್ಗಿಸುವ ಕೆಲಸ ಎಂದೂ ಮಾಡಲ್ಲ. ಇವತ್ತು ನಾನಿಲ್ಲಿ ನಿಂತಿದ್ದೇನೆ ಎಂದರೆ ಅದಕ್ಕೆ ನನ್ನಪ್ಪನೇ ಕಾರಣ. ಅಲ್ಲದೆ ದರ್ಶನಣ್ಣ ನನಗೆ ಮೊದಲಿಂದಲೂ ತುಂಬಾ ಸಪೋರ್ಟ್ ಮಾಡುತ್ತಿದ್ದಾರೆ. ಇನ್ನು ಬನಾರಸ್ ಚಿತ್ರದ ಬಗ್ಗೆ ಹೇಳುವುದಾದರೆ ಇದರಲ್ಲಿ ತುಂಬಾನೇ ವಿಶೇಷತೆಗಳಿವೆ. ಚಿತ್ರಕ್ಕಾಗಿ ನಾನು ತುಂಬಾನೇ ಕಷ್ಟಪಟ್ಟಿದ್ದೇನೆ. ಜಯತೀರ್ಥ ಅವರು ಒಂದು ಅದ್ಭುತ ಚಿತ್ರವನ್ನು ನನಗಾಗಿ ಮಾಡಿ ಕೊಟ್ಟಿದ್ದಾರೆ. ನ.4ರಂದು ಚಿತ್ರ ದೇಶಾದ್ಯಂತ ಬಿಡುಗಡೆಯಾಗುತ್ತಿದೆ, ಸಿನಿಮಾ ಜನರ ಮನಸನ್ನು ಗೆದ್ದೇಗೆಲ್ಲುತ್ತೆ ಎಂಬ ಭರವಸೆಯಿದೆ. ಚಿತ್ರ ನೋಡಿ ಹರಸಿ’ ಎಂದು ಕೇಳಿಕೊಂಡರು. 

ಇದನ್ನೂ ಓದಿ- ಬೆಣ್ಣೆನಗರಿ ದಾವಣಗೆರೆಯಲ್ಲೂ ಕಾಂತಾರ ಹವಾ...

ಬನಾರಸ್ ಕನ್ನಡ, ತೆಲುಗು, ತಮಿಳು, ಹಿಂದಿ, ಮಲಯಾಳಂ ಹೀಗೆ ಏಕಕಾಲದಲ್ಲಿ ಐದು ಭಾಷೆಗಳಲ್ಲಿ ತಯಾರಾಗಿರುವ ಪ್ಯಾನ್ ಇಂಡಿಯಾ ಚಿತ್ರವಾಗಿದ್ದು, ತಿಲಕ್‌ರಾಜ್ ಬಲ್ಲಾಳ್ ಅವರು ಬಹುಕೋಟಿ ವೆಚ್ಚದಲ್ಲಿ ನಿರ್ಮಾಣ ಮಾಡಿದ್ದಾರೆ. ಪಂಚರಂಗಿ ಖ್ಯಾತಿಯ ಸೋನಲ್ ಮೊಂತೇರೋ ಚಿತ್ರದ ನಾಯಕಿಯಾಗಿ ನಟಿಸಿದ್ದಾರೆ. ಸುಜಯ್ ಶಾಸ್ತ್ರಿ,  ದೇವರಾಜ್, ಅಚ್ಯುತ್ ಕುಮಾರ್, ಸಪ್ನಾ ರಾಜ್, ಬರ್ಖತ್ ಅಲಿ ಮುಂತಾದವರು ಪ್ರಧಾನ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಅಜನೀಶ್ ಲೋಕನಾಥ್ ಅವರ ಸಂಗೀತ ಸಂಯೋಜನೆ ಈ ಚಿತ್ರಕ್ಕಿದ್ದು, ಈಗಾಗಲೇ ಸಾಕಷ್ಟು ನಿರೀಕ್ಷೆಗಳನ್ನು ಹುಟ್ಟುಹಾಕಿರುವ ಬನಾರಸ್ ಚಿತ್ರ ನವೆಂಬರ್ 4ರಂದು ದೇಶಾದ್ಯಂತ 5 ಬಾಷೆಗಳಲ್ಲಿ ಬಿಡುಗಡೆಯಾಗುತ್ತಿದೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

More Stories

Trending News