Karnataka Assembly Election 2023: ಕರ್ನಾಟಕ ಅಸೆಂಬ್ಲಿ ಎಲೆಕ್ಷನ್ ಅಬ್ಬರ ಜೋರಾಗಿದೆ. ರಾಜ್ಯದಲ್ಲಿ ದಿನೇ ದಿನೇ ಚುನಾವಣಾ ಪ್ರಚಾರ ರಂಗೇರುತ್ತಿದೆ. ಕೆಲವು ರಾಜಕೀಯ ಪಕ್ಷಗಳಿಗೆ ಚಂದನವನದ ತಾರೆಯರು ಸಾಥ್ ಕೊಟ್ಟಿರುವುದು ಚುನಾವಣಾ ಪ್ರಚಾರಕ್ಕೆ ಮತ್ತಷ್ಟು ರಂಗು ತಂದಿದೆ. ಇತ್ತೀಚೆಗಷ್ಟೇ ದೊಡ್ಮನೆ ಸೊಸೆ ಹ್ಯಾಟ್ರಿಕ್ ಹೀರೋ ಡಾ. ಶಿವರಾಜ್ ಕುಮಾರ್ ಅವರ ಪತ್ನಿ ಗೀತಾ ಶಿವರಾಜ್ ಕುಮಾರ್ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡಿದ್ದಾರೆ. ಬಳಿಕ, ಕೆಲವು ವಿಧಾನಸಭಾ ಕ್ಷೇತ್ರಗಳಲ್ಲಿ ಭರ್ಜರಿ ಪ್ರಚಾರದಲ್ಲಿಯೂ ಪಾಲ್ಗೊಳ್ಳುತ್ತಿದ್ದಾರೆ.
ಈ ಸಂದರ್ಭದಲ್ಲಿ ಕೆಲವು ವಿಧಾನಸಭಾ ಕ್ಷೇತ್ರಗಳಲ್ಲಿ ಶಿವಣ್ಣ ಕೂಡ ತಮ್ಮ ಪತ್ನಿ ಜೊತೆಗೂಡಿ ಅಭ್ಯರ್ಥಿಗಳ ಪರ ಭರ್ಜರಿ ಪ್ರಚಾರ ನಡೆಸಿದ್ದಾರೆ. ಆದಾಗ್ಯೂ, ಶಿವಣ್ಣ ಕೂಡ ರಾಜಕೀಯಕ್ಕೆ ಎಂಟ್ರಿ ನೀಡಲಿದ್ದಾರೆ ಎಂಬ ಗುಮಾನಿಗಳಿಗೆ ಬ್ರೇಕ್ ಹಾಕಿರುವ ಶಿವಣ್ಣ ತಾನು ಎಂದಿಗೂ ರಾಜಕೀಯಕ್ಕೆ ಪ್ರವೇಶಿಸುವುದಿಲ್ಲ ಎಂಬ ಮಾತನ್ನು ಸ್ಪಷ್ಟಪಡಿಸಿದ್ದಾರೆ. ಇದೆಲ್ಲದರ ನಡುವೆ ಡಾ. ರಾಜ್ ಕುಮಾರ್ ಅವರ ಪುತ್ರ, ಕನ್ನಡದ ಕಣ್ಮಣಿ, ಕರುನಾಡಿನ ನಲ್ಮೆಯ ಅಪ್ಪು ಡಾ. ಪುನೀತ್ ರಾಜ್ ಕುಮಾರ್ ಅವರ ಸಹೋದರ ಡಾ. ಶಿವರಾಜ್ ಕುಮಾರ್ ಅವರು ಚುನಾವಣಾ ಪ್ರಚಾರದಲ್ಲಿ ತೊಡಗಿರುವುದರ ಬಗ್ಗೆ ಅಭಿಮಾನಿಯೊಬ್ಬರು ಮಾಡಿರುವ ಪೋಸ್ಟ್ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದೆ.
ಇದನ್ನೂ ಓದಿ- Photos: ವರುಣಾ ರೋಡ್ ಶೋದಲ್ಲಿ ಶಿವರಾಜಕುಮಾರ್, ಸಿದ್ದರಾಮಯ್ಯ ಮಿಂಚಿನ ಸಂಚಾರ
ಚುನಾವಣಾ ಪ್ರಚಾರದಲ್ಲಿ ಶಿವಣ್ಣನ ಎಂಟ್ರಿ ಬಗ್ಗೆ ಅಭಿಮಾನಿಯ ಭಾವನಾತ್ಮಕ ಪೋಸ್ಟ್ !
ದಿವಾಕರ್ ಎಸ್ ಕಶ್ಯಪ್ ಎಂಬ ಫೇಸ್ ಬುಕ್ ಬಳಕೆದಾರರೊಬ್ಬರು ಪೋಸ್ಟ್ ಮಾಡಿದ್ದು, ಭಾವನಾತ್ಮಕವಾಗಿ ಈ ರೀತಿ ಬರೆದಿದ್ದಾರೆ.
ಪ್ರಿಯ ಶಿವಣ್ಣ: ಪ್ರಿಯ ಸೋದರ ಶಿವಣ್ಣ! ಶುಭಾಶಯಗಳು. ಆದರೆ, ಇತ್ತೀಚೆಗೆ ನಿನ್ನ ಬಗೆಗಿನ ನಮ್ಮ ಅಭಿಮಾನ ತುಸು ಕಡಿಮೆಯಾಗಿದೆ ಎಂದು ಹೇಳಲು ಖೇದವಾಗುತ್ತದೆ. ಕಾರಣ ನಿನಗೂ ತಿಳಿದಿರುವುದೇ ಆಗಿದೆ. ಅದೆಂದರೆ, ನಿಮ್ಮ ಕುಟುಂಬದ ರಾಜಕೀಯ ಪ್ರವೇಶ! ನಿಮ್ಮ ಘನವಾದ ಕುಟುಂಬಕ್ಕೆ ಇದರ ಅವಶ್ಯಕತೆ ಖಂಡಿತ ಇರಲಿಲ್ಲ. ನಿಮ್ಮ ತೀರ್ಥರೂಪು ಡಾಕ್ಟರ್ ರಾಜಕುಮಾರ್ ರವರು 10 ತಲೆಮಾರುಗಳಿಗೆ ಬೇಕಾಗುವಷ್ಟು ಸಂಪತ್ತನ್ನು ಸಂಗ್ರಹಿಸಿ ಮರೆಯಾಗಿದ್ದಾರೆ. ಸಂಪತ್ತು ಎಂದರೆ ಹಣ ಮಾತ್ರವಲ್ಲ! ಕೀರ್ತಿ ಹಾಗೂ ಸಾರ್ಥಕತೆಗಳೂ ಸಹ ಸಂಪತ್ತಿನಲ್ಲಿ ಸೇರಿವೆ. ಒಬ್ಬ ಕಲಾವಿದ ತಾನು ರಾಜಕೀಯಕ್ಕೆ ಪ್ರವೇಶಿಸಿದರೆ ಅವನ ಅಭಿಮಾನಿಗಳ ಸಂಖ್ಯೆ ಶೇಕಡ 50ರಷ್ಟು ಕಡಿಮೆಯಾಗುವುದರಲ್ಲಿ ಅನುಮಾನವಿಲ್ಲ. ಡಾಕ್ಟರ್ ರಾಜಣ್ಣನವರನ್ನು ಹಿಂದೊಮ್ಮೆ, ತಮ್ಮ ಬೀಗರೇ ಆಹ್ವಾನಿಸಿದರೂ ಸಹ ಅವರು ರಾಜಕೀಯವನ್ನು ಪ್ರವೇಶಿಸದೆ, ವಿನಮ್ರವಾಗಿ ತಿರಸ್ಕರಿಸಿ ತಮ್ಮ ಕಲಾತಪಸಿಸ್ಸನ್ನು ಮುಂದುವರೆಸಿದ ಮಹಾ ಸಾಧಕರೂ ಹೌದು! ನಿಜ ಹೇಳಬೇಕೆಂದರೆ, ಈ ಮಹಾ ಋಷಿಯನ್ನು ಸಮಾಜದ ಜನರು, ಜಾತಿ ಮತಗಳ ಸೀಮೆಗೆ ಹೊರತಾಗಿ (ರಾಜಣ್ಣನವರನ್ನು) ಇಂದಿಗೂ ಆರಾಧಿಸುತ್ತಿದ್ದಾರೆ. ರಾಜಕೀಯದ ಮೂಲಕವೇ ಸಮಾಜಸೇವೆ ಮಾಡಬೇಕೆಂಬ ಅನಿವಾರ್ಯತೆ ಇಲ್ಲದಿರುವುದನ್ನು ನಿಮ್ಮ ಸ್ವರ್ಗೀಯ ಸೋದರ ಕರ್ನಾಟಕ ರತ್ನ ಪುನೀತ್ ಸಹ ನಿರೂಪಿಸಿ ಬಿಟ್ಟಿದ್ದಾರೆ. ಆ ಮಾರ್ಗವನ್ನೇ ನೀವು ಮುಂದುವರಿಸಬಹುದಿತ್ತು. ಆದರೆ, ಆ ಪಥವನ್ನು ನಿಮ್ಮ ಕುಟುಂಬ ಇಂದು ತಿರಸ್ಕರಿಸಿಬಿಟ್ಟ್ಟಿದೆ.
ಹಾಗೆ ಹೇಳಬೇಕೆಂದರೆ, ಡಾಕ್ಟರ್ ರಾಜ್ ರವರಿಗೆ ರಾಜಕೀಯ ಪ್ರವೇಶ ಮಾಡಲು ಏನೂ ಅಡ್ಡಿಯಿರಲಿಲ್ಲ. ಆದರೂ, ಅವರು ತಮ್ಮ ತಪಸ್ಸಿನ ಕ್ಷೇತ್ರವನ್ನು ಅತಿಕ್ರಮಿಸಲಿಲ್ಲ! ವಾಸ್ತವವಾಗಿ ಈಗ ನಿಮಗೆ ಒಂದು ಮಹಾ ದ್ವಂದ್ವ ಎದುರಾಗಿದೆ ಎನ್ನಬೇಕು. ನಿಮ್ಮ ಸ್ವರ್ಗೀಯ ಮಾವನವರ ಅಪೇಕ್ಷೆಯನ್ನು ನೆರವೇರಿಸುತ್ತಿರುವ ಕೃತಕ ಕಾರಣವನ್ನು ನೀವು ಇಂದು ಸಮಾಜದ ಮುಂದಿಡಲೂಬಹುದು. ಆದರೆ, ಅವರಿಗೆ ಇಬ್ಬರು ಮಕ್ಕಳಿದ್ದು ಇಬ್ಬರ ಪಥವು ಬೇರೆ, ಬೇರೆ ಯಾಗಿರುವುದೇ ಶ್ರೀ ಬಂಗಾರಪ್ಪನವರ ಆತ್ಮಕ್ಕೆ ನೋವುಂಟು ಮಾಡುವ ಸಂಗತಿಯೂ ಹೌದು! ಬಂಧುಗಳಾದ ನೀವು ಇಬ್ಬರು ಮಕ್ಕಳನ್ನು ಸಮಾನವಾಗಿ ಪ್ರೀತಿಸುವ ಸಲುವಾಗಿ ರಾಜಕೀಯದಿಂದ ಹೊರಗೂಳಿಯಲೇಬೇಕಿತ್ತು. ಆದರೆ, ಹಾಗೆ ಮಾಡಲಿಲ್ಲ. ನೀವು ಸೇರಿರುವ ಪಕ್ಷಕ್ಕೆ ನಾವು ಅಭಿಮಾನಿಗಳಾಗಿರಬಹುದು ಅಥವಾ ಇಲ್ಲದಿರಬಹುದು- ಎಂಬುದು ಬೇರೆ ವಿಷಯ. ಆದರೆ, ನಮ್ಮ ರಾಜಕೀಯ ಪಕ್ಷ ಪ್ರೇಮಕ್ಕಿಂತ, ಪದ್ಮಭೂಷಣ ಡಾಕ್ಟರ್ ರಾಜ್ ಬಗ್ಗೆ ಇರಿಸಿರುವ ಅಭಿಮಾನವು ಅದಕ್ಕಿಂತಲೂ ಹಿರಿದಾದದು.
ಒಟ್ಟಿನಲ್ಲಿ, ನಿಮ್ಮ ಈ ನಡೆಯನ್ನು ಸ್ವರ್ಗದಲ್ಲಿರುವ ಡಾಕ್ಟರ್ ರಾಜ್ ಹಾಗೂ ಡಾಕ್ಟರ್ ಪುನೀತ್ ರಾಜ್ ಎಂಬ ಎರಡು ಆತ್ಮಗಳು ಕ್ಷಮಿಸುವುದಿಲ್ಲ ಎಂಬುದು ನನ್ನ ಅಲ್ಪ ಮತ.
ನಿಮಗೆ ನೋವುಂಟು ಮಾಡುತ್ತಿರುವುದಕ್ಕೆ ಕ್ಷಮೆ ಯಾಚಿಸುತ್ತೇನೆ. ನಿಮಗೆ ಶುಭವಾಗಲಿ.
-ನಮಸ್ಕಾರ.
ಇದನ್ನೂ ಓದಿ- Shiva Rajkumar: ಮಾನ್ಯತಾ ರೆಸಿಡೆನ್ಸಿ ವೃತ್ತಕ್ಕೆ ಶಿವರಾಜ್ ಕುಮಾರ್ ಹೆಸರು!
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.