ಹಿಂದಿ ಸಿನಿಮಾ ಜಗತ್ತನ್ನಾಳಿದ್ದ ಧಾರವಾಡ ಮೂಲದ ನಟಿ ಲೀಲಾ ಚಿತ್ನಿಸ್

Written by - Manjunath N | Last Updated : Sep 9, 2021, 11:47 PM IST
  • ಭಾರತೀಯ ಸಿನಿಮಾರಂಗದಲ್ಲಿನ ಆರಂಭಿಕ ನಟಿಯರಲ್ಲಿ ಲೀಲಾ ಚಿತ್ನಿಸ್ ಅವರಿಗೆ ಅಗ್ರಸ್ಥಾನವಿದೆ.
  • ಸಾಂಪ್ರದಾಯಿಕ ವ್ಯವಸ್ಥೆಗೆ ವಿರುದ್ಧವಾಗಿದ್ದ ಕಥಾವಸ್ತುಗಳಲ್ಲಿ ಅವರು ನಾಯಕಿಯಾಗಿ ನಟಿಸುವ ಮೂಲಕ ಭಾರತೀಯ ಸಿನಿಮಾದ ಆರಂಭಿಕ ಕಾಲದಲ್ಲಿ ಹೊಸ ಕ್ರಾಂತಿಯನ್ನೇ ಮಾಡಿದ್ದ ಕೀರ್ತಿ ನಟಿ ಲೀಲಾ ಚಿತ್ನಿಸ್ ಅವರಿಗೆ ಸಲ್ಲುತ್ತದೆ.
  • ಇಂದು ಇಂತಹ ಮಹಾನ್ ನಟಿಯ ಜನ್ಮದಿನಾಚರಣೆ. ಆದ್ದರಿಂದ ಇಂತಹ ಸಂದರ್ಭದಲ್ಲಿ ಅವರ ಅವರ ಬೆಳ್ಳಿತೆರೆಯ ವರ್ಣ ರಂಜಿತ ಬದುಕನ್ನು ಮತ್ತೊಮ್ಮೆ ಮೆಲುಕು ಹಾಕೋಣ.
ಹಿಂದಿ ಸಿನಿಮಾ ಜಗತ್ತನ್ನಾಳಿದ್ದ ಧಾರವಾಡ ಮೂಲದ ನಟಿ ಲೀಲಾ ಚಿತ್ನಿಸ್  title=
Photo Courtesy: Facebook

ಭಾರತೀಯ ಸಿನಿಮಾರಂಗದಲ್ಲಿನ ಆರಂಭಿಕ ನಟಿಯರಲ್ಲಿ ಲೀಲಾ ಚಿತ್ನಿಸ್ ಅವರಿಗೆ ಅಗ್ರಸ್ಥಾನವಿದೆ, ಸಾಂಪ್ರದಾಯಿಕ ವ್ಯವಸ್ಥೆಗೆ ವಿರುದ್ಧವಾಗಿದ್ದ ಕಥಾವಸ್ತುಗಳಲ್ಲಿ ಅವರು ನಾಯಕಿಯಾಗಿ ನಟಿಸುವ ಮೂಲಕ ಭಾರತೀಯ ಸಿನಿಮಾದ ಆರಂಭಿಕ ಕಾಲದಲ್ಲಿ ಹೊಸ ಕ್ರಾಂತಿಯನ್ನೇ ಮಾಡಿದ್ದ ಕೀರ್ತಿ ನಟಿ ಲೀಲಾ ಚಿತ್ನಿಸ್ ಅವರಿಗೆ ಸಲ್ಲುತ್ತದೆ.ಇಂದು ಇಂತಹ ಮಹಾನ್ ನಟಿಯ ಜನ್ಮದಿನಾಚರಣೆ. ಆದ್ದರಿಂದ ಇಂತಹ ಸಂದರ್ಭದಲ್ಲಿ ಅವರ ಬೆಳ್ಳಿತೆರೆಯ ವರ್ಣ ರಂಜಿತ ಬದುಕನ್ನು ಮತ್ತೊಮ್ಮೆ ಮೆಲುಕು ಹಾಕೋಣ.

ರಂಗಭೂಮಿಯ ನಂಟು

ನಟಿ ಲೀಲಾ ಚಿತ್ನಿಸ್ ಧಾರವಾಡದ ಮರಾಠಿ ಬ್ರಾಹ್ಮಣ ಕುಟುಂಬದಲ್ಲಿ ಸೆಪ್ಟೆಂಬರ್ 9, 1909 ರಲ್ಲಿ ಜನಿಸಿದರು.ಅವರ ತಂದೆ ಇಂಗ್ಲೀಷ್ ಸಾಹಿತ್ಯದಲ್ಲಿ ಪ್ರಾಧ್ಯಾಪಕರಾಗಿದ್ದರು,ನಟನೆಗೂ ಮುನ್ನ ಪದವಿಯನ್ನು ಪೂರೈಸಿದ್ದ ಅವರು, ತದನಂತರ ಪ್ರಗತಿಪರ ನಾಟಕ ತಂಡವಾದ ನಾಟ್ಯ ಮನ್ವಂತರ್‌ ನಲ್ಲಿ ಕಾರ್ಯ ನಿರ್ವಹಿಸಿದರು.ಅವರ ನಾಟಕ ತಂಡವು ವಿಶೇಷವಾಗಿ ಇಬ್ಸೆನ್, ಶಾ ಮತ್ತು ಸ್ಟಾನಿಸ್ಲಾವಸ್ಕಿ ಅವರಿಂದ ಬಹಳ ಪ್ರಭಾವಿತವಾಗಿದ್ದವು.ಹಾಸ್ಯ ಹಾಗೂ ದುರಂತದ ನಾಟಕ ಸರಣಿಗಳಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸುವ ಮೂಲಕ ಖ್ಯಾತಿಯನ್ನು ಪಡೆದ ಲೀಲಾ, ಮುಂದೆ ತಮ್ಮದೇ ಆದ ರೆಪರ್ಟರಿಯನ್ನು ಸ್ಥಾಪಿಸಿದರು.ತಮ್ಮ ವೃತ್ತಿ ಜೀವನದ ಆರಂಭಿಕ ಹಂತದಲ್ಲಿ ಉಸ್ನಾ ನವ್ರಾ (1934) ಮತ್ತು ಮುಂದೆ ಅವರದ್ದೇ ಆದ ಫಿಲಂ ಗ್ರೂಪ್ ನಿಂದ ನಿರ್ಮಿಸಿದ ಉದ್ಯಚಾ ಸಂಸಾರ್ ನಲ್ಲಿ ನಟಿಸಿದರು.

ಲೀಲಾ ಮೂಲತಃ ಬ್ರಾಹ್ಮಣ ಸಮುದಾಯದಲ್ಲಿ ಜನಿಸಿದರೂ ಕೂಡ ಅವರ ತಂದೆ ಜಾತಿ ಪದ್ದತಿಯನ್ನು ವಿರೋಧಿಸುವ ಬ್ರಹ್ಮ ಸಮಾಜದ ತತ್ವ ಚಿಂತನೆಗಳಿಂದ ಪ್ರಭಾವಿತರಾಗಿದ್ದರು. ಮುಂದೆ ಕಮ್ಯುನಿಸ್ಟ್ ಚಳುವಳಿಯಲ್ಲಿ ಸಕ್ರೀಯರಾಗಿದ್ದ ಡಾ. ಗಜಾನನ ಯಶವಂತ್ ಚಿತ್ನಿಸ್ ಎನ್ನುವವರನ್ನು ತಮ್ಮ 16 ನೇ ವಯಸ್ಸಿನಲ್ಲಿ ಮದುವೆಯಾದರು.ಗಜಾನನ್ ಅವರು ಮಾರ್ಕ್ಸ್ ವಾದಿ ಸ್ವಾತಂತ್ರ್ಯ ಹೋರಾಟಗಾರರಾಗಿದ್ದ ಎಂ.ಎನ್.ರಾಯ್ ಅವರ ಸ್ನೇಹಿತರಾಗಿದ್ದರು. ಕಾಲಾಂತರದಲ್ಲಿ ಅವರಿಂದ ವಿಚ್ಚೇದನ ಪಡೆದುಕೊಂಡ ನಂತರ ಅವರು ಶಾಲಾ ಶಿಕ್ಷಕಿಯಾಗಿ ಕಾರ್ಯ ನಿರ್ವಹಿಸಿದರು.ಆರಂಭದಲ್ಲಿ ರಂಗಭೂಮಿ, ತದನಂತರ ಹಲವಾರು ಸಿನಿಮಾಗಳಲ್ಲಿ ನಟಿಸಲು ಆರಂಭಿಸಿದರು. ಆಗ ಅವರಿಗೆ ಬಾಂಬೆದಲ್ಲಿ ಪ್ರಮುಖ ಸ್ಟುಡಿಯೋ ಆಗಿದ್ದ ಬಾಂಬೆ ಟಾಕೀಸ್ ಮೂಲಕ ಅವರಿಗೆ ಚಲನಚಿತ್ರಗಳಲ್ಲಿ ನಟಿಸುವ ಅವಕಾಶ ಲಭಿಸಿತು.

ಚಿತ್ರರಂಗಕ್ಕೆ ಪ್ರವೇಶ 

ತಮ್ಮ ಮದುವೆಯ ವಿಚ್ಛೇದನದ ನಂತರ ನಾಲ್ಕು ಮಕ್ಕಳನ್ನು ಸಾಕುವ ಅನಿವಾರ್ಯತೆ ಉಂಟಾದ ಕಾರಣ ಲೀಲಾ ಅವರು ಮುಂದೆ ಸ್ಟಂಟ್ ಮಾದರಿಯ ಚಿತ್ರಗಳಲ್ಲಿಯೂ ನಟಿಸಲು ಮುಂದಾದರು.1937 ರಲ್ಲಿ ಜೆಂಟಲ್‌ಮನ್ ಡಾಕು ನಲ್ಲಿ, ಲೀಲಾ ಪುರುಷನ ಉಡುಪು ಧರಿಸಿದ ವಂಚಕನ ಪಾತ್ರವನ್ನು ನಿರ್ವಹಿಸಿದರು. ಆಗ ಸಿನಿಮಾ ಜಗತ್ತಿನಲ್ಲಿ ತಮ್ಮ ನಟನೆಯ ಮೂಲಕ ಛಾಪು ಮೂಡಿಸಿದ್ದ ಲೀಲಾ, ಬಾಂಬೆ ಟಾಕೀಜ್ ನಲ್ಲಿ ಪ್ರಮುಖ ನಟಿಯಾಗಿದ್ದರು. ಅಷ್ಟೇ ಅಲ್ಲದೆ ಅವರು ಅದಕ್ಕೂ ಮುಂಚೆ ಪ್ರಭಾತ್ ಪಿಕ್ಚರ್ಸ್, ಪುಣೆ ಮತ್ತು ರಂಜಿತ್ ಮೂವಿತೋನ್ ನಲ್ಲಿಯೂ ಕೂಡ ಕಾರ್ಯ ನಿರ್ವಹಿಸಿದ್ದರು.

ಅಷ್ಟೇ ಅಲ್ಲದೆ ಸಾಮಾಜಿಕ ಕಟ್ಟಳೆಗಳಿಗೆ ವಿರುದ್ಧವಾದ ಚಿತ್ರ ಪ್ರಯೋಗಗಳಲ್ಲಿ ತೊಡಗಿಸಿಕೊಂಡಿದ್ದು,ಆಗಿನ ಕಾಲಘಟ್ಟದಲ್ಲಿ ನಿಜಕ್ಕೂ ಅವರ ಖ್ಯಾತಿಯನ್ನು ಇನ್ನೂ ಉತ್ತುಂಗಕ್ಕೇರುವಂತೆ ಮಾಡಿತು.ಅದರಲ್ಲೂ 1939 ರಲ್ಲಿ ಬಿಡುಗಡೆಯಾದ ಕಂಗನ್ ಚಿತ್ರದಲ್ಲಿ ಅವರು ಹಿಂದು ಪೂಜಾರಿ ಮಗಳಾಗಿ ಪ್ರಮುಖ ಪಾತ್ರದಲ್ಲಿ ನಟಿಸಿದರು.ಇದರಲ್ಲಿ ಅವರು ಸ್ಥಳೀಯ ಜಮೀನ್ದಾರ ಮಗನನ್ನು ಪ್ರೀತಿಸುವ ಕಥಾ ಹಂದರವನ್ನು ಈ ಸಿನಿಮಾ ಸಾರುತ್ತದೆ. ಆಗಿನ ಕಾಲಘಟ್ಟದಲ್ಲಿ ಇಂತಹ ವಿಚಾರಗಳನ್ನು ಮುಕ್ತವಾಗಿ ವ್ಯಕ್ತಪಡಿಸುವುದೇ ವಿರಳವಾಗಿದ್ದ ಸಂದರ್ಭದಲ್ಲಿ ಸಾಮಾಜಿಕವಾಗಿ ವೈರುದ್ಯ ಕಥಾ ಹಂದರವನ್ನು ಹೊಂದಿರುವ ಈ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಸಾಕಷ್ಟು ಯಶಸ್ಸನ್ನು ಕಂಡಿತ್ತು. 

ಲೀಲಾ ಅವರು ಕಂಗನ್ ಚಿತ್ರದ ಯಶಸ್ಸಿನೊಂದಿಗೆ, ಬಾಂಬೆ ಟಾಕೀಸ್‌ನಲ್ಲಿ ಆಗ ಟಾಪ್ ನಾಯಕಿಯಾಗಿದ್ದ ದೇವಿಕಾರಾಣಿ ಅವರನ್ನು ಜನಪ್ರೀಯತೆಯಲ್ಲಿ ಹಿಂದಿಕ್ಕಿದರು.ಇದಕ್ಕೆ ಪೂರಕ ಎನ್ನುವಂತೆ ಆಜಾದ್  (1940), ಬಂಧನ್ (1940), ಮತ್ತು ಜೂಲಾ (1941), ನಂತಹ ಚಿತ್ರಗಳಲ್ಲಿ ದೇವಿಕಾರಾಣಿ ಬದಲಾಗಿ ನಾಯಕಿಯಾದರು. ಈ ಚಿತ್ರಗಳು ಲೀಲಾ ಅವರಿಗೆ ಬಾಕ್ಸ್ ಆಫೀಸ್ ನಲ್ಲಿಯೂ ಸಾಕಷ್ಟು ಯಶಸ್ಸನ್ನು ತಂದುಕೊಟ್ಟವು.ಲೀಲಾರ ನಟನೆಗೆ ನಟ ಉತ್ತಮ ಕುಮಾರ್ ಸಹ ಮಾರು ಹೋಗಿ, ಅವರಿಂದ ಕಣ್ಣುಗಳಿಂದ ಹೇಗೆ ಮಾತನಾಡಬಹುದು ಎನ್ನುವುದನ್ನು ಕಲಿತಿರುವುದಾಗಿ ಹೇಳಿದ್ದರು.

1941 ರಲ್ಲಿ ಲೀಲಾ ಚಿತ್ನಿಸ್ ಅವರ ಜನಪ್ರಿಯತೆ ಉತ್ತುಂಗದಲ್ಲಿದ್ದಾಗ, ಜನಪ್ರಿಯ ಲಕ್ಸ್ ಸೋಪ್ ಬ್ರಾಂಡ್ ನ ಅಂಬಾಸಿಡರ್ ಆಗುವ ಮೂಲಕ ಈ ಹೆಗ್ಗಳಿಕೆಗೆ ಪಾತ್ರರಾದ ಮೊದಲ ಭಾರತೀಯ ನಟಿ ಎನ್ನುವ ಖ್ಯಾತಿಯನ್ನು ಪಡೆದರು.1940 ರ ದಶಕದ ಮಧ್ಯಭಾಗದಲ್ಲಿ ಹೊಸ ನಾಯಕಿಯರ ಆಗಮನದಿಂದಾಗಿ ಅವರ ವೃತ್ತಿ ಜೀವನದಲ್ಲಿ ಏರಿಳಿತಗಳು ಕೂಡ ಕಂಡುಬಂದವು.

ಬೆಳ್ಳಿತೆರೆಯಲ್ಲಿ ತಾಯಿಯಾಗಿ ಮಿಂಚಿದ್ದ ಲೀಲಾ 

1948 ರಲ್ಲಿ ಶಹೀದ್ ಚಿತ್ರದ ಮೂಲಕ ತಮ್ಮ ವೃತ್ತಿಜೀವನದ ಇನ್ನೊಂದು ಉತ್ತುಂಗ ಹಂತಕ್ಕೆ ಪ್ರವೇಶಿಸಿದರು.ಈ ಚಿತ್ರದಲ್ಲಿ ಅನಾರೋಗ್ಯದಿಂದ ಬಳಲುತ್ತಿರುವ ತಾಯಿಯಾಗಿ ನಟಿಸುವ ಮೂಲಕ ಆ ಪಾತ್ರಕ್ಕೆ ಜೀವ ತುಂಬಿದರು. ತದನಂತರ ಸುಮಾರು 22 ವರ್ಷಗಳ ಕಾಲ, ಲೀಲಾ ಚಿತ್ನಿಸ್ ಅವರು ದಿಲೀಪ್ ಕುಮಾರ್, ದೇವಾನಂದ್ ಸೇರಿದಂತೆ ಹಲವು ಪ್ರಮುಖ ನಟರ ತಾಯಿಯಾಗಿ ನಟಿಸಿದರು, ಅದರಲ್ಲೂ ವಿಶೇಷವಾಗಿ ಆಗಾಗ್ಗೆ ಅನಾರೋಗ್ಯದಿಂದ ಬಳಲುತ್ತಿರುವ ಅಥವಾ ತಾಯಿಯಾಗಿ ಕುಟುಂಬವನ್ನು ಸಾಕಲು ಹೆಣಗಾಡುತ್ತಿರುವಂತಹ ಪಾತ್ರಗಳ ಮೂಲಕ ಒಂದು ರೀತಿ ಅವರು ಹಿಂದಿ ಚಲನಚಿತ್ರದಲ್ಲಿ ತಾಯಿಯ ಮೂಲ ಸ್ವರೂಪವನ್ನು ಸೃಷ್ಟಿಸಿದರು. ನಂತರದ ಬಹುತೇಕ ನಟಿಯರು ಚಿತ್ನಿಸ್ ಅವರನ್ನು ಅನುಕರಿಸಿದರು ಎಂದು ಹೇಳಬಹುದು.ಲೀಲಾ ಅವರ ಆವರಾ (1951), ಗಂಗಾ ಜಮ್ನಾ (1961) ಮತ್ತು 1965 ರಲ್ಲಿ ತೆರೆಕಂಡ ದಿ ಗೈಡ್ ನಂತಹ ಚಿತ್ರಗಳಲ್ಲಿ ತಾಯಿಯ ಮನೋಜ್ಞ ಪಾತ್ರ ನಿರ್ವಹಣೆಯನ್ನು ಕಾಣಬಹುದು. ಅವರು 1970 ರ ದಶಕದಲ್ಲಿ ಹೆಚ್ಚು ಕ್ರಿಯಾಶೀಲರಾಗಿದ್ದರು, ಅವರು ಚಲನಚಿತ್ರ ನಿರ್ಮಾಣದಲ್ಲಿಯೂ ತಮ್ಮನ್ನು ತೊಡಗಿಸಿಕೊಂಡಿದ್ದರು, ಕಿಸಿಸೆ ನಾ ಕೆಹ್ನಾ ಮತ್ತು ಆಜ್ ಕಿ ಬಾತ್ ಚಿತ್ರವನ್ನು ನಿರ್ಮಿಸಿದರು. ಅವರ ಆತ್ಮಕಥೆ 'ಚಂದೇರಿ ದುನಿಯೆತ್' ನ್ನು 1981 ರಲ್ಲಿ ಪ್ರಕಟಿಸಿದರು.

ಆದರೆ 1985 ರಲ್ಲಿ ದಿಲ್ ತುಜ್ಕೋ ದಿಯಾ ನಲ್ಲಿ ಕೊನೆಯದಾಗಿ ಕಾಣಿಸಿಕೊಳ್ಳುವ ಮೂಲಕ ಚಲನಚಿತ್ರ ಜಗತ್ತಿನಿಂದ ದೂರ ಸರಿದು 1980 ರ ಕೊನೆಯಲ್ಲಿ ಮಗನೊಂದಿಗೆ ಅಮೆರಿಕದಲ್ಲಿ ನೆಲೆಸಿದರು.ತಮ್ಮ 94 ನೇ ವಯಸ್ಸಿನಲ್ಲಿ ಅವರು ಕನೆಕ್ಟಿಕಟ್‌ನಲ್ಲಿ ನಿಧನರಾದರು.ಲೀಲಾ ಚಿತ್ನಿಸ್ ಅವರಿಗೆ ಮಾನವೇಂದ್ರ (ಮೀನಾ), ವಿಜಯಕುಮಾರ್, ಅಜಿತ್ಕುಮಾರ್ ಮತ್ತು ರಾಜ್ ಎನ್ನುವ ನಾಲ್ಕು ಜನ ಮಕ್ಕಳಿದ್ದಾರೆ.ಅವರು ತನ್ನ ಹಿರಿಯ ಮಗನೊಂದಿಗೆ ಅಮೆರಿಕದ ಕನೆಕ್ಟಿಕಟ್‌ನಲ್ಲಿ ಕೊನೆಯುಸಿರೆಳೆಯುವವರೆಗೂ ವಾಸಿಸುತ್ತಿದ್ದರು.

 

Trending News