ಬೆಂಗಳೂರು: ‘ಪುನೀತ ಪರ್ವ’ ಕಾರ್ಯಕ್ರಮ ನೋಡುವಾಗ ಅಪ್ಪು ಅಭಿಮಾನಿಯೊಬ್ಬ ಹೃದಯಾಘಾತದಿಂದ ಮೃತಪಟ್ಟಿರುವ ಮನಕಲುಕುವ ಘಟನೆ ಸಿಲಿಕಾನ್ ಸಿಟಿಯಲ್ಲಿ ನಡೆದಿದೆ. ಮಲ್ಲೇಶ್ವರದ ಲಿಂಕ್ ರೋಡ್ ನಿವಾಸಿ ಗಿರಿರಾಜ್ ಮೃತ ಅಪ್ಪು ಅಭಿಮಾನಿ. ಮೃತ ಗಿರಿರಾಜ್ ಪುನೀತ್ ರಾಜಕುಮಾರ್ ಅವರ ಅಪ್ಪಟ ಅಭಿಮಾನಿಯಾಗಿದ್ದರು. ಖಾಸಗಿ ಬ್ಯಾಂಕ್ ನಲ್ಲಿ ಫೈನಾನ್ಸ್ ಕೆಲಸ ಮಾಡ್ತಿದ್ದ ಗಿರಿರಾಜ್ ಶುಕ್ರವಾರ ಕುಟುಂಬಸ್ಥರ ಜೊತೆ ಟಿವಿಯಲ್ಲಿ ‘ಪುನೀತ ಪರ್ವ’ ಕಾರ್ಯಕ್ರಮ ನೋಡುತ್ತಾ ಕುಳಿತಿದ್ದರು. ರಾತ್ರಿ ಸುಮಾರು 10.30ರ ವೇಳೆಗೆ ಬಾತ್ ರೂಂಗೆ ಹೋಗಿ ಗಿರಿರಾಜ್ ಅಲ್ಲಿಯೇ ಕುಸಿದು ಬಿದ್ದು ಸಾವನ್ನಪ್ಪಿದ್ದಾರೆ.
ಪುನೀತ್ ರಾಜ್‍ಕುಮಾರ್ ಇಹಲೋಕ ತ್ಯಜಿಸಿದ್ದರಿಂದ ಗಿರಿರಾಜ್ ತುಂಬಾನೇ ಕುಗ್ಗಿ ಹೋಗಿದ್ದರಂತೆ. ಮನೆಯಲ್ಲಿ ‘ಅಪ್ಪು’ ಫೋಟೋ ಇಟ್ಟು ಪೂಜೆ ಮಾಡುತ್ತಿದ್ದರಂತೆ. ಪುನೀತ್ ಅವರ ಒಂದು ವಿಡಿಯೋ ನೋಡಿ ನನಗೂ ಅಪ್ಪು ರೀತಿ ಊಟ ಮಾಡಿಸು ಎಂದು ತಮ್ಮ ಅಮ್ಮನಿಗೆ ಹೇಳಿದ್ದರಂತೆ. ಅದರಂತೆ ಅವರ ಅಮ್ಮ ಗಿರಿರಾಜ್‍ಗೆ ಕೈತುತ್ತು ನೀಡಿ ಊಟ ಮಾಡಿಸಿದ್ದರಂತೆ.
ಇದನ್ನೂ ಓದಿ: ತಾಯಿಗರ್ಭದಲ್ಲಿದ್ದಾಗಲೇ ಅಪ್ಪು-ನಾನು ಭೇಟಿಯಾಗಿದ್ದೇವು : ಯುವರತ್ನನನ್ನು ಸ್ಮರಿಸಿದ ನಟ ಸೂರ್ಯ..!
ಶುಕ್ರವಾರ ‘ಅಪ್ಪು ಪರ್ವ’ ಕಾರ್ಯಕ್ರಮ ನೋಡಿ ಗಿರಿರಾಜ್ ಬೇಜಾರಾಗಿದ್ದರಂತೆ. ‘ಛೇ ಎಂತಹ ಮನುಷ್ಯ ಮೃತಪಟ್ಟರಲ್ಲ ಎಂದು ನೋವು ತೋಡಿಕೊಂಡು ಕಣ್ಣೀರಿಟ್ಟಿದ್ದರಂತೆ. ಬಾತ್ ರೂಂಗೆ ತೆರಳಿದ್ದ ವೇಳೆ ಕುಸಿದು ಬಿದ್ದಿದ್ದ ಗಿರಿರಾಜ್‍ರನ್ನು ತಕ್ಷಣವೇ ಕೆ.ಸಿ.ಜನರಲ್ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗುತ್ತಿತ್ತು. ಆದರೆ ಮಾರ್ಗ ಮಧ್ಯೆಯೇ ಅವರು ಕೊನೆಯುಸಿರೆಳೆದಿದ್ದಾರೆ.
ಇನ್ನು ಗಿರಿರಾಜ್ ಹಲವು ಬಾರಿ ಪುನೀತ್ ರಾಜ್‍ಕುಮಾರ್‍ರನ್ನು ಭೇಟಿಯಾಗಿದ್ದರಂತೆ. ಪುನೀತ್ ನಿಧನದ ಬಳಿಕ ಸಾಕಷ್ಟು ಕುಗ್ಗಿ ಹೋಗಿದ್ದರು. ನಂತರ ಪೋಷಕರು ಗಿರಿರಾಜ್‍ಗೆ ಧೈರ್ಯ ತುಂಬಿದ್ದರು. ಆದರೆ ‘ಪುನೀತ ಪರ್ವ’ ಕಾರ್ಯಕ್ರಮ ನೋಡುವ ವೇಳೆ ಹೃದಯಾಘಾತವಾಗಿ ಮೃತಪಟ್ಟಿದ್ದಾರೆ. ಇತ್ತ ಮನೆಗೆ ಆಸೆರೆಯಾಗಿದ್ದ ಮಗನನ್ನು ಕಳೆದುಕೊಂಡ ಪೋಷಕರು ಕಣ್ಣೀರಿಟ್ಟು ಗೋಳಾಡುತ್ತಿದ್ದಾರೆ.
ಇದನ್ನೂ ಓದಿ: Puneetha Parva: ಸೂರ್ಯ,ಚಂದ್ರ ಇರೋವರೆಗೂ ಅಪ್ಪು ಶಾಶ್ವತ: ದುನಿಯಾ ವಿಜಯ್
ಗಿರಿರಾಜ್ ತಂದೆ ಮಾತನಾಡಿ, ‘ನನ್ನ ಮಗನಿಗೆ ಅಪ್ಪು ಅಂದರೆ ಪಂಚಪ್ರಾಣ. ಪುನೀತ್ ಅವರು ಜೀವಂತವಾಗಿದ್ದಾಗ ಭೇಟಿ ಮಾಡಿ ಕಾಫೀ ಕುಡಿದು ಬಂದಿದ್ದ. ನಿನ್ನೆ ಕಾರ್ಯಕ್ರಮ ನೋಡ್ತಾ ನೋಡ್ತಾ ಬಿಕ್ಕಿಬಿಕ್ಕಿ ಅಳೋಕೆ ಶುರು ಮಾಡಿದ. ರಾತ್ರಿ ಕಾರ್ಯಕ್ರಮ ನೋಡುತ್ತಾ ತುಂಬಾ ಕಣ್ಣೀರು ಹಾಕಿದ್ದ. ಹುಟ್ಟಿದರೆ ಅಪ್ಪು ತರ ಇರಬೇಕು, ಬದುಕಿದರೆ ಅಪ್ಪು ತರ ಬದುಕಬೇಕು ಅಂತಾ ಸಾಕಷ್ಟು ಕಣ್ಣಿರು ಹಾಕಿದ್ದ. ನಾವು ಸಮಾಧಾನ ಮಾಡ್ಕೊ ಅಂತಾ ತುಂಬಾ ಹೇಳಿದ್ವಿ. ರಾತ್ರಿ ಶೌಚಾಲಯಕ್ಕೆ ಹೋಗಿದ್ದಾಗ ಕುಸಿದ ಬಿದ್ದ. ಸಮೀಪದ ಆಸ್ಪತ್ರೆಗೆ ಕೊಂಡೊಯ್ಯುವಷ್ಟರಲ್ಲಿ ಜೀವ ಹೋಗಿತ್ತು’ ಅಂತಾ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ